ಇಂದು ನನಸಾಗಲಿದೆ ಕೌರವನ ಮಂತ್ರಿಗಿರಿ ಕನಸು| ಬಿಎಸ್‌ವೈ ಸಂಪುಟ ಸೇರ್ಪಡೆಯಾಗಲಿದ್ದಾರೆ ಬಿ.ಸಿ. ಪಾಟೀಲ| ಯಾವ ಖಾತೆ ಎಂಬ ಬಗ್ಗೆ ಕುತೂಹಲ| ಕಾಂಗ್ರೆಸ್‌ನಲ್ಲಿದ್ದಾಗ ಕೈಗೂಡದ್ದು ಬಿಜೆಪಿಗೆ ಬಂದು ನೆರವೇರಿಸಿಕೊಳ್ಳುತ್ತಿರುವ ಬಿಸಿಪಿ|
ನಾರಾಯಣ ಹೆಗಡೆ
ಹಾವೇರಿ(ಫೆ.06): ಹಲವು ತಿಂಗಳುಗಳ ಹೋರಾಟ, ಶಾಸಕ ಸ್ಥಾನ ತ್ಯಾಗ ಮಾಡಿದ ಪ್ರತಿಫಲ ಎಂಬಂತೆ ಸಿಎಂ ಯಡಿಯೂರಪ್ಪ ಅವರ ಸಂಪುಟದಲ್ಲಿ ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ ಸೇರ್ಪಡೆಯಾಗುವುದು ನಿಶ್ಚಯವಾಗಿದೆ. ಇಂದು(ಗುರುವಾರ) ಬಿ.ಸಿ.ಪಾಟೀಲ ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರ ಮಂತ್ರಿಗಿರಿ ಕನಸು ನನಸಾಗಲಿದೆ.
undefined
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಗುರುವಾರ ಮುಹೂರ್ತ ನಿಗದಿಯಾಗಿದ್ದು, ಬಿ.ಸಿ. ಪಾಟೀಲ ಅವರೂ ಪ್ರಮಾಣ ವಚನ ಸ್ವೀಕರಿಸುವುದು ಪಕ್ಕಾ ಆಗಿದೆ. ರಾಜಭವನದಲ್ಲಿ ಇಂದು ಬೆಳಗ್ಗೆ 10.30ಕ್ಕೆ ಅವರು ಪ್ರಮಾಣ ಸ್ವೀಕರಿಸಲಿದ್ದು, ಯಾವ ಖಾತೆ ಪಡೆಯಲಿದ್ದಾರೆ ಎಂಬ ಕುತೂಹಲವಷ್ಟೇ ಉಳಿದಿದೆ. ಹಿರೇಕೆರೂರು ಕ್ಷೇತ್ರದಿಂದ 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಅವರು ಈಗ ಮಂತ್ರಿ ಪಟ್ಟದ ವರೆಗೆ ಬಂದು ನಿಂತಿದ್ದಾರೆ.
