ಜಿಲ್ಲೆಯಲ್ಲಿ ಮತ್ತೆ ಮಳೆಯ ಅರ್ಭಟ ಮುಂದುವರೆದಿದ್ದು ಅಪಾರ ಬೆಳೆ ನಷ್ಟದ ಜೊತೆಗೆ ಸಾವು ನೋವು ಸಂಭವಿಸಿ ಜಿಲ್ಲೆಯ ಜನರನ್ನು ತೀವ್ರ ಹೈರಾಣಾಗಿಸಿದೆ. ಮಳೆ ಅರ್ಭಟಕ್ಕೆ ಕೂಲಿ ಕಾರ್ಮಿಕನೊಬ್ಬ ನದಿಯಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾನೆ.
ಚಿಕ್ಕಬಳ್ಳಾಪುರ (ಅ.16): ಜಿಲ್ಲೆಯಲ್ಲಿ ಮತ್ತೆ ಮಳೆಯ ಅರ್ಭಟ ಮುಂದುವರೆದಿದ್ದು ಅಪಾರ ಬೆಳೆ ನಷ್ಟದ ಜೊತೆಗೆ ಸಾವು ನೋವು ಸಂಭವಿಸಿ ಜಿಲ್ಲೆಯ ಜನರನ್ನು ತೀವ್ರ ಹೈರಾಣಾಗಿಸಿದೆ. ಮಳೆ ಅರ್ಭಟಕ್ಕೆ ಕೂಲಿ ಕಾರ್ಮಿಕನೊಬ್ಬ ನದಿಯಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾನೆ.
ಜಿಲ್ಲೆಯ ಗೌರಿ ಬಿದನೂರು ತಾಲೂಕಿನ ಇಡಗೂರು ಬಳಿ ಶುಕ್ರವಾರ ರಾತ್ರಿ ಕುಮದ್ವತಿ ನದಿ (River) ಸೇತುವೆ ಮೇಲೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರಿಬ್ಬರು (Labour) ಕೊಚ್ಚಿ ಹೋಗಿದ್ದು, ಆ ಪೈಕಿ ಒಬ್ಬನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮತ್ತೊಬ್ಬ ನೀರುಪಾಲಾಗಿದ್ದಾನೆ.
ಮೃತ ಶಿರಾ ಮೂಲದ ಬಸವರಾಜ್
ಕುಮದ್ವತಿಯಲ್ಲಿ ಕೊಚ್ಚಿ ಹೋದ ಇಬ್ಬರು ಕಾರ್ಮಿಕರ ಪೈಕಿ ಗೌರಿಬಿದನೂರಿನ ಆನೂಡಿ ಗ್ರಾಮದ ಪ್ರಶಾಂತ್ ಎಂಬಾತನನ್ನು ಸ್ಥಳೀಯರು ಹಾಗೂ ಆಗ್ನಿಶಾಮಕ ಠಾಣೆ ಸಿಬ್ಬಂದಿ ಸತತ ಕಾರ್ಯಚರಣೆಯಿಂದ ರಕ್ಷಿಸಿದ್ದಾರೆ. ಮತ್ತೊಬ್ಬ ತುಮಕೂರು ಜಿಲ್ಲೆಯ ಶಿರಾ ಮೂಲದ ಬಸವರಾಜ್ ಎಂಬಾತನ ಮೃತ ದೇಹ ಶನಿವಾರ ಬೆಳಗ್ಗೆ ಪತ್ತೆಯಾಗಿದೆ.
ಶುಕ್ರವಾರ ರಾತ್ರಿ ಪ್ರಶಾಂತ್ ಹಾಗೂ ಬಸವರಾಜ್ ಇಬ್ಬರು ಬೈಕ್‌ನಲ್ಲಿ ಸಂಚರಿಸುವ ವೇಳೆ ಭಾರೀ ಮಳೆಯಿಂದ ಕುಮದ್ವತಿ ನದಿ ನೀರು ಉಕ್ಕಿ ಹರಿಯುವಾಗ ಇಡಗೂರು ಬಳಿ ಸೇತುವೆ ದಾಟುವ ವೇಳೆ ಬೈಕ್‌ನಲ್ಲಿದ್ದ ಪ್ರಶಾಂತ್ ಹಾಗೂ ಬಸವರಾಜ್ ಕೊಚ್ಚಿಕೊಂಡು ಹೋಗಿದ್ದಾರೆ.
