ಮಳೆ ಅಬ್ಬರ ಅವಘಡಗಳ ಸರಣಿ, ಮುಳ್ಳಯ್ಯನಗಿರಿಯಲ್ಲಿ ಭೂ ಕುಸಿತ , ಪ್ರವಾಸಿಗರಿಗೆ ನಿರ್ಬಂಧ

By Suvarna News  |  First Published Jul 25, 2023, 9:02 PM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರಿನ ಆರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಅವಘಡಗಳ ಸರಣಿ ಮುಂದುವರಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜು.25): ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರಿನ ಆರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಅವಘಡಗಳ ಸರಣಿ ಮುಂದುವರಿದೆ. ಅಲ್ಲಲ್ಲಿ ಗುಡ್ಡಗಳ ಕುಸಿತ, ಭೂ ಕುಸಿತದ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇಂದೂ ಸಹ ಶೃಂಗೇರಿ, ಕಳಸ, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ಹಾಗೂ ಚಿಕ್ಕಮಗಳೂರು ತಾಲ್ಲೂಕಿನಾದ್ಯಂತ ಮಳೆ ಎಡಬಿಡದೆ ಸುರಿದಿದೆ. ತುಂಗ-ಭದ್ರಾ, ಹೇಮಾವತಿ ಹಾಗೂ ಉಪ ನದಿಗಳು ಉಕ್ಕಿ ಹರಿಯುತ್ತಿವೆ. ಶೃಂಗೇರಿಯ ಶಾರದಾ ಪೀಠದ ಕಪ್ಪೆ ಶಂಕರ ದೇವಾಲಯ, ಸಂಧ್ಯಾ ವಂದನೆ ಮಂಟಪ ಇಂದೂ ಸಹ ಮುಳುಗಡೆಗೊಂಡಿದೆ. ಗುರುನಿವಾಸಕ್ಕೆ ತೆರಳುವ ಮಾರ್ಗದಲ್ಲಿ ತೆಂಗಿನ ತೋಟ ಜಲಾವೃತಗೊಂಡಿದೆ.

Tap to resize

Latest Videos

undefined

ತೋಟಗಳು ಜಲಾವೃತ
ತುಂಗಾ ನದಿ ಅಬ್ಬರಕ್ಕೆ ನದಿ ಪಾತ್ರದ ಗದ್ದೆ-ತೋಟಗಳು ಜಲಾವೃತಗೊಂಡಿವೆ. ಕೊಪ್ಪ ತಾಲ್ಲೂಕಿನ ನರಸೀಪುರ ಹಾಗೂ ಹರಿಹರಪುರ ಗ್ರಾಮಗಳಲ್ಲಿ ನೂರಾರು ಎಕರೆ ಭತ್ತದ ಗದ್ದೆಗೆ ನೀರು ನುಗ್ಗಿ ಹಾನಿ ಸಂಭವಿವಿಸಿದೆ. ಹತ್ತಾರು ಎಕರೆ ಅಡಿಕೆ ತೋಟಗಳು ಮುಳುಗಡೆಗೊಂಡಿವೆ ರೈತರು ಇದರಿಂದ ಕಂಗಾಲಾಗಿದ್ದಾರೆ.

ಬಿಜೆಪಿ ಮಾಜಿ ಶಾಸಕ‌ನ ನೇತೃತ್ವದಲ್ಲಿ ನಡೆದ ಅವೈಜ್ಞಾನಿಕ ಡಿವೈಡರ್ ತೆರವಿಗೆ ಕಾಂಗ್ರೆಸ್ ಶಾಸ

ಹೆದ್ದಾರಿಯಲ್ಲಿ ಕುಸಿತ
ಎಡಬಿಡದ ಮಳೆಯಿಂದಾಗಿ ಶೃಂಗೇರಿ-ಹೊರನಾಡು ರಸ್ತೆಯಲ್ಲಿ ಮತ್ತೆ ಭೂ ಕುಸಿತ ಸಂಭವಿಸಿದೆ. ಕಳೆದ ವರ್ಷದ ಮಳೆಗಾಲದಲ್ಲೂ ಇದೇ ಭಾಗದಲ್ಲಿ ದೊಡ್ಡ ಪ್ರಮಾಣದ ಭೂ ಕುಸಿತ ಉಂಟಾಗಿತ್ತು. ಕೊಪ್ಪ ತಾಲ್ಲೂಕಿನ ಹೆಗ್ಗಾರು ಕೂಡಿಗೆಗೆ ಗ್ರಾಮದಲ್ಲಿರುವ ಈ ಹೆದ್ದಾರಿಯು ಅರ್ಧಭಾಗದಷ್ಟು ಕುಸಿತಕ್ಕೊಳಗಾಗಿದೆ. ಇದರಿಂದ ವಾಹನ ಸವಾರರು ಆತಂಕದಲ್ಲೇ ಸಂಚರಿಸುತ್ತಿದ್ದಾರೆ.ರಸ್ತೆ ಸಂಪೂರ್ಣ ಕುಸಿತಕ್ಕೊಳಗಾದಲ್ಲಿ ಹತ್ತಾರು ಹಳ್ಳಿಗಳು ಸಂಪರ್ಕ ಕಡಿದುಕೊಳ್ಳುವುದರಿಂದ ಸಂಬಂಧ ಪಟ್ಟವರು ಕೂಡಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಕೇಳಿಬಂದಿದೆ.

