Karnataka High Court: ಘನತ್ಯಾಜ್ಯ ತೆರವು ಮಾಡದ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

By Kannadaprabha News  |  First Published Feb 12, 2022, 1:47 AM IST

ಮಂಗಳೂರಿನ ಪಚ್ಚನಾಡಿ ಭೂಭರ್ತಿ ಘಟಕದಲ್ಲಿ ಸಂಗ್ರಹವಾಗಿರುವ ಘನತ್ಯಾಜ್ಯವನ್ನು ತೆರವುಗೊಳಿಸಲು ನೆಪ ಹೇಳುತ್ತಿರುವ ಸರ್ಕಾರವನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.


ಬೆಂಗಳೂರು (ಫೆ.12): ಮಂಗಳೂರಿನ (Mangaluru) ಪಚ್ಚನಾಡಿ ಭೂಭರ್ತಿ ಘಟಕದಲ್ಲಿ ಸಂಗ್ರಹವಾಗಿರುವ ಘನತ್ಯಾಜ್ಯವನ್ನು (Solid Waste) ತೆರವುಗೊಳಿಸಲು ನೆಪ ಹೇಳುತ್ತಿರುವ ಸರ್ಕಾರವನ್ನು ಹೈಕೋರ್ಟ್‌ (High Court) ತರಾಟೆಗೆ ತೆಗೆದುಕೊಂಡಿದೆ. ಈ ವಿಚಾರವಾಗಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ರಿತುರಾಜ್‌ (RituRaj) ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಸರ್ಕಾರಿ ವಕೀಲರು ವಾದ ಮಂಡಿಸಿ, ಭೂಭರ್ತಿ ಘಟಕದಲ್ಲಿ ಅನೇಕ ವರ್ಷಗಳಿಂದ ಶೇಖರಣೆಯಾಗಿರುವ ಘನತ್ಯಾಜ್ಯವನ್ನು ತೆರವುಗೊಳಿಸಲು ಸರ್ಕಾರ 73 ಕೋಟಿ ರು. ನೀಡಿದೆ. ತೆರವು ಕಾರ್ಯಚರಣೆ ಕೈಗೊಳ್ಳಲು ಸಚಿವ ಸಂಪುಟದ ಅನುಮೋದನೆ ಬೇಕಿದೆ. ತ್ಯಾಜ್ಯ ತೆರವುಗೊಳಿಸಲು ಕನಿಷ್ಠ ನಾಲ್ಕು ವರ್ಷ ಬೇಕಿದೆ ಎಂದು ತಿಳಿಸಿದರು.

Tap to resize

Latest Videos

ಇದರಿಂದ ಅಸಮಾಧಾನಗೊಂಡ ನ್ಯಾಯಪೀಠ, ಪಚ್ಚನಾಡಿ ಭೂಭರ್ತಿ ಘಟಕದಿಂದ ತ್ಯಾಜ್ಯ ನೀರು ಸಮೀಪದ ಫಲ್ಗುಣಿ ನದಿ ಹಾಗೂ ಮರವೂರು ಡ್ಯಾಂಗೆ ಸೇರಿದೆ. ಇದರಿಂದ ನದಿ ನೀರು ವಿಷಪೂರಿತವಾಗಿದೆ. ಈ ಕುರಿತು ಕೆಎಸ್‌ಪಿಸಿಬಿ ಕಳೆದ ಜುಲೈನಲ್ಲೇ ವರದಿ ನೀಡಿದ್ದರೂ ಸರ್ಕಾರಕ್ಕೆ ಯಾವುದೇ ಪರಿಹಾರ ಕಾರ್ಯ ಕೈಗೊಂಡಿಲ್ಲ. ಇದೊಂದು ‘ಸಂವೇದನಾರಹಿತ ಸರ್ಕಾರ’ ಎಂದು ಕೋರ್ಟ್‌ ನಡಾವಳಿಯಲ್ಲಿ ದಾಖಲಿಸಬೇಕೇ? ಎಂದು ಪ್ರಶ್ನಿಸುವ ಮೂಲಕ ಚಾಟಿ ಬೀಸಿತು.

Justice Pushpa Ganediwala Resign: ರೇಪ್‌ಗೆ ಹೊಸ ವಿಶ್ಲೇಷಣೆ ನೀಡಿದ್ದ ಹೈಕೋರ್ಟ್‌ ಜಡ್ಜ್‌ ರಾಜೀನಾಮೆ!

