
ಹುಬ್ಬಳ್ಳಿ(ಮೇ.30): ಕೊರೋನಾ ಲಾಕ್‌ಡೌನ್ ಸಡಿಲಿಕೆ ಆಗುತ್ತಿದ್ದು, ಇಷ್ಟು ದಿನ ಇಳಿಮುಖವಾಗಿದ್ದ ಅಪರಾಧಿ ಚಟುವಟಿಕೆ ಮುಂದಿನ ದಿನಗಳಲ್ಲಿ ಮತ್ತೆ ಶುರುವಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಜಾಗೃತರಾಗಿರಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಹಾನಗರ ಪೊಲೀಸ್ ಕಮಿಷನರೆಟ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಇಲ್ಲಿನ ಮಹಾನಗರ ಪೊಲೀಸ್ ಕಮಿಷನರೆಟ್ ಕಚೇರಿಯಲ್ಲಿ ಶುಕ್ರವಾರ ಕೋವಿಡ್-19 ಮಹಾಮಾರಿ ಕುರಿತು ಪೊಲೀಸ್ ಇಲಾಖೆ ಕೈಗೊಂಡ ಕಾನೂನು ಸುವ್ಯವಸ್ಥೆ ಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು. ಕೊರೋನಾ ಸೃಷ್ಟಿಸಿದ ಸಂಕಷ್ಟದ ಸಮಯದಲ್ಲಿ ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೂ. 1ರಿಂದ ಲಾಕ್ಡೌನ್ ಇನ್ನಷ್ಟುಸಡಿಲವಾಗಲಿದೆ. ಹೀಗಾಗಿ ಪೊಲೀಸರು ತಮ್ಮ ಸುರಕ್ಷತೆ ಕುರಿತು ಮುತುವರ್ಜಿ ವಹಿಸಿ ಕರ್ತವ್ಯ ಪಾಲಿಸಿ ಎಂದರು.
ಹುಬ್ಬಳ್ಳಿ: ಆಸ್ಟ್ರೇಲಿಯಾ ಮಹಿಳೆ ಪರದಾಟ, ಸ್ವದೇಶಕ್ಕೆ ಕಳುಹಿಸಿ ಮಾನವೀಯತೆ ಮೆರೆದ SP ಕಟಿಯಾರ್
ಲಾಕ್‌ಡೌನ್ ವೇಳೆಯಲ್ಲಿ ಅಪರಾಧಿ ಚಟುವಟಿಕೆ ಕಡಿಮೆಯಾಗಿತ್ತು. ಮುಂದೆ ಪುನಃ ಹೆಚ್ಚಬಹುದು. ಹೀಗಾಗಿ ಈ ಬಗ್ಗೆ ಎಚ್ಚರ ವಹಿಸಿ ಎಂದು ಸೂಚಿಸಿದರು. ಅಲ್ಲದೇ ಕೊರೋನಾ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ. ಹೊರ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವವರ ಕುರಿತು ನಿಗಾ ಇಡಬೇಕು. ಸೂಕ್ತ ವ್ಯವಸ್ಥೆ ಕಲ್ಪಿಸಲು ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ವೇಳೆ ಮಹಾನಗರ ಪೊಲೀಸ್ ಕಮಿಷನರ್ ಆರ್. ದಿಲೀಪ್, ಡಿಸಿಪಿ ಪಿ. ಕೃಷ್ಣಕಾಂತ, ಆರ್.ಬಿ. ಬಸರಗಿ ಸೇರಿದಂತೆ ಉನ್ನತ ಅಧಿಕಾರಿಗಳು ಇದ್ದರು.