ರಾಜ್ಯದಲ್ಲಿ ವಾಕ್ಸಿನ್ ಸ್ವಲ್ಪ ಕೊರತೆ| ಹೆಚ್ಚಿನ ವ್ಯಾಕ್ಸಿನ್ ತರಲು ರಾಜ್ಯಮಟ್ಟದಲ್ಲಿ ಪ್ರಯತ್ನ| ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಕೊಡುವ ವಿಚಾರ ರಾಜ್ಯಮಟ್ಟದಲ್ಲಿ ಚರ್ಚೆಯಾಗಬೇಕಿದೆ| ಸದ್ಯಕ್ಕೆ ಕೊರೋನಾ ನಿಯಂತ್ರಿಸಲು ಕ್ರಮ: ಬೊಮ್ಮಾಯಿ|
ಹಾವೇರಿ(ಮೇ.01): ಕೆಲವು ನಿರ್ಬಂಧಗಳನ್ನು ಹಾಕಿ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಇದು ಲಾಕ್‌ಡೌನ್ ಅಲ್ಲ. ಇದು ಎರಡು ವಾರ ಮುಂದುವರಿಯಲಿದೆ. ಇದು ಪೂರ್ಣಗೊಳ್ಳುವ ಮೊದಲೇ ರಾಜ್ಯ ಮಟ್ಟದ ತಜ್ಞರ ಸಮಿತಿ, ಟಾಸ್ಕ್‌ಫೋರ್ಸ್ ಸಮಿತಿಯವರು ಸಭೆ ಸೇರಿ ಕೊರೋನಾ ಪರಿಸ್ಥಿತಿ ಅವಲೋಕಿಸಿ ಕರ್ಫ್ಯೂ ಮುಂದುವರಿಸಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಗೃಹ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಇರುವ ನಿರ್ಬಂಧ ಎರಡು ವಾರಗಳ ಕಾಲ ಮುಂದುವರಿಯಲಿದೆ. ಕೊರೋನಾ ಎರಡನೇ ಅಲೆಯಲ್ಲಿ ಒಬ್ಬರಿಗೆ ಪಾಸಿಟಿವ್ ಬಂದರೆ ಇಡೀ ಕುಟುಂಬಕ್ಕೆ ಬರುತ್ತಿದೆ. ಈಗ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಜನತೆ ಕೊರೋನಾ ನಿಯಂತ್ರಣ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಮ್ಮ ಆರೋಗ್ಯದ ಜತೆಗೆ ಇತರರ ಆರೋಗ್ಯದ ಜವಾಬ್ದಾರಿಯೂ ನಮ್ಮ ಮೇಲಿದೆ. ಹೀಗಾಗಿ ಬಹಳ ಎಚ್ಚರಿಕೆ ವಹಿಸಬೇಕಿದೆ. ಸಾರ್ವಜನಿಕರು ಸಹ ಸ್ವಯಂಪ್ರೇರಣೆಯಿಂದ ನಿಯಮ ಪಾಲಿಸಿದಾಗ ಮಾತ್ರ ನಿಯಂತ್ರಣ ಸಾಧ್ಯ ಎಂದು ತಿಳಿಸಿದ್ದಾರೆ.
ಬಡ ಕೊರೋನಾ ಸೋಂಕಿತರ ಚಿಕಿತ್ಸಾ ವೆಚ್ಚ ಭರಿಸುವೆ ಎಂದ ಸಚಿವ
ಆರಂಭದಲ್ಲಿ ಕೊರೋನಾ ವ್ಯಾಕ್ಸಿನ್ ಹಾಕಿಕೊಳ್ಳಲು ಹೆಚ್ಚಿನ ಜನ ಮುಂದೆ ಬರಲಿಲ್ಲ. ಈಗ ಎಲ್ಲರೂ ಒಟ್ಟಿಗೆ ಬರುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ವಾಕ್ಸಿನ್ ಸ್ವಲ್ಪ ಕೊರತೆಯಾಗಿದೆ. ಹೆಚ್ಚಿನ ವ್ಯಾಕ್ಸಿನ್ ತರಲು ರಾಜ್ಯಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ. ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಕೊಡುವ ವಿಚಾರ ರಾಜ್ಯಮಟ್ಟದಲ್ಲಿ ಚರ್ಚೆಯಾಗಬೇಕಿದೆ. ಸದ್ಯಕ್ಕೆ ಕೊರೋನಾ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona