ಬೆಂಗಳೂರು: ರಾಜಕಾಲುವೆ ಜಾಗದಲ್ಲಿ ಲೇಔಟ್, ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ

By Kannadaprabha News  |  First Published May 16, 2024, 12:38 PM IST

ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗವಿರುವ ಸಂಗತಿ ಮರೆಮಾಚಿ ಈ ಸರ್ವೇ ನಂಬರ್‌ನಲ್ಲಿನ ಎಲ್ಲ ಜಾಗವನ್ನು ಸ್ಯಾಮೀಸ್‌ ಕಂಪನಿ ವಿವಿಧ ಹೆಸರುಗಳಲ್ಲಿ ಖರೀದಿ ಮಾಡಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದಿಂದ ಬಡಾವಣೆ ಅಭಿವೃದ್ಧಿಗೆ ಅನುಮೋದನೆ ಪಡೆದುಕೊಂಡಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.


ಬೆಂಗಳೂರು(ಮೇ.16):  ಬೆಂಗಳೂರು ಉತ್ತರ ಉಪ ವಲಯದ ಯಲಹಂಕ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿನ ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗದಲ್ಲಿ ಮೆ. ಸ್ಯಾಮಿಸ್‌ ಡ್ರೀಮ್‌ ಲ್ಯಾಂಡ್‌ ಪ್ರೈವೇಟ್‌ ಲಿಮಿಟೆಡ್‌ ಬಡಾವಣೆ ಅಭಿವೃದ್ಧಿಪಡಿಸಿರುವ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಕೆ.ಕೆಂಪಣ್ಣ ಸೇರಿದಂತೆ ಹೊಸಹಳ್ಳಿಯ ಗ್ರಾಮದ 21 ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರ ನೇತೃತ್ವದ ರಜಾಕಾಲದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು
ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ, ಬೆಂಗಳೂರು ಜಿಲ್ಲಾಧಿಕಾರಿ, ಬೆಂಗಳೂರು ಉತ್ತರ ಉಪ ವಲಯದ ಉಪ ವಿಭಾಗಾಧಿಕಾರಿ, ಯಲಹಂಕ ತಹಸೀಲ್ದಾರ್‌, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಮತ್ತು ಮೆ.ಸ್ಯಾಮಿಸ್‌ ಡ್ರೀಮ್‌ ಲ್ಯಾಂಡ್‌ ಪ್ರೈವೇಟ್‌ ಲಿಮಿಟೆಡ್‌ಗೆ ನೋಟಿಸ್‌ ಜಾರಿ ಮಾಡಿತು.

Tap to resize

Latest Videos

ಬೆಂಗಳೂರು: 8 ತಿಂಗಳಲ್ಲಿ 1,134 ಕಡೆ ರಾಜಕಾಲುವೆ ಒತ್ತುವರಿ..!

ಪ್ರಕರಣದ ವಿವರ

ದಾಖಲೆಗಳ ಪ್ರಕಾರ ಹೊಸಹಳ್ಳಿ ಗ್ರಾಮದ ಸರ್ವೇ ನಂ 10, 11, 12, 13, 134, 135, 136, 137, 138 ಮತ್ತು 139ರಲ್ಲಿನ ಜಾಗವನ್ನು ರಾಜಕಾಲುವೆ (ಬಿ ಖರಾಬು ಜಮೀನು) ಜಾಗವೆಂದು ಗುರುತಿಸಲಾಗಿದೆ. ಆ ಜಾಗದ ಮೂಲಕವೇ ಸಾರ್ವಜನಿಕ ಮಾರ್ಗ ಹಾದು ಹೋಗುತ್ತದೆ ಎಂದು ಸಷ್ಟವಾಗಿ ತಿಳಿಯುತ್ತದೆ. ಆದರೆ, ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗವಿರುವ ಸಂಗತಿ ಮರೆಮಾಚಿ ಈ ಸರ್ವೇ ನಂಬರ್‌ನಲ್ಲಿನ ಎಲ್ಲ ಜಾಗವನ್ನು ಸ್ಯಾಮೀಸ್‌ ಕಂಪನಿ ವಿವಿಧ ಹೆಸರುಗಳಲ್ಲಿ ಖರೀದಿ ಮಾಡಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದಿಂದ ಬಡಾವಣೆ ಅಭಿವೃದ್ಧಿಗೆ ಅನುಮೋದನೆ ಪಡೆದುಕೊಂಡಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗದ ಜಾಗ ಮುಚ್ಚಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಒತ್ತುವರಿ ತೆರವುಗೊಳಿಸಲು ಕೋರಿ ರಾಜ್ಯ ಸರ್ಕಾರಕ್ಕೆ 2024ರ ಏ.12 ಹಾಗೂ ಮಾ.5ರಂದು ಸರ್ಕಾರ ಮತ್ತದರ ಪ್ರಾಧಿಕಾರಗಳಿಗೆ ಮನವಿ ಪತ್ರ ನೀಡಲಾಗಿದೆ. ಆದರೆ ಸರ್ಕಾರ ಈವರೆಗೂ ಒತ್ತುವರಿ ತೆರವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ರಾಜಕಾಲುವೆ ಜಾಗದಲ್ಲಿ ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಕಾನೂನು ಬಾಹಿರವಾಗಿದೆ. ಆದ್ದರಿಂದ ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗ ಜಾಗದಲ್ಲಿ ಬಡಾವಣೆ ಅಭಿವೃದ್ಧಿಪಡಿಸಲು ಸ್ಯಾಮಿಸ್‌ ಕಂಪನಿಗೆ ನೀಡಲಾಗಿರುವ ಅನುಮೋದನೆ ರದ್ದುಪಡಿಸಬೇಕು ಮತ್ತು ಕಂಪನಿಯಿಂದ ನಡೆದಿರುವ ಒತ್ತುವರಿ ತೆರವುಗೊಳಿಸುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

click me!