ಬೆಂಗಳೂರು: 8 ತಿಂಗಳಲ್ಲಿ 1,134 ಕಡೆ ರಾಜಕಾಲುವೆ ಒತ್ತುವರಿ..!

By Kannadaprabha News  |  First Published May 16, 2024, 12:27 PM IST

ರಾಜಕಾಲುವೆ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಎದ್ದುಕಾಣುತ್ತಿದೆ. 1,963 ಪ್ರಕರಣದಲ್ಲಿ 1639 ಪ್ರಕರಣಗಳು ಸರ್ವೇ ಕಾರ್ಯ ಸೇರಿದಂತೆ ಇನ್ನಿತರೆ ಕಾರ್ಯ ಬಾಕಿ ಇದೆ. ಕಂದಾಯ ಇಲಾಖೆ, ಬೆಂಗಳೂರು ನಗರ ಜಿಲ್ಲಾಡಳಿತ, ಬಿಬಿಎಂಪಿ ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯಿಂದ ವಿಳಂಬ ಆಗುತ್ತಿದೆ. ಉಳಿದಂತೆ 162 ಕಡೆ ರಾಜಕಾಲುವೆ ಒತ್ತುವರಿ ಆಗಿರುವುದು ದೃಢಪಟ್ಟಿದ್ದು, ತೆರವು ಕಾರ್ಯಾಚರಣೆ ಕೈಗೊಳ್ಳಬೇಕಿದೆ.
 


ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಮೇ.16):  ಮಳೆ ಬಂದರೆ ಸಾಕು ರಾಜಧಾನಿಯ ಜನರನ್ನು ಸಂಕಷ್ಟಕ್ಕೀಡು ಮಾಡುವ ರಾಜಕಾಲುವೆ ಒತ್ತುವರಿ ತೆರವಿಗೆ ಅಧಿಕಾರಿ ನಿರ್ಲಕ್ಷ್ಯ ಒಂದೆಡೆಯಾದರೆ, ಮತ್ತೊಂದೆಡೆ ದಿನದಿಂದ ದಿನಕ್ಕೆ ರಾಜಕಾಲುವೆ ಒತ್ತುವರಿ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 8 ತಿಂಗಳಿನಲ್ಲಿ ಬರೋಬ್ಬರಿ 1,134 ಕಡೆ ಹೊಸದಾಗಿ ರಾಜಕಾಲುವೆ ಒತ್ತುವರಿ ಆಗಿದೆ.

Tap to resize

Latest Videos

ರಾಜಧಾನಿ ಬೆಂಗಳೂರಿನಲ್ಲಿ ನಗರದಲ್ಲಿ ಒಟ್ಟು 860 ಕಿ.ಮೀ ಉದ್ದದ ರಾಜಕಾಲುವೆ ಇದೆ. ಇದರಲ್ಲಿ 233 ಕಿ.ಮೀ ಪ್ರಾಥಮಿಕ 627 ಕಿ.ಮೀ ಎರಡನೇ ಹಂತದ ರಾಜಕಾಲುವೆ ಇದ್ದು, ಸಣ್ಣ ಮಳೆ ಬಂದರೆ ಸಾಕು ತಗ್ಗು ಪ್ರದೇಶ, ರಾಜಕಾಲುವೆ ಅಕ್ಕ-ಪಕ್ಕದಲ್ಲಿರುವ ಬಡಾವಣೆ, ಕೆರೆ ಸುತ್ತ ಮುತ್ತಲಿನ ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸುವುದು ಸಾಮಾನ್ಯವಾಗಿದೆ. ಇದಕ್ಕೆ ಮುಖ್ಯ ಕಾರಣ, ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ, ಶೆಡ್‌ ಸೇರಿದಂತೆ ಮೊದಲಾದವುಗಳನ್ನು ನಿರ್ಮಾಣ ಮಾಡಿಕೊಂಡಿರುವುದಾಗಿದೆ.

