ಮಂಗಳೂರು ಪಾಲಿಕೆ ಮೇಯರ್‌ ಆಯ್ಕೆ: ಹಾಲಿ ಅಥವಾ ಹೊಸ ಮೀಸಲಾತಿ?

By Kannadaprabha News  |  First Published Nov 16, 2019, 7:58 AM IST

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಎರಡನೇ ಬಾರಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದ ಬಿಜೆಪಿ, ಈಗ ಮೇಯರ್‌ ಹಾಗೂ ಉಪ ಮೇಯರ್‌ ಆಯ್ಕೆಯ ಸಿದ್ಧತೆಯಲ್ಲಿದೆ. ಮೇಯರ್‌-ಉಪಮೇಯರ್‌ ಆಕಾಂಕ್ಷಿಗಳು ಕಾತರದಿಂದ ನಿರೀಕ್ಷಿಸುವಂತೆ ಆಗಿದೆ.
 


ಮಂಗಳೂರು(ನ.16): ಈಗಾಗಲೇ ಘೋಷಣೆಯಾದ ಮೀಸಲಾತಿಯನ್ನು ಅನುಸರಿಸುವುದೋ ಅಥವಾ ಹೊಸದಾಗಿ ಮತ್ತೆ ಮೀಸಲಾತಿ ನಿರೀಕ್ಷಿಸುವುದೋ ಎಂಬ ಜಿಜ್ಞಾಸೆಯಲ್ಲಿ ಬಿಜೆಪಿ ಮುಖಂಡರು ಇದ್ದಾರೆ. ಮೈಸೂರಿನ ವಿಭಾಗೀಯ ಆಯುಕ್ತರು ತಕ್ಷಣವೇ ಮೇಯರ್‌ ಹಾಗೂ ಉಪ ಮೇಯರ್‌ ಆಯ್ಕೆ ಪ್ರಕ್ರಿಯೆ ನಡೆಸಲು ಮುಂದಾದರೆ, ಹಾಲಿ ಮೀಸಲಾತಿ ಪ್ರಕಾರವೇ ಮೇಯರ್‌, ಉಪ ಮೇಯರ್‌ ಆಯ್ಕೆ ನಡೆಯಲಿದೆ.

2018ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ರಾಜ್ಯದ 11 ನಗರ ಪಾಲಿಕೆಗಳ ಮೇಯರ್‌ ಹಾಗೂ ಉಪ ಮೇಯರ್‌ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಲಾಗಿತ್ತು. ಆಗಲೇ ಅವಧಿ ಮುಗಿದು ಮಂಗಳೂರು ಪಾಲಿಕೆಗೂ ಚುನಾವಣೆ ನಡೆಯಬೇಕಿತ್ತು. ಆದರೆ ವಾರ್ಡ್‌ ಮೀಸಲಾತಿ ವಿಚಾರ ಹೈಕೋರ್ಟ್‌ ಮೆಟ್ಟಿಲೇರಿದ ಕಾರಣ ಚುನಾವಣೆ ನಡೆದಿರಲಿಲ್ಲ. ಆದರೆ ಮೇಯರ್‌-ಉಪಮೇಯರ್‌ ಮೀಸಲಾತಿ ಪಟ್ಟಿಪ್ರಕಟಗೊಂಡಿತ್ತು.

Latest Videos

undefined

ಬದಲಾಗುವುದೇ ಮೇಯರ್‌ ಮೀಸಲಾತಿ?:

2018 ಸೆ.3ರಂದು ಪ್ರಕಟಿಸಿದ ಮೀಸಲು ಪಟ್ಟಿಪ್ರಕಾರ, ಮಂಗಳೂರಿಗೆ ಮೇಯರ್‌ ಸ್ಥಾನ ಹಿಂದುಳಿದ ವರ್ಗ ‘ಎ’ ಮತ್ತು ಉಪ ಮೇಯರ್‌ನ್ನು ಸಾಮಾನ್ಯ ಮಹಿಳೆಗೆ ನಿಗದಿಪಡಿಸಲಾಗಿದೆ.

ಇದು ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಪ್ರಕಟಿಸಿದ ಮೀಸಲು ಪಟ್ಟಿ. ಇದೇ ರೀತಿ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರೂ ಕೋರ್ಟ್‌ ಸೂಚನೆಯಂತೆ ಹಿಂದಿನ ಸರ್ಕಾರದ ಮೀಸಲಾತಿಯಲ್ಲೇ ವಾರ್ಡ್‌ಗಳ ಚುನಾವಣೆ ನಡೆಸಲಾಗಿದೆ. ಹಾಗಿರುವಾಗ ಈಗ ಹೊಸ ಸರ್ಕಾರದ ಅವಧಿಯಲ್ಲಿ ಹಳೆ ಸರ್ಕಾರದ ಮೀಸಲಾತಿಯಂತೆ ಮೇಯರ್‌-ಉಪಮೇಯರ್‌ ಚುನಾವಣೆ ನಡೆಯುವುದೇ ಅಥವಾ ಮತ್ತೆ ಹೊಸ ಮೀಸಲು ಪಟ್ಟಿಹೊರಡಿಸುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ನಿಜವಾಯ್ತು ಪೂಜಾರಿ ಭವಿಷ್ಯ, ಘಟಾನುಘಟಿಗಳು ಬಂದ್ರು 'ಕೈ' ಹಿಡಿಯಲಿಲ್ಲ ಜನ..!

ಪಾಲಿಕೆಯ ಹಿರಿಯ ಸದಸ್ಯರಾಗಿದ್ದವರು ಹೇಳುವಂತೆ, ಹಾಲಿ ಮೀಸಲು ಪಟ್ಟಿಬದಲಾಯಿಸಿದರೂ ಅಚ್ಚರಿ ಇಲ್ಲ. ಹಾಗೆಂದು ಹಾಲಿ ಮೀಸಲು ಪಟ್ಟಿಯನ್ನು ಬದಲಿಸಲೇ ಬೇಕು ಎಂಬ ಹಠವೂ ಪಕ್ಷ ನಾಯಕರಲ್ಲಿ ಕಂಡುಬರುತ್ತಿಲ್ಲ. ಹೇಗಾದರೂ ಮತ್ತೆ ರೊಟೇಷನ್‌ ಪ್ರಕಾರ ಇದೇ ಮೀಸಲಾತಿ ಬರುತ್ತದೆ. ಆದ್ದರಿಂದ ಹಾಲಿ ಮೀಸಲಾತಿಯನ್ನು ಬದಲಾಯಿಸುವ ಔಚಿತ್ಯ ಕಾಣುತ್ತಿಲ್ಲ. ಒಂದು ವೇಳೆ ತಕ್ಷಣಕ್ಕೆ ವಿಭಾಗೀಯ ಆಯುಕ್ತರು ಮೇಯರ್‌-ಉಪಮೇಯರ್‌ ಚುನಾವಣೆಯನ್ನು ಘೋಷಿಸಿದರೆ, ಮತ್ತೆ ಮೀಸಲು ಬದಲಿಸುವ ಪ್ರಮೇಯವೇ ಬರುವುದಿಲ್ಲ ಎನ್ನುತ್ತಾರೆ.

ಮಂಗಳೂರು: ಪಾಲಿಕೆ ನೂತನ ಸದಸ್ಯರಿವರು..!

ಈಗಾಗಲೇ ಪಾಲಿಕೆ ಸದಸ್ಯರಾಗಿ ಆಯ್ಕೆಯಾದವರ ವಿವರವನ್ನು ಪಾಲಿಕೆ ಕಮಿಷನರ್‌ ಅವರು ವಿಭಾಗೀಯ ಆಯುಕ್ತರಿಗೆ ರವಾನಿಸಿದ್ದಾರೆ. ಪಾಲಿಕೆ ಸದಸ್ಯರಾಗಿ ಆಯ್ಕೆಯಾದವರಿಗೆ ಪ್ರತಿಜ್ಞಾವಿಧಿ ಸ್ವೀಕಾರ, ಬಳಿಕ ಮೀಸಲು ನಿಯಮದಂತೆ ಮೇಯರ್‌-ಉಪಮೇಯರ್‌ ಆಯ್ಕೆ ದಿನಾಂಕವನ್ನು ವಿಭಾಗೀಯ ಆಯುಕ್ತರು ಪ್ರಕಟಿಸಬೇಕಾಗಿದೆ.