ಕಳೆದ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಸಾಕಷ್ಟುಪ್ರಯತ್ನ ನಡೆಸಿದ್ದ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ಈಗ ಬಿಜೆಪಿಗೆ ಬಂದು ಈಗ ತಮ್ಮ ಕನಸು ನನಸಾಗಿಸಿಕೊಳ್ಳುತ್ತಿದ್ದಾರೆ. ಉಪಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟಕ್ಕೆ ಸೇರಲಿರುವ ಅವರು, ಪ್ರಭಾವಿ ಖಾತೆ ಮೇಲೆಯೂ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದು ವರೆಗೆ ಯಾವ ಖಾತೆ ಎಂಬುದು ಊಹಾಪೋಹಕ್ಕೆ ಸೀಮಿತವಾಗಿದೆ. ಜಿಲ್ಲೆಯ ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದು, ಜಿಲ್ಲೆಯ ಮತ್ತೊಬ್ಬರಿಗೆ ಮಂತ್ರಿಗಿರಿ ಭಾಗ್ಯ ಒಲಿದು ಬರುತ್ತಿದೆ. ಹಿಂದಿನ ಮೈತ್ರಿ ಸರ್ಕಾರದಲ್ಲಿ ಅನೇಕ ಬಾರಿ ಮಂತ್ರಿ ಪಟ್ಟದ ಭರವಸೆ ಸಿಕ್ಕು ಕೊನೆಗೆ ನಿರಾಸೆ ಅನುಭವಿಸುತ್ತ ಬಂದಿದ್ದ ಬಿ.ಸಿ. ಪಾಟೀಲರಿಗೆ ಈಗ ಬಿಜೆಪಿಯಿಂದ ಆ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಆ ಮೂಲಕ ಸುಮಾರು 35 ವರ್ಷಗಳ ಬಳಿಕ ಹಿರೇಕೆರೂರು ಕ್ಷೇತ್ರದ ಶಾಸಕರಿಗೆ ಮಂತ್ರಿಗಿರಿ ಭಾಗ್ಯ ಬಂದಿದೆ.
ಕಾಂಗ್ರೆಸ್‌ನಲ್ಲಿದ್ದಾಗ ಕೈಗೂಡದ ಕನಸು
2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಿಂದ ಗೆದ್ದ ಏಕೈಕ ಶಾಸಕ ಎಂಬ ಹಿರಿಮೆಗೆ ಬಿ.ಸಿ. ಪಾಟೀಲ ಪಾತ್ರರಾಗಿದ್ದರು. ಅವರಿಂದಾಗಿ ಜಿಲ್ಲೆಯಲ್ಲಿ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಉಳಿದಿತ್ತು. ಬಳಿಕ ಮೈತ್ರಿ ಸರ್ಕಾರ ರಚನೆಯಾದಾಗ ಜಿಲ್ಲೆಯ ಖೋಟಾದಲ್ಲಿ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಮಂತ್ರಿಗಿರಿ ಆರ್. ಶಂಕರ್ ಪಾಲಾಗಿತ್ತು. ಅಲ್ಲದೇ ಜಾತಿ ಖೋಟಾದಲ್ಲೂ ಬಿ.ಸಿ. ಪಾಟೀಲ್ ಅವಕಾಶದಿಂದ ವಂಚಿತರಾದರು. ಆಗಿನಿಂದಲೇ ಕಾಂಗ್ರೆಸ್ ನಾಯಕತ್ವದ ವಿರುದ್ಧ ಕಿಡಿ ಕಾರುತ್ತ ಬಂದಿದ್ದ ಪಾಟೀರನ್ನು ಕೈ ನಾಯಕರು ಭರವಸೆ ನೀಡುತ್ತ ಸಮಾಧಾನಪಡಿಸುತ್ತ ಬಂದಿದ್ದರು. ದಸರಾ, ದೀಪಾವಳಿ ಎನ್ನುತ್ತಲೇ ಕಾಲಕಳೆದ ಮೈತ್ರಿ ಸರ್ಕಾರದ ನಾಯಕರು ಭರವಸೆ ಮಾತ್ರ ಈಡೇರಿಸಿರಲಿಲ್ಲ. ಲೋಕಸಭೆ ಚುನಾವಣೆ ಬಳಿಕ ಮಂತ್ರಿಗಿರಿ ಪಕ್ಕಾ ಎನ್ನತೊಡಗಿದ್ದರು. ಆದರೆ, ಮತ್ತೆ ಕೈತಿರುಗಿಸಿದ್ದರಿಂದ ಪಕ್ಷ ಬಿಡುವ ನಿರ್ಧಾರಕ್ಕೆ ಬಂದ ಪಾಟೀಲರು, ಕೆಲವೇ ತಿಂಗಳಲ್ಲಿ ಮೈತ್ರಿ ಸರ್ಕಾರ ಬೀಳಲು ಕಾರಣರಾದರು. ಇದಾದ ಬಳಿಕ ಅನರ್ಹತೆ ಶಿಕ್ಷೆ ಅನುಭವಿಸಿ ಟೀಕೆಗೆ ಗುರಿಯಾದ ಅವರು ಉಪಚುನಾವಣೆಯಲ್ಲಿ ಗೆದ್ದು ಅರ್ಹರಾಗಿ ಈಗ ಮಂತ್ರಿ ಪಟ್ಟದ ವರೆಗೆ ಬಂದು ತಲುಪಿದ್ದಾರೆ.