ಬೆಂಗಳೂರು ಮಳೆ ಪ್ರವಾಹ ತಡೆಯಲು ರಾಜಕಾಲುವೆಗಳಿಗೆ 124 ಸೆನ್ಸಾರ್ ಅಳವಡಿಕೆ

ಮಳೆ ಬಂದು ಸಮಸ್ಯೆ ಉಂಟಾದಾಗ ಮಾತ್ರ ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವಿನ ವಿಚಾರ ಮುನ್ನೆಲೆ ಬರಲಿದೆ. ಮಳೆ ಕಡಿಮೆಯಾಗುತ್ತಿದಂತೆ ರಾಜಕಾಲುವೆ ಒತ್ತುವರಿ ತೆರವುಗೊಳಿಸುವುದು, ನಿಯಂತ್ರಿಸುವ ಕಾರ್ಯವನ್ನು ಬಿಬಿಎಂಪಿ ಅಧಿಕಾರಿಗಳು ಮರೆತು ಬಿಡುತ್ತಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

ಇದಕ್ಕೆ ಪೂರಕವಾಗಿ ನಗರದಲ್ಲಿ ಬರೋಬ್ಬರಿ 2 ಸಾವಿರ ಕಡೆ ರಾಜಕಾಲುವೆಯನ್ನು ಒತ್ತುವರಿ ತೆರವು ಬಾಕಿದಿದೆ ಎಂಬುದನ್ನು ಬಿಬಿಎಂಪಿಯ ಅಂಕಿ ಅಂಶಗಳೇ ಹೇಳುತ್ತವೆ. ಈ ಪೈಕಿ ಕಳೆದ 2023ರ ಸೆಪ್ಟಂಬರ್‌ನಿಂದ ಇತ್ತೀಚೆಗೆ 1,134 ಕಡೆ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಅದಕ್ಕಿಂತ ಮೊದಲು ಒತ್ತುವರಿ ಮಾಡಿಕೊಂಡ 829 ಪ್ರಕರಣ ಸೇರಿದಂತೆ ಒಟ್ಟು 1,963 ಕಡೆ ತೆರವುಗೊಳಿಸಬೇಕಿದೆ.

ಯಲಹಂಕ ನಂಬರ್ ಒನ್‌

ರಾಜಕಾಲುವೆ ಒತ್ತುವರಿ ಮಾಡುವುದರಲ್ಲಿ ಬಿಬಿಎಂಪಿಯ ಯಲಹಂಕ ವಲಯ ಮೊದಲ ಸ್ಥಾನದಲ್ಲಿದೆ. ಕೇವಲ 98 ಕಿ.ಮೀ ಉದ್ದ ಮಾತ್ರ ರಾಜಕಾಲುವೆ ಈ ವಲಯದ ವ್ಯಾಪ್ತಿಯಲ್ಲಿ ಇದೆ. ಆದರೂ ಇಲ್ಲಿ ಒತ್ತುವರಿ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಎಂಟು ತಿಂಗಳಿನಲ್ಲಿ 308 ಕಡೆ ಹೊಸದಾಗಿ ಒತ್ತುವರಿ ಮಾಡಲಾಗಿದೆ. ಒಟ್ಟಾರೆ, 379 ಒತ್ತುವರಿಯನ್ನು ತೆರವುಗೊಳಿಸುವುದು ಬಾಕಿ ಇದೆ. ಇನ್ನು ಎರಡನೇ ಸ್ಥಾನದಲ್ಲಿ ದಾಸರಹಳ್ಳಿ ವಲಯ, ಮೂರನೇ ಸ್ಥಾನದಲ್ಲಿ ಬೊಮ್ಮನಹಳ್ಳಿ ವಲಯಗಳಿವೆ.

ವಿಳಂಬ ಧೋರಣೆ

ರಾಜಕಾಲುವೆ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಎದ್ದುಕಾಣುತ್ತಿದೆ. 1,963 ಪ್ರಕರಣದಲ್ಲಿ 1639 ಪ್ರಕರಣಗಳು ಸರ್ವೇ ಕಾರ್ಯ ಸೇರಿದಂತೆ ಇನ್ನಿತರೆ ಕಾರ್ಯ ಬಾಕಿ ಇದೆ. ಕಂದಾಯ ಇಲಾಖೆ, ಬೆಂಗಳೂರು ನಗರ ಜಿಲ್ಲಾಡಳಿತ, ಬಿಬಿಎಂಪಿ ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯಿಂದ ವಿಳಂಬ ಆಗುತ್ತಿದೆ. ಉಳಿದಂತೆ 162 ಕಡೆ ರಾಜಕಾಲುವೆ ಒತ್ತುವರಿ ಆಗಿರುವುದು ದೃಢಪಟ್ಟಿದ್ದು, ತೆರವು ಕಾರ್ಯಾಚರಣೆ ಕೈಗೊಳ್ಳಬೇಕಿದೆ.

