ಬಿದ್ದ ಕುದುರೆ : ರೇಸ್‌ ಕೋರ್ಸಲ್ಲಿ ಬಾಜಿದಾರರ ದಾಂಧಲೆ

By Kannadaprabha NewsFirst Published Nov 16, 2019, 7:59 AM IST
Highlights

ರೇಸ್‌ ವೇಳೆ ಆಕಸ್ಮಿಕವಾಗಿ ಕುದುರೆ ಕಾಲು ಮುರಿದು ಕೆಳಗೆ ಬಿದ್ದು ಸೋತ ಪರಿಣಾಮ ರೊಚ್ಚಿಗೆದ್ದ ಬಾಜಿದಾರರು ಹಣ ಮರಳಿಸುವಂತೆ ಒತ್ತಾಯಿಸಿ ದಾಂಧಲೆ ನಡೆಸಿದ್ದಾರೆ. 

ಬೆಂಗಳೂರು [ನ.16]:  ರೇಸ್‌ ವೇಳೆ ಆಕಸ್ಮಿಕವಾಗಿ ಕುದುರೆ ಕಾಲು ಮುರಿದು ಕೆಳಗೆ ಬಿದ್ದು ಸೋತ ಪರಿಣಾಮ ರೊಚ್ಚಿಗೆದ್ದ ಬಾಜಿದಾರರು ಹಣ ಮರಳಿಸುವಂತೆ ಒತ್ತಾಯಿಸಿ ಬೆಂಗಳೂರು ಟಫ್‌ರ್‍ ಕ್ಲಬ್‌ ಆವರಣದಲ್ಲಿನ ಮೇಜು-ಕುರ್ಚಿಗಳನ್ನು ಒಡೆದು ದಾಂಧಲೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

‘ವಿಲ್‌ ಟು ವಿನ್‌’ ಹೆಸರಿನ ಕುದುರೆ ಕಾಲು ಮುರಿದುಕೊಂಡಿದ್ದು, ಕುದುರೆ ಪರಿಸ್ಥಿತಿ ಗಂಭೀರವಾಗಿದೆ. ಇನ್ನು ಘಟನೆಯಲ್ಲಿ ಮೂವರು ಜಾಕಿಗಳು ಗಾಯಗೊಂಡಿದ್ದಾರೆ. ಆ ಪೈಕಿ ಶ್ರೀನಿವಾಸ್‌ ಎಂಬುವರಿಗೆ ತೀವ್ರ ಪೆಟ್ಟಾಗಿದೆ ಎಂದು ಟಫ್‌ರ್‍ ಕ್ಲಬ್‌ ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ಪ್ರತಿಸ್ಪರ್ಧಿ ಕುದುರೆಗಳನ್ನು ಹಿಂದಿಕ್ಕಿ ‘ವಿಲ್‌ ಟು ವಿನ್‌’ ಶರವೇಗದಲ್ಲಿ ಓಡುತ್ತಿದ್ದ ವೇಳೆ ಏಕಾಏಕಿ ಮುಗ್ಗರಿಸಿ ಪಕ್ಕದಲ್ಲಿ ಸಾಗುತ್ತಿದ್ದ ಮತ್ತೊಂದು ಕುದುರೆಗೆ ಡಿಕ್ಕಿ ಹೊಡೆಯಿತು. ಆಗ ಗಾಬರಿಗೊಳಗಾದ ಆ ಕುದುರೆ ಮತ್ತೊಂದಕ್ಕೆ ಗುದ್ದಿದೆ. ಇದರಿಂದ ಮೂರು ಕುದುರೆಗಳ ಜಾಕಿಗಳು ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ವಿಲ್‌ ಟು ವಿನ್‌ ಕುದುರೆಯ ಸಂಪೂರ್ಣ ಮುಂಗಾಲು ಮುರಿದಿದೆ. ರೇಸ್‌ನಲ್ಲಿ ‘ನಯಾಬ್‌’ ಎಂಬ ಹೆಸರಿನ ಕುದುರೆ ಗೆಲುವು ಸಾಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದ ಕೆರಳಿದ ವಿಲ್‌ ಟು ವಿನ್‌ನ ಬಾಜಿದಾರರು, ತಮ್ಮ ಹಣವನ್ನು ಮರಳಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಹಣ ಮರಳಿಸಲು ಕ್ಲಬ್‌ ಸಿಬ್ಬಂದಿ ನಿರಾಕರಿಸಿದ್ದಾರೆ. ಆಗ ಕೋಪಗೊಂಡ ಬಾಜಿದಾರರು, ಕೌಂಟರ್‌ನಲ್ಲಿದ್ದ ಮೇಜು-ಕುರ್ಚಿಗಳನ್ನು ಒಡೆದು ಹಾಕಿ ದಾಂಧಲೆ ಮಾಡಿದ್ದಾರೆ. ಅಷ್ಟರಲ್ಲಿ ಗಲಾಟೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು, ಪ್ರತಿಭಟನಾನಿರತರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಬಗ್ಗೆ ಹೈಗ್ರೌಂಡ್ಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊದಲ ರೇಸ್‌ನಲ್ಲಿ ಅನಾಹುತ:

