ಜನರ ನಿದ್ದೆ​ಗೆ​ಡಿ​ಸಿದ ಕೊರೋನಾ ಸೋಂಕು: ಎಲ್ಲೆಡೆ ತೀವ್ರ ಕಟ್ಟೆ​ಚ್ಚರ

By Kannadaprabha News  |  First Published Apr 25, 2020, 10:26 AM IST

ಬಾಗಲಕೋಟೆ ಜಿಲ್ಲೆ​ಯಲ್ಲಿ ಒಟ್ಟು 24 ಕೊರೋನಾ ಪ್ರಕರಣ ಪತ್ತೆ| ಬಾಗಲಕೋಟೆ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಮೂರು ಹೊಸ ಕೊರೋನಾ ಸೋಂಕು ದೃಢ| ಬಾಗಲಕೋಟೆಯ ಹಳೆ ನಗರದ ವಾರ್ಡ್‌ ನಂ. 7 ಹಾಗೂ 14ರ ಜನ ವಸತಿ ಪ್ರದೇಶವೆ ಕೊರೋನಾ ಸೋಂಕಿತ ಮೊದಲ ಪ್ರಕರಣ ಪತ್ತೆ| ಕಳೆದ 23 ದಿನಗಳಿಂದ ಈ ಪ್ರದೇಶ ಸಂಪೂರ್ಣ ದಿಗ್ಬಂಧನ|


ಈಶ್ವರ ಶೆಟ್ಟರ 

ಬಾಗಲಕೋಟೆ(ಏ.25): ಕೊರೋನಾ ಸೋಂಕಿನಿಂದ ತತ್ತರಿಸಿ ಹೋಗಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಮೂರು ಹೊಸ ಕೊರೋನಾ ಸೋಂಕು ಪ್ರಕರಣಗಳು ವರದಿಯಾಗಿದ್ದರಿಂದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೋಂಕಿತ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲೆಡೆ ತೀವ್ರ ಕಟ್ಟೆಚ್ಚರ ಮುಂದುವರಿಸಿದೆ.

Latest Videos

undefined

ಬಾಗಲಕೋಟೆ, ಮುಧೋಳ, ಜಮಖಂಡಿಯಲ್ಲಿ ಪತ್ತೆಯಾದ ಒಟ್ಟು 24 ಸೋಂಕಿತ ಪ್ರಕರಣಗಳ ನಂತರ ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವ ವ್ಯಕ್ತಿಗಳ ತಪಾಸಣಾ ಕಾರ್ಯದ ನಂತರ ಇಂದು ಮತ್ತೆ ಮೂರು ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಅವರು ಪ್ರಯಾಣಿಸಿದ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ತನ್ನ ನೂರಾರು ಸಿಬ್ಬಂದಿ ಮೂಲಕ ಹಾಗೂ ಇನ್ನಿತರ ಕಾರ್ಯಕರ್ತರ ನೆರವಿನೊಂದಿಗೆ ಹಗಲಿರುಳು ಶ್ರಮಿಸುತ್ತಿದ್ದು ಆಯಾ ಪ್ರದೇಶದ ಜನ ವಸತಿ ಮಾಹಿತಿಯನ್ನು ಸಹ ಪಡೆಯುತ್ತಿದೆ.

ಕೊರೋನಾ ನಿಗ್ರಹಕ್ಕಾಗಿ ದೇವತೆಗೆ ಮೊರೆ ಹೋದ ಗ್ರಾಮಸ್ಥರು: ತಾಯಿಗೆ ದೀರ್ಘದಂಡ ನಮಸ್ಕಾರ ಸೇವೆ

ಮತ್ತಷ್ಟು ಕಟ್ಟೆಚ್ಚರ:

ಬಾಗಲಕೋಟೆಯ ಹಳೆ ನಗರದ ವಾರ್ಡ್‌ ನಂ. 7 ಹಾಗೂ 14ರ ಜನ ವಸತಿ ಪ್ರದೇಶವೆ ಕೊರೋನಾ ಸೋಂಕಿತ ಮೊದಲ ಪ್ರಕರಣ ಪತ್ತೆಯಾಗಿದ್ದರಿಂದ ಕಳೆದ 23 ದಿನಗಳಿಂದ ಸಂಪೂರ್ಣವಾಗಿ ಈ ಪ್ರದೇಶವನ್ನು ದಿಗ್ಬಂಧನಕ್ಕೆ ಒಳಪಡಿಸಲಾಗಿದ್ದು, ಈ ಪ್ರದೇಶದಲ್ಲಿ ಯಾರು ಹೊರಗೆ ಹಾಗೂ ಹೊರಗಿನಿಂದ ಒಳಗೆ ಹೋಗಲು ಅವಕಾಶ ಇಲ್ಲವಾಗಿದೆ. ಹೀಗಾಗಿ ಇಲ್ಲಿನ ಜನತೆ ಅಗತ್ಯ ವಸ್ತುಗಳನ್ನು ಹಾಗೂ ತರಕಾರಿ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ದಿಗ್ಬಂಧನ ಹಾಗೂ ನಿಷೇಧಿ​ತ ವಲಯವಾಗಿರುವ ಹಳೆ ನಗರದ ಪ್ರಮುಖ ಬಡಾವಣೆಗಳಲ್ಲಿ ಸರ್ಕಾರ ಉಚಿತವಾಗಿ ನೀಡುವ ಹಾಲು ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಆರೋಪಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದು, ನಿಷೇಧಿ​ತ ವಲಯದಲ್ಲಿ ಆರೋಗ್ಯ, ಕಂದಾಯ ಇಲಾಖೆಯ ಸಿಬ್ಬಂದಿಯಿಂದಲೇ ವಸ್ತುಗಳ ಪೂರೈಕೆ ಮಾಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡುತ್ತಿದೆ.

