ಬೆಳಗಾವಿಯಲ್ಲಿ ಭಾರೀ ಮಳೆ : ಶಾಲಾ - ಕಾಲೇಜುಗಳಿಗೆ ರಜೆ

By Web DeskFirst Published Jul 31, 2019, 9:01 AM IST
Highlights

ಬೆಳಗಾವಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಕಾರಣದಿಂದ ಜಿಲ್ಲೆಯ ಶಾಲಾ - ಕಾಲೇಜುಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಲಾಗಿದೆ. 

ಬೆಂಗಳೂರು [ಜು.31]: ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಇನ್ನು ಉತ್ತರ ಕನ್ನಡ, ಧಾರವಾಡ, ಕೊಡಗು, ಶಿವಮೊಗ್ಗ ಜಿಲ್ಲೆ ಗಳಲ್ಲಿ ಮಳೆಯು ತಗ್ಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಹೆಚ್ಚು ಮಳೆ ಆಗುತ್ತಿರುವುದರಿಂದ ಕೃಷ್ಣ ನದಿಗೆ 2 ಲಕ್ಷ ಕ್ಯುಸೆಕ್ ನೀರು ಹರಿದುಬರುತ್ತಿದೆ. ಪ್ರವಾಹದಿಂದಾಗಿ ೮ ಸೇತುವೆ ಮುಳುಗಿವೆ, ಮತ್ತೊಂದು ಸೇತುವೆ ಕೊಚ್ಚಿ ಹೋಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಶಾಲಾ ಕಾಲೇಜು ಗಳಿಗೆ ರಜೆ ಘೋಷಿಸಲಾಗಿದೆ.ಧಾರವಾಡದಲ್ಲಿ 5 ಮನೆಗಳು ಕುಸಿದಿವೆ. 

ತುಂಬಿ ಹರಿಯುತ್ತಿದೆ ಕೃಷ್ಣಾ: ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ 6 ಸೇತುವೆಗಳು ಜಲಾವೃತ ಗೊಂಡು ಸಂಪರ್ಕ ಕಡಿತಗೊಂಡಿವೆ. ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ ನಿಂದ ಕೃಷ್ಣಾ ನದಿಗೆ  1.09 ಲಕ್ಷ ಕ್ಯುಸೆಕ್, ಹಿಪ್ಪರಗಿ ಬ್ಯಾರೇಜ್‌ನಿಂದ 97 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಹರಿಬಿಡಲಾಗುತ್ತಿದೆ. ವೇದಗಂಗಾ, ದೂಧಗಂಗಾ ಹಾಗೂ ಪಂಚಗಂಗಾ ನದಿಗಳ ಮೂಲಕವೂ ಕೃಷ್ಣಾ ನದಿಗೆ ಹೆಚ್ಚು ನೀರು ಹರಿದು ಬರುತ್ತಿದೆ. 

ಮುಂದಿನ 2 - 3  ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಂಭವ ಇದ್ದು, ಜು.31 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿ ನಗರದಲ್ಲಿಯೂ ಎಡಬಿಡದೇ ಧಾರಾಕಾರ ವಾಗಿ ವರುಣನ ಆರ್ಭಟವಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಸಮರ್ಥ ನಗರದಲ್ಲಿ ಸಣ್ಣ ನಾಲಾ ಒಡೆದಿದ್ದು, ಆ ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದೆ. 

click me!