ಉಗ್ರರ ದಾಳಿ ಸಾಧ್ಯತೆ: ಸಕ್ಕರೆ ನಾಡಿನಲ್ಲಿ ಹೈ ಅಲರ್ಟ್‌

By Kannadaprabha NewsFirst Published Aug 18, 2019, 8:48 AM IST
Highlights

ದೇಶದಲ್ಲಿ ಉಗ್ರರು ನುಸುಳಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಜಿಲ್ಲೆಯ ಕೆಆರ್‌ಎಸ್‌ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳು, ದೇವಸ್ಥಾನಗಳಿಗೆ ಬಿಗಿ ಬಂದೋಬಸ್ತು ಮಾಡಲಾಗಿದೆ. ಪೆಟ್ರೋಲಿಂಗ್‌ ವ್ಯವಸ್ಥೆಯನ್ನು ಮತ್ತಷ್ಟುಬಿಗಿಗೊಳಿಸಲಾಗಿದೆ.

ಮಂಡ್ಯ(ಆ.18): ರಾಜ್ಯದಲ್ಲಿ ಉಗ್ರರ ದಾಳಿ ನಡೆಯುವ ಸಂಭವವಿರುವ ಕಾರಣಕ್ಕಾಗಿ ಜಿಲ್ಲೆಯಲ್ಲೂ ಕೂಡ ಹೈ ಅಲರ್ಟ್‌ ಘೋಷಿಸಲಾಗಿದೆ.

ಜಿಲ್ಲೆಯ ಕೆಆರ್‌ಎಸ್‌ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳು, ದೇವಸ್ಥಾನಗಳಿಗೆ ಬಿಗಿ ಬಂದೋಬಸ್ತು ಮಾಡಲಾಗಿದೆ. ಪೆಟ್ರೋಲಿಂಗ್‌ ವ್ಯವಸ್ಥೆಯನ್ನು ಮತ್ತಷ್ಟುಬಿಗಿಗೊಳಿಸಲಾಗಿದೆ.

ಮಂಡ್ಯ, ಶ್ರೀರಂಗಪಟ್ಟಣ ಹಾಗೂ ಮದ್ದೂರು ರೈಲು ನಿಲ್ದಾಣಗಳಲ್ಲೂ ಕಟ್ಟೆಚ್ಚರ ವಹಿಸಿ, ಅನುಮಾನ ಬಂದ ಕಡೆ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಎಸ್ಪಿ ಪುರುಷೋತ್ತಮ ತಿಳಿಸಿದರು.

KRSಗೂ ಭದ್ರತೆ:

ಕೆಆರ್‌ಎಸ್‌ ಈಗ ಭರ್ತಿಯಾಗಿದೆ. ಆಣೆಕಟ್ಟೆಯಲ್ಲಿ ಭಾರಿ ನೀರು ಇರುವ ಕಾರಣಕ್ಕಾಗಿ ಕಟ್ಟೆಯ ಸೇತುವೆಯ ಮೇಲೆ ಯಾರನ್ನೂ ಬಿಡುವುದಿಲ್ಲ. ಪೊಲೀಸರು ಬಿಗಿ ಬಂದೋಬಸ್ತು ಮಾಡಿದ್ದಾರೆ. ಮೇಲುಕೋಟೆ, ಶ್ರೀರಂಗಪಟ್ಟಣ ದೇವಸ್ಥಾನಗಳಿಗೂ ಬಿಗಿ ಬಂದೋ ಬಸ್ತು ಹಾಕಲಾಗಿದೆ. ಪ್ರವಾಸಿ ತಾಣಗಳಲ್ಲೂ ಕೂಡ ಪೊಲೀಸ್‌ ಗಸ್ತು ಹೆಚ್ಚಿಸಲಾಗಿದೆ ಎಂದು ಹೇಳಿದರು.

ಶ್ರೀರಂಗಪಟ್ಟಣ ವರದಿ:

ರಾಜ್ಯಕ್ಕೆ ಉಗ್ರರ ಭೀತಿ ಇರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಅಣೆಕಟ್ಟೆಗೆ ಹೆಚ್ಚಿನ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಸೂಚನೆಯ ಮೇರೆಗೆ ಜಿಲ್ಲೆಯ ರೈತರ ಜೀವನಾಡಿ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿದೆ.

ಉಗ್ರರ ಹಾವಳಿ, ಇಡೀ ಕರ್ನಾಟಕಕ್ಕೆ ಮುನ್ನೆಚ್ಚರಿಕೆ: ಜೋಪಾನ

ಆಣೆಕಟ್ಟೆಹಾಗೂ ಬೃಂದಾವನದ ಸುತ್ತ ಮುತ್ತ ಶ್ವಾನದಳ ಮತ್ತು ಬಾಂಬ್‌, ಸ್ಕ್ವಾಡ್‌ ಸಿಬ್ಬಂದಿಗಳಿಂದ ತಪಾಸಣೆ ನಡೆಸುತ್ತಿದ್ದಾರೆ. ಕೆಆರ್‌ಎಸ್‌ ಅಣೆಕಟ್ಟೆಹಾಗೂ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

click me!