ಮಹಾಲಕ್ಷ್ಮೀಪುರದ ತ್ಯಾಜ್ಯ ವಿಂಗಡಣೆ ಘಟಕ ಮುಚ್ಚಿ: BBMPಗೆ ಹೈಕೋರ್ಟ್‌ ಸೂಚನೆ

By Kannadaprabha NewsFirst Published Feb 20, 2020, 9:26 AM IST
Highlights

ಪರಿಸರ ಮಂಡಳಿ ಅನುಮತಿ ಪಡೆಯದೆ ಘಟಕ ಆರಂಭಿಸಿದ್ದ ಬಿಬಿಎಂಪಿ| ಘಟಕ ಆರಂಭಿಸಲು ಬಿಬಿಎಂಪಿಯು ಮಂಡಳಿಯಿಂದ ಪೂರ್ವಾನುಮತಿ ಪಡೆದಿಲ್ಲ| ಘಟಕದ ಸುತ್ತಮುತ್ತ ಜನ ವಸತಿ ಪ್ರದೇಶವಾಗಿದೆ| ಶಾಲೆ, ಆಸ್ಪತ್ರೆ, ವಾಣಿಜ್ಯ ಮಳಿಗೆ ಹಾಗೂ ಚಿತ್ರಮಂದಿರಗಳಿವೆ|

ಬೆಂಗಳೂರು(ಫೆ.20): ನಗರದ ಮಹಾಲಕ್ಷ್ಮೀಪುರದ ಎರಡನೇ ಹಂತದ ವಸತಿ ಪ್ರದೇಶದಲ್ಲಿ ಆರಂಭಿಸಿರುವ ತಾಜ್ಯ ವಿಂಗಡಣೆ ಮತ್ತು ವಿಲೇವಾರಿ ಘಟಕದ ಎಲ್ಲ ಚಟುವಟಿಕೆಯನ್ನು ಒಂದು ತಿಂಗಳಲ್ಲಿ ಸ್ಥಗಿತಗೊಳಿಸಬೇಕೆಂದು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಈ ತ್ಯಾಜ್ಯ ಘಟಕವನ್ನು ಸ್ಥಳಾಂತರಿಸಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಮಹಾಲಕ್ಷ್ಮೀಪುರ ಎರಡನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಚಾರಣೆ ವೇಳೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು, ಈ ಘಟಕ ಆರಂಭಿಸಲು ಬಿಬಿಎಂಪಿಯು ಮಂಡಳಿಯಿಂದ ಪೂರ್ವಾನುಮತಿ ಪಡೆದಿಲ್ಲ. ಘಟಕ ವಸತಿ ಪ್ರದೇಶದ 100 ಮೀಟರ್‌ ಒಳಗೆ ಇದೆ ಎಂದು ತಿಳಿಸಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಘಟಕ ಆರಂಭಿಸಲು ಮಂಡಳಿಯಿಂದ ಪೂರ್ವಾನುಮತಿ ಪಡೆಯದಿರುವುದು ಕಾನೂನು ಬಾಹಿರ ನಡೆಯಾಗಿದೆ. ಆದ್ದರಿಂದ ಒಂದು ತಿಂಗಳಲ್ಲಿ ಘಟಕದ ಎಲ್ಲ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಬೇಕು. ನಂತರ ಘಟಕವನ್ನು ಮುಂದುರಿಸಬೇಕೆಂದು ಉದ್ದೇಶಿಸಿದರೆ, ಅದಕ್ಕಾಗಿ ಅನುಮತಿ ಕೋರಿ ಮಂಡಳಿಗೆ ಕಾನೂನು ಪ್ರಕಾರ ಸೂಕ್ತ ಅರ್ಜಿ ಸಲ್ಲಿಸಬೇಕು. ಒಂದೊಮ್ಮೆ ಘಟಕದ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸದಿದ್ದರೆ, ಅದರ ಜಾಗವನ್ನು ಆಟದ ಮೈದಾನವಾಗಿ ಪರಿವರ್ತಿಸಬೇಕೆಂಬ ಅರ್ಜಿದಾರರ ಮನವಿಯನ್ನು ಪರಿಗಣಿಸಬೇಕು ಎಂದು ಬಿಬಿಎಂಪಿಗೆ ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು.

ಮಹಾಲಕ್ಷ್ಮೀಪುರಂನ ಎರಡನೇ ಹಂತದಲ್ಲಿ ಸರ್ವೇ ನಂಬರ್‌ 31/4ರಲ್ಲಿನ 1021 ಚ. ಮೀ. ವಿಸ್ತೀರ್ಣದ ನಿವೇಶನದಲ್ಲಿ ತ್ಯಾಜ್ಯ ಸಂಗ್ರಹಣೆ, ವಿಂಗಡಣೆ ಮತ್ತು ವಿಲೇವಾರಿ ಘಟಕವನ್ನು ಬಿಬಿಎಂಪಿ ಆರಂಭಿಸಿದೆ. ಆದರೆ, ಘಟಕದ ಸುತ್ತಮುತ್ತ ಜನ ವಸತಿ ಪ್ರದೇಶವಾಗಿದೆ, ಅಲ್ಲದೆ, ಶಾಲೆ, ಆಸ್ಪತ್ರೆ, ವಾಣಿಜ್ಯ ಮಳಿಗೆ ಹಾಗೂ ಚಿತ್ರಮಂದಿರಗಳಿವೆ. ಘಟಕದಿಂದ ಸುತ್ತಮುತ್ತಲಿನ ಪರಿಸರ ಮಾಲಿನ್ಯವಾಗುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಹೀಗಾಗಿ ಘಟಕವನ್ನು ಸ್ಥಳಾಂತರಿಸಬೇಕು, ಸ್ಥಳಾಂತರದ ಬಳಿಕ ಆ ಜಾಗವನ್ನು ಆಟದ ಮೈದಾನವಾಗಿ ಮಾರ್ಪಡಿಸಿಕೊಡಲು ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
 

click me!