ಕಾಫಿನಾಡು ಚಿಕ್ಕಮಗಳೂರಿನ ಹಿಂದೂ ಯುವತಿ, ಮುಸ್ಲಿಂ ಯುವಕನ ನಡುವಿನ ಮದುವೆ ಗಲಾಟೆ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ.
ಚಿಕ್ಕಮಗಳೂರು,(ಸೆಪ್ಟೆಂಬರ್. 16): ಚಿಕ್ಕಮಗಳೂರು ತಾಲ್ಲೂಕಿನ ದಾಸರಳ್ಳಿಯ ಲಕ್ಷೀಪುರ ಗ್ರಾಮದ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ಇಬ್ಬರು ಮದ್ವೆಯಾಗಲು ವಿವಾಹ ನೊಂದಣಿಗೆಂದು ಸೆ.14ರಂದು ನಗರದ ರತ್ನಗಿರಿ ರಸ್ತೆಯಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದರು.
ಅಲ್ಲದೇ ಇದೊಂದು ಲವ್ ಜಿಹಾದ್ ಆರೋಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಮದುವೆಗೆ ತಡೆಯೊಡ್ಡಿದ್ದರು. ಬಳಿಕ ಈ ಪ್ರಕರಣ ಪೊಲೀಸ್ ಮೆಟ್ಟಿಲೇರಿದ್ದು, ದೊಡ್ಡ ಹೈಡ್ರಾಮಾವೇ ನಡೆದಿತ್ತು.
ಇದೀಗ ಈ ಪ್ರಕರಣದ ಮುಂದುವರೆದ ಭಾಗವಾಗಿ ಮುಸ್ಲಿಂ ಯುವಕನನ್ನು ಮದುವೆಯಾಗಲು ಹೋಗಿದ್ದ ಹಿಂದೂ ಯುವತಿ ಚೈತ್ರಾ ಮಾಧ್ಯಮಗಳ ಮುಂದೆ ಮಾತನಾಡಿ, ನಾವು ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವೆ. ಇಬ್ಬರು ಇಷ್ಟಪಟ್ಟೆ ಮದುವೆಗೆ ಮುಂದಾಗಿದ್ದೇವೆ. ನಾವು ಮದುವೆಯಾಗ್ತೀವಿ, ಚೆನ್ನಾಗಿರ್ತೀವಿ, ಕೇಳೋಕೆ ಅವರ್ಯಾರು ಎಂದು ಬಜರಂಗದಳ ಕಾರ್ಯಕರ್ತರ ವಿರುದ್ಧ ಕಿಡಿಕಾರಿದ್ದಾರೆ.
ಹಿಂದೂ ಹುಡುಗಿ-ಮುಸ್ಲಿಂ ಹುಡುಗ ವಿವಾಹಕ್ಕೆ ಅಡ್ಡಿ: ಹಿಂದೂ ಕಾರ್ಯಕರ್ತರ ವಿರುದ್ಧ ಕೇಸ್ ಬುಕ್
ನನ್ನನ್ನು ಎಳೆದಾಡಿ, ಕೆಟ್ಟ ಕೆಟ್ಟದಾಗಿ ಬೈದು, ನನ್ನ ಗಂಡನಿಗೆ ಹಲ್ಲೆ ಮಾಡಿದ್ದಾರೆ. ಹಿಂದೂ ಹುಡುಗಿ ಬೇಕಾ? ಎಸ್ಸಿ ಹುಡುಗಿ ಬೇಕಾ ಅಂತ ಪತಿಯನ್ನು ಥಳಿಸಿದ್ದಾರೆ. ಚಿಕ್ಕಮಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಮ್ಮ ಮೇಲೆ ಹಲ್ಲೆ ನಡೆದಿದೆ. ಆ ದಿನ ಬಜರಂಗದಳದವರು ಏನಾದರೂ ಮಾಡುತ್ತಾರೆ ಎಂದು ಪೊಲೀಸರು ನನ್ನನ್ನು ಮನೆಗೆ ಕಳುಹಿಸಲಿಲ್ಲ. ಮನೆಗೆ ಕಳುಹಿಸದೇ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ ಎಂದರು.
ಆರೋಪಿಗಳಿಗೆ ಸ್ಟೇಷನ್ ಬೇಲ್ ಕೊಟ್ಟು ಕಳುಹಿಸಿದ್ದಾರೆ. ನಮ್ಮ ಮೇಲೆ ಹಲ್ಲೆ ಮಾಡಿ, ಕೆಟ್ಟದಾಗಿ ಬೈದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಪೋಲಿಸ್ ಇಲಾಖೆ ವಿರುದ್ಧ ಜಾಫರ್ ಮತ್ತು ಚೈತ್ರಾ ಅಸಮಾಧಾನ ಹೊರಹಾಕಿದರು.
ಪ್ರಕರಣದ ಹಿನ್ನೆಲೆ
ಜಾಫರ್ -ಚೈತ್ರಾ ಪ್ರೇಮಿಗಳಾಗಿದ್ದು, ಸೆ. 14 ರಂದು ಚಿಕ್ಕಮಗಳೂರಿನ ರತ್ನಗಿರಿ ರಸ್ತೆಯಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ವಿವಾಹವಾಗಲು ಮುಂದಾಗಿದ್ದರು. ಈ ವಿಚಾರ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ತಿಳಿದು ಸ್ಥಳಕ್ಕೆ ಬಂದು ಮದುವೆಯನ್ನು ತಡೆಹಿಡಿದಿದ್ದರು. ಆ ವೇಳೆ ಮುಸ್ಲಿಂ ಯುವಕನ ವಿರುದ್ಧ ಲವ್ ಜಿಹಾದ್ ಆರೋಪ ಹೊರಸಿದ ಹಿಂದೂ ಸಂಘಟನೆ ಕಾರ್ಯಕರ್ತರು, ಜೋಡಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಠಾಣೆಗೆ ಎಸ್ಡಿಪಿಐ, ದಲಿತ ಸಂಘಟನೆ ಮುಖಂಡರು ಆಗಮಿಸಿದ್ದರು. ಚಿಕ್ಕಮಗಳೂರು ಮಹಿಳಾ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದರು. ಬಳಿಕ ನೈತಿಕ ಪೊಲೀಸ್ ಗಿರಿ ದೂರಿನನ್ವಯ ಹಿಂದೂಪರ ಸಂಘಟನೆಯ ನಾಲ್ವರು ಕಾರ್ಯಕರ್ತರ ವಿರುದ್ದ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದರು. ನಂತರ ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು.