ಒಂದೇ ಕ್ಷೇತ್ರದ ಎಲ್ಲ ವಾರ್ಡ್‌ಗಳನ್ನು ಮಹಿಳೆಯರಿಗೆ ಮೀಸಲಿರಿಸಬಹುದೇ, ಇಂತಹ ಮೀಸಲಾತಿ ನಿಗದಿಯ ಹಿಂದಿನ ತರ್ಕವೇನು ಎಂದು ಸರ್ಕಾರವನ್ನು ಪ್ರಶ್ನಿಸಿದ ಹೈಕೋರ್ಟ್
ಬೆಂಗಳೂರು(ಸೆ.22): ಒಂದೇ ಕ್ಷೇತ್ರದ ಎಲ್ಲ ವಾರ್ಡ್‌ಗಳನ್ನು ಮಹಿಳೆಯರಿಗೆ ಮೀಸಲಿರಿಸಬಹುದೇ, ಇಂತಹ ಮೀಸಲಾತಿ ನಿಗದಿಯ ಹಿಂದಿನ ತರ್ಕವೇನು ಎಂದು ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ. ಬಿಬಿಎಂಪಿ ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಈಜಿಪುರ ನಿವಾಸಿ ಕೆ.ಮಹದೇವ, ಕಮ್ಮನಹಳ್ಳಿಯ ಪಳನಿ ದಯಾಳನ್ ಮತ್ತಿತರರು ಸಲ್ಲಿಸಿರುವ 10 ಪ್ರತ್ಯೇಕ ಅರ್ಜಿಗಳು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿದ್ದವು.
ಮೀಸಲಾತಿಯಲ್ಲಿ ನಿಯಮ ಪಾಲನೆಯಾಗಿಲ್ಲ ಎಂಬ ಅರ್ಜಿದಾರರ ಆರೋಪಗಳನ್ನು ತಳ್ಳಿಹಾಕಿದ ಸರ್ಕಾರ, ಮೀಸಲು ನಿಗದಿಯಲ್ಲಿ ಕಾನೂನಿನ ಎಲ್ಲ ಪ್ರಕ್ರಿಯೆ ಮತ್ತು ನಿಗದಿತ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆ. ಮಹಿಳಾ ಮೀಸಲಾತಿಯಲ್ಲೂ ಕಾನೂನು ಬದ್ಧತೆಯನ್ನು ಕಾಪಾಡಿಕೊಳ್ಳಲಾಗಿದೆ. ‘ರಾರಯಂಡಮ್’ ಆಧಾರದಲ್ಲಿ ಮೀಸಲು ನಿಗದಿಪಡಿಸಲಾಗಿದೆ. ಹೀಗಾಗಿ ವಾರ್ಡ್‌ವಾರು ಮೀಸಲಾತಿ ಅಧಿಸೂಚನೆ ರದ್ದುಕೋರಿ ಸಲ್ಲಿಕೆಯಾಗಿರುವ ತಕರಾರು ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ಕುರಿತು ವಾದ ಮಂಡಿಸುವಂತೆ ಸರ್ಕಾರ ಮತ್ತು ಅರ್ಜಿದಾರರ ಪರ ವಕೀಲರಿಗೆ ನಿರ್ದೇಶಿಸಿ ವಿಚಾರಣೆಯನ್ನು ಸೆ.27ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ಆಕ್ಷೇಪಣೆ ಸಲ್ಲಿಸಿದ ಸರ್ಕಾರ, 2011ರ ಜನಗಣತಿ ಆಧರಿಸಿ ಮೀಸಲಾತಿ ನಿಗದಿಪಡಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 84,49,004 ಜನಸಂಖ್ಯೆಯಿದ್ದು, ಪರಿಶಿಷ್ಟಜಾತಿಯ 9,61,549 ಮತ್ತು ಪರಿಶಿಷ್ಟಪಂಗಡ 1,55,080 ಜನರಿದ್ದಾರೆ. ಈ ಜನಸಂಖ್ಯೆಗೆ ಅನುಗುಣವಾಗಿ 28 ವಾರ್ಡ್‌ಗಳನ್ನು ಪರಿಶಿಷ್ಟಜಾತಿ ಹಾಗೂ ನಾಲ್ಕು ವಾರ್ಡ್‌ಗಳನ್ನು ಪರಿಶಿಷ್ಟಪಂಗಡಕ್ಕೆ ಮೀಸಲಿರಿಸಲಾಗಿದೆ. ಎಸ್‌ಸಿ ಮೀಸಲಿರುವ 28 ವಾರ್ಡ್‌ಗಳಲ್ಲಿ ಶೇ.50 (14) ಎಸ್‌ಸಿ ಮಹಿಳೆ ಹಾಗೂ ಎಸ್‌ಟಿ ಮೀಸಲಿರುವ ನಾಲ್ಕರಲ್ಲಿ ಎರಡು ವಾರ್ಡ್‌ಗಳನ್ನು ಎಸ್‌ಟಿ ಮಹಿಳೆಗೆ ಮೀಸಲಿರಿಸಲಾಗಿದೆ ಎಂದು ವಿವರಿಸಿತು.