ನಾಲ್ಕು ಬಾರಿ ಗೆದ್ದ ಕೌರವ
ತಮ್ಮ ರಾಜಕೀಯ ಮತ್ತು ಸಾಮಾಜಿಕ ಸೇವೆಗಾಗಿ ಹಿರೇಕೆರೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಬಿ.ಸಿ.ಪಾಟೀಲ ಅವರು ತಮ್ಮ ಸಿನಿಮಾ ಜೀವನದ ಯಶಸ್ಸನ್ನೇ ರಾಜಕೀಯದ ಮೆಟ್ಟಿಲಾಗಿ ಬಳಸಿಕೊಂಡರು. 2004ರಲ್ಲಿ ಜೆಡಿಎಸ್‌ನಿಂದ ಗೆದ್ದು ಪ್ರಥಮ ಬಾರಿಗೆ ಶಾಸಕರಾದರು. 2008ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು. ಆಗ ಎರಡನೇ ಬಾರಿಗೆ ಗೆದ್ದು ಕ್ಷೇತ್ರದ ಶಾಸಕರಾದರು. 2013ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಯು.ಬಿ. ಬಣಕಾರ ವಿರುದ್ಧ ಪರಾಭವಗೊಂಡರು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿತ್ತಾದರೂ ಇವರು ಸೋತಿದ್ದರಿಂದ ಅವಕಾಶ ಸಿಕ್ಕಿರಲಿಲ್ಲ. 2018ರಲ್ಲಿ ಮೂರನೇ ಬಾರಿಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗುವ ಮೂಲಕ ಜಿಲ್ಲೆಯಿಂದ ಕಾಂಗ್ರೆಸ್‌ನಿಂದ ಗೆದ್ದ ಏಕೈಕ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿದ್ದರಿಂದ ಬಿ.ಸಿ. ಪಾಟೀಲ ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಪ್ರಯತ್ನ ನಡೆಸಿದರು. ಆದರೆ, ಒಂದು ವರ್ಷ ಕಳೆದರೂ ಮಂತ್ರಿಯಾಗುವ ಯಾವ ಸಾಧ್ಯತೆಯೂ ಕೈಗೂಡದ್ದರಿಂದ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದನೆ ದೊರೆಯದ್ದರಿಂದ ಬಿಜೆಪಿ ನಾಯಕರ ಸಂಪರ್ಕಕ್ಕೆ ಬಂದರು.
ಅನರ್ಹತೆ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ತೀರ್ಪು ಬಂದು ಸ್ಪರ್ಧೆಗೆ ಅವಕಾಶ ದೊರೆತ ಬಳಿಕ ಬಿಜೆಪಿ ಸೇರಿದ್ದರು. ಕ್ಷೇತ್ರದ ಅಭಿವೃದ್ಧಿಗಾಗಿ ಎಂದು ಮತದಾರರ ಬಳಿ ಹೋದ ಅವರಿಗೆ ನಿರೀಕ್ಷೆಗೂ ಮೀರಿ ಬೆಂಬಲ ದೊರೆತಿದೆ. 29 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಉಪಚುನಾವಣೆಯಲ್ಲಿ ಗೆದ್ದಿದ್ದಾರೆ. ಶಾಸಕ ಸ್ಥಾನ ತ್ಯಾಗ ಮಾಡಿ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಕಾರಣರಾದ ಹಿನ್ನೆಲೆಯಲ್ಲಿ ಬಿ.ಸಿ. ಪಾಟೀಲರಿಗೆ ಈಗ ಸಂಪುಟದಲ್ಲಿ ಸ್ಥಾನ ದೊರೆಯುತ್ತಿದೆ.
