'ಬಿರುಗಾಳಿ ಸಹಿತ ಭಾರೀ ಮಳೆ'

By Kannadaprabha NewsFirst Published Sep 2, 2020, 12:08 PM IST
Highlights

ಹವಾಮಾನ ಇಲಾಖೆ ನೀಡಿದ ಮುನ್ನೆಚ್ಚರಿಕೆಯಂತೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. 

ಮಳವಳ್ಳಿ (ಸೆ.01):  ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆ ಸೋಮವಾರ ಮಧ್ಯರಾತ್ರಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ತೆಂಗು, ಕಬ್ಬು ಸೇರಿದಂತೆ ಅಪಾರ ನಷ್ಟವಾಗಿರುವ ಘಟನೆ ತಾಲೂಕಿನ ಕಲ್ಲುವೀರನಹಳ್ಳಿ, ಕಂದೇಗಾಲ ಸೇರಿದಂತೆ ಮತ್ತಿತಾಳೇಶ್ವರ ದೇವಸ್ಥಾನದ ಸುತ್ತಮುತ್ತಲ ಗ್ರಾಮಗಳಲ್ಲಿ ನಡೆದಿದೆ.

ತಾಲೂಕಿನ ಕಂದೇಗಾಲ-ಕಲ್ಲುವೀರನಗಳ್ಳಿ ಮಧ್ಯೆ ನೆಲೆಸಿರುವ ಮತ್ತಿತಾಳೇಶ್ವರ ದೇವಸ್ಥಾನದ ಒಂದು ಕಿಲೋ ವ್ಯಾಪ್ತಿಯಲ್ಲಿಯೇ ಸುಮಾರು 150ಕ್ಕೂ ಹೆಚ್ಚು ತೆಂಗು, 150ಕ್ಕೂ ಹೆಚ್ಚು ವಿವಿಧ ಜಾತಿಯ ಮರಗಳು, 2 ಟ್ರಾನ್ಸ್‌ ಫಾರ್ಮರ್‌, 2 ಮನೆಯ ಮೇಲ್ಚಾವಣೆ ಕುಸಿದು ಲಕ್ಷಾಂತರ ರು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ನಾಳೆಯಿಂದ 3 ದಿನ ಭಾರೀ ಮಳೆ ಮುನ್ಸೂಚನೆ : ಎಲ್ಲೆಲ್ಲಿ?..

ಮೋಳೇದೊಡ್ಡಿ ಗ್ರಾಮದ ಕೋಳೀರೇಗೌಡರಿಗೆ ಸೇರಿದ 20 ತೆಂಗು, ಸುಬ್ಬೇಗೌಡ 4 ಮರಿಗೌಡ 15,ರಮೇಶ್ 3, ಮುನಿಸಿದ್ದೇಗೌಡ 8, ನಾಗರಾಜು 8, ಲಿಂಗರಾಜು 4, ರೇವಣ್ಣ 8, ಸಂಪತ್ತು 6 ನಾಗಣ್ಣ 2 ಮರ ಸೇರಿ150 ಕ್ಕೂ ಹೆಚ್ಚು ತೆಂಗಿನ ಮರಗಳು ನೆಲ ಕಚ್ಚಿವೆ. ಜೊತೆಗೆ 20 ಎಕರೆ ಕಬ್ಬು ನಾಶವಾಗಿದೆ. ರೈತರ ಬಾಳಿಗೆ ಕಲ್ಪವೃಕ್ಷದಂತಿದ್ದ ತೆಂಗಿನ ಮರಗಳು ಗಾಳಿ ಮಳೆಗೆ ನೆಲಕ್ಕೆ ಉರುಳಿದಿರುವುದು ರೈತರಿಗೆ ನುಂಗಲಾಗದ ತುತ್ತಾಗಿ ಪರಿಣಾಮಿಸಿದೆ. 

ಮಳೆಗಾಲದಲ್ಲಿ ಬೆಚ್ಚನೆ ಹಿತದ ಜೊತೆ ಇಮ್ಯುನಿಟಿ ಹೆಚ್ಚಿಸಲು ನಿಮ್ಮ ಟೀ ಹೀಗಿರಲಿ...

ಮಕ್ಕಳು ಪಟ್ಟಣಕ್ಕೆ ವಲಸೆ ಹೋದ ನಂತರ ತೆಂಗಿನ ಮರಗಳೇ ಜೀವನಕ್ಕೆ ಆಸರೆಯಾಗಿತ್ತು, ಆದರೆ ಇದ್ದಕ್ಕಿಂದಂತೆ ರಾತ್ರಿ ಭಾರಿ ಮಳೆಬಂದು ತೆಂಗಿನ ಮರಗಳು ಬುಡಸಹಿತ ಬಿದ್ದಿದೆ. ಮುಂದಿನ ಜೀವನ ಆಧಾರಕ್ಕೆ ಏನು ಮಾಡಬೇಕೆಂಬುವುದು ಕಾಣದಂತಾಗಿದೆ ಎಂದು ರೈತ ಕೋಳೀರೇಗೌಡ ಕಣ್ಣಿರು ಹಾಕಿದರು. ಕಂದೇಗಾಲ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲಿಂಗರಾಜು ಮಾತನಾಡಿ, ಕಳೆದ ರಾತ್ರಿ ಕೇವಲ ಒಂದು ಕೀಲೋ ವ್ಯಾಪ್ತಿಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಬೀರುಗಾಳಿ ಸಮೇತ ಸುರಿದ ಭಾರಿಮಳೆಯಿಂದಾಗಿ ಅಪಾರ ನಷ್ಟವಾಗಿದೆ. ಈಗಾಗಲೇ ರೈತರು ಸಂಕಷ್ಟದ ಬದುಕು ಸಾಗಿಸುತ್ತಿರುವ ನಡುವೆ ಬೆಳೆ ನಷ್ಟವಾಗಿರುವುದು ನೋವಿನ ಸಂಗತಿ. ನಷ್ಟಕೊಳಗಾಗಿರುವ ರೈತರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಪಟ್ಟಣದ ಗಂಗಾಮತ ಬೀದಿಯ ಅಂಬಿಗರ ಚೌಡಯ್ಯ ಬೀದಿಯ ಚಿಕ್ಕಚೌಡಯ್ಯನಮಗ ನಂಜುಂಡಯ್ಯ ಎಂಬುವವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ಮತ್ತಿತಾಳೇಶ್ವರ ದೇವಸ್ಥಾನದ ಆವರಣದಲ್ಲಿರುವ ಸೇವಿಂಗ… ಅಂಗಡಿ ಮತ್ತು ಹೋಟೆಲ್‌ ಮೇಲ್ಚಾವಣೆ ಹಾರಿಹೋಗಿದೆ.

click me!