ಬರೋಬ್ಬರಿ 12 ದಿನವಾದ್ರೂ ಹಿಪ್ಪರಗಿ ಬ್ಯಾರೇಜ್ ದುರಸ್ಥಿಗೆ ಹರಸಾಹಸ, ನೀರು ಸೋರಿಕೆಯಾಗಿ ಅರ್ಧದಷ್ಟು ಪೋಲು!

Published : Jan 15, 2026, 06:55 PM IST
Hippuragi Barrage Gate

ಸಾರಾಂಶ

ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ.22ರ ದುರಸ್ತಿ ಕಾರ್ಯ 12 ದಿನಗಳಿಂದ ಮುಂದುವರೆದಿದ್ದು, ನೀರಿನ ಸೋರಿಕೆ ಸಂಪೂರ್ಣ ನಿಂತಿಲ್ಲ. ಈ ಅವಘಡದಿಂದ 3.5 ಟಿಎಂಸಿ ನೀರು ಪೋಲಾಗಿದ್ದು, ಎಲ್ಲಾ 22 ಗೇಟ್‌ಗಳನ್ನು ಬದಲಾಯಿಸಲು ಸ್ಥಳೀಯ ಮುಖಂಡರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ರಬಕವಿ-ಬನಹಟ್ಟಿ: ಕಳೆದ 12 ದಿನಗಳಿಂದ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ.22ರ ದುರಸ್ತಿಯಲ್ಲಿ ತೊಡಗಿರುವ ಸಿಬ್ಬಂದಿ ಕಾರ್ಯ ಮೆಚ್ಚುವಂತಹದ್ದು. ಆದರೆ ಗೇಟ್‌ನಿಂದ ನೀರಿನ ಸೋರಿಕೆ ನಿಲ್ಲಿಸುವಲ್ಲಿ ಪರಿಣಾಮಕಾರಿ ಕಾರ್ಯವಾಗದಿರುವುದು ಮಾತ್ರ ವಿಪರ್ಯಾಸವೇ ಸರಿ. ಮೊದಲ ದಿನವಾದ ಸೆ.೬ ಮಂಗಳವಾರದಂದು 9 ಸಾವಿರ ಕ್ಯುಸೆಕ್‌ನಷ್ಟು ನೀರು ಪೋಲಾಗುತ್ತಿತ್ತು. ಈಗ 12 ದಿನಗಳ ನಂತರ 100 ಕ್ಯುಸೆಕ್‌ಗೆ ಇಳಿಕೆ ಕಂಡಿರುವುದು ಕೊಂಚ ನೆಮ್ಮದಿ ತಂದಿದೆ. ಒಟ್ಟು ಹಿಪ್ಪರಗಿ ಬ್ಯಾರೇಜ್‌ನಲ್ಲಿ 6 ಟಿಎಂಸಿಯಷ್ಟು ನೀರಿನಲ್ಲಿ 3.5 ಟಿಎಂಸಿಗೆ ಭಾರಿ ಇಳಿಕೆ ಕಂಡಿದೆ. ಉಳಿದ ಗೇಟ್‌ಗಳು ಕೂಡ ದುರ್ಬಲವಾಗಿದ್ದು, ಅವು ಸಹ ಯಾವಾಗ ಕೈಕೊಡುತ್ತವೆ ಎಂಬ ಆತಂಕವೂ ಇದೆ. ಇದರಿಂದಾಗಿ ರೈತರು ಹಾಗೂ ಜನರು ತೀವ್ರ ಕಂಗಾಲಾಗಿದ್ದಾರೆ. ಬುಧವಾರ ಹಲವಾರು ಕಡೆಗಳಿಂದ ನುರಿತ ಈಜು ತಜ್ಞರು, ಅಧಿಕಾರಿಗಳು, ತಾಂತ್ರಿಕ ವರ್ಗ ಬೀಡು ಬಿಟ್ಟಿದ್ದರೂ ನೀರು ತಡೆಯಲು ನಿಸ್ಸಾಹಕರಾಗಿದ್ದಾರೆ. ಇದೀಗ ಮರಳು ತುಂಬಿದ ಚೀಲಗಳನ್ನು ಗೇಟ್ ನಂ.22 ರಲ್ಲಿನ ಸೋರಿಕೆ ಪ್ರದೇಶದಲ್ಲಿ ಕ್ರೇನ್ ಮೂಲಕ ಇಳಿಬಿಡುತ್ತಿರುವ ಕಾರ್ಯ ಪ್ರಾರಂಭವಾಗಿದೆ.