ಪ್ರಭಾವಿ ಖಾತೆ ಮೇಲೆ ಕಣ್ಣು
ಕಾಂಗ್ರೆಸ್ ಬಿಟ್ಟು ಬಂದ ಪ್ರಮುಖರಲ್ಲಿ ಬಿ.ಸಿ. ಪಾಟೀಲ ಅವರೂ ಪ್ರಭಾವಿಯಾಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಪ್ರಭಾವಿ ಖಾತೆ ಮೇಲೆಯೇ ಅವರು ಕಣ್ಣು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜಕೀಯಕ್ಕೆ ಬರುವ ಮುನ್ನ ಬಿ.ಸಿ. ಪಾಟೀಲ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದರು. ಆದ್ದರಿಂದ ಅವರು ಗೃಹ ಖಾತೆ ಮೇಲೆ ಕಣ್ಣಿಟ್ಟಿದ್ದು, ಅದಕ್ಕಾಗಿ ಪ್ರಯತ್ನ ನಡೆಸಿದ್ದಾರೆ. ಅದಿಲ್ಲದಿದ್ದರೆ ಬೇರೆ ಯಾವುದಾದರೂ ಪ್ರಭಾವಿ ಖಾತೆಗಳಿಗೆ ಪಟ್ಟು ಹಿಡಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೇ ಜಿಲ್ಲಾ ಉಸ್ತುವಾರಿಯೂ ಪಾಟೀಲರಿಗೆ ಸಿಗುವ ಸಾಧ್ಯತೆಯಿದೆ. ಅದಕ್ಕಾಗಿಯೇ ಬೊಮ್ಮಾಯಿ ಅವರಿಗೆ ಉಡುಪಿ ಜಿಲ್ಲೆ ಉಸ್ತುವಾರಿ ವಹಿಸಿ, ಹೆಚ್ಚುವರಿಯಾಗಿ ಹಾವೇರಿ ಉಸ್ತುವಾರಿ ನೀಡಲಾಗಿದೆ. ಅಂತೂ ಕೌರವ ಖ್ಯಾತಿಯ ಪಾಟೀಲರ ಮಂತ್ರಿಗಿರಿ ಕನಸು ಗುರುವಾರ ನನಸಾಗಲಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭ ಕಣ್ತುಂಬಿಕೊಳ್ಳಲು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಬುಧವಾರವೇ ರಾಜಧಾನಿಗೆ ತೆರಳಿದ್ದಾರೆ.
ಈ ಬಗ್ಗೆ ಮಾತನಾಡಿದ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ಅವರು, ಕ್ಷೇತ್ರದ ಮತದಾರರ ಆಶೀರ್ವಾದರಿಂದ ಗುರುವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ. ಯಾವ ಖಾತೆ ಎಂಬ ಬೇಡಿಕೆಯಿಟ್ಟಿಲ್ಲ. ಯಾವ ಖಾತೆ ಕೊಟ್ಟರೂ ಸಮರ್ಪಕವಾಗಿ ನಿಭಾಯಿಸುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪನವರು ನಮ್ಮ ಮೇಲೆ ಭರವಸೆಯಿಟ್ಟು ಮಂತ್ರಿ ಸ್ಥಾನ ನೀಡುತ್ತಿದ್ದು, ಪಕ್ಷದ ಎಲ್ಲ ನಾಯಕರಿಗೂ, ಕ್ಷೇತ್ರದ ಮತದಾರ ಪ್ರಭುಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.