ಬೆಂಗಳೂರು: ಬಿಬಿಎಂಪಿ ವಾರ್ಡ್‌ ಮೀಸಲು ಪಟ್ಟಿಗೆ ಆ. 16ರವರೆಗೆ ಹೈಕೋರ್ಟ್‌ ತಡೆ

By Kannadaprabha News  |  First Published Aug 11, 2022, 6:53 AM IST

ವಾರ್ಡ್‌ ಮರು ವಿಂಗಡಣೆಯಲ್ಲಿ ತಾರತಮ್ಯ ಆರೋಪ, ಸರ್ಕಾರ, ಆಯೋಗ, ಪಾಲಿಕೆ ವಾದ ಆಲಿಸಿದ ಬಳಿಕ ಮುಂದಿನ ನಿರ್ಧಾರ: ಹೈಕೋರ್ಟ್‌


ಬೆಂಗಳೂರು(ಆ.11): ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ವಾರ್ಡ್‌ಗಳ ಪುನರ್‌ ರಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರ, ರಾಜ್ಯ ಚುನಾವಣಾ ಆಯೋಗ ಮತ್ತು ಪಾಲಿಕೆ ಆಯುಕ್ತರಿಗೆ ನೋಟಿಸ್‌ ಜಾರಿ ಮಾಡಿರುವ ಹೈಕೋರ್ಟ್‌, ಆ.16ರವರೆಗೆ ವಾರ್ಡ್‌ವಾರು ಮೀಸಲು ಪಟ್ಟಿಅಂತಿಮಗೊಳಿಸದಂತೆ ಸರ್ಕಾರಕ್ಕೆ ನಿರ್ದೇಶಿಸಿದೆ. ಚಾಮರಾಜಪೇಟೆ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ವಾರ್ಡ್‌ಗಳ ಮರು ವಿಂಗಡಣೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ವಕೀಲ ಎಸ್‌.ಇಸ್ಮಾಯಿಲ್‌ ಜಬಿವುಲ್ಲಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನ ಗೌಡರ್‌ ಈ ಸೂಚನೆ ನೀಡಿ ವಿಚಾರಣೆಯನ್ನು ಆ.16ಕ್ಕೆ ಮುಂದೂಡಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹಾಜರಾಗಿ, ಅವೈಜ್ಞಾನಿಕವಾಗಿ ಬಿಬಿಎಂಪಿ ವಾರ್ಡ್‌ಗಳ ಪುನರ್‌ ವಿಂಗಡಣೆ ಮಾಡಲಾಗಿದೆ. ವಾರ್ಡ್‌ಗಳ ಜನಸಂಖ್ಯೆ ನಿಗದಿಯಲ್ಲೂ ತಾರತಮ್ಯ ಮಾಡಲಾಗಿದೆ. ಆದ್ದರಿಂದ ವಾರ್ಡ್‌ ಮರು ವಿಂಗಡಣೆಯ ಅಧಿಸೂಚನೆ ರದ್ದುಪಡಿಸಬೇಕು. ಈ ಅರ್ಜಿ ಇತ್ಯರ್ಥವಾಗುವವರೆಗೆ ಬಿಬಿಎಂಪಿ ವಾರ್ಡ್‌ಗಳಿಗೆ ಮೀಸಲು ಪಟ್ಟಿ ಅಂತಿಮಗೊಳಿಸುವುದಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.

Tap to resize

Latest Videos

ಬೆಂಗಳೂರು: ಬಿಬಿಎಂಪಿ ಮೀಸಲು ವಿರುದ್ಧ ಕಾಂಗ್ರೆಸ್‌ ಹೋರಾಟ

ಕೋರಿಕೆಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮೊದಲ ವಿಚಾರಣೆಯಲ್ಲಿಯೇ ಯಾವುದೇ ಮಧ್ಯಂತರ ಆದೇಶ ನೀಡಲಾಗದು. ಸರ್ಕಾರ, ರಾಜ್ಯ ಚುನಾವಣಾ ಆಯೋಗ ಮತ್ತು ಬಿಬಿಎಂಪಿಯ ವಾದ ಆಲಿಸಿದ ಬಳಿಕವೇ ಮಧ್ಯಂತರ ಆದೇಶದ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿತು.

