ಬೆಂಗಳೂರು: ಸಿನೆಮಾ ಟಾಕೀಸ್‌ ವಾಶ್‌ರೂಂನಲ್ಲಿ ಕ್ಯಾಮಾರಾ ಪತ್ತೆ, ಅಪ್ರಾಪ್ತನ ಬಳಕೆ ಆರೋಪ, ದೂರು ಕೊಟ್ಟ ಮಹಿಳಾ ಟೆಕ್ಕಿ

Published : Jan 05, 2026, 06:46 PM IST
sandhya theatre

ಸಾರಾಂಶ

ಬೆಂಗಳೂರಿನ ಮಡಿವಾಳದಲ್ಲಿರುವ ಸಂಧ್ಯಾ ಥಿಯೇಟರ್‌ನ ಲೇಡಿಸ್ ವಾಶ್ ರೂಮ್‌ನಲ್ಲಿ ಗುಪ್ತ ಕ್ಯಾಮೆರಾ ಪತ್ತೆಯಾಗಿದೆ. ಸಿನಿಮಾ ನೋಡಲು ಬಂದಿದ್ದ ಮಹಿಳಾ ಟೆಕ್ಕಿಯೊಬ್ಬರು ನೀಡಿದ ದೂರಿನ ಮೇರೆಗೆ, ಥಿಯೇಟರ್ ಸಿಬ್ಬಂದಿ ಮತ್ತು ವಿಡಿಯೋ ಚಿತ್ರೀಕರಿಸುತ್ತಿದ್ದ ಅಪ್ರಾಪ್ತ ಬಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು: ನಗರದ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ ಕ್ಯಾಮಾರ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಟೆಕ್ಕಿ ದೂರು ದಾಖಲಿಸಿದ್ದಾರೆ. ಲೇಡಿಸ್ ವಾಶ್ ರೂಮ್‌ನಲ್ಲಿ ಗುಪ್ತವಾಗಿ ಕ್ಯಾಮೆರಾ ಇಟ್ಟು ಮಹಿಳೆಯರ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಮಹಿಳಾ ಟೆಕ್ಕಿಯೊಬ್ಬರು ನೀಡಿದ ದೂರಿನ ಮೇರೆಗೆ ಸಂಧ್ಯಾ ಥಿಯೇಟರ್ ಹಾಗೂ ಅದರ ಸಿಬ್ಬಂದಿ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸಿನಿಮಾಗೆ ಹೋಗಿದ್ದ ವೇಳೆ ನಡೆದ ಅಘಾತಕಾರಿ ಘಟನೆ

ದೂರುದಾರರಾದ ಮಹಿಳಾ ಟೆಕ್ಕಿ ಭಾನುವಾರ ಸಂಜೆ ತಮ್ಮ ಸ್ನೇಹಿತರೊಂದಿಗೆ 7 ರಿಂದ 10 ಗಂಟೆಯ ಶೋಗೆ ಸಿನಿಮಾ ನೋಡಲು ಸಂಧ್ಯಾ ಥಿಯೇಟರ್‌ಗೆ ತೆರಳಿದ್ದರು. ಈ ವೇಳೆ ಇಂಟರ್ವೆಲ್ ಸಮಯದಲ್ಲಿ ವಾಶ್ ರೂಮ್‌ಗೆ ಹೋಗಿದ್ದಾಗ, ಅಲ್ಲಿದ್ದ ವ್ಯಕ್ತಿಯೊಬ್ಬರು ಮೊಬೈಲ್ ಅಥವಾ ಕ್ಯಾಮೆರಾ ಬಳಸಿ ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ಲೇಡಿಸ್ ವಾಶ್ ರೂಮ್‌ನಲ್ಲಿ ಮಹಿಳೆಯರು ಹಾಗೂ ಯುವತಿಯರ ಖಾಸಗಿ ದೃಶ್ಯಗಳನ್ನು ಗುಪ್ತವಾಗಿ ಚಿತ್ರೀಕರಿಸಲಾಗುತ್ತಿದೆ ಎಂಬುದನ್ನು ಅರಿತ ಮಹಿಳಾ ಟೆಕ್ಕಿ ತಕ್ಷಣವೇ ಎಚ್ಚೆತ್ತುಕೊಂಡು, ತಮ್ಮ ಸ್ನೇಹಿತರ ಸಹಾಯದಿಂದ ಆರೋಪಿಯನ್ನು ಹಿಡಿದು ಥಿಯೇಟರ್ ಮಾಲೀಕರ ಬಳಿಗೆ ಕರೆದೊಯ್ದಿದ್ದಾರೆ.

ಅಪ್ರಾಪ್ತ ಬಾಲಕನ ಬಳಕೆ ಆರೋಪ

ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕನನ್ನು ಬಳಸಿ ವೀಡಿಯೋ ರೆಕಾರ್ಡ್ ಮಾಡಿಸಲಾಗಿದೆ ಎಂಬ ಗಂಭೀರ ಆರೋಪವೂ ಹೊರಬಂದಿದೆ. ಮಹಿಳಾ ಟೆಕ್ಕಿ ನೀಡಿದ ದೂರಿನ ಆಧಾರದ ಮೇಲೆ ಅಪ್ರಾಪ್ತ ಯುವಕ ಹಾಗೂ ಸಂಧ್ಯಾ ಥಿಯೇಟರ್ ವಿರುದ್ಧ ಪ್ರತ್ಯೇಕವಾಗಿ ಎಫ್ಐಆರ್ ದಾಖಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸರು ಅಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಥಿಯೇಟರ್ ಆವರಣದಲ್ಲಿ ಗದ್ದಲ

ಘಟನೆ ತಿಳಿದ ತಕ್ಷಣ ಥಿಯೇಟರ್ ಆವರಣದಲ್ಲಿ ಗದ್ದಲ ಉಂಟಾಗಿದ್ದು, ಸ್ಥಳೀಯರು ಹಾಗೂ ಸಿನಿಮಾ ನೋಡಲು ಬಂದಿದ್ದವರು ಆರೋಪಿಯನ್ನು ಹಿಡಿದು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಮಡಿವಾಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಥಿಯೇಟರ್ ಮಾಲೀಕರಿಗೆ ನೋಟಿಸ್ ನೀಡಲು ಸಿದ್ಧತೆ

ಪ್ರಕರಣದಲ್ಲಿ ಥಿಯೇಟರ್ ನಿರ್ವಹಣೆಯ ನಿರ್ಲಕ್ಷ್ಯ ಅಥವಾ ನೇರ ಭಾಗವಹಿಸುವಿಕೆ ಇದೆಯೇ ಎಂಬುದರ ಕುರಿತು ತನಿಖೆ ಮುಂದುವರೆದಿದ್ದು, ಸಂಧ್ಯಾ ಥಿಯೇಟರ್ ಮಾಲೀಕರಿಗೆ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಭದ್ರತೆ ಕಾಪಾಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ, ಥಿಯೇಟರ್ ಸಿಬ್ಬಂದಿಯ ಪಾತ್ರವನ್ನೂ ತನಿಖೆ ಮಾಡಲಾಗುತ್ತಿದೆ.

ಸಿನಿಮಾ ಪ್ರದರ್ಶನದ ವೇಳೆ ಪತ್ತೆಯಾದ ಕ್ಯಾಮೆರಾ

ಘಟನೆ ನಡೆದ ಸಮಯದಲ್ಲಿ “ನುವ್ವು ನಾಕು ನಚ್ಚಾವ್” ಸಿನಿಮಾ ಮರುಪ್ರದರ್ಶನ (ರಿ-ರಿಲೀಸ್) ಆಗಿತ್ತು. ಸಿನಿಮಾ ನೋಡಲು ಬಂದಿದ್ದ ವೇಳೆಯೇ ಲೇಡಿಸ್ ಟಾಯ್ಲೆಟ್‌ನಲ್ಲಿ ಕ್ಯಾಮೆರಾ ಇಟ್ಟಿರುವುದು ಪತ್ತೆಯಾಗಿತ್ತು. ಈ ಘಟನೆ ಮಹಿಳೆಯರಲ್ಲಿ ಭೀತಿ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

PREV
Read more Articles on
click me!

Recommended Stories

ಕೋಗಿಲು ನಿರಾಶ್ರಿತರಿಗೆ ವಸತಿ ನೀಡುವ ಬಗ್ಗೆ ಮಹತ್ವದ ಸಭೆ, ಕನ್ನಡಿಗರಿಗೆ ಮೊದಲ ಆದ್ಯತೆ, ಇನ್ನೂ ಹಲವು ವಿಚಾರ ಚರ್ಚೆ
ರೈಲ್ವೆ ಮೇಲ್ಸೇತುವೆ ಶಂಕುಸ್ಥಾಪನೆ ವೇಳೆ ಸಚಿವ ಸೋಮಣ್ಣಗೆ ಮುಖಭಂಗ, ಹೊಡೆದಾಡಿಕೊಂಡ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು!