ಬೆಂಗಳೂರು: ಮತದಾರರಿಗೆ ಹಂಚಲು ತಂದಿದ್ದ ಹೆಲ್ಮೆಟ್‌, ಮದ್ಯ, 7.50 ಲಕ್ಷ ಜಪ್ತಿ

By Kannadaprabha NewsFirst Published Mar 28, 2023, 7:59 AM IST
Highlights

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶ್ರೀನಿವಾಸಪುರ ಗ್ರಾಮದ ಹಯಗ್ರೀವ ಪಬ್ಲಿಕ್‌ ಸ್ಕೂಲ್‌ನಲ್ಲಿ ಸಂಗ್ರಹಿಸಿದ್ದ 3.60 ಲಕ್ಷ ಮೌಲ್ಯದ 450 ಹೆಲ್ಮೆಟ್‌ಗಳು, 1.40 ಲಕ್ಷ ಮೌಲ್ಯದ 35 ಕ್ರಿಕೆಟ್‌ ಸ್ಪೋರ್ಟ್ಸ್‌ ಕಿಟ್‌ಗಳು, 25 ಸಾವಿರ ಮೌಲ್ಯದ ಬ್ಲಾಂಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು. 

ಬೆಂಗಳೂರು(ಮಾ.28):  ಈಶಾನ್ಯ ವಿಭಾಗದ ಪೊಲೀಸರು ಭಾನುವಾರ ವಿವಿಧೆಡೆ ಕಾರ್ಯಾಚರಣೆ ನಡೆಸಿ ಮತದಾರರಿಗೆ ಉಡುಗೊರೆ ನೀಡಲು ಸಂಗ್ರಹಿಸಿದ್ದ ದಾಖಲೆ ಇಲ್ಲದ ವಸ್ತುಗಳು ಹಾಗೂ ಹಣವನ್ನು ಜಪ್ತಿ ಮಾಡಿದ್ದಾರೆ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶ್ರೀನಿವಾಸಪುರ ಗ್ರಾಮದ ಹಯಗ್ರೀವ ಪಬ್ಲಿಕ್‌ ಸ್ಕೂಲ್‌ನಲ್ಲಿ ಸಂಗ್ರಹಿಸಿದ್ದ 3.60 ಲಕ್ಷ ಮೌಲ್ಯದ 450 ಹೆಲ್ಮೆಟ್‌ಗಳು, 1.40 ಲಕ್ಷ ಮೌಲ್ಯದ 35 ಕ್ರಿಕೆಟ್‌ ಸ್ಪೋರ್ಟ್ಸ್‌ ಕಿಟ್‌ಗಳು, 25 ಸಾವಿರ ಮೌಲ್ಯದ ಬ್ಲಾಂಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಗಡೆ ನಗರದ ಖಾಲಿ ಜಾಗದಲ್ಲಿ ಸಾರ್ವಜನಿಕರಿಗೆ ರೇಷನ್‌ ಕಿಟ್‌ ವಿತರಿಸುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತ ಸೈಯದ್‌ ಸಾದಿಕ್‌ ಎಂಬಾತನನ್ನು ವಶಕ್ಕೆ ಪಡೆದು, .90 ಸಾವಿರ ಮೌಲ್ಯದ 151 ರೇಷನ್‌ ಕಿಟ್‌ ಜಪ್ತಿ ಮಾಡಲಾಗಿದೆ. ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚುನಾವಣೆ ಗಿಮಿಕ್, ಯುಗಾದಿ ಹಬ್ಬದ ಪ್ರಯುಕ್ತ ಜನರಿಗೆ ಕೋಳಿ ಹಂಚಿದ ಶಾಸಕ!

ಕಾರ್‌ಗಳಲ್ಲಿ ಇದ್ದ ಹಣ ವಶ

ದೇವನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಪೂಜನಹಳ್ಳಿ ಗೇಟ್‌ ಟೋಲ್‌-2ರ ಬಳಿ ವಾಹನ ತಪಾಸಣೆ ಮಾಡುವಾಗ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಕಡೆಗೆ ಪ್ರತ್ಯೇಕವಾಗಿ ಎರಡು ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ .1.42 ಲಕ್ಷ ಹಾಗೂ .6.45 ಲಕ್ಷ ಜಪ್ತಿ ಮಾಡಲಾಗಿದೆ. ಈ ಸಂಬಂಧ ದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

ಸಂಪಿಗೆಹಳ್ಳಿಯ, ಅಮೃತಹಳ್ಳಿ, ಕೊತ್ತನೂರು, ಬಾಗಲೂರು, ವಿದ್ಯಾರಣ್ಯಪುರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿ .14 ಸಾವಿರ ಮೌಲ್ಯದ 35.5 ಲೀಟರ್‌ ಮದ್ಯ ಜಪ್ತಿ ಮಾಡಲಾಗಿದೆ. ಮದ್ಯ ಮಾರಾಟದಲ್ಲಿ ತೊಡಗಿದ್ದ ಐವರ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್‌ ವಶ: ಶೃಂಗೇರಿ ಶಾಸಕ ರಾಜೇಗೌಡಗೆ ಹಿನ್ನಡೆ

ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್‌ ಜಪ್ತಿ: ಕಾಂಗ್ರೆಸ್‌ ಆಕ್ರೋಶ

ಬೊಮ್ಮನಹಳ್ಳಿ: ಕಾಂಗ್ರೆಸ್‌ ವತಿಯಿಂದ ಪುಟ್ಟೇನಹಳ್ಳಿಯ ಸ್ಟಾರ್‌ ಕನ್ವೆನ್‌ಷನ್‌ ಹಾಲ್‌ನಲ್ಲಿ ಮತದಾರರಿಗೆ ಕುಕ್ಕರ್‌ ನೀಡುತ್ತಿದ್ದ ವೇಳೆ ಪೊಲೀಸರು ದಿಢೀರ್‌ ದಾಳಿ ನಡೆಸಿ ಕುಕ್ಕರ್‌ ತುಂಬಿದ್ದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರತಿಷ್ಠಿತ ವಾರ್ಡ್‌ ಎನಿಸಿಕೊಂಡಿರುವ ಪುಟ್ಟೇನಹಳ್ಳಿಯಲ್ಲಿ ಕಾಂಗ್ರೆಸ್‌ ಮುಖಂಡರು, ಮಹಿಳಾ ಕಾರ್ಯಕರ್ತರು ಮತದಾರರ ಓಲೈಕೆಗಾಗಿ ಒಂದು ಲಾರಿ ಲೋಡ್‌ ಕುಕ್ಕರ್‌ಗಳನ್ನು ತರಿಸಿ ಹಂಚುತ್ತಿದ್ದರು. ಚುನಾವಣಾ ನೀತಿ ಸಂಹಿತೆ ಜಾರಿಯಾಗದಿದ್ದರೂ ಈಗಾಗಲೇ ಎಲ್ಲ ಕ್ಷೇತ್ರದಲ್ಲೂ ಚುನಾವಣಾ ಸಮಿತಿ ಹದ್ದಿನ ಕಣ್ಣು ನೆಟ್ಟಿದೆ. ಯಾರೇ ಆದರೂ ಮತದಾರರಿಗೆ ಸೀರೆ, ಹಣ, ಹೆಂಡ, ಉಡುಗೊರೆಗಳನ್ನು ನೀಡದಂತೆ ಎಚ್ಚರಿಕೆ ವಹಿಸಿದೆ.

ಪುಟ್ಟೇನಹಳ್ಳಿ ಕಾಂಗ್ರೆಸ್‌ ಮುಖಂಡರು ಕುಕ್ಕರ್‌ಗಳನ್ನು ನೀಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದನ್ನು ತೀವ್ರವಾಗಿ ಖಂಡಿಸಿ, ಲಾರಿಯನ್ನು ಸೀಜ್‌ ಮಾಡದಂತೆ ಪ್ರತಿಭಟನೆಗೆ ಮುಂದಾದರು. ಅಲ್ಲದೆ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಪೊಲೀಸರು ಮನವೊಲಿಸಲು ಪ್ರಯತ್ನಿಸಿದರೂ ಕಾಂಗ್ರೆಸ್‌ ಕಾರ್ಯಕರ್ತರು ಲಾರಿ ವಶಕ್ಕೆ ಪಡೆಯದಂತೆ ತಡೆದರು. ಈ ವೇಳೆ ಸ್ಥಳಕ್ಕೆ ಚುನಾವಣಾ ರಿಟೈನಿಂಗ್‌ ಸಿಬ್ಬಂದಿ ಆಗಮಿಸಿ, ಚುನಾವಣೆ ಸಮೀಪಿಸುತ್ತಿರುವುದರಿಂದ ಮೇಲಿನ ಅಧಿಕಾರಿಗಳ ಸೂಚನೆ ಮೇರೆಗೆ ಮತದಾರರಿಗೆ ನೀಡುತ್ತಿರುವ ಉಡುಗೊರೆಗಳು ಕಾನೂನು ಬಾಹಿರವಾಗಿದೆ. ಆದ್ದರಿಂದ ವಶಪಡಿಸಿಕೊಳ್ಳುತ್ತಿದ್ದೇವೆ ಎಂದು ಮನವರಿಕೆ ಮಾಡಿದ್ದಾರೆ. ನಂತರ ಪೊಲೀಸರು ಲಾರಿ ವಶಕ್ಕೆ ಪಡೆದಿದ್ದಾರೆ.

click me!