Bengaluru: ಆಪರೇಷನ್ ಡೆಮಾಲಿಷ್‌ಗೆ ಹೆದರಿ ನಿವಾಸಿಗಳಿಂದಲೇ ಒತ್ತುವರಿ ತೆರವು..!
ನಿಯಮ ಪ್ರಕಾರ ಎಸ್‌ಸಿ-ಎಸ್‌ಟಿ ಮತ್ತು ಹಿಂದುಳಿದ ವರ್ಗಗಳಿಗೆ ಕಲ್ಪಿಸುವ ಮೀಸಲಾತಿಯು ಒಟ್ಟು ಸ್ಥಾನಗಳ ಶೇ.50 ಮೀರಿರಬಾರದು. ಹಾಗೆಯೇ, ಒಟ್ಟು ಸ್ಥಾನಗಳ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ಮೀಸಲು ನೀಡಬಾರದು. ಈ ಮಾರ್ಗಸೂಚಿಯನ್ನೇ ಮೀಸಲು ನಿಗದಿಯಲ್ಲಿ ಅನುಸರಿಸಲಾಗಿದೆ. ಹಿಂದುಳಿದ ವರ್ಗಗಳಿಗೆ ಕಲ್ಪಿಸಿರುವ ಮೂರನೇ ಒಂದು ಭಾಗದ ಮೀಸಲಾತಿಯಲ್ಲಿ ಶೇ.80 ಹಿಂದುಳಿದ ವರ್ಗಗಳು-ಎ ಹಾಗೂ ಶೇ.20 ಹಿಂದುಳಿದ ವರ್ಗಗಳು-ಬಿಗೆ ಮೀಸಲಾತಿ ನೀಡಲಾಗಿದೆ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕು ಎಂದು ಆಕ್ಷೇಪಣೆಯಲ್ಲಿ ಸರ್ಕಾರ ಕೋರಿದೆ.
ಅದನ್ನು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಸಮನಾಗಿ ಮೀಸಲಾತಿ ಕಲ್ಪಿಸಬೇಕಿತ್ತು. ಆದರೆ, ಒಂದು ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್‌ಗಳಿಗೆ ಮಹಿಳಾ ಮೀಸಲಾತಿ ಕಲ್ಪಿಸಲಾಗಿದೆ. ಈ ರೀತಿ ಮಹಿಳಾ ಮೀಸಲಾತಿ ಕಲ್ಪಿಸಲು ಅವಕಾಶವಿಲ್ಲ. ಎಲ್ಲಿ ಮಹಿಳೆಯರ ಜನಸಂಖ್ಯೆ ಹೆಚ್ಚಿರುತ್ತದೆಯೋ ಅಲ್ಲಿ ಮಹಿಳೆಯರಿಗೆ ಮೀಸಲು ಕಲ್ಪಿಸಬಹುದಾಗಿದೆ. ಮುಖ್ಯವಾಗಿ ರಾರಯಂಡಮ್ ಆಧಾರದ ಮೇಲೆ ಮೀಸಲು ಕಲ್ಪಿಸಿರುವ ಸರ್ಕಾರದ ಕ್ರಮವೇ ದುರುದ್ದೇಶಪೂರ್ವಕ ಮತ್ತು ಕಾನೂನು ಬಾಹಿರವಾಗಿದೆ. ಹಾಗಾಗಿ, ಸರ್ಕಾರದ ಮೀಸಲು ಅಧಿಸೂಚನೆ ರದ್ದುಪಡಿಸುವಂತೆ ಕೋರಿದರು.