ಜಾತ್ರೆಗೆ ರಂಗು ತುಂಬಿದ ನಾಟಕಗಳು| ಈ ಬಾರಿ ಹತ್ತು ಕಂಪನಿಗಳಿಂದ ನಾಟಕ ಪ್ರದರ್ಶನ | ಚಲನಚಿತ್ರ ನಟಿ ರಾಗಿಣಿ ಹಾಗೂ ಪಾರು ಧಾರಾವಾಹಿ ನಾಯಕಿ ಕಮಲಿ ಮತ್ತು ಗಟ್ಟಿಮೇಳ ಧಾರವಾಹಿ ಪ್ರಮುಖ ಪಾತ್ರದಾರಿ ಅಮೂಲ್ಯ ಆಗಮನ|
ಶಂಕರ ಕುದರಿಮನಿ
ಬಾದಾಮಿ(ಜ.13): ಬನಶಂಕರಿ ದೇವಿ ಜಾತ್ರೆ ರಂಗಭೂಮಿ ಕಲಾವಿದರಿಗೆ ತವರೂರು ಇದ್ದಂತೆ. ಹೊಸ ವರ್ಷದ ಆರಂಭದಲ್ಲಿಯೇ ಈ ಜಾತ್ರೆ ಇರುವುದರಿಂದ ಈ ಜಾತ್ರೆಯಲ್ಲಿ ತಿಂಗಳು ಗಟ್ಟಲೆ ಬೀಡು ಬಿಟ್ಟು ನಾಟಕಗಳನ್ನು ಪ್ರದರ್ಶಿಸಿ ರಂಗಭೂಮಿ ಕಲೆಯನ್ನು ಆಸಕ್ತರಿಗೆ ಉಣ ಬಡಿಸುತ್ತಾರೆ.
ಈ ವರ್ಷ ಕೂಡ ಜಾತ್ರೆಯಲ್ಲಿ ನಾಟಕಗಳ ರಂಗು ವ್ಯಾಪಕವಾಗಿ ಹರಡಿದೆ. ಸಿನೆಮಾಗಳ ಮುಂದೆ ನಾಟಕಗಳು ಪ್ರದರ್ಶನ ತೋರಲಾರವು ಎಂಬ ಮಾತು ಇತ್ತೀಚಿನ 10 ವರ್ಷ ಗಳಿಂದ ಸುಳ್ಳಾಗಿದೆ. ಸಿನೆಮಾಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಆದರೆ ನಾಟಕ ಕಂಪನಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗತೊ ಡಗಿದೆ. ಈ ವರ್ಷ ಒಟ್ಟು 10 ನಾಟಕ ಕಂಪನಿಗಳು ಜಾತ್ರೆಯಲ್ಲಿ ನಾಟಕ ಪ್ರದರ್ಶನ ಮಾಡಲಿವೆ. ತಮ್ಮ ರಂಗಭೂಮಿಕೆಯಲ್ಲಿ ಖ್ಯಾತನಾಮ ಕಲಾವಿದರ ಮೂಲಕ ಪ್ರತಿವರ್ಷ ನಾಟಕಗಳನ್ನು ಪ್ರದರ್ಶನ ಮಾಡುತ್ತಿವೆ.
ಜಾತ್ರೆ, ಹಬ್ಬ ಹರಿದಿನಗಳಿಂದ ನಾಟಕಗಳು ಇನ್ನೂ ಜೀವಂತವಾವೆ ಎಂದರೆ ಅತಿಶಯೋಕ್ತಿ ಎನಿಸಲಾರದು. ಗ್ರಾಮೀಣ ಪ್ರದೇಶದ ಸಣ್ಣ ಪ್ರಮಾಣದ ಜಾತ್ರೆಯಿಂದ ಬನಶಂಕರಿ ಜಾತ್ರೆಯಂತಹ ದೊಡ್ಡ ದೊಡ್ಡ ಜಾತ್ರೆಗಳಲ್ಲಿ ನಾಟಕಗಳು ಹೆಚ್ಚಾಗಿ ಪ್ರದರ್ಶನಗೊಳ್ಳುತ್ತವೆ. ದಿನನಿತ್ಯ ಮನೆಯಲ್ಲಿ ಟಿವಿ ನೋಡಿರುವ ಜನತೆ ಜಾತ್ರೆಯಲ್ಲಿ ನಾಟಕಗಳನ್ನು ಹೆಚ್ಚಾಗಿ ನೋಡಲು ಇಷ್ಟಪಡುತ್ತಾರೆ. ಪ್ರತಿವರ್ಷದಂತೆ ಈ ವರ್ಷದ ಬನಶಂಕರಿದೇವಿ ಜಾತ್ರಾ ಮಹೋತ್ಸವದಲ್ಲಿ ಈಗಾಗಲೇ 10 ನಾಟಕ ಕಂಪನಿಗಳು ಬಿಡಾರ ಹೂಡಿವೆ. ಇದರ ಮೂಲಕ ಜಾತ್ರೆಗೆ ಬಂದವರನ್ನು ತನ್ನತ್ತ ಸೆಳೆಯುತ್ತಿವೆ.