ಕಾನೂನು ತೊಡಕು ನೆಪ

ರಾಜಕಾಲುವೆ ತೆರವು ವಿಚಾರ ಬರುತ್ತಿದಂತೆ ಬಿಬಿಎಂಪಿಯ ಅಧಿಕಾರಿಗಳು ನ್ಯಾಯಾಲಯದಿಂದ ತಡೆಯಾಜ್ಞೆ ಇದೆ. ಕೋರ್ಟ್‌ ಕೇಸ್‌ ನಡೆಯುತ್ತಿದಂತೆ ಎಂಬ ಕಾರಣಗಳನ್ನು ನೀಡುತ್ತಾರೆ. ಆದರೆ, ವಾಸ್ತವಾಗಿ ಕೇವಲ 149 ಪ್ರಕರಣಗಳಿಗೆ ಮಾತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಉಳಿದಂತೆ ತೆರವು ಕಾರ್ಯಚರಣೆಗೆ ಯಾವುದೇ ಕಾನೂನು ತೊಡಕು ಇಲ್ಲ ಎಂಬುದು ಬಿಬಿಎಂಪಿಯ ಅಂಕಿ ಅಂಶದಲ್ಲಿಯೇ ದೃಢಪಟ್ಟಿದೆ.

ಎಂಜಿನಿಯರ್ ವಿರುದ್ಧ ಕ್ರಮ: ತುಷಾರ್‌

ಬಿಬಿಎಂಪಿ ರಾಜಕಾಲುವೆ ವಿಭಾಗದ ಎಂಜಿನಿಯರ್‌ಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಆಗಿರುವ ರಾಜಕಾಲುವೆ ಒತ್ತುವರಿಯನ್ನು ಗುರುತಿಸಿ ಘೋಷಣೆ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಅದರಂತೆ ಘೋಷಣೆ ಮಾಡಿಕೊಂಡಿದ್ದಾರೆ. ಆ ಬಳಿಕ ಒತ್ತುವರಿಗೆ ಅವಕಾಶ ಮಾಡಿಕೊಟ್ಟರೆ ಸಂಬಂಧ ಪಟ್ಟ ನೀರುಗಾಲುವೆ ಸಹಾಯಕ ಎಂಜಿಯರ್‌ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಹೈಕೋರ್ಟ್‌ ಸೂಚಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು.

ಚರಂಡಿ, ರಾಜಕಾಲುವೆ ಸ್ವಚ್ಛತೆಗೆ 5 ದಿನ ಡೆಡ್‌ಲೈನ್‌: ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚನೆ

ಇನ್ನು ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ಗುರುತಿಸಿ ಸರ್ವೇ ಮಾಡಿ ತೆರವಿಗೆ ತಹಶೀಲ್ದಾರ್‌ ಅವರಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಿದರೂ ತೆರವು ಕಾರ್ಯಚರಣೆಗೆ ಆದೇಶ ನೀಡುತ್ತಿಲ್ಲ. ತೆರವು ಆದೇಶಕ್ಕೆ ನಮಗೆ ಅಧಿಕಾರ ಇಲ್ಲ ಎಂದು ಹೇಳುತ್ತಾರೆ. ವಿಶೇಷ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅವರೂ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ. ಗೊಂದಲ ನಿವಾರಣೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ. 

ಒತ್ತುವರಿ ವಿವರ
ವಲಯ 8 ತಿಂಗಳಲ್ಲಿ ಹೊಸ ಒತ್ತುವರಿ ಒಟ್ಟು ತೆರವು ಬಾಕಿ
ಪೂರ್ವ 24 126
ಪಶ್ಚಿಮ 74 95
ದಕ್ಷಿಣ 51 56
ಕೋರಮಂಗಲ ಕಣಿವೆ 110 110
ಯಲಹಂಕ 308 379
ಮಹದೇವಪುರ 75 523
ಬೊಮ್ಮನಹಳ್ಳಿ 175 204
ಆರ್‌ಆರ್‌ ನಗರ 71 104
ದಾಸರಹಳ್ಳಿ 246 366
ಒಟ್ಟು 1,134 1,963

click me!