ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತ: ಬೆಂಗ್ಳೂರಲ್ಲಿ ಧಾರಾಕಾರ ಮಳೆ

By Kannadaprabha NewsFirst Published Nov 2, 2022, 7:00 AM IST
Highlights

ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಸಂಜೆ ಮಳೆ ಶುರು, ರಾತ್ರಿವರೆಗೂ ಜಿಟಿ ಜಿಟಿ ಮಳೆ

ಬೆಂಗಳೂರು(ನ.02):  ನಗರದಲ್ಲಿ ಕಳೆದ ಕೆಲವು ದಿನಗಳ ಕಾಲ ಬಿಡುವು ನೀಡಿದ ಮಳೆರಾಯನ ಆಗಮನ ಮತ್ತೆ ಆಗಿದ್ದು, ನಗರದಾದ್ಯಂತ ಮಂಗಳವಾರ ಧಾರಾಕಾರ ಮಳೆ ಸುರಿದಿದೆ. ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಉಂಟಾಗಿರುವ ಪರಿಣಾಮ ನಗರದಲ್ಲಿ ಮತ್ತೆ ಮಳೆ ಆರಂಭಗೊಂಡಿದೆ. ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ಉಂಟಾಗಿತ್ತು. ಸಂಜೆ 4 ಗಂಟೆಯ ಸುಮಾರಿಗೆ ಮಳೆ ಆರಂಭವಾಯಿತು. ರಾತ್ರಿವರೆಗೂ ಜಿಟಿ ಜಿಟಿ ಮಳೆ ಮುಂದುವರೆದಿತ್ತು.

ಅರಮನೆ ರಸ್ತೆ, ಶೇಷಾದ್ರಿ ರಸ್ತೆ, ಕೆ.ಆರ್‌.ರಸ್ತೆ, ಮೆಜೆಸ್ಟಿಕ್‌, ಶಿವಾಜಿ ನಗರ, ರೇಸ್‌ ಕೋರ್ಸ್‌ ರಸ್ತೆ, ಶಿವಾನಂದ ರೈಲ್ವೆ ಅಂಡರ್‌ ಪಾಸ್‌, ಕೆ.ಆರ್‌.ಮಾರುಕಟ್ಟೆ, ಬಳ್ಳಾರಿ ರಸ್ತೆ, ಎಂಜಿ ರಸ್ತೆ, ಆನಂದ್‌ ರಾವ್‌ ವೃತ್ತ, ಮಾಗಡಿ ರಸ್ತೆ, ಓಕಳಿಪುರ ಜಂಕ್ಷನ್‌ ಸೇರಿದಂತೆ ಹಲವು ಕಡೆ ಮಳೆಯಿಂದ ವಾಹನ ಸಂಚಾರದಲ್ಲಿ ದಟ್ಟಣೆ ಉಂಟಾಯಿತು.

ಈಶಾನ್ಯ ಮುಂಗಾರು ಹೊಡೆತ, ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ 3 ದಿನ ಭಾರಿ ಮಳೆ!

ನಗರದ ವಿವಿಧ ರಸ್ತೆ ಮತ್ತು ಜಂಕ್ಷನ್‌ಗಳಲ್ಲಿ ಭಾರೀ ಪ್ರಮಾಣ ನೀರು ಶೇಖರಣೆಗೊಂಡ ಪರಿಣಾಮ ವಾಹನ ಸವಾರರು ಪರದಾಡಿದರು. ಮಹದೇವಪುರ, ಬೊಮ್ಮನಹಳ್ಳಿ, ಪೂರ್ವ ವಲಯ, ಹೊರಮಾವು, ಬಾಣಸವಾಡಿ, ಕೆಆರ್‌ಪುರ ಸೇರಿದಂತೆ ವಿವಿಧ ಕಡೆ ಮರ ಹಾಗೂ ಮರ ಕೊಂಬೆ ಧರೆಗುರುಳಿದ ವರದಿಯಾಗಿದೆ.

ಹೊರಮಾವಿನಲ್ಲಿ 3.45 ಸೆಂ.ಮೀ.

ಬೆಂಗಳೂರಿನಲ್ಲಿ ಮಂಗಳವಾರ ಸರಾಸರಿ 0.6 ಸೆಂ.ಮೀ ಮಳೆಯಾಗಿದೆ. ಮಹದೇವಪುರದ ಹೊರಮಾವಿನಲ್ಲಿ ಅತಿ ಹೆಚ್ಚು 3.45 ಸೆಂ.ಮೀ. ಮಳೆಯಾದ ವರದಿಯಾಗಿದೆ. ಉಳಿದಂತೆ, ಬಾಣಸವಾಡಿಯಲ್ಲಿ 2.65 ಸೆಂ.ಮೀ, ಕೆ.ಆರ್‌ಪುರ 1.9, ಎಚ್‌ಎಎಲ್‌ ವಿಮಾನ ನಿಲ್ದಾಣ ಮತ್ತು ದೊಡ್ಡಾನೆಕುಂದಿಯಲ್ಲಿ ತಲಾ 1.85, ಕಮ್ಮನಹಳ್ಳಿಯಲ್ಲಿ 1.8, ದೊಮ್ಮಲೂರು ಮತ್ತು ಕೋನೇನ ಆಗ್ರಹಾರದಲ್ಲಿ ತಲಾ 1.7, ಹೊಯ್ಸಳ ನಗರ 1.6, ವನ್ನಾರ್‌ ಪೇಟೆ 1.55, ಯಲಹಂಕ 1.4, ಹೆಮ್ಮಿಗೆಪುರ 1.35, ಪುಲಕೇಶಿನಗರ 1.3, ಬೆಳ್ಳಂದೂರು ಮತ್ತು ಬೊಮ್ಮನಹಳ್ಳಿಯಲ್ಲಿ 1.25, ಮಾರತ್‌ಹಳ್ಳಿ ಮತ್ತು ಎಚ್‌ಎಸ್‌ಆರ್‌ನಲ್ಲಿ ತಲಾ 1.2 ಸೆಂ.ಮೀ ಮಳೆಯಾದ ವರದಿಯಾಗಿದೆ.
 

click me!