ತಲಾಕ್‌ ನೀಡಿದ ಮ್ಯಾನೇಜರ್‌ ಅರೆಸ್ಟ್

By Kannadaprabha NewsFirst Published Oct 7, 2019, 8:28 AM IST
Highlights

ವರದಕ್ಷಿಣೆಗಾಗಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದ ಎಚ್ ಆರ್ ಮ್ಯಾನೆಜರ್ ಓರ್ವನನ್ನು ಬಂಧಿಸಲಾಗಿದೆ. 

ಬೆಂಗಳೂರು [ಅ.07]: ವರದಕ್ಷಿಣೆಗೆ ಒತ್ತಾಯಿಸಿ ಪತ್ನಿಗೆ ತ್ರಿವಳಿ ‘ತಲಾಖ್‌’ ನೀಡಿದ್ದ ಸಾಫ್ಟ್‌ವೇರ್‌ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥನನ್ನು ಸುದ್ದ ಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಮೀರುಲ್ಲಾ ರೆಹಮತ್‌ (38) ಬಂಧಿತ. ಬಿಟಿಎಂ ಲೇಔಟ್‌ ನಿವಾಸಿ ಆಯೇಶಾ ದೂರು ನೀಡಿದ್ದ ಸಂತ್ರಸ್ತೆ. ‘ಮುಸ್ಲಿಂ ಮಹಿಳೆಯರ ಮದುವೆ ಹಕ್ಕು ರಕ್ಷಣೆ ಕಾಯ್ದೆ’ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಮೀರುಲ್ಲಾ ರೆಹಮತ್‌ ಎಲೆಕ್ಟ್ರಾನಿಕ್ಸ್‌ ಸಿಟಿಯಲ್ಲಿರುವ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥನಾಗಿದ್ದಾನೆ. ಕಳೆದ ಹತ್ತು ವರ್ಷಗಳ ಹಿಂದೆ ಹಿರಿಯರ ನಿಶ್ಚಯದಂತೆ ಆರೋಪಿ, ದುಬೈನಲ್ಲಿ ಎಂಜಿನಿಯರಿಂಗ್‌ ಪದವಿ ವ್ಯಾಸಂಗ ಮಾಡಿದ್ದ ಆಯೇಷಾ ಎಂಬುವರನ್ನು ವಿವಾಹವಾಗಿದ್ದ. ಆಯೇಷಾ ಪೋಷಕರು ಸಮೀರುಲ್ಲಾ ರೆಹಮತ್‌ಗೆ . 7.5 ಲಕ್ಷ ಬೆಲೆಯ ‘ಐ10 ಕಾರು’, .10 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡಿದ್ದರು.ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಲ ವರ್ಷ ಪತ್ನಿ ಜತೆ ಅನ್ಯೋನ್ಯವಾಗಿಯೇ ಇದ್ದ ಸಮೀರುಲ್ಲಾ, ಇತ್ತೀಚೆಗೆ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಸಮೀರುಲ್ಲಾರಿಂದ ಕಿರುಕುಳ ಹೆಚ್ಚಾದ ಕಾರಣ ಸಮುದಾಯದ ಮುಖಂಡರಿಂದ ಆತನಿಗೆ ಬುದ್ಧಿವಾದ ಹೇಳಿಸಲಾಗಿತ್ತು. ಈ ವೇಳೆ ಆಯೇಷಾ ಪೋಷಕರು, ಅಳಿಯನಿಗೆ ಮತ್ತೆ ಏಳು ಲಕ್ಷ ಹಣವನ್ನು ನೀಡಿದ್ದರು. ಇಷ್ಟಾದರೂ ಆರೋಪಿ ಪತ್ನಿ ಜತೆ ಜಗಳವಾಡುವುದನ್ನು ನಿಲ್ಲಿಸಿರಲಿಲ್ಲ. ಬಿಟಿಎಂ ಲೇಔಟ್‌ನ 1ನೇ ಹಂತದಲ್ಲಿ ಪ್ರತ್ಯೇಕ ಮನೆ ಮಾಡಿ ಪತ್ನಿಯನ್ನು ಆ ಮನೆಯಲ್ಲಿ ಇರಿಸಿ, ಅಂತರ ಕಾಯ್ದುಕೊಂಡಿದ್ದ. ಆ.14ರಂದು ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಪತ್ನಿ ಮನೆಗೆ ಬಂದಿದ್ದ ಆರೋಪಿ ಜಗಳ ಮಾಡಿ, ಮೂರು ಬಾರಿ ತಲಾಖ್‌ ಎಂದು ಹೇಳಿ ಹೋಗಿದ್ದ.

ಈ ಸಂಬಂಧ ಆಯೇಷಾ ಅವರು ಸುದ್ದಗುಂಟೆಪಾಳ್ಯ ಠಾಣೆಗೆ ದೂರು ನೀಡಿದ್ದರು. ಆರೋಪಿಯನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ವಿಚಾರಣೆಗೆ ಹಾಜರಾಗದೆ ನೋಟಿಸ್‌ನ್ನು ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ನಗರದಲ್ಲಿ ದಾಖಲಾದ ಮೊದಲ ತ್ರಿವಳಿ ತಲಾಕ್‌ ಪ್ರಕರಣ ಇದು ಎನ್ನಲಾಗಿದೆ.

click me!