ಜೈಲು ಶಿಕ್ಷೆ ಬದಲಿಗೆ ಉಚಿತ ಸೇವೆಗೆ ಆದೇಶ: ಮಾನವೀಯತೆ ಮೆರೆದ ಹೈಕೋರ್ಟ್‌

By Kannadaprabha News  |  First Published Mar 9, 2023, 12:30 AM IST

ಹಲ್ಲೆ ಪ್ರಕರಣದಲ್ಲಿ ಜೈಲು ಸೇರಬೇಕಿದ್ದ ವಯೋವೃದ್ಧ ಬಂಟ್ವಾಳದ ಐತಪ್ಪ ನಾಯ್ಕರ ಶಿಕ್ಷೆ ರದ್ದು, ಸ್ಥಳೀಯ ಅಂಗವನಾಡಿಯಲ್ಲಿ ವೇತನ ರಹಿತ ಕೆಲಸ. 


ಬಂಟ್ವಾಳ(ಮಾ.09): ತಪ್ಪೆಸಗಿದ ಬಡಕುಟುಂಬದ ವ್ಯಕ್ತಿಯೊಬ್ಬರ ಮನೆ ಪರಿಸ್ಥಿತಿಯ ಹಿನ್ನೆಲೆಯನ್ನು ಅರಿತುಕೊಂಡು ರಾಜ್ಯ ಹೈಕೋರ್ಚ್‌ ನೀಡಿರುವ ತೀರ್ಪೊಂದು ಉಚ್ಚ ನ್ಯಾಯಾಲಯದ ಮಾನವೀಯತೆಯನ್ನು ಎತ್ತಿ ಹಿಡಿದಿದೆ.

ಹೌದು.. ಈ ವಿದ್ಯಮಾನ ನಡೆದಿರುವುದು ಬಂಟ್ವಾಳದಲ್ಲಿ.. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ನಿವಾಸಿ 81 ವರ್ಷದ ಐತಪ್ಪ ನಾಯ್ಕ ಅವರದ್ದು ತೀರಾ ಬಡ ಕುಟುಂಬ. 2008ರಲ್ಲಿ ಜಾಗದ ವಿಚಾರದಲ್ಲಿ ನೆರೆಮನೆಯ ವ್ಯಕ್ತಿಯೊಬ್ಬರಿಗೆ ಐತಪ್ಪ ನಾಯ್ಕ ಹಲ್ಲೆ ನಡೆಸಿದ್ದರು. ಸದ್ರಿ ಪ್ರಕರಣದಲ್ಲಿ ಬಂಟ್ವಾಳ ನ್ಯಾಯಾಲಯ, ಆರೋಪಿ ಐತಪ್ಪ ನಾಯ್ಕರಿಗೆ ಮೂರು ದಿನಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ದಂಡ ವಿಧಿಸಿತ್ತು. ಆದರೆ ದೂರುದಾರ ವ್ಯಕ್ತಿ ಆರೋಪಿಗೆ ಶಿಕ್ಷೆಯ ಪ್ರಮಾಣ ಹೆಚ್ಚಿಸಬೇಕೆಂದು ಮಂಗಳೂರಿನ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಚ್‌ 2014ರಲ್ಲಿ ಆರೋಪಿ ಐತಪ್ಪ ನಾಯ್ಕನಿಗೆ ಎರಡು ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ಕೊಟ್ಟಿತ್ತು.

