ಬೆಂಗಳೂರು (ಅ.06): ಚಿಕ್ಕಮಗಳೂರು (chikkamagaluru) ಸೇರಿ ರಾಜ್ಯದ ಐದು ಜಿಲ್ಲೆಗಳಲ್ಲಿ ಸೋಮವಾರ ರಾತ್ರಿಯಿಂದೀಚೆಗೆ ಭರ್ಜರಿ ಮಳೆಯಾಗಿದ್ದು, ಕಲಬುರಗಿಯಲ್ಲಿ ಸಿಡಿಲು ಬಡಿದು ಕೂಲಿಕಾರ್ಮಿಕರಿಬ್ಬರು ಮೃತಪಟ್ಟಿದ್ದಾರೆ.
ಚಿಕ್ಕಮಗಳೂರಿನಲ್ಲಿ ಭರ್ಜರಿ ಮಳೆಯಾಗಿದ್ದು (Rain), ಕಲಬುರಗಿ, ದಾವಣಗೆರೆ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲೂ ಉತ್ತಮ ಮಳೆ ಸುರಿದಿದೆ. ಹಲವೆಡೆ ಬೆಳೆಗಳಿಗೆ ಹಾನಿಯಾಗಿದೆ. ಕಲಬುರಗಿಯಲ್ಲಿ ಸಿಡಿಲು ಬಡಿದು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾದ ರಾಜ ಅಹ್ಮದ್ ಹಾಜಿ ಸಾಬ (42), ಜಬ್ಬರ್ ಮುನ್ಸಿಸಾಬ್ (55) ಮೃತಪಟ್ಟವರು. ಇವರೊಂದಿಗೆ ಕೆಲಸ ಮಾಡುತ್ತಿದ್ದ ಮತ್ತಿಬ್ಬರಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರೀ ಮಳೆಗೆ ತತ್ತರಿಸಿದ ಬೆಂಗಳೂರು..! ಮನೆಯೊಳಗೆಲ್ಲ ನೀರು
ಕೊಚ್ಚಿಹೋದ ತೋಟ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿದ್ದ ಮಳೆ ಮಂಗಳವಾರವೂ ಮುಂದುವರಿದಿದೆ. ಕಳಸ ತಾಲೂಕಿನ ಮುಳ್ಳೋಡಿ ಗ್ರಾಮದಲ್ಲಿ ಗುಡ್ಡದ ನೀರು ಕಿರುಸೇತುವೆ (Bridge) ಮೇಲೆ ನೀರು ಹರಿದ ಪರಿಣಾಮ ಒಂದೂವರೆ ಎಕರೆ ಕಾಫಿ ತೋಟಕ್ಕೆ ಹಾನಿಯಾಗಿದೆ. ಕೆಲವೆಡೆ ಒಣಗಲಿಟ್ಟಿದ್ದ ಬೆಳೆಗಳಿಗೆ ಹಾನಿಯಾಗಿದೆ. ಕಲಬುರಗಿಯಲ್ಲೂ ಸುಮಾರು ಒಂದು ಗಂಟೆ ಕಾಲ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬೆಳಹಾನಿಯಾಗಿದೆ.
ಭಾರಿ ಮಳೆಗೆ ಕೊಚ್ಚಿ ಹೋದ ಬಾಳೆ, ಅಡಕೆ ಕೃಷಿ
ತಾಲೂಕಿನ ವಿವಿಧೆಡೆ ಸೋಮವಾರ ಸಂಜೆ ಏಕಾಏಕಿ ಗುಡುಗು ಸಹಿತ ಭಾರಿ ಮಳೆ ಸುರಿಯಿತು. ಅದರಲ್ಲೂ ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು ಸೇರಿದಂತೆ ಮಡಪ್ಪಾಡಿ ಮೊದಲಾದ ಕಡೆ ಭಾರಿ ಮಳೆಯಾಗಿದೆ. ಮಡಪ್ಪಾಡಿಯಲ್ಲಿ ಒಂದು ಗಂಟೆಯಲ್ಲಿ 140 ಮಿ.ಮೀ. ಮಳೆಯಾಗಿದೆ. ಸುರಿದ ಕುಂಭದ್ರೋಣ ಮಳೆಗೆ ಅಡಕೆ, ಬಾಳೆ ಕೃಷಿಗಳು ಕೊಚ್ಚಿಹೋಗಿದೆ.
