ಜಿಲ್ಲೆಯಾದ್ಯಂತ ವರುಣನ ಅಬ್ಬರ| ಭರ್ತಿಯಾದ ಕೆರೆಗಳು| ಮಳೆಯ ರಭಸಕ್ಕೆ ಕೊಚ್ಚಿ ಹೋದ ಈರುಳ್ಳಿ ಬೆಳೆ| ಆಧುನಿಕರಣಗೊಳಿಸಿದ ಮೂರೇ ತಿಂಗಳಲ್ಲಿ ಕೊಚ್ಚಿಹೋದ ಉಪಕಾಲುವೆ| ಕೊಪ್ಪಳ ನಗರದ ಚರಂಡಿಗಳು ಭರ್ತಿಯಾಗಿ ರಸ್ತೆಯ ಮೇಲೆ ಚರಂಡಿ ನೀರು ಹರಿದು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುವಂತಾಯಿತು| ಹಿರೇಹಳ್ಳ ಮತ್ತು ತಾಲೂಕಿನ ವಿವಿಧ ಕೆರೆಗಳು ಸಹ ಭರ್ತಿ, ರೈತರ ಮೊಗದಲ್ಲಿ ಸಂತಸ|
ಕೊಪ್ಪಳ(ಅ.7) ಜಿಲ್ಲೆಯಾದ್ಯಂತ ಶನಿವಾರ ಮಧ್ಯರಾತ್ರಿ ಹಾಗೂ ಭಾನುವಾರ ಬೆಳಗ್ಗೆ ಸುರಿದ ಧಾರಾಕಾರ ಮಳೆಯಿಂದಾಗಿ ವಿವಿಧ ಕೆರೆ, ಹಳ್ಳಗಳು ಭರ್ತಿಯಾಗಿ ಹರಿಯಲಾರಂಭಿಸಿದೆ. ಇನ್ನು ಕಾರಟಗಿ ತಾಲೂಕಿನ ಹುಳ್ಕಿಹಾಳ- ಗುಂಡೂರು 4.5 ಕಿ.ಮೀ ಉದ್ದದ ಉಪಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಬತ್ತದ ಬೆಳೆಗೆ ನುಗ್ಗಿ ಅಪಾರ ನಷ್ಟವನ್ನುಂಟು ಮಾಡಿದೆ.
ಕೊಚ್ಚಿ ಹೋದ ಈರುಳ್ಳಿ ಬೆಳೆ
ಮಳೆಯಿಂದಾಗಿ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿ ಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಹೊಲಗಳಲ್ಲಿ ಬೆಳೆದ ಈರುಳ್ಳಿ ಬೆಳೆ ಕೊಚ್ಚಿ ಹೋಗಿವೆ. ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಕೊಪ್ಪಳ ನಗರದ ಚರಂಡಿಗಳು ಭರ್ತಿಯಾಗಿ ರಸ್ತೆಯ ಮೇಲೆ ಚರಂಡಿ ನೀರು ಹರಿದು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುವಂತಾಯಿತು. ಅಲ್ಲದೇ ಹಿರೇಹಳ್ಳ, ಮತ್ತು ತಾಲೂಕಿನ ವಿವಿಧ ಕೆರೆಗಳು ಸಹ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಸಂತಸವನ್ನುಂಟು ಮಾಡಿದೆ.
ತುಂಬಿದ ಕೆರೆಗಳು
ಕುಷ್ಟಗಿ ತಾಲೂಕಿನಲ್ಲಿಯೂ ಸಹ ಕೆರಗಳು ಭರ್ತಿಯಾಗಿದ್ದು, ಹಳ್ಳ ತುಂಬಿ ಹರಿಯಲಾರಂಭಿಸಿದೆ, ತಾವರಗೇರಾದಲ್ಲಿ ಕೆರೆಗಳು ಭರ್ತಿಯಾಗಿವೆ. ಯಲಬುರ್ಗಾ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದ್ದು, ಗ್ರಾಮೀಣ ಪ್ರದೇಶದಲ್ಲಿ ಗುಡಿಸಲುಗಳಲ್ಲಿ ನೀರು ನುಗ್ಗಿವೆ. ಚರಂಡಿಗಳು ಸರಿಯಾದ ರೀತಿಯಲ್ಲಿ ನಿರ್ಮಾಣವಾಗದಿರುವ ಹಿನ್ನಲೆಯಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿದು ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗಂಗಾವತಿ ನಗರದಲ್ಲಿ ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ನಗರದ ದುರಗಮ್ಮಹಳ್ಳ ತುಂಬಿ ಹರಿಯುತ್ತಿದೆ. ನಗರದಲ್ಲಿ ಒಳಚರಂಡಿ ಕಾಮಗಾರಿ ಮತ್ತು ಕುಡಿಯುವ ನೀರಿನ ಸಂಪರ್ಕಕ್ಕಾಗಿ ಅಗೆದ ರಸ್ತೆಗಳು ಕೊಚ್ಚಿ ಹೋಗಿವೆ. ಇದರಿಂದ ಸಂಚಾರ ಅಸ್ತವ್ಯಸ್ಥಗೊಂಡಿದೆ. ಹೊಸಳ್ಳಿ ಹಳ್ಳ ಭರ್ತಿಯಾಗಿದ್ದು, ಕನಕಗಿರಿ ತಾಲೂಕಿನ ನವಲಿ ಗ್ರಾಮದಲ್ಲಿ ಕೆರಗಳು ಮತ್ತು ಹಿರೇ ಹಳ್ಳ ಚಿಕ್ಕ ಹಳ್ಳಗಳು ಭರ್ತಿಯಾಗಿದೆ. ಹೊಲಗದ್ದೆಗಳಲ್ಲಿ ನೀರು ನಿಂತಿದ್ದರಿಂದ ರೈತರು ಕೃಷಿ ಚಟುವಟಿಕೆಗಳಿಗೆ ತೆರಳುವುದಕ್ಕೆ ಅಡತಡೆಯಾಯಿತು.