ಚಳಿಗಾಲದ ಋುತುವಿನ ಮೊದಲ ರೇಸ್‌ ಅನ್ನು ಶುಕ್ರವಾರ ಬೆಂಗಳೂರು ಟಫ್‌ರ್‍ ಕ್ಲಬ್‌ ಆಯೋಜಿಸಿದ್ದು, ಎಂಟು ಸುತ್ತುಗಳು ನಡೆಯಬೇಕಿತ್ತು. ಅದರಂತೆ ಮಧ್ಯಾಹ್ನ 2.15ಕ್ಕೆ ಮೊದಲ ಸುತ್ತಿನ ಸ್ಪರ್ಧೆ ಶುರುವಾಗಿದ್ದು, ಇದರಲ್ಲಿ ವಿಲ್‌ ಟು ವಿನ್‌ ಸೇರಿದಂತೆ 14 ಕುದುರೆಗಳು ಭಾಗವಹಿಸಿದ್ದವು. ಮೂರನೇ ಬಾರಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದ ವಿಲ್‌ ಟು ವಿನ್‌, ಹಿಂದಿನ ಎರಡು ಸ್ಪರ್ಧೆಗಳಲ್ಲಿ ಸಮಾಧಾನಕರ ಸಾಧನೆ ತೋರಿತ್ತು. ಹೀಗಾಗಿ ಶನಿವಾರದ ಸ್ಪರ್ಧೆಯಲ್ಲಿ ಕೂಡ ಗೆಲ್ಲುವ ಕುದುರೆಗಳ ಪಟ್ಟಿಯಲ್ಲಿ ವಿನ್‌ ಟು ವಿಲ್‌ ಹೆಸರು ಪಡೆದಿತ್ತು. ಸಂಜಯ್‌ ಟಕ್ಕರ್‌ ಹಾಗೂ ಭಯ್ಯಾಜಿ ಮಾಲಿಕತ್ವದ ವಿಲ್‌ ಟು ವಿನ್‌ ಕುದುರೆಯನ್ನು ಜಾಕಿ ಸೂರಜ್‌ ಓಡಿಸುತ್ತಿದ್ದರು. ಸ್ಪರ್ಧೆಯಲ್ಲಿ ಆರು ಸಾವಿರ ಮಂದಿ ಬಾಜಿದಾರರು ಭಾಗವಹಿಸಿದ್ದರು ಎಂದು ಟಫ್‌ರ್‍ ಕ್ಲಬ್‌ ಆಡಳಿತ ಮಂಡಳಿ ಸದಸ್ಯ ಮಹೇಶ್‌ ಶಿವಪ್ಪ ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಘಿ ಇಲ್ಲಿ ಕ್ಲಿಕ್ಕಿಸಿ

ಅವಘಡದಲ್ಲಿ ವಿಲ್‌ ಟು ವಿನ್‌ ಕುದುರೆಯ ಜಾಕಿ ಸೂರಜ್‌, ಮತ್ತಿಬ್ಬರು ಕುದುರೆಗಳ ಜಾಕಿಗಳಾದ ಕಿರಣ್‌ ಹಾಗೂ ಶ್ರೀನಿವಾಸ್‌ ಸಹ ಕೆಳಗೆ ಬಿದ್ದಿದ್ದಾರೆ. ಇದರಲ್ಲಿ ಶ್ರೀನಾಥ್‌ ಅವರಿಗೆ ಗಂಭೀರ ಸ್ವರೂಪದ ಪೆಟ್ಟಾಗಿದ್ದು, ಕೆಳಗೆ ಬಿದ್ದ ಅವರನ್ನು ಕುದುರೆಗಳ ತುಳಿದುಕೊಂಡು ಹೋಗಿದ್ದವು. ಆದರೆ ಘಟನೆಯಲ್ಲಿ ವಿಲ್‌ ಟು ವಿನ್‌ ಕುದುರೆಯ ಮುಂಗಾಲು ಸಂಪೂರ್ಣವಾಗಿ ಮುರಿದಿದೆ ಎಂದು ವಿವರಿಸಿದರು.

ಸ್ಪರ್ಧೆಯಲ್ಲಿ ಹದಿನಾಲ್ಕು ಕುದುರೆಗಳ ಪೈಕಿ ಮೂರು ಕುದುರೆಗಳು ಅಪಘಾತಕ್ಕೀಡಾಗಿದ್ದವು. ಉಳಿದವುಗಳು ಓಟ ಮುಂದುವರೆಸಿದ್ದವು. ಅದರಲ್ಲಿ ನಯಾಬ್‌ ಕುದುರೆ ಗೆಲುವು ಸಾಧಿಸಿತ್ತು. ಈ ಘಟನೆ ಬಳಿಕ ಜಾಕಿಗಳು ರೇಸ್‌ನಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ಕಾರಣ ಮುಂದಿನ ಸುತ್ತುಗಳ ರೇಸ್‌ ರದ್ದುಗೊಳಿಸಲಾಯಿತು ಎಂದು ಮಹೇಶ್‌ ಶಿವಪ್ಪ ಸ್ಪಷ್ಟಪಡಿಸಿದರು.

ನಿಯಮಾವಳಿ ಪ್ರಕಾರ ಓಟದಲ್ಲಿ ಒಂದು ಕುದುರೆ ಅಪಘಾತಕ್ಕೀಡಾದರೆ ಹಣ ಮರಳಿಸಲು ಬರುವುದಿಲ್ಲ. ಈ ವಿಚಾರವನ್ನು ಮನವರಿಕೆ ಮಾಡಿದರೂ ಬಾಜಿದಾರರು ಕೇಳಲಿಲ್ಲ. ಪೀಠೋಪಕರಣ ಧ್ವಂಸಗೊಳಿಸಿ ಗಲಾಟೆ ಮಾಡಿದರು ಎಂದು ಕ್ಲಬ್‌ ಆಡಳಿತ ಮಂಡಳಿ ಸದಸ್ಯ ರಾಜೀವ್‌ ತಿಳಿಸಿದರು.

ರೇಸ್‌ಗೆ ಟ್ರ್ಯಾಕ್‌ ಉತ್ತಮವಾಗಿಲ್ಲ

ಟ್ರ್ಯಾಕ್‌ ಬಗ್ಗೆ ಜಾಕಿಗಳ ಆಕ್ಷೇಪಣೆ ಲೆಕ್ಕಿಸದೆ ರೇಸ್‌ ಆಯೋಜಿಸಿದ್ದು ಈ ಘಟನೆ ನಡೆಯಲು ಕಾರಣವಾಗಿದೆ ಎಂದು ಟಫ್‌ರ್‍ ಕ್ಲಬ್‌ ಆಡಳಿತ ಮಂಡಳಿ ವಿರುದ್ಧ ಆರೋಪ ಕೇಳಿ ಬಂದಿದೆ.

ಚಳಿಗಾಲದ ರೇಸ್‌ಗೆ ನ.8ರಂದು ಕುದುರೆಗಳ ತಾಲೀಮು ನಡೆಸಲಾಗಿತ್ತು. ಆಗ ಟ್ರ್ಯಾಕ್‌ ಪರಿಶೀಲಿಸಿದ ಜಾಕಿಗಳು, ನ.11ರಂದು ರೇಸ್‌ಗೆ ಟ್ರ್ಯಾಕ್‌ ಉತ್ತಮವಾಗಿಲ್ಲ ಎಂದು ಆಕ್ಷೇಪಿಸಿ ಟಫ್‌ರ್‍ ಕ್ಲಬ್‌ಗೆ ವರದಿ ನೀಡಿದ್ದರು. ಆದರೆ ಈ ವರದಿ ಮಾನ್ಯ ಮಾಡದೆ ನಿಗದಿಯಂತೆ ರೇಸನ್ನು ಕ್ಲಬ್‌ ಆಡಳಿತ ಮಂಡಳಿ ನಡೆಸಿತು ಎಂದು ತಿಳಿದು ಬಂದಿದೆ.

ಈ ಆರೋಪವನ್ನು ನಿರಾಕರಿಸಿದ ಕ್ಲಬ್‌ ಅಧ್ಯಕ್ಷ ವಿನೋದ್‌ ಶಿವಪ್ಪ, 100 ಮೀಟರ್‌ ಓಟದ ಸ್ಪರ್ಧೆಗೆ ಟ್ರ್ಯಾಕ್‌ ಸರಿಯಿಲ್ಲವೆಂದು ಜಾಕಿಗಳ ಸಂಘ ಹೇಳಿತ್ತು. ಆದರೆ ಶುಕ್ರವಾರ 200 ಮೀಟರ್‌ ಓಟದಲ್ಲಿ ಅಪಘಾತ ಸಂಭವಿಸಿದೆ. ಹೀಗಾಗಿ ಜಾಕಿಗಳ ಆಕ್ಷೇಪಣೆಗೂ ಘಟನೆಗೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಅಪಘಾತದಲ್ಲಿ ಕುದುರೆ ಗಾಯಗೊಂಡ ಹಿನ್ನೆಲೆಯಲ್ಲಿ ಶನಿವಾರದ ರೇಸ್‌ ರದ್ದುಗೊಳಿಸಲಾಗಿದೆ. ಅಲ್ಲದೆ, ಟ್ರ್ಯಾಕ್‌ ಅನ್ನು ಸೋಮವಾರ ಅಥವಾ ಮಂಗಳವಾರ ಸಂಪೂರ್ಣವಾಗಿ ಪರಿಶೀಲಿಸಿ ಘಟನೆಗೆ ನಿಖರ ಕಾರಣ ತಿಳಿದುಕೊಳ್ಳಲಾಗುತ್ತದೆ. ಗಲಾಟೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

- ವಿನೋದ್‌ ಶಿವಪ್ಪ ಅಧ್ಯಕ್ಷ, ಬೆಂಗಳೂರು ಟಫ್‌ರ್‍ ಕ್ಲಬ್‌

click me!