ಹಿಪ್ಪರಗಿ ಬ್ಯಾರೇಜ್‌ನ ಎಲ್ಲ 22 ಗೇಟ್‌ಗಳನ್ನು ಹೊಸದಾಗಿ ಅಳವಡಿಕೆ ಮಾಡುವ ಅನಿವಾರ್ಯತೆ

ನೀರು ತಡೆಗೆ ಈಗಾಗಲೇ ಇಳಿ ಬಿಟ್ಟಿರುವ ಮರಳು ಚೀಲಗಳಿಂದ ನೀರು ಹರಿಯುವಿಕೆ ತಡೆಯುವಲ್ಲಿ ಅನುಕೂಲವಾಗುತ್ತಿರುವ ಹಿನ್ನೆಲೆ ತಾತ್ಕಾಲಿಕವಾಗಿ ಇದೇ ಪ್ರಯೋಗವನ್ನು ಮುಂದುವರಿಸಲಾಗುತ್ತಿದೆ. ಹಿಪ್ಪರಗಿ ಬ್ಯಾರೇಜ್‌ನ ಎಲ್ಲ 22 ಗೇಟ್‌ಗಳನ್ನು ಹೊಸದಾಗಿ ಅಳವಡಿಕೆ ಮಾಡುವ ಅನಿವಾರ್ಯತೆ ಎದುರಾಗಿದೆ. ಸಮರ್ಪಕವಾಗಿ ಗೇಟ್‌ಗಳ ಪೆನಲ್‌ಗಳನ್ನು ತೆರೆಯಲು ಹಾಗೂ ಮುಚ್ಚಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಗೇಟ್‌ನ ಕಮಾನುಗಳಲ್ಲಿನ ಗುರುತುಗಳಲ್ಲಿಯೂ ಏರುಪೇರಾಗುವಲ್ಲಿ ಕಾರಣವಾಗಿದ್ದು, ತಂತ್ರಜ್ಞಾನದೊಂದಿಗೆ ಹೊಸ ಗೇಟ್‌ಗಳ ಅಳವಡಿಕೆ ಅನಿವಾರ್ಯವಾಗಿದೆ ಎಂದು ತಾಂತ್ರಿಕ ವರ್ಗದ ಅಭಿಪ್ರಾಯವಾಗಿದೆ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ.22 ರಲ್ಲಿನ ಪೆನಲ್ ಮುರಿದು ಅವಘಡಕ್ಕೆ ತಾತ್ಕಾಲಿಕ ದುರಸ್ತಿ ಕಂಡಿದೆ. ಅಲ್ಲಿನ ನೀರು ಸೋರಿಕೆ ತಡೆಗೆ ೧೦ ಜನ ನುರಿತ ಸಿಬ್ಬಂದಿಗಳಿಂದ ಕಾರ್ಯ ಹಾಗೆಯೇ ಮುಂದುವರೆದಿದ್ದು, ಮಂಗಳವಾರವೂ ಶತಾಯ-ಗತಾಯ ಪ್ರಯತ್ನ ಮುಂದುವರಿದರೂ ಪ್ರಯೋಜನವಾಗಿಲ್ಲ.

ಗುಜರಾತ್‌ನಿಂದ ಇಬ್ಬರು ಅನುಭವಿ ಈಜುಗಾರರು ಮಂಗಳವಾರ ಕಾರ್ಯದಲ್ಲಿದ್ದರು. ಅದರಂತೆ ಶಿವಮೊಗ್ಗದಿಂದಲೂ ಮೂವರು ಹಾಗೂ ಸ್ಥಳೀಯ ಐವರಿಂದ ನಿರಂತರ ಕಾರ್ಯ ನಡೆಯುತ್ತಿದೆ. ಗೇಟ್‌ನ ಪೆನಲ್ ಒಳಗಡೆ ಸೋರಿಕೆ ತಡೆಗೆ ತಾತ್ಕಾಲಿಕವಾಗಿ ಹುಲ್ಲಿನ ರವಿಕೆ, ಮರಳು ಸೇರಿದಂತೆ ಇತರೆ ಸಾಮಗ್ರಿಗಳನ್ನೊಂಡ ವಸ್ತುಗಳನ್ನು ಅಳವಡಿಸಲೂ ಸಹಿತ ವಿಫಲವಾಗುತ್ತಿದೆ. ನೀರಿನ ಒತ್ತಡ ಪ್ರಮಾಣ ಹೆಚ್ಚಿರುವದರಿಂದ ನೀರೊಳಗಡೆ ಕೆಲಸಕ್ಕೆ ಅಡ್ಡಿಯಾಗುತ್ತಿದೆ. ಬುಧವಾರವೂ ಸೋರಿಕೆ ತಡೆಯುವ ಕಾರ್ಯ ಮುಂದುವರೆಯಲಿದ್ದು, ಇವತ್ತಾದರೂ ಕಾರ್ಯ ಪೂರ್ಣಗೊಳ್ಳುವದೇ ಎಂಬುದನ್ನು ಕಾದು ನೋಡಬೇಕಿದೆ.