ಸೋಂಕಿತ ಪ್ರದೇಶದಲ್ಲಿ ಇರುವವರಿಗೆ ಅಗತ್ಯ ವಸ್ತುಗಳ ಪೂರೈಕೆ ಹಾಗೂ ಯಾವುದೇ ತೊಂದರೆಯಾಗಬಾರದೆಂಬ ಕಾರಣಕ್ಕೆ ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದ್ದು ವಿಶೇಷ ಅಧಿ​ಕಾರಿಗಳ ನೇಮಕ ಹಾಗೂ ಅಲ್ಲಿನ ನಿವಾಸಿಗಳು ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿರುವ ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ನಿಷೇಧಿ​ತ ವಲಯದಲ್ಲಿ ಹೆಚ್ಚಿನ ಮುಂಜಾಗ್ರತೆಗಳನ್ನು ​ಕೈಗೊಂಡಿದೆ. ಹೀಗಾಗಿ ಅಲ್ಲಿನ ನಿವಾಸಿಗಳಲ್ಲಿಯೂ ಜಾಗ್ರತೆ ಮೂಡಲು ಆರಂಭಿಸಿದೆ.

ಮೂವರು ಹೊಸ ಸೋಂಕಿತರು:

ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಮುಧೋಳದಲ್ಲಿ ಸೋಂಕಿತರು ಪತ್ತೆಯಾದ ನಂತರ ಸಹಜವಾಗಿ ಆ ಭಾಗದಲ್ಲಿ ಪತ್ತೆಯಾದ ಸೋಂಕಿತರ ಮೊದಲಿನ ಚಲನವಲನದ ಮಾಹಿತಿ ಕಲೆ ಹಾಕುತ್ತಿರುವ ಅಧಿ​ಕಾರಿಗಳ ತಂಡ ನಿರಂತರವಾಗಿ ಕಾರ್ಯೋನ್ಮುಖವಾಗಿದೆ. ಮುಧೋಳದಲ್ಲಿನ ಮೊದಲ ಪ್ರಕರಣ ಮದರಾಸದಲ್ಲಿದ್ದ ಧರ್ಮ ಪ್ರಚಾರಕರಿಂದ ಆರಂಭಗೊಂಡು ಪೊಲೀಸ್‌ ಪೇದೆ, ಎಟಿಎಂ ಸಿಬ್ಬಂದಿ ಹಾಗೂ ಇತರರಿಗೆ ಹರಡಿದ್ದರಿಂದ ಅವರ ಜೊತೆ ಸಂಪರ್ಕ ಹೊಂದಿದವರ ಪ್ರಾಥಮಿಕ ಮಾಹಿತಿಯನ್ನು ಕಲೆಹಾಕುವುದೇ ಜಿಲ್ಲಾಡಳಿತಕ್ಕೆ ಸವಾಲಾಗಿದೆ.

ಶುಕ್ರವಾರ ಪತ್ತೆಯಾದ ಮೂವರು ಸೋಂಕಿತರಲ್ಲಿ ಮುಧೋಳದಲ್ಲಿ ಈಗಾಗಲೇ ಸೋಂಕಿತರಾದವರ ಜೊತೆ ಸಂಪರ್ಕದಲ್ಲಿರುವ ಓರ್ವ ವ್ಯಕ್ತಿಗೆ ಹಾಗೂ ಜಮಖಂಡಿಯಲ್ಲಿ ಪತ್ತೆಯಾದ ಸೋಂಕಿತನ ಕುರಿತು ಮತ್ತಷ್ಟುಮಾಹಿತಿ ಕಲೆ ಹಾಕುವ ಕೆಲಸ ಆರೋಗ್ಯ ಇಲಾಖೆಯಿಂದ ನಡೆಯುತ್ತಿದೆ.

ಒಟ್ಟಾರೆ ಜಿಲ್ಲಾಡಳಿತ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಆರಂಭಿಸಲಾದ ಸಂಘಟಿತ ಹೋರಾಟಕ್ಕೆ ಜನ ಸಾಮಾನ್ಯರು ಸಹ ಪ್ರಾಮಾಣಿಕವಾಗಿ ಸಹಕರಿಸಬೇಕಾಗಿದೆ. ಮುಧೋಳ ಹಾಗೂ ಬಾಗಲಕೋಟೆ, ಜಮಖಂಡಿಯಲ್ಲಿ ಪತ್ತೆಯಾಗಿರುವ ಸೋಂಕಿತರ ಸಂಪರ್ಕಕ್ಕೆ ಬಂದವರು ತಾವೇ ಮುಂದಾಗಿ ಚಿಕಿತ್ಸೆಗೆ ಒಳಪಡುವ ಅಗತ್ಯತೆ ಇದೆ. ಆ ಮೂಲಕ ಜಿಲ್ಲಾಡಳಿತದ ನಿರಂತರ ಪ್ರಯತ್ನಕ್ಕೆ ಸಹಕಾರ ನೀಡುವ ಅಗತ್ಯವಾಗಿದೆ.

click me!