ಅಲ್ಲದೆ, ವಿಷಪೂರಿತ ನೀರು ನಿಮಗೆ (ಸರ್ಕಾರಿ ವಕೀಲರು) ಮತ್ತು ಅಧಿಕಾರಿಗಳಿಗೆ ಕುಡಿಸಿದರೆ ಗೊತ್ತಾಗುತ್ತದೆ. ಕಚೇರಿಗಳಲ್ಲಿ ಕುಳಿತು ನೆಪ ಹೇಳುವುದು ತೀರಾ ಸುಲಭ ಎಂದು ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ಘನತ್ಯಾಜ್ಯ ವಿಲೇವಾರಿಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ಪೊಲೀಸರು 'ಬಾಡಿ ಕ್ಯಾಮೆರಾ' ಸಮರ್ಪಕವಾಗಿ ಬಳಸಿ: ಕಾನೂನು ಸುವ್ಯವಸ್ಥೆ ಹಾಗೂ ಮೇಲ್ವಿಚಾರಣೆ ದೃಷ್ಟಿಯಿಂದ ಕರ್ತವ್ಯ ನಿರತ ಪೊಲೀಸ್‌ (Police) ಸಿಬ್ಬಂದಿಗೆ ಅಳವಡಿಸಲು ಖರೀದಿಸಿರುವ ‘ಬಾಡಿ ವೋರ್ನ್‌ ಕ್ಯಾಮೆರಾ’ಗಳನ್ನು (Body Cameras) ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್‌ (High Court) ನಿರ್ದೇಶಿಸಿದೆ. ನಗರದ ವಕೀಲರೊಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಒಟ್ಟು 2,680 ಬಾಡಿ ವೋರ್ನ್‌ ಕ್ಯಾಮೆರಾಗಳ ಖರೀದಿಗೆ ಕಾರ್ಯಾದೇಶ ಹೊರಡಿಸಲಾಗಿದ್ದು, 3 ಪ್ರತ್ಯೇಕ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ 1,097 ಕ್ಯಾಮೆರಾಗಳನ್ನು ಕಂಪನಿಗಳು ಪೂರೈಸಿವೆ. ಉಳಿದ ಕ್ಯಾಮೆರಾಗಳನ್ನು ಖರೀದಿಸಿದ ನಂತರ, ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ ಅವುಗಳ ಬಳಕೆ ಮಾಡಲಾಗುವುದು ಎಂದು ತಿಳಿಸಿ, ಕಾರ್ಯಾದೇಶದ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಈ ಹಿಂದೆಯೂ ಸರ್ಕಾರ 75 ಲಕ್ಷ ರು.ವೆಚ್ಚ ಮಾಡಿ 50 ಬಾಡಿ ವೋರ್ನ್‌ ಕ್ಯಾಮೆರಾಗಳನ್ನು ಖರೀದಿಸಿತ್ತು. ಆದರೆ, ಅವುಗಳನ್ನು ಬಳಕೆ ಮಾಡಿರಲಿಲ್ಲ. ಆದ್ದರಿಂದ, ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿ, ಅವುಗಳನ್ನು ಬಳಕೆ ಮಾಡಲು ಹಾಗೂ ಹೆಚ್ಚುವರಿ ಕ್ಯಾಮೆರಾಗಳನ್ನು ಖರೀದಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಲಾಗಿತ್ತು. ಈಗ ಖರೀದಿಸುವ ಕ್ಯಾಮೆರಾಗಳನ್ನೂ ಹಿಂದಿನಂತೆಯೇ ಬಳಕೆ ಮಾಡದಂತೆ ಇಡಬಾರದು ಎಂದು ಸರ್ಕಾರಕ್ಕೆ ನಿರ್ದೇಶಿಬೇಕು ಎಂದು ಕೋರಿದರು.

Hijab Controversy: ದೇಶ ಮುಖ್ಯವೋ, ಧರ್ಮ ಮುಖ್ಯವೋ: ಮದ್ರಾಸ್‌ ಹೈಕೋರ್ಟ್‌

ವಾದ ಆಲಿಸಿದ ಪೀಠ, ಸರ್ಕಾರ ಈಗಾಗಲೇ ಬಾಡಿ ವೋರ್ನ್‌ ಕ್ಯಾಮೆರಾಗಳನ್ನು ಖರೀದಿಸಲು ಕ್ರಮ ಕೈಗೊಂಡಿದೆ. ಸ್ಮಾರ್ಟ್‌ ಟ್ರಾಫಿಕ್‌ ನಿರ್ವಹಣಾ ವ್ಯವಸ್ಥೆ ಜಾರಿಗಾಗಿ ಆ ಕ್ಯಾಮೆರಾಗಳನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಕರ್ತವ್ಯ ನಿರ್ವಹಣೆ ವೇಳೆ, ಕ್ಯಾಮೆರಾಗಳನ್ನು ಧರಿಸುವಂತೆ ಪೊಲೀಸ್‌ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

click me!