ಡಿಕೆಶಿಗೆ ಮನವಿ

ಹಿಪ್ಪರಗಿ ಬ್ಯಾರೇಜ್‌ನಲ್ಲಿರುವ ಎಲ್ಲ 22 ಗೇಟ್‌ಗಳ ಪ್ಲೇಟ್(ಪೆನಲ್) ಹೊಸದಾಗಿ ಅಳವಡಿಸಲು ಶೀಘ್ರ ಕ್ರಮ ಕೈಗೊಳ್ಳುವಂತೆ ತೇರದಾಳ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹಾಗೂ ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ ಜಂಟಿಯಾಗಿ ಡಿಸಿಎಂ, ನೀರಾವರಿ ಸಚಿವ ಡಿ.ಕೆ. ಶಿವಕುಮಾರ್‌ ಗೆ ಒತ್ತಾಯಿಸಿದರು. ವಿಜಯಪುರ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು  ಭೇಟಿ ಮಾಡಿದ ಸಂದರ್ಭದಲ್ಲಿ ಮನವಿ ಮಾಡಿ ಮಂಗಳವಾರ ಸಂಭವಿಸಿದ ಗೇಟ್ ನಂ.22ರಲ್ಲಿನ ಪ್ಲೇಟ್ (ಪೆನಲ್)ನ ಸಮಸ್ಯೆಯಿಂದ ಅರ್ಧದಷ್ಟು ನೀರು ಜಲಾಶಯದಿಂದ ಖಾಲಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರ ಸರ್ಕಾರದಿಂದ 2 ಟಿಎಂಸಿ ನೀರು ಹರಿಸುವ ಜೊತೆಗೆ ಹೊಸ ಗೇಟ್ (ಪೆನಲ್) ಅಳವಡಿಸುವಲ್ಲಿ ಇಲಾಖೆಗೆ ಸೂಚಿಸುವಂತೆ ಮನವಿ ಮಾಡಿದರು.

ಕೃಷಿ,ಕುಡಿಯುವುದಕ್ಕೆ ಸಂಜೀವಿನಿ: 

ಸಾವಿರಾರು ಎಕರೆ ಪ್ರದೇಶದ ಫಲವತ್ತಾದ ಜಮೀನುಗಳಿಗೆ ನೀರುಣಿಸಲು ಹಾಗೂ ಕಾಗವಾಡ, ಕುಡಚಿ, ರಾಯಭಾಗ, ಅಥಣಿ, ಬಾಗಲಕೋಟೆ ಜಿಲ್ಲೆಗಳ ನಗರ ಹಾಗೂ ನೂರಾರು ಗ್ರಾಮಗಳಿಗೆ ಬೇಸಿಗೆ ದಿನಗಳಲ್ಲಿ ಸಂಜೀವಿನಿ ಆಗಿರುವ ಈ ಬ್ಯಾರೇಜ್ ಸದ್ಯ ಅವಘಡದಿಂದ ಬೇಸಿಗೆ ಜಲಕ್ಷಾಮ ಭೀತಿ ಜನತೆ ಕಾಡುತ್ತಿದೆ. ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಲಕ್ಷಾಂತರ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಮೂಲ ಈ ಬ್ಯಾರೇಜ್ ಆಗಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸಕಲ ರೀತಿಯಲ್ಲಿ ಕಾರ್ಯೋನ್ಮುಖರಾಗುವಲ್ಲಿ ಅಧಿಕಾರಿಗಳಿಗೆ ಸೂಚಿಸಬೇಕೆಂದು ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಕೊಣ್ಣೂರ ಹಾಗೂ ನ್ಯಾಮಗೌಡ ಜಂಟಿಯಾಗಿ ಮನವಿ ಮಾಡಿದರು.

PREV
Read more Articles on
click me!

Recommended Stories

ಕೆ.ಎಸ್. ಈಶ್ವರಪ್ಪ ಬಿಜೆಪಿ ವಾಪಸಾತಿ, ನನ್ನ ಮನಸ್ಸಲ್ಲೂ ಇದೆ ಬಸನಗೌಡ ಯತ್ನಾಳ್ ಮನಸ್ಸಲ್ಲೂ ಇದೆ ಅಂದ್ರು!
ಬೆಳ್ತಂಗಡಿ ಬಾಲಕ ಸುಮಂತ್ ಸಾವು ಪ್ರಕರಣಕ್ಕೆ ರೋಚಕ ಟ್ವಿಸ್ಟ್ : ಶವ ಪತ್ತೆಯಾದ ಕೆರೆಯಲ್ಲಿ ಕತ್ತಿ ಟಾರ್ಚ್ ಪತ್ತೆ