Notice to DK Shivakumar: ಡಿಕೆಶಿ ಮನೆ ಮುಂದೆ ತಡರಾತ್ರಿ ಹೈಡ್ರಾಮಾ..!

By Kannadaprabha NewsFirst Published Jan 14, 2022, 10:36 AM IST
Highlights

*  ರಾತ್ರಿ 12ಗಂಟೆಯಲ್ಲಿ ನೋಟಿಸ್‌ ನೀಡಲು ಮನೆಗೆ ಬಂದ ಅಧಿಕಾರಿಗಳು
*  ಸೋಂಕಿತ ಡೀಸಿ ನೀಡಿದ ನೋಟಿಸ್‌ ಪಡೆ​ಯಲು ಡಿಕೆಶಿ ನಕಾರ
*  ಗೇಟ್‌ಗೆ ನೋಟಿಸ್‌ ಅಂಟಿಸಿದ ಅಧಿಕಾರಿಗಳು
 

ರಾಮ​ನ​ಗ​ರ(ಜ.14):  ಪಾದಯಾತ್ರೆ ನಡೆಸುತ್ತಿದ್ದ ಡಿ.ಕೆ.ಶಿವಕುಮಾರ್‌(DK Shivakumar) ಅವರ ಕನಕಪುರ ನಿವಾಸದ ಮುಂದೆ ಬುಧವಾರ ತಡರಾತ್ರಿ ನೋಟಿಸ್‌(Notice) ನೀಡುವ ಸಂಬಂಧ ಹೈಡ್ರಾಮಾ ನಡೆಯಿತು.

ರಾಮ​ನ​ಗ​ರ​ದಲ್ಲಿ(Ramanagara) 4ನೇ ದಿನದ ಮೇಕೆ​ದಾಟು ಪಾದ​ಯಾತ್ರೆ(Mekedatu Padayatra) ಮುಗಿಸಿದ ಡಿ.ಕೆ.​ಶಿ​ವ​ಕು​ಮಾರ್‌ ರಾತ್ರಿ ಕನ​ಕ​ಪುರ(Kanakapura) ನಿವಾ​ಸಕ್ಕೆ ಹಿಂದಿ​ರು​ಗಿದ್ದಾರೆ. ತಡ​ರಾತ್ರಿ 12.30ರ ಸಮ​ಯ​ದಲ್ಲಿ ಉಪ ವಿಭಾ​ಗಾ​ಧಿ​ಕಾರಿ ಮಂಜು​ನಾಥ್‌, ತಹ​ಸೀ​ಲ್ದಾರ್‌ ವಿಶ್ವ​ನಾಥ್‌, ವೃತ್ತ ನಿರೀ​ಕ್ಷಕ ಕೃಷ್ಣ ಹಾಗೂ ಸಬ್‌ಇನ್ಸ್‌ಪೆಕ್ಟರ್‌ ಉಷಾ​ನಂದಿನಿ ಅವರು ಶಿವ​ಕು​ಮಾರ್‌ ಅವ​ರಿಗೆ ನೋಟಿಸ್‌ ನೀಡಲು ಮನೆಗೆ ತೆರ​ಳಿ​ದ್ದಾರೆ. ಈ ವೇಳೆ ಡಿ.ಕೆ.​ಶಿ​ವ​ಕು​ಮಾರ್‌ ನೋಟಿಸ್‌ ನೀಡಿ​ರು​ವ​ವರು ಯಾರೆಂದು ಪ್ರಶ್ನಿ​ಸಿ​ದಾಗ ಅಧಿ​ಕಾ​ರಿ​ಗಳು ಜಿಲ್ಲಾ​ಧಿ​ಕಾ​ರಿ​ಗಳೆಂದು ಉತ್ತ​ರಿ​ಸಿ​ದ್ದಾರೆ. ಆಗ ಶಿವ​ಕು​ಮಾರ್‌ ರವರು ಅಪರ ಜಿಲ್ಲಾ​ಧಿ​ಕಾ​ರಿಗೆ ಕೋವಿಡ್‌(Covid-19) ಸೋಂಕು ತಗು​ಲಿದೆ. ಅವರು ಹೇಗೆ ಸಹಿ ಮಾಡಿ ನೋಟಿಸ್‌ ನೀಡಿ​ದರು. ಆ ನೋಟಿಸ್‌ ಅನ್ನು ನಾನು ಪಡೆ​ಯು​ವು​ದಿಲ್ಲ . 48 ಗಂಟೆ​ಗಳ ನಂತರ ಪಡೆ​ಯು​ತ್ತೇನೆ ಎಂದು ಹೇಳಿ​ ಕಳು​ಹಿ​ಸಿದ್ದಾರೆ.

