ರಾಜ್ಯದ ಬೇಡಿಕೆಯ ಶೇ.70 ರಷ್ಟು ಕೊಪ್ಪಳ, ಬಳ್ಳಾರಿಯಿಂದಲೇ ಪೂರೈಕೆ| ಸ್ಥಳೀಯವಾಗೇ ಆಕ್ಸಿಜನ್ ಉತ್ಪಾದಿಸಿದರೂ ಖಾಸಗಿ ಆಸ್ಪತ್ರೆಯಲ್ಲಿ ಅಭಾವ| ಖಾಸಗಿ ಆಸ್ಪತ್ರೆಗೆ ಪೂರೈಕೆ ಮಾಡುವ ಆಕ್ಸಿಜನ್ ದರ ಮಾತ್ರ ನಾಗಲೋಟದಲ್ಲಿ ಏರಿಕೆ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಸೆ.02): ರಾಜ್ಯದ ಬಹುತೇಕ ಭಾಗಗಳಿಗೆ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯಿಂದಲೇ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಶೇ. 70 ರಷ್ಟು ಬೇಡಿಕೆಯನ್ನು ಇಲ್ಲಿಂದಲೇ ಈಡೇರಿಸಲಾಗುತ್ತದೆ. ಆದರೂ ಕೊಪ್ಪಳ ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಗಂಭೀರವಾಗುತ್ತಿದೆ.
undefined
ಅಗತ್ಯ ಆಕ್ಸಿಜನ್ ಇದ್ದರೂ ಅದನ್ನು ವರ್ಗಾಯಿಸಲು ಬೇಕಾಗುವ ವಾಹನಗಳ ಸಮಸ್ಯೆ ಇದೆ ಎನ್ನುವುದು ಪೂರೈಕೆ ಮಾಡುವ ಏಜೆನ್ಸಿಗಳ ವಾದ. ಅಗತ್ಯ ವಾಹನಗಳನ್ನು ಏಕಾಏಕಿ ತಯಾರು ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ, ಸಮಸ್ಯೆ ಬಿಗಡಾಯಿಸುತ್ತಿದೆ ಎನ್ನುತ್ತಾರೆ.
ದಿನೇ ದಿನೇ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆಯೂ ಅಧಿಕವಾಗುತ್ತಿದೆ ಹಾಗೂ ಖಾಸಗಿಯಾಗಿಯೂ ಹೊಸ ಹೊಸ ಕೋವಿಡ್ ಆಸ್ಪತ್ರೆಗಳು ತಲೆ ಎತ್ತುತ್ತಿದ್ದು ಇಲ್ಲಿ ಬಹುತೇಕ ಬೆಡ್‌ಗಳಿಗೆ ಆಕ್ಸಿಜನ್ ಸಂಪರ್ಕ ಇದೆ. ಕಳೆದ 15 ದಿನದಲ್ಲಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಬಳಕೆ ಪ್ರಮಾಣ ದುಪ್ಪಟ್ಟಾಗಿದೆ. ಹೀಗಾಗಿ, ಇರುವ ಮೂರು ಏಜೆನ್ಸಿಗಳಿಂದ ಆಕ್ಸಿಜನ್ ಪೂರೈಕೆ ಅಸಾಧ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯಕ್ಕೆ ಬರಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ?
ಏರುತ್ತಿರುವ ದರ:
ಸರ್ಕಾರ ಆಕ್ಸಿಜನ್ ಬೆಡ್‌ಗಳಿಗೆ ದರ ನಿಗದಿ ಮಾಡಿದೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸ್ಸು ಪಡೆದ ರೋಗಿಗಳ ಚಿಕಿತ್ಸಾ ವೆಚ್ಚವನ್ನೂ ನಿಗದಿ ಪಡಿಸಿದೆ. ಆದರೆ ಆಕ್ಸಿಜನ್ ದರದ ಮೇಲೆ ಯಾವುದೇ ಕಡಿವಾಣ ಹಾಕಿಲ್ಲ. ಕಳೆದ 15 ದಿನದಲ್ಲಿ ಮೂರು ಬಾರಿ ಆಕ್ಸಿಜನ್ ದರ ಏರಿಕೆಯಾಗಿದೆ. ಆರಂಭದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಕೆಜಿಗೆ . 23 ದರ ನಿಗದಿ ಮಾಡಲಾಗಿತ್ತು. ಅದನ್ನು . 26ಕ್ಕೆ ಏರಿಕೆ ಮಾಡಲಾಯಿತು. ಇದು ಟೆಂಡರ್ ನಿಯಮಾವಳಿ ಆಧರಿಸಿದೆ.