ಹರ್ಷ:
ತೀವ್ರ ಬರಗಾಲದಿಂದ ತತ್ತರಿಸುತ್ತಿದ್ದ ಕನಕಗಿರಿ ಕ್ಷೇತ್ರದಲ್ಲಿ ಸಮರ್ಪಕವಾಗಿ ಮಳೆಯಾಗಿದ್ದರಿಂದ ರೈತ ಸಮುದಾಯದಲ್ಲಿ ಹರ್ಷ ತುಂಬಿದೆ. ಈಗಾಗಲೆ ಸೆಜ್ಜೆ. ಜೋಳ, ಹೆಸರುಬೆಳೆ ಬೆಳೆದಿದ್ದ ರೈತರಿಗೆ ಈ ಮಳೆಯಿಂದಾಗಿ ಅಲ್ಪ ನೆಮ್ಮದಿ ದೊರೆತಿದ್ದು, ಮುಖದಲ್ಲಿ ಸಂತಸಮೂಡಿದೆ.
ಕೊಚ್ಚಿ ಹೋದ ಉಪಕಾಲುವೆ:
ಕಳೆದ 50 ವರ್ಷಗಳಿಂದ ರೈತರೆ ನಿರ್ವಹಿಸಿ ನೀರು ಹರಿಸಿಕೊಳ್ಳುತ್ತಿದ್ದ ಉಪಕಾಲುವೆಯನ್ನು 3.5 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಿದ ಮೂರೇ ತಿಂಗಳಲ್ಲಿ ಸಿಮೆಂಟ್ ಕಾಂಕ್ರೆಟಿಂಗ್ ಸಂಪೂರ್ಣ ಧ್ವಂಸಗೊಂಡಿದ್ದು ರೈತರು ಆತಂಕಕ್ಕೊಳಗಾಗಿದ್ದಾರೆ.
ಸುಮಾರು 300 ರಿಂದ 500 ಎಕರೆ ಬತ್ತದ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ಕಾರಟಗಿ ತಾಲೂಕಿನ ಹುಳ್ಕಿಹಾಳ- ಗುಂಡೂರು 4.5 ಕಿ.ಮೀ ಉದ್ದದ ಉಪಕಾಲುವೆಗೆ ನೀರು ಬಿಟ್ಟ 3 ತಿಂಗಳು ಇನ್ನು ಪೂರ್ಣಗೊಳ್ಳುವ ಮುನ್ನವೇ ಅಕ್ಷರಶಃ ಮೂರು ಬಾರಿ ಒಡೆದು ಹೋಗಿದೆ. ಕಳೆದ ವಾರವೂ ಇದೇ ರೀತಿ ಕಾಲುವೆ ಬಿರುಕು ಬಿಟ್ಟು ಅಪಾರ ಪ್ರಮಾಣದ ನೀರು ಪೋಲಾಗಿತ್ತು. ಅದನ್ನು ಸರಿಪಡಿಸಿ ವಾರವೂ ಕಳೆದಿಲ್ಲ ಇದೀಗ ಮತ್ತೆ ಕಾಲುವೆಯಲ್ಲಿ ಬಿರುಕು ಕಂಡು ಎರಡು ಭಾಗವಾಗಿದೆ. ಕಾಲುವೆ ಕಿತ್ತು ಹೊಗಿ 48 ಗಂಟೆಗಳು ಕಳೆದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸದಿರುವುದು ಬತ್ತ ನಾಟಿ ಮಾಡಿದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.