ಅರ್ಜಿದಾರರ ಆಕ್ಷೇಪ

ಗೋವಿಂದರಾಜ ನಗರ, ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‌ಗೆ ಸರಾಸರಿ 30 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ, ವಾರ್ಡ್‌ಗಳ ಸಂಖ್ಯೆ ಸಹ ಹೆಚ್ಚಿಸಲಾಗಿದೆ. ಆದರೆ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾರ್ಡ್‌ಗೆ ಸರಾಸರಿ 39 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ. ಹಿಂದೆ ಏಳು ವಾರ್ಡ್‌ಗಳು ಇದ್ದವು. ಇದೀಗ ಕೆ.ಆರ್‌.ಮಾರ್ಕೆಟ್‌ ವಾರ್ಡ್‌ ಕೈಬಿಟ್ಟು ವಾರ್ಡ್‌ಗಳ ಸಂಖ್ಯೆಯನ್ನು ಆರಕ್ಕೆ ಇಳಿಸುವ ಮೂಲಕ ತಾರತಮ್ಯ ಮಾಡಲಾಗಿದೆ. ಹಾಗಾಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ವಾರ್ಡ್‌ಗಳನ್ನು ಪುನರ್‌ ರಚಿಸಿ 2022ರ ಜು.14ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಹೊಸದಾಗಿ ವಾರ್ಡ್‌ಗಳನ್ನು ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಐತಿಹಾಸಿಕ ಕೆ.ಆರ್‌.ಮಾರ್ಕೆಟ್‌ ವಾರ್ಡ್‌ ಮರು ರಚಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಬಿಬಿಎಂಪಿ ಚುನಾವಣೆ: 243 ವಾರ್ಡ್ ಮೀಸಲಾತಿ ಕರಡುಪಟ್ಟಿಗೆ ಹೆಚ್ಚಿದ ವಿರೋಧ

ಇನ್ನಷ್ಟು ಕ್ಷೇತ್ರಗಳಿಂದ ತಕರಾರು ಅರ್ಜಿ ಸಲ್ಲಿಕೆ

ಇದೇ ವೇಳೆ ಪದ್ಮನಾಭ ನಗರ, ಶಾಂತಿ ನಗರ ಮತ್ತು ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರಗಳ ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆಯನ್ನು ಪ್ರಶ್ನಿಸಿಯೂ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಲಾಗಿದೆ. ಆ ಅರ್ಜಿಗಳ ಪರ ವಕೀಲರೂ ಬುಧವಾರ ನ್ಯಾ.ಹೇಮಂತ್‌ ಚಂದನ್‌ ಗೌಡರ್‌ ಅವರ ಪೀಠದ ಮುಂದೆ ಹಾಜರಾಗಿ ತಮ್ಮ ಮನವಿಗಳ ಕುರಿತು ಗಮನ ಸೆಳೆದರು. ಆದರೆ, ಕೆಲ ಅರ್ಜಿಗಳಲ್ಲಿ ರಾಜ್ಯ ಚುನಾವಣಾ ಆಯೋಗವನ್ನು ಪ್ರತಿವಾದಿ ಮಾಡಿರಲಿಲ್ಲ. ಹಾಗಾಗಿ, ಆಯೋಗವನ್ನು ಪ್ರತಿವಾದಿ ಮಾಡುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ವಾರ್ಡ್‌ಗಳ ಜನಸಂಖ್ಯೆ ನಿಗದಿಯಲ್ಲಿ ಏಕ ರೂಪತೆ ಕಾಯ್ದುಕೊಂಡಿಲ್ಲ. ಈ ಹಿಂದೆ ಕಡಿಮೆ ಜನಸಂಖ್ಯೆಯಿದ್ದ ವಾರ್ಡ್‌ಗಳಲ್ಲಿ ಸದ್ಯ ಹೆಚ್ಚಿಸಲಾಗಿದೆ. ಮತ್ತೊಂದಡೆ ಜನಸಂಖ್ಯೆ ಹೆಚ್ಚಿದ್ದ ವಾರ್ಡ್‌ಗಳಲ್ಲಿ ಜನಸಂಖ್ಯೆಯನ್ನು ತೀವ್ರ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ವಿಧಾನಸಭಾ ಕ್ಷೇತ್ರದ ಮತದಾರರನ್ನು ಬೇರೊಂದು ವಿಧಾನಸಭಾ ಕ್ಷೇತ್ರದಲ್ಲಿನ ವಾರ್ಡ್‌ಗಳ ಮತದಾರರಾಗಿ ಸೇರಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
 

click me!