Tap to resize

Latest Videos

ಕೃಷ್ಣಮಠಕ್ಕೆ ಭೂಮಿ ಕೊಟ್ಟವರು ಮುಸ್ಲಿಂ ಅರಸರು, ಮಿಥುನ್ ರೈ ಹೇಳಿಕೆಗೆ ಸಿಡಿದೆದ್ದ ಕರಾವಳಿ

ಶಿಕ್ಷೆ ಬದಲಿಗೆ ಉಚಿತ ಸೇವೆಗೆ ಆದೇಶ: ಮಂಗಳೂರಿನ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಐತಪ್ಪ ನಾಯ್ಕ ಪರ ವಕೀಲರು ಹೈಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದರು. ಮಕ್ಕಳಿಲ್ಲದ ವೃದ್ಧ ಮತ್ತು ಮನೆಯಲ್ಲಿ ಪತ್ನಿ ಒಬ್ಬಂಟಿಯಾಗಿರುವುದರಿಂದ ವಯಸ್ಸನ್ನು ನೋಡಿ ಶಿಕ್ಷೆಗೆ ವಿನಾಯಿತಿ ನೀಡಬೇಕೆಂದು ವಕೀಲರು ಕೋರಿದ್ದರು. ಆರೋಪಿ ಐತಪ್ಪ ನಾಯ್ಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಲ್ಲದೆ, ಪಶ್ಚಾತ್ತಾಪ ವ್ಯಕ್ತಪಡಿಸಿದ್ದರಿಂದ ನ್ಯಾಯಾಧೀಶರು ಕೆಳಗಿನ ಕೋರ್ಟಿನ ಶಿಕ್ಷೆಯನ್ನು ರದ್ದುಗೊಳಿಸಿದ್ದಾರೆ. ಅದರ ಬದಲಿಗೆ ಒಂದು ವರ್ಷ ಕಾಲ ಸ್ಥಳೀಯ ಅಂಗನವಾಡಿಯಲ್ಲಿ ವೇತನ ಇಲ್ಲದೆ ಸೇವೆ ಮಾಡುವಂತೆ ಆದೇಶ ಮಾಡಿದ್ದಾರೆ. ಅದರಂತೆ, ಕರೋಪಾಡಿ ಗ್ರಾಮದ ಅಂಗನವಾಡಿಯಲ್ಲಿ ವೃದ್ಧ ಐತಪ್ಪ ನಾಯ್ಕ ಈಗ ಶುಚಿತ್ವದ ಕೆಲಸ ಆರಂಭಿಸಿದ್ದಾರೆ.

ಐತಪ್ಪ ನಾಯ್ಕರಿಗೆ ಬಂಟ್ವಾಳದ ವಕೀಲರೊಬ್ಬರು ಸಹಾಯ ಹಸ್ತ ನೀಡಿದ್ದು, ಹೈಕೋ’ddರ್‍ನಲ್ಲಿ ವಾದಿಸಿ ನ್ಯಾಯ ದೊರಕಿಸಿದ್ದಾರೆ. ಇಳಿ ವಯಸ್ಸಿನಲ್ಲಿ ಜೈಲು ಸೇರುವ ಬದಲು ಮನೆ ಬಳಿಯಲ್ಲೇ ಅಂಗನವಾಡಿ ಸೇವೆಗೆ ಕೈಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಫೆ.20ರಿಂದ ಪ್ರತಿದಿನ ಅಂಗನವಾಡಿ ಶುಚಿಗೊಳಿಸುವುದು, ಗಿಡಗಳಿಗೆ ನೀರು ಹಾಕುವ ಕಾರ್ಯವನ್ನು ಐತ್ತಪ್ಪ ನಾಯ್ಕರು ಮಾಡುತ್ತಿದ್ದಾರೆ.

ದುಡುಕುತನದ ನಡವಳಿಕೆಗಳು ಒಮ್ಮೊಮ್ಮೆ ತಪ್ಪೆಸಗಿದ ವ್ಯಕ್ತಿಗೆ ಮಾತ್ರವಲ್ಲ, ಇಡೀ ಕುಟುಂಬಕ್ಕೆ ಸಮಸ್ಯೆಯಾಗಿಬಿಡುತ್ತದೆ. ಸದ್ರಿ ಪ್ರಕರಣದಲ್ಲಿ ಐತ್ತಪ್ಪ ನಾಯ್ಕರ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪು ಮಾನವೀಯ ಸಂದೇಶವನ್ನೂ ಎತ್ತಿಹಿಡಿದಿದೆ.

click me!