ಒಬ್ಬ ಕಾರ್ಮಿನ ರಕ್ಷಣೆ
ವಿಷಯ ತಿಳಿದು ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಳೀಸರು ಹಾಗೂ ಆಗ್ನಿಶಾಮಕ ಠಾಣೆ ಸಿಬ್ಬಂದಿ ನೆರವಿನೊಂದಿಗೆ ಸುಮಾರು 3 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಪ್ರಶಾಂತ್ ಎಂಬಾತನನ್ನು ರಕ್ಷಿಸಿದ್ದಾರೆ. ಆದರೆ ಶಿರಾ ಮೂಲದ ಬಸವರಾಜ್‌ರನ್ನು ಪತ್ತೆ ಮಾಡಲು ಆಗ್ನಿಶಾಮಕ ಠಾಣೆ ಸಿಬ್ಬಂದಿ ನಡೆಸಿದ ಕಾರ್ಯಕ್ಕೆ ಫಲ ಸಿಕ್ಕಿರಲಿಲ್ಲ. ಶನಿವಾರ ಬೆಳಗ್ಗೆ ಕೂಡ ಬಸವರಾಜ್‌ನನ್ನು ಹುಡುಕಾಟ ನಡೆಸುವಾಗ ಆತನ ಶವ ಜಾಲಿ ಮರದ ಗಿಡದ ಬಳಿ ಪತ್ತೆಯಾಗಿದೆ. ಬಸವರಾಜ್ ಕೂಲಿ ಕಾರ್ಮಿಕನೆಂದು ತಿಳಿದು ಬಂದಿದೆ.
ಪಾನಮತ್ತರಾಗಿದ್ದ ಕಾರ್ಮಿಕರು
ಇಡಗೂರು ಬಳಿ ಇರುವ ರಸ್ತೆಯ ಮೇಲು ಸೇತುವೆ ವ್ಯಾಪಕ ಮಳೆಯಿಂದ ಕುಮದ್ವತಿ ನದಿಯು ಅಪಾಯ ಮಟ್ಟಮೀರಿ ಹರಿಯುತ್ತಿದ್ದರೂ ಪಾನಮತ್ತರಾಗಿದ್ದ ಈ ಇಬ್ಬರು ಯುವಕರು ಬೈಕ್‌ನಲ್ಲಿ ತೆರಳುವಾಗ ಈ ಘಟನೆ ನಡೆದಿದೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇಡಗೂರು ಜಾಲಹಳ್ಳಿ ರಸ್ತೆ ಬಂದ್
ಮಳೆಯಿಂದ ಕುಮದ್ವತಿ ನದಿಯು ದೊಡ್ಡ ಪ್ರಮಾಣದಲ್ಲಿ ಹರಿಯುತ್ತಿರುವ ಪರಿಣಾಮ ಗೌರಿಬಿದನೂರು ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಇಡಗೂರು ಜಾಲಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು ಸುಮಾರು ಆರೇಳು ಗ್ರಾಮಗಳಿಗೆ ಸಂಪರ್ಕ ಕಡಿದು ವಾಹನ ಸವಾರರು, ಗ್ರಾಮಸ್ಥರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ಜೋಳ, ರಾಗಿ, ವಾಣಿಜ್ಯ ಬೆಳೆ ನಾಶ
ಜಿಲ್ಲೆಯಲ್ಲಿ ಸತತ ಎರಡು, ಮೂರು ದಿನಗಳಿಂದ ವ್ಯಾಪಕ ಮಳೆ ಆಗುತ್ತಿರುವ ಪರಿಣಾಮ ಒಂದಡೆ ಜಿಲ್ಲೆಯ ಜೀವ ನದಿಗಳಾದ ಉತ್ತರ ಪಿನಾಕಿನಿ, ಕುಮದ್ವತಿ ನದಿಗಳು ತುಂಬಿ ಹರಿಯುತ್ತಿದ್ದು ಮತ್ತೊಂದಡೆ ಮಳೆ ನೀರು ರೈತರ ಹೊಲ, ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ರೈತರ ಜೋಳ, ರಾಗಿ ಹಾಗೂ ವಾಣಿಜ್ಯ ಬೆಳೆಗಳು ನಾಶವಾಗಿ ರೈತರಿಗೆ ಲಕ್ಷಾಂತರ ರು, ನಷ್ಟಸಂಭವಿಸಿದೆ. ವಿಶೇಷವಾಗಿ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ತಾಲೂಕುಗಳಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳು ಮಳೆಗೆ ಮಣ್ಣು ಪಾಲಾಗಿವೆ.
ಕುಮದ್ವತಿ ನದಿಯಲ್ಲಿ ಕೊಚ್ಚಿಹೋದ ಕೂಲಿ ಕಾರ್ಮಿಕ
ಜಿಲ್ಲಾದ್ಯಂತ ಮುಂದುವರೆದ ವರ್ಷಧಾರೆ
ಅಪಾರ ಪ್ರಮಾಣದ ಬೆಳೆ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