ಚಲನಚಿತ್ರಗಳ ಮುಂದೆ ನಾಟಕಗಳು ಸ್ಪರ್ಧಿಸಲಾರವು ಎಂಬ ಮಾತು ಇತ್ತಿಚೀನ ದಿನ ಮಾನಗಳಲ್ಲಿ ಸುಳ್ಳಾಗಿದೆ. ಚಲನಚಿತ್ರಗಳ ಮತ್ತು ಟಿವಿ ಸೀರಿಯಲ್ ನೋಡಿರುವ ಜನತೆಗೆ ಜಾತ್ರೆಯಲ್ಲಿ ಸಿಗುವ ನಾಟಕಗಳು ಬಹಳ ಖಷಿ ನೀಡುತ್ತವೆ ಎಂಬ ಮಾತು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಸಿನೆಮಾಗಳ ಪ್ರದರ್ಶನದಲ್ಲಿ ಪ್ರೇಕ್ಷಕರ ಕೊರತೆಯಾಗಿದೆ. ಜಾತ್ರೆಗೆ ಬಂದವರೆಲ್ಲ ಸಾಮಾನ್ಯವಾಗಿ ಈಗ ನಾಟಕಗಳನ್ನು ವೀಕ್ಷಿಸುತ್ತಾರೆ ಹೀಗಾಗಿ ನಾಟಕ ಕಂಪನಿಗಳು ಅಧಿಕವಾಗಿವೆ.
ಈ ಹಿಂದೆ ಜಾತ್ರೆಯಲ್ಲಿ ಭಕ್ತಿ ಪ್ರಧಾನ ಐತಿಹಾಸಿಕ, ಸಾಮಾಜಿಕ ಪೌರಾಣಿಕ ನಾಟಕಗಳು ಪ್ರದರ್ಶನವಾಗುತ್ತಿದ್ದವು. ಈಗ ಬರಿ ನಗೆ ನಾಟಕಗಳು ಮತ್ತು ನಗು ಬರುವಂತಹ ಶೀರ್ಷಿಕೆಯ ನಾಟಕಗಳು ಪ್ರದರ್ಶಕ್ಕೆ ಸಜ್ಜಾಗಿವೆ. ಜಾತ್ರೆಯಲ್ಲಿ ಎಲ್ಲಿ ನೋಡಿದರಲ್ಲಿ ನಾಟಕಗಳ ಥಿಯೇಟರ್ ಕಾಣುತ್ತವೆ. ಉತ್ತರ ಕರ್ನಾಟಕದ ಜಾನಪದ ಸೊಗಡಿನ ನಾಟಕಗಳ ಶೀರ್ಷಿಕೆಗಳು ಜಾತ್ರೆಗೆ ಬಂದ ಯಾತ್ರಿಕರನ್ನು ಸೆಳೆಯುವಂತಾಗಿವೆ. ಈ ಬಾರಿ ಚರ್ಚೆಯಾದ ಪ್ರತಿಪಕ್ಷದ ನಾಯಕ ಹಾಗೂ ಕ್ಷೇತ್ರದ ಶಾಸಕ ಸಿದ್ದರಾಮಯ್ಯನವರ ಹೌದ್ದ ಹುಲಿಯಾ ಎಂಬ ಘೋಷಣೆ ಕೂಡ ನಾಟಕವಾಗಿ ಬಂದಿದ್ದು, ಎಲ್ಲರನ್ನು ತನ್ನತ್ತ ಆಕರ್ಷಿಸುತ್ತಿದೆ.
