
ಮಡಿಕೇರಿ: ವಾಯುಭಾರ ಕುಸಿತದ ಪರಿಣಾಮ ಕೊಡಗು ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿಗೆ ಭಾರಿ ಪ್ರಮಾಣದಲ್ಲಿ ಒಳ ಹರಿವು ಕಂಡುಬಂದಿದೆ.
ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ರಾತ್ರಿಯಿಡೀ ಭಾರಿ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ. ಇದರಿಂದಾಗಿ ಹಾರಂಗಿ ಜಲಾಶಯಕ್ಕೆ ಭಾನುವಾರ ಬೆಳಗ್ಗೆ 8.30ರ ವೇಳೆಗೆ ಸುಮಾರು 2846 ಕ್ಯೂಸೆಕ್ ನೀರು ಹರಿದುಬಂದಿದೆ.
ಜೂನ್ ಹಾಗೂ ಜುಲೈ ತಿಂಗಳಲ್ಲಿ ಮುಂಗಾರು ಮಳೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು. ಜಿಲ್ಲೆಯಲ್ಲಿ ಸುಮಾರು ಶೇ.42ರಷ್ಟು ವಾಡಿಕೆ ಮಳೆ ಕೊರತೆಯುಂಟಾಗಿತ್ತು. ಆಗಸ್ಟ್ ತಿಂಗಳಲ್ಲಿ ಒಂದಷ್ಟು ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯ ಮೈದುಂಬಿತು. ನಂತರ ಮಳೆ ಕೊರತೆ ಸಾಕಷ್ಟು ಕಂಡುಬಂದಿದ್ದು, ಕಾವೇರಿ ನದಿ, ಹಾರಂಗಿ ಜಲಾಶಯದಲ್ಲಿ ನೀರು ಪ್ರಮಾಣ ತೀರಾ ಕುಸಿದಿತ್ತು.
ಬಿಸಿಲಿನ ಕಾರಣದಿಂದಾಗಿ ಕಾವೇರಿ ನದಿಯಲ್ಲಿ ಬಂಡೆ ಕಲ್ಲುಗಳ ಪ್ರದರ್ಶನವಾಗಿತ್ತು. ಇದೀಗ ವಾಯುಭಾರ ಕುಸಿತದ ಪರಿಣಾಮ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಕೃಷಿಕರಿಗೆ ಖುಷಿಯಾಗಿದೆ.
8.5 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ಹಾರಂಗಿ
ಹಾರಂಗಿ ಜಲಾಶಯದಲ್ಲಿ ಕಳೆದ ಕೆಲವು ದಿನಗಳಿಂದ 500ರಿಂದ 600 ಕ್ಯೂಸೆಕ್‌ನಷ್ಟಿದ್ದ ಒಳಹರಿವು, ಸತತ ಮಳೆಯ ಪರಿಣಾಮ ಇದೀಗ 2,812 ಕ್ಯೂಸೆಕ್‌ಗೆ ಏರಿಕೆಯಾಗಿದೆ. 8.5 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಹಾರಂಗಿ ಜಲಾಶಯದಲ್ಲಿ ಪ್ರಸ್ತುತ 4.3 ಟಿಎಂಸಿ ನೀರು ಸಂಗ್ರಹವಾಗಿದೆ. ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪಮಾನ ಏರಿಕೆ ಹಾಗೂ ನೀರಿನ ಲಭ್ಯತೆಯ ಕೊರತೆಯಿಂದ ಜನರು ಆತಂಕಕ್ಕೊಳಗಾಗಿದ್ದರು. ಅದರಲ್ಲೂ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರಿನ ಸಮಸ್ಯೆ ಎದುರಾಗಬಹುದೆಂಬ ಭೀತಿ ಎದುರಾಗಿತ್ತು.
ಆದರೆ, ಇದೀಗ ಸುರಿಯುತ್ತಿರುವ ಮಳೆ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾದರೆ ಜಲಾಶಯದ ಒಳಹರಿವು ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಇನ್ನೊಂದೆಡೆ, ಉತ್ತಮ ಮಳೆಯ ನಡುವೆಯೂ ಜಿಲ್ಲೆಯ ಕೆಲವೆಡೆ ಮಳೆಯಿಂದಾಗಿ ಮನೆಗಳಿಗೆ ಹಾನಿ ಉಂಟಾಗಿದೆ. ಇದೀಗ ಕೊಡಗಿನಲ್ಲಿ ಚುರುಕುಗೊಂಡಿರುವ ಮಳೆ ಹಾರಂಗಿ ಜಲಾಶಯದ ನೀರಿನ ಮಟ್ಟ ಹೆಚ್ಚಳಕ್ಕೆ ಕಾರಣವಾಗಿದ್ದು, ಬೇಸಿಗೆಯ ನೀರಿನ ಬವಣೆಯ ಆತಂಕದಲ್ಲಿದ್ದ ಜನರಿಗೆ ಸದ್ಯಕ್ಕೆ ಕೊಂಚ ನಿರಾಳತೆ ತಂದಿದೆ.
ಸೋಮವಾರಪೇಟೆ ಹೋಬಳಿ ವ್ಯಾಪ್ತಿಯಲ್ಲಿ 32.4 ಮಿ.ಮೀ, ಶನಿವಾರಸಂತೆ 31.6 ಮಿ.ಮೀ, ಶಾಂತಳ್ಳಿ 35.1 ಕೊಡ್ಲಿಪೇಟೆ 20.2, ಕುಶಾಲನಗರ 40.9, ಸುಂಟಿಕೊಪ್ಪ 38.6, ಮಡಿಕೇರಿ 40.2, ನಾಪೋಕ್ಲು 35.6, ಸಂಪಾಜೆ 50.6, ಭಾಗಮಂಡಲ 45.3, ವಿರಾಜಪೇಟೆ 22.39, ಅಮ್ಮತ್ತಿ 8.1, ಪೊನ್ನಂಪೇಟೆ 5.3, ಶ್ರೀಮಂಗಲ 8.2, ಹುದಿಕೇರಿ 12.7, ಬಾಳೆಲೆಯಲ್ಲಿ 5.4 ಮಿ.ಮೀ ಮಳೆಯಾಗಿದೆ.
ಮನೆಗಳಿಗೆ ಹಾನಿ
ಮಳೆಯಿಂದಾಗಿ ಮತ್ತೆ ಮನೆಗಳಿಗೆ ಹಾನಿ ಸಂಭವಿಸಿದೆ. ಮಡಿಕೇರಿ ತಾಲೂಕಿನ ಸಂಪಾಜೆ ಹೋಬಳಿ ಪಿ. ಪೆರಾಜೆ ಗ್ರಾಮದಲ್ಲಿ ವಾಸವಿರುವ ಪದ್ಮಯ್ಯ ಚಾಮಕಜೆ ಎಂಬುವರ ವಾಸದ ಮನೆ ಹೆಚ್ಚಿನ ಮಳೆಯಿಂದಾಗಿ ಸಂಪೂರ್ಣ ಹಾನಿಯಾಗಿರುವುದು. ಕುಶಾಲನಗರ ತಾಲೂಕಿನ ಸಿದ್ದಲಿಂಗಪುರ ಗ್ರಾಮದ ನಿವಾಸಿಯಾದ ಯಶೋಧ ಅವರ ವಾಸದ ಮನೆ ಹೆಚ್ಚಿನ ಮಳೆಗೆ ಮನೆಯ ಗೋಡೆಯ ಭಾಗ ಹಾನಿಯಾಗಿದೆ.