Mekedatu Padayatre: ಪಾದಯಾತ್ರೆ ಲಾಭ ಯಾರಿಗೆ? ಡ್ಯಾಮ್‌ಗಂತೂ ಅಲ್ಲ!

ಆನಂತರ ಅಧಿ​ಕಾ​ರಿ​ಗಳ ತಂಡ ನೋಟಿಸ್‌ ಅನ್ನು ಮನೆಯ ಗೇಟಿಗೆ ಅಂಟಿಸಿ ತೆರ​ಳಿ​ದರು. ಬೆಳಗ್ಗೆ ಮನೆ​ಯಿಂದ ರಾಮ​ನ​ಗ​ರಕ್ಕೆ ತೆರ​ಳುವುದಕ್ಕೂ ಮುನ್ನ ಡಿ.ಕೆ.​ಶಿ​ವ​ಕು​ಮಾರ್‌ ಗೇಟಿಗೆ ಅಂಟಿ​ಸಿದ್ದ ನೋಟಿಸ್‌ ನೋಡಲು ತೆರ​ಳಿ​ದಾಗ ಅದು ಅಲ್ಲಿ ಇರ​ಲಿಲ್ಲ.

ಖಾಸಗಿ ವೈದ್ಯ​ರಿಂದ ಡಿಕೆಶಿ ಆರೋಗ್ಯ ತಪಾ​ಸ​ಣೆ

ಮೇಕೆ​ದಾಟು ಪಾದ​ಯಾತ್ರೆಗೆ ತೆರ​ಳು​ವು​ದಕ್ಕೂ ಮುನ್ನ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಆರೋ​ಗ್ಯ​ವನ್ನು ಖಾಸಗಿ ವೈದ್ಯರು ತಪಾ​ಸಣೆ ನಡೆ​ಸಿ​ದರು. ಕನ​ಕ​ಪುರ ನಿವಾ​ಸಕ್ಕೆ ಆಗ​ಮಿ​ಸಿದ ಖಾಸಗಿ ವೈದ್ಯರು ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಬಿಪಿ(BP), ಷುಗರ್‌(Diabetes) ಅನ್ನು ಪರೀ​ಕ್ಷಿ​ಸಿ​ದರು. ಆನಂತರ ಡಿ.ಕೆ.​ಶಿ​ವ​ಕು​ಮಾರ್‌ ಕನ​ಕ​ಪು​ರ​ದಿಂದ ರಾಮ​ನ​ಗ​ರಕ್ಕೆ ಆಗ​ಮಿ​ಸಿ​ದರು.

ಎಫ್‌ಐಆರ್‌, ಜೈಲಿಗೆ ಹೆದರಿ ಪಾದಯಾತ್ರೆ ನಿಲ್ಲಿಸಿಲ್ಲ

ರಾಮನಗರ:  ಈ ಎಫ್‌ಐಆರ್‌(FIR), ನೋಟಿಸು, ಜೈಲು ಇವುಗಳಿಗೆಲ್ಲಾ ನಾವು ಹೆದರುವವರಲ್ಲ. ಆದರೆ, ಜನಾಭಿಪ್ರಾಯಕ್ಕೆ ಮಣಿದು ಪಾದಯಾತ್ರೆಯನ್ನು ಮುಂದೂಡಿದ್ದೇವೆ. ಇದು ತಾತ್ಕಾಲಿಕ ಅಷ್ಟೆ. ಕೋವಿಡ್‌ ತೀವ್ರತೆ ಕಡಿಮೆಯಾದ ಕೂಡಲೇ ಮತ್ತೆ ಪಾದಯಾತ್ರೆ ಆರಂಭಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗುಡುಗಿದ್ದಾರೆ.