ಪ್ರತಿವರ್ಷ ಕುಟುಂಬ ಸಮೇತ ಜಾತ್ರೆಗೆ ಆಗಮಿಸಿ ಗುಡಾರ ಜಾತ್ರೆ ಮಾಡುತ್ತೇವೆ. ಈ ಜಾತ್ರೆಯಲ್ಲೇ ಅತೀ ಹೆಚ್ಚು ನಾಟಕಗಳು ಪ್ರದರ್ಶನಗೊಳ್ಳುತ್ತವೆ. ನಾವು ಕುಟುಂಬ ಸಮೇತವಾಗಿ ಹೋಗಿ ನಾಟಕಗಳನ್ನು ನೋಡಿ ಖುಷಿ ಪಡುತ್ತೇವೆ. ಬನಶಂಕರಿ ಜಾತ್ರೆ ರಂಗಭೂಮಿಗೆ ರಂಗು ತುಂಬುವ ಜಾತ್ರೆ ಎಂದು ಭಕ್ತ ವಿಠ್ಠಲ ಕರದಿನ ಅವರು ಹೇಳಿದ್ದಾರೆ.
ಕುಟುಂಬ ಸಮೇತ ನೋಡುವ ನಾಟಕ
ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಕಲಾವಿದರಿಗೆ ಹೆಚ್ಚು ಮಹತ್ವವನ್ನು ನೀಡುತ್ತಾರೆ. ಇಲ್ಲಿ ನಾಟಕದಲ್ಲಿ ನಟಿಸಿದವರು ಸಣ್ಣ ಪಾತ್ರವನ್ನು ಮಾಡಿದವರು ಕೂಡಾ ಜನರ ಮೆಚ್ಚುಗೆಗೆ ಪಾತ್ರರಾಗಿ ಮುಂದೆ ದೊಡ್ಡ ಕಲಾವಿದರಾಗಿದ್ದು ಎಷ್ಟೋ ಉದಾರಣೆಗಳಿವೆ. ಜನ ಮತ್ತೆ ಮರಳಿ ಗ್ರಾಮೀಣ ಜಾನಪದ ಕಲೆಯನ್ನು ಹೆಚ್ಚು ಇಷ್ಟ ಪಡುತ್ತಿದ್ದಾರೆ. ಹಾಗಾಗಿ ನಾಟಕದಲ್ಲಿ ಅಶ್ಲೀಲ ರಹಿತ ಪದಗಳನ್ನು ಬಳಸದೆ ತಮ್ಮ ಅಭಿನಯದ ಮೂಲಕ ಜನರನ್ನು ಹೆಚ್ಚು ನಗಿಸುವಂತ ನಾಟಕ ಕಂಪನಿಗಳಿಗೆ ಮಹತ್ವ ನೀಡುತ್ತಾರೆ ಹಾಗೂ ಕುಟುಂಬ ಸಮೇತ ನೋಡಲು ಇಚ್ಚೆ ಪಡುತ್ತಾರೆ.
ಈ ಬಾರಿ ಚಲನಚಿತ್ರ ನಟಿ ರಾಗಿಣಿ ಹಾಗೂ ಪಾರು ಧಾರಾವಾಹಿ ನಾಯಕಿ ಕಮಲಿ ಮತ್ತು ಗಟ್ಟಿಮೇಳ ಧಾರವಾಹಿ ಪ್ರಮುಖ ಪಾತ್ರದಾರಿ ಅಮೂಲ್ಯ ಆಗಮಿಸಲಿದ್ದಾರೆ. ಈಚೆಗೆ ಕೆಲವೇ ದಿನಗಳಲ್ಲಿ ಅತಿ ಹೆಚ್ಚು ಜನರ ಮೆಚ್ಚುಗೆ ಪಡೆದ ಝಿ ಕನ್ನಡ ವಾಹಿನಿಯ ಪ್ರಮುಖ ಧಾರವಾಹಿ ಜೊತೆ ಜೊತೆಯಲಿ ತಂಡದವರು ಆಗಮಿಸಲಿದ್ದಾರೆ ಎಂದು ಜೇವರ್ಗಿ ಗುಬ್ಬಿ ಕಂಪನಿ ಮಾಲೀಕ ರಾಜಣ್ಣ ಅವರು ಹೇಳಿದ್ದಾರೆ.
ಕಳೆದ ಹಲವು ದಶಕಗಳಿಂದ ರಂಗಭೂಮಿ ವೃತ್ತಿಯನ್ನೆ ನಂಬಿ ಬದಕುತ್ತಿರುವ ನಾಟಕ ಕಂಪನಿಗಳಿಗೆ ಜನವರಿ ತಿಂಗಳಲ್ಲಿ ಬರುವ ಬಾದಾಮಿ ಬನಶಂಕರಿ ಆರ್ಥಿಕ ಭದ್ರತೆಯನ್ನು ಒದಗಿಸುವುದರ ಜೊತೆಗೆ ವರ್ಷವೀಡಿ ಇನ್ನಿತರ ಪ್ರದೇಶಗಳಲ್ಲಿ ನಡೆಯುವ ಜಾತ್ರೆ, ಹಬ್ಬ ಹರಿ ದಿನಗಳಲ್ಲಿಪ್ರದರ್ಶನ ನೀಡಲು ನಾಂದಿಯಾಗುತ್ತದೆ ಎಂದು ನಾಟಕ ಕಂಪನಿ ಗುತ್ತಿಗೆದಾರ ಜಗದೀಶ ಹಿರೇಮಠ ತಿಳಿಸಿದ್ದಾರೆ.
ಜಾತ್ರೆಯಲ್ಲಿ ಬಂದಿರುವ ನಾಟಕಗಳು
* ಶ್ರೀಸಂಗಮೇಶ್ವರ ನಾಟ್ಯ ಸಂಘ ಗುಳೇದಗುಡ್ಡ: ಹೌದ್ದಲೆ ರಂಗಿ ಉದಲೇನ ಪುಂಗಿ
* ಶ್ರೀಹುಚ್ಚೇಶ್ವರ ನಾಟ್ಯ ಸಂಘ ಕಮತಗಿ: ಹೌದ್ದ ಹುಲಿಯಾ
* ಗುರು ಸಿದ್ದಲಿಂಗೇಶ್ವರ ನಾಟ್ಯ ಸಂಘ ಮಂಡಲಗಿರಿ: ಗೌರಿ ಹೋದಳು ಗಂಗೆ ಬಂದಳು.
* ಶ್ರೀಘನಮಠೇಶ್ವರ ನಾಟ್ಯಸಂಘ ಕುಂಟೋಜಿ: ಬಂದರ ಬಾರ ಬಸಣ್ಣಿ
* ಶ್ರೀಗುರು ಮಲ್ಲಿಕಾರ್ಜುನ ನಾಟ್ಯ ಸಂಘ ಕಲ್ಲೂರ: ಮನಸ್ಯಾಕ ಕೊಟ್ಟಿ ಕೈಯಾಕ ಬಿಟ್ಟಿ.
* ಕೆ.ಬಿ.ಆರ್ ಡ್ರಾಮಾ ಕಂಪನಿ ದಾವಣಗೆರೆ: ಸಿಂಪಲ್ ಹುಡಗ ಡಿಂಪಲ್ ಹುಡಗಿ.
* ರಾಜಣ್ಣ ಜೇವರ್ಗಿ ಗುಬ್ಬಿ ಕಂಪನಿ: ಕುಂಟ ಕೋಣ ಮೂಕಜಾಣ.
* ಬಿ.ಎಸ್.ಆರ್.ನಾಟಕ ಕಂಪನಿ: ಕಾಗಕ್ಕ ಗುಬ್ಬಕ್ಕ.
* ಕುಮಾರ ವಿಜಯ ನಾಟಕ ಸಂಘ ಚಿತ್ತರಗಿ: ನಿಶೆ ಏರಿಸ್ಯಾಳ ನವರಂಗಿ
* ಆಂಜನೇಯ ಪುತ್ರ ನಾಟ್ಯ ಸಂಘ ಆಲೂರ: ಎಸ್.ಕೆ, ರಕ್ತ ರಾತ್ರಿ