ಫಾಲ್ಸ್‌ನಲ್ಲಿ ಯುವಕರ ಹುಚ್ಚಾಟ
ಉಡುಪಿಯಲ್ಲಿ ಫಾಲ್ಸ್ ಬಳಿ ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ನೀರಿನಲ್ಲಿ ಕೊಚ್ಚಿಹೋದ ಘಟನೆ ಕಣ್ಣಮುಂದಿದ್ದರೂ ನಮ್ಮ ಜಿಲ್ಲೆಯ ಜಲಪಾತಗಳ ಬಳಿ ಯುವಕರು ಮೈಮರೆತು ಹುಚ್ಚಾಟ ಮೆರೆಯುತ್ತಿದ್ದಾರೆ.ಮೂಡಿಗೆರೆ ತಾಲ್ಲೂಕಿನ ದುರ್ಗದ ಹಳ್ಳಿ ಕೊಡುಗೆ ಫಾಲ್ಸ್ನಲ್ಲಿ ರಭಸವಾಗಿ ಧುಮ್ಮಿಕ್ಕುತ್ತಿರುವ ನೀರಿನ ಮಧ್ಯೆ ನಿಂತು ಮೂರ್ನಾಲ್ಕು ಯವಕರು ಮೋಜು, ಮಸ್ತಿ ಮಾಡುತ್ತಾ ಫೊಟೋ ತೆಗೆಸಿಕೊಂಡಿದ್ದಾರೆ. ಸ್ವಲ್ಪ ಹೆಚ್ಚುಕಡಿಮೆ ಆದರೂ ಯುವಕರು ಕೊಚ್ಚಿಹೋಗುವ ಸಾಧ್ಯತೆಗಳೂ ಇದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಯುವಕರ ಹುಚ್ಚಾಟದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಹೆಚ್ಚಿದ ಮಳೆ, ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ!

ಹೆಚ್ಚಿದ ನೀರಿನ ಹರಿವು
ದತ್ತಪೀಠ, ಮುಳ್ಳಯ್ಯನಗಿರಿ ತಪ್ಪಲಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಬಯಲು ತಾಲ್ಲೂಕುಗಳ ಜೀವನಾಡಿಯಾಗಿರುವ ಮದಗದ ಕೆರೆ ಮತ್ತು ಅಯ್ಯನ ಕೆರೆಗಳಿಗೆ ನೀರಿನ ಹರಿವು ಹೆಚ್ಚಾಗಿದೆ. ಕಡೂರು ತಾಲ್ಲುಕು ಎಮ್ಮೆದೊಡ್ಡ ಭಾಗದಲ್ಲಿ ಅಡಿಕೆ ತೋಟಗಳು ನೀರಿನಿಂದ ಆವೃತಗೊಂಡಿವೆ.

ಮುಳ್ಳಯ್ಯನಗಿರಿಗೆ ನಿರ್ಬಂಧ
ಗಿರಿ ತಪ್ಪಲಿನ ರಸ್ತೆಗಳಲ್ಲಿ ಮಳೆಯಿಂದ ಗುಡ್ಡಗಳು ಜರಿಯುತ್ತಿರುವುದರಿಂದ ಸಂಚಾರಕ್ಕೆ ತೊಡಕಾಗುತ್ತಿದೆ. ಅನಾಹುತಗಳು ಸಂಭವಿಸುವ ಸಾದ್ಯತೆಗಳಿರುವುದರಿಂದ ಜಿಲ್ಲಾಡಳಿತ ಮುಳ್ಳಯ್ಯನಗಿರಿಗೆ ಪ್ರವಾಸಿಗರ ಭೇಟಿಗೆ ನಿರ್ಭಂಧ ಹೇರಿದೆ. ದತ್ತಪೀಠದ ಮಾರ್ಗದಲ್ಲಿ ಮುಳ್ಳಯ್ಯನಗಿರಿಗೆ ತಿರುವು ತೆಗೆದುಕೊಳ್ಳುವ ಸ್ಥಳದಲ್ಲೇ ಪೊಲೀಸರು ಬ್ಯಾರಿಕೇಡ್ಗಳನ್ನು ಅಳವಡಿಸಿ ಪ್ರವಾಸಿಗರನ್ನು ಅಲ್ಲೇ ತಡೆಯುತ್ತಿದ್ದಾರೆ. ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲೂ ಗುಡ್ಡ ಕುಸಿದು ಅರ್ಧದಷ್ಟು ರಸ್ತೆ ಮಣ್ಣಿನಿಂದ ಮುಚ್ಚಿ ಹೋಗಿದ್ದು, ಮಳೆ ಮುಂದುವರಿದಲ್ಲಿ ಪೀಠದ ಮಾರ್ಗ ಸಂಪೂರ್ಣ ಬಂದ್ ಆಗುವ ಭೀತಿ ಎದುರಾಗಿದೆ.