ಇಲ್ಲಿನ ಜಿಲ್ಲಾ ಕಾಂಗ್ರೆಸ್‌(Congress) ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಕಾವೇರಿ ನೀರಿಗಾಗಿ(Kavari Water) ತಮಿಳುನಾಡು(Tamil Nadu) ವಿರುದ್ಧ ಹೋರಾಡುತ್ತಿದ್ದೆವು. ಈಗ ನಮ್ಮದೇ ರಾಜ್ಯದ ಎರಡು ಪಕ್ಷಗಳ ವಿರುದ್ಧ ಹೋರಾಡುವ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾಂಗ್ರೆಸ್‌ ಸಿದ್ಧವಿದೆ ಎಂದು ಹೇಳಿದರು.

ಆಡಳಿತ ಪಕ್ಷ ಬಿಜೆಪಿ(BJP) ಮತ್ತು ಜೆಡಿಎಸ್‌(JDS) ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಅವರು, ನಮ್ಮ ಜನರಿಗೆ ಶುದ್ಧ ಕುಡಿಯುವ ನೀರು ನೀಡುವುದೇ ನಮ್ಮ ಧ್ಯೇಯ. ಇದಕ್ಕೆ ನಿರಂತರ ಹೋರಾಟ ನಡೆಯಲಿದೆ. ಸುಮಾರು 9 ಜಿಲ್ಲೆಗಳ ಎರಡೂವರೆ ಕೋಟಿಗೂ ಹೆಚ್ಚು ಜನರು, ರೈತರ ಅನುಕೂಲಕ್ಕಾಗಿ ಕಾಂಗ್ರೆಸ್‌ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿತ್ತು. ಆರಂಭದ ದಿನದಿಂದಲೂ ನಮ್ಮ ಪಾದಯಾತ್ರೆ ಹತ್ತಿಕ್ಕಲು ಸರ್ಕಾರದವರು ನಮ್ಮ ಮೇಲೆ ಎಫ್‌ಐಆರ್‌, ನೋಟಿಸು, ಬಂಧನ, ಜೈಲುವಾಸ ಬೆದರಿಕೆ ಹಾಕುತ್ತಲೇ ಬಂದಿದ್ದರು. ಇದ್ಯಾವುದಕ್ಕೂ ನಾವು ಜಗ್ಗಲಿಲ್ಲ, ಜಗ್ಗುವುದೂ ಇಲ್ಲ ಎಂದರು.

ನಾವು ಪಾದಯಾತ್ರೆ ಆರಂಭಿಸಿದಾಗ ಕೋವಿಡ್‌ ತೀವ್ರತೆ ಅಷ್ಟೇನೂ ಇರಲಿಲ್ಲ. ಆದರೆ, ಈಗ ವ್ಯಾಪಕವಾಗಿ ಹರಡುತ್ತಿದೆ. ಹೆಚ್ಚು ಜನರಿಗೆ ಅವಕಾಶ ನೀಡದೆ ನಾನು ಮತ್ತು ಸಿದ್ದರಾಮಯ್ಯ ಅವರಿಬ್ಬರೇ ಪಾದಯಾತ್ರೆ ಮಾಡೋಣ ಎಂದುಕೊಂಡಿದ್ದೆವು. ಆದರೆ, ನಾವು ಹೋಗುವಾಗ ಜನ ಸ್ವಯಂಪ್ರೇರಿತವಾಗಿ ಭಾರೀ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಹಾಗಾಗಿ ಇದರಿಂದ ಸಮಸ್ಯೆಯಾಗಬಹುದು. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ನಾಯಕರೆಲ್ಲಾ ಸೇರಿ ಚರ್ಚಿಸಿ ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ ಹಾಗೂ ನ್ಯಾಯಾಲಯದ ಅಭಿಪ್ರಾಯವನ್ನೂ ಗೌರವಿಸಿ ತಾತ್ಕಾಲಿಕವಾಗಿ ಪಾದಯಾತ್ರೆ ಮುಂದೂಡಲು ನಿರ್ಧರಿಸಿದ್ದೇವೆ ಎಂದರು.