ಹಿರಿಯರಿಗೆ ಮೇಯರ್‌ ಪಟ್ಟ:

ಹಾಲಿ ಮೀಸಲಾತಿ ಪ್ರಕಾರವೇ ಆದರೆ, ಬಿಜೆಪಿಯಿಂದ ಮೂರನೇ ಬಾರಿ ಆಯ್ಕೆಯಾದ ದಿವಾಕರ್‌ ಅವರಿಗೆ ಮೇಯರ್‌ ಪಟ್ಟಒಲಿಸುವ ಸಾಧ್ಯತೆ ನಿಚ್ಚಳವಾಗಿದೆ. ಈ ಹಿಂದೆ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ದಿವಾಕರ್‌ ಅವರು ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಈ ಬಾರಿ 46ನೇ ಕಂಟೋನ್ಮೆಂಟ್‌ ವಾರ್ಡ್‌ನಿಂದ ಆಯ್ಕೆಯಾಗಿದ್ದಾರೆ. ಇವರನ್ನು ಹೊರತುಪಡಿಸಿದರೆ ಎರಡನೇ ಬಾರಿ ಪಾಲಿಕೆ ಪ್ರವೇಶಿಸಿದ 22ನೇ ಕದ್ರಿ-ಪದವು ವಾರ್ಡ್‌ನ ಜಯಾನಂದ ಅಂಚನ್‌ ಹೆಸರು ಪರಿಗಣಿಸಬಹುದು. ಇವರಲ್ಲದೆ ಪ್ರಥಮ ಪ್ರಯತ್ನದಲ್ಲೇ ಗೆದ್ದಿರುವ 16ನೇ ಬಂಗ್ರಕೂಳೂರು ವಾರ್ಡ್‌ನ ಕಿರಣ್‌ ಕುಮಾರ್‌ ಅಥವಾ 3ನೇ ಕಾಟಿಪಳ್ಳ ಪೂರ್ವ ವಾರ್ಡ್‌ನ ಲೋಕೇಶ್‌ ಬೊಳ್ಳಾಜೆ ಹೆಸರು ಪ್ರಸ್ತಾಪಗೊಂಡರೆ ಅಚ್ಚರಿ ಇಲ್ಲ ಎನ್ನತ್ತವೆ ಪಕ್ಷ ಮೂಲಗಳು.

ಇವರಲ್ಲಿ ದಿವಾಕರ್‌ ಅವರು ಮಂಗಳೂರು ದಕ್ಷಿಣಕ್ಕೆ ಸೇರಿದವರಾದರೆ, ಉಳಿದವರು ಮಂಗಳೂರು ಉತ್ತರ ಶಾಸಕರ ವ್ಯಾಪ್ತಿಗೆ ಒಳಪಡುತ್ತಾರೆ. ಹಾಗಾಗಿ ಒಂದು ಅಸೆಂಬ್ಲಿ ಕ್ಷೇತ್ರಕ್ಕೆ ಮೇಯರ್‌ ಸ್ಥಾನ ಸಿಕ್ಕಿದರೆ, ಉಪ ಮೇಯರ್‌ ಸ್ಥಾನ ಇನ್ನೊಂದು ಕ್ಷೇತ್ರದ ಪಾಲಾಗಲಿದೆ.

ಉಪಮೇಯರ್‌ ಹೊಸಬರಿಗೆ?:

ಉಪಮೇಯರ್‌ ಸ್ಥಾನಕ್ಕೆ ಹಾಲಿ ಮೀಸಲಿನಂತೆ ಸಾಮಾನ್ಯ ಮಹಿಳಾ ಮೀಸಲು ಇರುವುದರಿಂದ ಮಾಜಿ ಉಪಮೇಯರ್‌ಗಳಾದ ಶಕೀಲ ಕಾವ ಅಥವಾ ಮರು ಆಯ್ಕೆಯಾಗಿರುವ ಪೂರ್ಣಿಮಾ ಅಥವಾ ಹೇಮಲತಾ ಆಸಕ್ತಿ ತೋರಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಮೀಸಲಾತಿಯಲ್ಲಿ ಅವಕಾಶ ಸಿಗುವಾಗ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಉಪಮೇಯರ್‌ಗೆ ಒಲವು ಹೊಂದಲಾರರು ಎಂದು ಪಕ್ಷೀಯರು ಹೇಳುತ್ತಾರೆ. ಹಾಗಾದಲ್ಲಿ ಉಪಮೇಯರ್‌ ಸ್ಥಾನಕ್ಕೆ ಹೊಸದಾಗಿ ಆಯ್ಕೆಯಾದ ಮಹಿಳೆಯನ್ನು ಆಯ್ಕೆ ಮಾಡುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ.

 

ಮಂಗಳೂರು ಪಾಲಿಕೆಯಲ್ಲಿ ಬಿಜೆಪಿಗೆ ಇದು ಎರಡನೇ ಬಾರಿ ಲಭಿಸುತ್ತಿರುವ ಅಧಿಕಾರ. 2008ರಲ್ಲಿ ಐದನೇ ಅವಧಿಯಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು. ಕೊನೆ ಅವಧಿಯಲ್ಲಿ ಮೇಯರ್‌ ಸ್ಥಾನ ಅಂತಿಮ ಕ್ಷಣದ ಎಡವಟ್ಟಿನಿಂದ ಕಾಂಗ್ರೆಸ್‌ ಪಾಲಾಗಿತ್ತು. ಈಗ ಏಳನೇ ಬಾರಿ ಚೊಚ್ಚಲ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಏರುತ್ತಿದೆ. ಒಟ್ಟು 60 ಸ್ಥಾನಗಳ ಪೈಕಿ ಬಿಜೆಪಿ 44, ಕಾಂಗ್ರೆಸ್‌ 14 ಹಾಗೂ ಎಸ್‌ಡಿಪಿಐ 2 ಸ್ಥಾನಗಳನ್ನು ಗೆದ್ದುಕೊಂಡಿದೆ.

ಈಗಾಗಲೇ ಪಾಲಿಕೆ ಚುನಾವಣೆಯ ಫಲಿತಾಂಶವನ್ನು ಮೈಸೂರಿನ ವಿಭಾಗೀಯ ಆಯುಕ್ತರಿಗೆ ರವಾನಿಸಲಾಗಿದೆ. ಮೇಯರ್‌-ಉಪಮೇಯರ್‌ ಆಯ್ಕೆ ಕುರಿತು ದಿನಾಂಕ ನಿಗದಿ ಸೇರಿದಂತೆ ಆಯ್ಕೆ ಪ್ರಕ್ರಿಯೆ ಬಗ್ಗೆ ಅವರೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ ಹೆಳಿದ್ದಾರೆ.

ಮಂಗಳೂರು ಪಾಲಿಕೆ ಚುನಾವಣೆ: ಫುಡ್ ಡೆಲಿವರಿ ಗರ್ಲ್‌ಗೆ ಸೋಲು

ಪಾಲಿಕೆಯ ಮೇಯರ್‌-ಉಪಮೇಯರ್‌ ಆಯ್ಕೆ ಹಾಲಿ ಅಥವಾ ಹೊಸ ಮೀಸಲಾತಿಯನ್ವಯ ನಡೆಸಬೇಕೇ ಎಂಬ ಬಗ್ಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಈ ಬಗ್ಗೆ ಶೀಘ್ರವೇ ನಿರ್ಧಾ ಕೈಗೊಳ್ಳಲಾಗುವುದು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಹೇಳಿದ್ದಾರೆ.

- ಆತ್ಮಭೂಷಣ್‌

click me!