ಆದರೆ, ಖಾಸಗಿ ಆಸ್ಪತ್ರೆಗೆ ಪೂರೈಕೆ ಮಾಡುವ ಆಕ್ಸಿಜನ್ ದರ ಮಾತ್ರ ನಾಗಲೋಟದಲ್ಲಿ ಏರಿಕೆಯಾಗುತ್ತಿದೆ. ಪ್ರಾರಂಭದಲ್ಲಿ . 25ಕ್ಕೆ ಪೂರೈಕೆ ಮಾಡುತ್ತಿದ್ದ ಎಜೆನ್ಸಿಗಳು ನಂತರ 30 ನಿಗದಿ ಮಾಡಿದವು. ಇದೀಗ . 35ಕ್ಕೆ ಪೂರೈಸುತ್ತಿದ್ದಾರೆ. ಇನ್ನು ತುರ್ತು ಅಗತ್ಯಕ್ಕೆ ಅನುಗುಣವಾಗಿ ದರ ಏರಿಕೆ ಮಾಡುತ್ತಲೇ ಇದ್ದಾರೆ. ಕೆಲವೊಂದು ಬಾರಿ . 40, 45ಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಆಸ್ಪತ್ರೆಗಳು ದೂರುತ್ತಿವೆ.
ಸರ್ಕಾರ ಆಕ್ಸಿಜನ್ ಬೆಡ್‌ಗೆ ಇಷ್ಟೇ ತೆಗೆದುಕೊಳ್ಳಬೇಕು ಎನ್ನುವ ಷರತ್ತು ವಿಧಿಸುತ್ತದೆಯಾದರೂ ಅದಕ್ಕೆ ಬೇಕಾಗುವ ಪರಿಕರ, ಆಕ್ಸಿಜನ್ ಮತ್ತು ಮಾತ್ರೆಗಳ ಮೇಲಿನ ದರವನ್ನು ಯಾಕೆ ನಿಯಂತ್ರಣ ಮಾಡುವುದಿಲ್ಲ ಎನ್ನುವುದು ಖಾಸಗಿ ಆಸ್ಪತ್ರೆಯ ಮಾಲಿಕರ ಪ್ರಶ್ನೆ. ಆಕ್ಸಿಜನ್ ದರ ಈ ರೀತಿ ಏರಿಕೆಯಾಗುತ್ತಿದ್ದರೆ ಹೇಗೆ ನಿಭಾಯಿಸಬೇಕು ಎಂದು ಕೇಳುತ್ತಿದ್ದಾರೆ.
ಸರ್ಕಾರ ಆಕ್ಸಿಜನ್ ದರ ಏರಿಕೆಯ ಮೇಲೆ ನಿಯಂತ್ರಣ ಹೇರಬೇಕು ಮತ್ತು ನಿರಂತರವಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಆಮ್ಲಜನಕ ಸಿಗದೇ ಯಾವೊಬ್ಬ ರೋಗಿ ಸಾವನ್ನಪ್ಪುವ ಸ್ಥಿತಿ ನಿರ್ಮಾಣವಾಗಬಾರದು ಎಂಬುದು ಪ್ರಜ್ಞಾವಂತರ ಒತ್ತಾಯ.
ಆಕ್ಸಿಜನ್ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಮತ್ತು ಸ್ಥಳೀಯವಾಗಿಯೇ ಉತ್ಪಾದನೆ ಮಾಡುವವರು ಮೊದಲು ಸ್ಥಳೀಯ ಬೇಡಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸಿ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ತಿಳಿಸಿದ್ದಾರೆ.
ನಮಗೆ ಈಗಿರುವ ರೋಗಿಗಗಳಿಗೆ ಆಕ್ಸಿಜನ್ ಸಮಸ್ಯೆ ಇಲ್ಲವಾದರೂ ಪರಿಸ್ಥಿತಿ ಬಿಗಡಾಯಿಸುತ್ತಿರುವುದರಿಂದ ಈಗಲೇ ಇತ್ಯರ್ಥ ಮಾಡಬೇಕು. ಆಕ್ಸಿಜನ್ ತೀರಾ ಅಗತ್ಯವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಖಾಸಗಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.