Mekedatu Padayatre : ಕಾಂಗ್ರೆಸ್ ಪಾದಯಾತ್ರೆ ರಾಜಕೀಯದ ಒಳಸುಳಿ

ಸರ್ಕಾರದ ಯಾವುದೇ ರೀತಿಯ ಬಲ ಪ್ರಯೋಗಕ್ಕೂ ನಾವು ಜಗ್ಗುವ ಪ್ರಶ್ನೆಯೇ ಇಲ್ಲ. ಬಿಜೆಪಿಯವರು ತಮ್ಮ ತಪ್ಪನ್ನು ನಮ್ಮ ಮೇಲೆ ಹಾಕಲು ಪಿತೂರಿ ನಡೆಸುತ್ತಿದ್ದಾರೆ. ನಾವು ಹೆದರುವುದಿಲ್ಲ. ಈ ಯಾತ್ರೆಯನ್ನು ನಾವು ಸಂಪೂರ್ಣ ನಿಲ್ಲಿಸುತ್ತಿಲ್ಲ. ಕಾಂಗ್ರೆಸ್‌ಗೆ ಹೋರಾಟದ ಬದ್ಧತೆ ಇದೆ. ಇದು ತಾತ್ಕಾಲಿಕ ವಿರಾಮ ಅಷ್ಟೆ. ಕೋವಿಡ್‌ ತೀವ್ರತೆ ಕಡಿಮೆಯಾದ ಬಳಿಕ ರಾಮನಗರದಿಂದಲೇ ಪಾದಯಾತ್ರೆ ಪುನಾರಂಭಿಸುತ್ತೇವೆ ಎಂದರು.

ಸರ್ಕಾರಕ್ಕೆ ನ್ಯಾಯ ಕಾನೂನು ಎಲ್ಲರಿಗೂ ಒಂದೇ ಎಂಬ ಬದ್ಧತೆ ಇದ್ದಿದ್ದರೆ ಕೋವಿಡ್‌ ಆರಂಭವಾದಾಗಿನಿಂದ ಅವರ ಶಾಸಕರು, ಸಚಿವರು ಅಧಿಕಾರಿಗಳು ನಿಯಮ ಉಲ್ಲಂಘಿಸಿದರೂ, ಧಾರ್ಮಿಕವಾಗಿ ಪ್ರಚೋದನಕಾರಿ ಹೇಳಿಕೆ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ? ಈ ದೇಶದಲ್ಲಿ ಒಬ್ಬರಿಗೊಂದು, ಇನ್ನೊಬ್ಬರಿಗೊಂದು ಕಾನೂನು ಇದೆಯೇ? ಈಗಲಾದರೂ ಕಾನೂನು ಉಲಂಘಿಸಿರುವ ಬಿಜೆಪಿ ಪಕ್ಷದ ಎಲ್ಲರ ವಿರುದ್ಧವೂ ಕ್ರಮ ಕೈಗೊಂಡು ಸರ್ಕಾರ(Government of Karnataka) ಧೈರ್ಯವನ್ನು ಪ್ರದರ್ಶಿಸಲಿ ಎಂದು ಸವಾಲು ಹಾಕಿದರು.

ಕೋವಿಡ್‌ ಗಂಭೀರ ಸ್ಥಿತಿ ತಲುಪಿದಾಗ ಕಾಂಗ್ರೆಸ್‌ ಪಕ್ಷ ರಾಜ್ಯಾದ್ಯಂತ(Karnataka) ಸರ್ಕಾರಕ್ಕೆ ಸಹಕರಿಸಿದೆ. ಅವರಿಗಿಂತ ಹೆಚ್ಚಾಗಿ ಜನರ ಸೇವೆ ಮಾಡಿದೆ. ರೈತರಿಂದ ಉಚಿತ ಬೇಳೆ, ತರಕಾರಿ ಖರೀದಿಸಿ ಬಡ ಬಗ್ಗರಿಗೆ ಹಂಚಿದ್ದೇವೆ. ರೋಗಿಗಳಿಗೆ ಔಷಧಿ, ದಿನಸಿ, ಆಕ್ಸಿಜನ್‌ ನೀಡಿದ್ದೇವೆ. ಎರಡನೇ ಅಲೆಯ ವೇಳೆ ಕೋವಿಡ್‌ನಿಂದ ಮೃತಪಟ್ಟಅನಾಥ ಶವಗಳಿಗೆ ಅಲ್ಪಸಂಖ್ಯಾತರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಎಲ್ಲ ಧರ್ಮಗಳನ್ನೂ ಒಟ್ಟಾಗಿ ಕೊಂಡೊಯ್ಯುವುದು ನಮ್ಮ ಧ್ಯೇಯ ಎಂದರು.
 

click me!