ಬೆಳಗಿನಿಂದಲೇ ಲೋಕೊಪಯೋಗಿ ಇಲಾಖೆಯು ಜೆಸಿಬಿಗಳ ಮೂಲಕ ಮಣ್ಣು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಇದರ ನಡುವೆ ಮಳೆ ನಿರಂತರವಾಗಿ ಸುರಿಯುತ್ತಲೇ ಇರುವುದರಿಂದಾಗಿ ಅನಾಹುತಗಳ ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಪೊಲೀಸರು ಮುಂಜಾಗ್ರತೆಯಾಗಿ ಮುಳ್ಳಯ್ಯನಗಿರಿಗೆ ತೆರಳದಂತೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದಾರೆ.ದತ್ತಪೀಠದ ರಸ್ತೆಯಿಂದ ಮುಳ್ಳಯ್ಯನಗಿರಿ ಕಡೆಗೆ ತಿರುವು ತೆಗೆದುಕೊಳ್ಳುವ ಜಾಗದಲ್ಲೇ ಬಾರಿಕೇಡ್ಗಳನ್ನು ಅಳವಡಿಸಿ, ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಪ್ರವಾಸಿಗರನ್ನು ಅಲ್ಲಿಯೇ ತಡೆದು ಹಿಂದಕ್ಕೆ ಕಳಿಸಲಾಗುತ್ತಿದೆ.ಇದರಿಂದ ನಿಸರ್ಗದ ಸೌಂದರ್ಯ ಸವಿಯಲೆಂದು ಬಂದಿದ್ದ ಸಾವಿರಾರು ಪ್ರವಾಸಿಗರು ನಿರಾಶರಾಗಿದ್ದಾರೆ. ಆದರೆ ಸುರಕ್ಷತೆಯ ದೃಷ್ಠಿಯಿಂದ ನಿರ್ಬಂಧ ಅನಿವಾರ್ಯ ಎಂದು ಪೊಲೀಸರು ಅವರಿಗೆ ಮನವರಿಕೆ ಮಾಡುತ್ತಿದ್ದಾರೆ.

ಮಳೆ ನಡುವೆಯೂ ಕಾಲ್ನಡಿಗೆ ತೆರಳಿದ ಪ್ರವಾಸಿಗರು : 
ಇದರ ನಡುವೆಯೂ ಬಾಗಲಕೋಟೆಯಿಂದ ಆಗಮಿಸಿದ್ದ ಪ್ರವಾಸಿಗರ ತಂಡವೊಂದು ದತ್ತಪೀಠದ ರಸ್ತೆಯ ಕ್ರಾಸ್ಬಳಿಯೇ ವಾಹನ ಬಿಟ್ಟು ಹಲವು ಕಿ.ಮೀ.ದೂರ ಸುರಿಯುವ ಮಳೆಯಲ್ಲೇ ಕಾಲ್ನಡಿಗೆಯಲ್ಲಿ ತೆರಳಿ ಗಿರಿಯ ಸೌಂದರ್ಯವನ್ನು ಆಸ್ವಾದಿಸಿದರು.ಪ್ರವಾಸಿಗರಿಗೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ನಿನ್ನೆವರೆಗೆ ಜನರಿಂದ ಗಿಜಿಗುಡುತ್ತಿದ್ದ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ ಪ್ರದೇಶಗಳಲ್ಲಿ ಇಂದು ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಮುಳ್ಳಯ್ಯನಗಿರಿಗೆ ನಿರ್ಬಂಧ ಇದ್ದ ಹಿನ್ನೆಲೆಯಲ್ಲಿ ನೂರರು ಪ್ರವಾಸಿಗರು ಬೇರೆ ಬೇರೆ ಕಡೆಗೆ ತೆರಳಿದರು. ಇದರಿಂದ ಉಳಿದ ಪ್ರವಾಸಿ ತಾಣಗಳು ತುಂಬಿ ತುಳುಕಿದವು. ಹೊನ್ನಮ್ಮನಹಳ್ಳ, ಝರಿ ಫಾಲ್ಸ್, ಮಾಣಿಕ್ಯಧಾರಗಳಲ್ಲಿ ಪ್ರವಾಸಿಗರ ಕಲರವ ಕಂಡುಬಂತಾದರೂ ಕೆಲವು ಯುವಕರು ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ ಕ್ಲಿಕ್ಕಿಸುತ್ತಾ, ಕೇಕೆ ಹಾಕುತ್ತಾ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದ ಬಗ್ಗೆ ಸ್ಥಳೀಯರಿಂದ ಆಕ್ಷೇಪವೂ ವ್ಯಕ್ತವಾಯಿತು.

click me!