ಎಲ್ಲ ಪೊಲೀಸ್‌ ಠಾಣೆಗಳ ಪುನಾರಚನೆ: ಗೃಹ ಸಚಿವ ಬೊಮ್ಮಾಯಿ

By Kannadaprabha NewsFirst Published Mar 5, 2021, 7:15 AM IST
Highlights

ಬಿಬಿಎಂಪಿ ವ್ಯಾಪ್ತಿಗೆ 118 ಹಳ್ಳಿಗಳು ಸೇರ್ಪಡೆ ಆಗಿರುವ ಕಾರಣ ಇದ್ದ ಠಾಣೆ ಪುನಾರಚಿಸಿ ಹೊಸ ಠಾಣೆ ಆರಂಭ ಅಗತ್ಯ| ಟ್ರಾಫಿಕ್‌ಗೆ ಈಗ ಇರುವ ವಲಯ 3 ಮಾತ್ರ, ಹಾಗಾಗಿ ಹೊಸ ದಕ್ಷಿಣ ಸಂಚಾರ ಪೊಲೀಸ್‌ ವಲಯ ಸ್ಥಾಪನೆಗೆ ಚಿಂತನೆ| ಠಾಣೆಗಳ ಪುನರ್‌ ರಚನ ಸಮಿತಿ ವಾರದೊಳಗೆ ಸರ್ಕಾರದ ಕೈಗೆ| ವರದಿ ಪರಿಶೀಲಿಸಿ ಸೂಕ್ತ ಕ್ರಮ: ಬಸವರಾಜ ಬೊಮ್ಮಾಯಿ| 

ಬೆಂಗಳೂರು(ಮಾ.05): ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನಗರದ ಎಲ್ಲ ಪೊಲೀಸ್‌ ಠಾಣೆಗಳನ್ನು ಪುನರ್‌ ರಚಿಸುವ ಸಂಬಂಧ ರಚಿಸಿರುವ ಸಮಿತಿ ಇನ್ನೊಂದು ವಾರದಲ್ಲಿ ವರದಿ ನೀಡಲಿದ್ದು, ಈ ವರದಿ ಪರಿಶೀಲಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ ಸದಸ್ಯ ಎಚ್‌.ಎ.ರಮೇಶ್‌ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಾಲಿಕೆಗೆ 118 ಹಳ್ಳಿಗಳು ಸೇರ್ಪಡೆಯಾಗಿವೆ, ಠಾಣೆಗಳ ವ್ಯಾಪ್ತಿ ಏಕ ಪ್ರಕಾರವಾಗಿ ಇಲ್ಲ. ಹೀಗಾಗಿ ಠಾಣೆಗಳನ್ನು ಮರು ರಚಿಸುವ ಅಗತ್ಯವಿದೆ. ಅಲ್ಲದೇ ಹೊಸ ಪೊಲೀಸ್‌ ಠಾಣೆಗಳನ್ನು ಆರಂಭಿಸುವ ಅಗತ್ಯವಿದೆ. ಸದ್ಯ ಟ್ರಾಫಿಕ್‌ ವಿಭಾಗದಲ್ಲಿ ಮೂರು ವಲಯಗಳು ಮಾತ್ರ ಇವೆ. ಹೊಸದಾಗಿ ದಕ್ಷಿಣ ವಲಯ ಸ್ಥಾಪಿಸುವ ಚಿಂತನೆ ಕೂಡಾ ಇದೆ ಎಂದರು.

ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್‌ ಸಮಸ್ಯೆ ನಿವಾರಿಸಲು ಹಲವಾರು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ನಗರ ವ್ಯಾಪ್ತಿಯಲ್ಲಿ 12ಕ್ಕೂ ಹೆಚ್ಚು ವಾಹನ ದಟ್ಟಣೆ ಕಾರಿಡಾರ್‌ಗಳನ್ನು ಗುರುತಿಸಲಾಗಿದೆ. ಈ ರಸ್ತೆಗಳಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಾಣ, ಗ್ರೇಡ್‌ ಸಪರೇಟ​ರ್ಸ್‌/ ಫ್ಲೈ ಓವರ್‌, ಮಲ್ಟಿಲೆವೆಲ್‌ ಪಾರ್ಕಿಂಗ್‌, ರಸ್ತೆ ಅಗಲೀಕರಣ, ಜಂಕ್ಷನ್‌ಗಳ ಅಭಿವೃದ್ಧಿ, ಬಾಟಲ್‌ನೆಕ್‌ ಇರುವ ಸ್ಥಳಗಳ ವಿಸ್ತರಣೆ, ಸ್ಕೈ ವಾಕ್‌, ಬಸ್‌ ಬೇಸ್‌, ಸಿಗ್ನಲ್‌ ಲೈಟ್‌ಗಳ ಅಳವಡಿಕೆ, ಮಳೆ ಬಂದಾಗ ನೀರು ನಿಲ್ಲುವ ಸ್ಥಳಗಳ ದುರಸ್ತಿ ಸೇರಿದಂತೆ ಹಲವು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಸಚಿವ ಬೊಮ್ಮಾಯಿ ವಿವರಿಸಿದರು.

ಸಂಪುಟ ಸಭೆಯಲ್ಲಾದ ಮಹತ್ವದ ಚರ್ಚೆ ಬಗ್ಗೆ ಮಾಹಿತಿ ನೀಡಿದ ಬಸವರಾಜ​ ಬೊಮ್ಮಾಯಿ

ಏರ್ಪೋರ್ಟ್‌ ಸಿಟಿ ಪೊಲೀಸ್‌ ವ್ಯಾಪ್ತಿಗೆ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಗರ ಪೊಲೀಸ್‌ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗುವುದು, ಜೊತೆಗೆ ಪ್ರತ್ಯೇಕ ಪೊಲೀಸ್‌ ಠಾಣೆ ಆರಂಭಿಸುವ ಉದ್ದೇಶವಿದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು. ಪೊಲೀಸ್‌ ಠಾಣೆಗಳು ಜನ ಸ್ನೇಹಿ ಆಗಬೇಕು ಎಂಬ ಕಾರಣದಿಂದ ಪ್ರತಿ ಪೊಲೀಸ್‌ ಠಾಣೆಯಲ್ಲಿ ಹೆಲ್ಪ್‌ ಡೆಸ್ಕ್‌ ಆರಂಭಿಸಲಾಗಿದೆ. ಸಾರ್ವಜನಿಕರು ಯಾವುದೇ ಆತಂಕವಿಲ್ಲದೇ ಪೊಲೀಸ್‌ ಠಾಣೆಗಳಿಗೆ ಬಂದು ದೂರು ಸಲ್ಲಿಸುವ ವಾತಾವರಣ ಸೃಷ್ಟಿಸಲು ಹಲವಾರು ಸೂಚನೆಗಳನ್ನು ಕಾಲ ಕಾಲಕ್ಕೆ ನೀಡಲಾಗುತ್ತದೆ ಎಂದು ಹೇಳಿದರು.
 

click me!