ಮಡಪ್ಪಾಡಿಯ ಯಶೋಧರ ಅಂಬೆಕಲ್ಲು ಅವರ ತೊಟಕ್ಕೆ ನೀರು ನುಗ್ಗಿದ್ದು, ಕೃಷಿಯೂ ಕೊಚ್ಚಿ ಹೋಗಿದೆ. ಇದರಿಂದ ಸಾವಿರಾರು ರುಪಾಯಿಗಳು ನಷ್ಟಸಂಭವಿಸಿದೆ. ಈ ಹಿಂದೆ ಕೂಡ ಮಳೆಗೆ ಅವರ ತೋಟ ಸಂಪೂರ್ಣ ಹಾನಿಯಾಗಿತ್ತು.
ನಮಗೆ ಪ್ರಕೃತಿ ವಿಕೋಪದಡಿ ಆದ ಹಾನಿಗೆ ಇನ್ನೂ ಕೂಡ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ಕುಸಿತಗೊಂಡು ಕೃಷಿ ನಾಶವಾಗಿದೆ. ತುಂಬಾ ನಷ್ಟಸಂಭವಿಸಿದೆ. ನಾವು ನಮ್ಮ ಜನಪ್ರತಿನಿಧಿಗಳಿಗೆ ಹೇಳಿದರೂ ಪರಿಹಾರ ಇನ್ನೂ ಸಿಕ್ಕಿಲ್ಲ ಎಂದು ಯಶೋಧರ ಅವರ ಪತ್ನಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಭಾರಿ ಮಳೆ ಹಿನ್ನೆಲೆ ಮಕಂರ್‍ಜದ ಕಾಯಿಪಳ್ಳ ಸೇತುವೆ ಮುಳುಗಡೆಯಾಗಿದೆ. ಈ ಸೇತುವೆ ಬಲ್ಕಾಡಿ ಕಾಯರ ಮನೆಗಳನ್ನು ಸಂಪರ್ಕಿಸುತ್ತದೆ. ಅಲ್ಲದೇ ಮಡಪ್ಪಾಡಿಯ ಲೋಕಪ್ಪ ಶೀರಡ್ಕ ಅವರ ಮನೆಗೆ ಮಳೆ ನೀರು ನುಗ್ಗಿದೆ. ಮಡಪ್ಪಾಡಿಯ ಅಂಚೆ ಪಾಲಕ ಗೋಪಾಲಕೃಷ್ಣ ಅವರ ಮನೆ ಬಳಿ ಬರೆ ಕುಸಿತಗೊಂಡಿದೆ. ಯಾವುದೇ ಅನಾಹುತ ಸಂಭವಿಸಲಿಲ್ಲ. ಆದರೆ ಇನ್ನು ಮಳೆ ಸುರಿದರೆ ಮತ್ತೆ ಬರೆ ಕುಸಿಯುವ ಆತಂಕವಿದೆ. ಮಂಗಳವಾರ ಕೂಡ ಸುಳ್ಯ ತಾಲೂಕಿನ ವಿವಿಧ ಕಡೆ ಮೇಘ ಸ್ಫೋಟವಾಗಿದೆ. ಸುಬ್ರಹ್ಮಣ್ಯ, ಗುತ್ತಿಗಾರು, ಕೊಲ್ಲಮೊಗ್ರ, ಕಲ್ಲಾಜೆ, ಪಂಜ, ಎಣ್ಮೂರುಗಳಲ್ಲಿ ಮಳೆ ವಿಪರೀತವಾಗಿ ಸುರಿದಿದೆ.