ಕಾಫಿನಾಡಿನಲ್ಲಿ ಇಂದು ಕೂಡು ಮಳೆಯ ಆರ್ಭಟ ಮುಂದುವರಿದಿದ್ದು, ನಿರಂತರ ಮಳೆಯಿಂದಾಗಿ ನಗರದಲ್ಲಿ ಒಂದು ಮನೆಗೆ ಹಾನಿಯಾಗಿದ್ದರೇ, ರಸ್ತೆ ಬದಿಯಲ್ಲಿ ಮರಗಳು ಉರುಳಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.20): ಕಾಫಿನಾಡಿನಲ್ಲಿ (Chikkamagaluru) ಇಂದು ಕೂಡು ಮಳೆಯ (Rain) ಆರ್ಭಟ ಮುಂದುವರಿದಿದ್ದು, ನಿರಂತರ ಮಳೆಯಿಂದಾಗಿ ನಗರದಲ್ಲಿ ಒಂದು ಮನೆಗೆ ಹಾನಿಯಾಗಿದ್ದರೇ, ರಸ್ತೆ ಬದಿಯಲ್ಲಿ ಮರಗಳು ಉರುಳಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಅಲ್ಲದೇ ಮಲೆನಾಡು ಭಾಗದಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆಯಿಂದಾಗಿ ಮಲೆನಾಡು ಭಾಗದ ಪ್ರಮುಖ ನದಿಗಳು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯ ಆರ್ಭಟಕ್ಕೆ ಜಿಲ್ಲೆಯಲ್ಲಿ ಎರಡು ಹಸುಗಳು ಮೃತಪಟ್ಟಿವೆ.
ಮಲೆನಾಡಿನ ಹಲವೆಡೆ ಮರ, ವಿದ್ಯುತ್ ಕಂಬಗಳು ನೆಲಕ್ಕೆ: ಹವಾಮಾನ ವೈಪರೀತ್ಯದ ಪರಿಣಾಮ ಕಾಫಿನಾಡಿನಲ್ಲಿ ಇಂದು ಮುಂಜಾನೆಯಿಂದ ಸುರಿಯಲಾರಂಭಿಸಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ತಸ್ತಗೊಂಡಿತ್ತು. ಬುಧವಾರ ರಾತ್ರಿ ವೇಳೆ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮತ್ತಷ್ಟು ಬಿರುಸುಗೊಂಡಿದ್ದ ಪರಿಣಾಮ ಮೂಡಿಗೆರೆ ತಾಲೂಕಿನಲ್ಲಿ 2 ಮನೆಗಳು ಜಖಂಗೊಂಡಿದ್ದರೇ, ನರಸಿಂಹರಾಜಪುರ ತಾಲೂಕಿನಲ್ಲಿ ಭಾರೀ ಥಂಡಿಯಿಂದಾಗಿ ಹಸುವೊಂದು ಮೃತಪಟ್ಟಿದೆ. ಜಿಲ್ಲೆಯ ಬಯಲು ಭಾಗದ ತಾಲೂಕು ವ್ಯಾಪ್ತಿಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಧಾರಾಕಾರವಾಗಿ ಸುರಿದ ಮಳೆ ಮಧ್ಯಾಹ್ನದ ಬಳಿಕ ಕೊಂಚ ಬಿಡುವು ನೀಡಿತ್ತು.
ಕಾಫಿನಾಡಿನಲ್ಲಿ ಮಳೆ ಅಬ್ಬರ: ಮಲೆನಾಡು ಮಾತ್ರವಲ್ಲ, ಜಿಲ್ಲೆಯ ಬಯಲು ಸೀಮೆಯಲ್ಲೂ ಮಳೆ
ಆದರೆ ಇಡೀ ದಿನ ಮೈ-ಕೊರೆಯುವ ಥಂಡಿ ವಾತಾವರಣ ಬಯಲು ಭಾಗದಲ್ಲಿತ್ತು. ಬಯಲು ಸೀಮೆಯಲ್ಲಿ ಮಳೆಯ ಪರಿಣಾಮ ಪ್ರಮುಖ ತರಕಾರಿಗಳು ಬೆಳೆಗಳು ಮಣ್ಣು ಪಾಲಾಗಿದೆ. ಅದರಲ್ಲೂ ಮೆಣಸಿನಕಾಯಿ, ಬಟಾಣಿ ಗಿಡಗಳು ಕೊಳತು ಹೋಗುವ ಹಂತಕ್ಕೆ ಬಂದಿದೆ. ಇತ್ತ ಮಲೆನಾಡು ಭಾಗದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಧಾರಾಕಾರವಾಗಿ ಸುರಿದ ಮಳೆ ಮಧ್ಯಾಹ್ನದ ಬಳಿಕ ಸಾಧಾರಣವಾಗಿ ಸುರಿಯಲಾರಂಭಿಸಿತ್ತು.ಬೆಳಗ್ಗೆ ಸುರಿದ ಭಾರೀ ಗಾಳಿ, ಮಳೆಗೆ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದ ಕಾಫಿ ತೋಟವೊಂದರಲ್ಲಿ ಮರವೊಂದು ಹಸುವಿನ ಮೇಲೆ ಉರುಳಿ ಬಿದ್ದು ಹಸು ಸ್ಥಳದಲ್ಲೇ ಮೃತಪಟ್ಟಿದೆ.
ತಾಲೂಕಿನ ಕೂವೆ-ಮಾಳಿಂಗನಾಡು ಗ್ರಾಮಗಳ ಸಂಪರ್ಕ ರಸ್ತೆಯಲ್ಲಿ ಬೃಹತ್ ಗಾತ್ರದ ಮರ ರಸ್ತೆ ಮೇಲೆ ಉರುಳಿ ಬಿದ್ದ ಪರಿಣಾಮ ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿತ್ತು. ಸ್ಥಳೀಯರು ಮರವನ್ನು ತೆರವು ಮಾಡಿದ್ದರಿಂದ ಸಂಪರ್ಕ ಪುನಾರಂಭವಾಗಿದೆ. ಕೂವೆ ಗ್ರಾಮ ಸಮೀಪದ ನಿಡನಹಳ್ಳಿ ಗ್ರಾಮದ ಸುರೇಶ್ ಎಂಬವರು ತಮ್ಮ ಮನೆ ಮುಂದೆ ಕಳೆದ 15 ದಿನಗಳ ಹಿಂದೆ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ್ದ ಕಾಂಪೌಂಡ್ ಭಾರೀ ಮಳೆಯಿಂದಾಗಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಉಳಿದಂತೆ ಜಿಲ್ಲೆಯ ಮಲೆನಾಡು ಭಾಗದ ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಧಾರಾಕಾರ ಮಳೆಯಾಗಿದ್ದು, ಭಾರೀ ಮಳೆಗೆ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಿಟಿ ಜಿಟಿ ಮಳೆ-ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿರುವ ಜನರು: ಜಿಟಿ ಜಿಟಿ ಮಳೆಯಾಗುತ್ತಿರುವ ಪರಿಣಾಮ ಜನರು ಮನೆಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗದಂತಾಗಿದ್ದು, ಕಾಫಿ, ಅಡಿಕೆ ತೋಟಗಳ ಕೃಷಿ ಚಟುವಟಿಕೆ ನೆನೆಗುದಿಗೆ ಬೀಳುವಂತಾಗಿದೆ. ಮಳೆಯಿಂದಾಗಿ ಮಲೆನಾಡು ಭಾಗದ ತುಂಗಾ, ಭದ್ರಾ, ಹೇಮಾವತಿ ನದಿಗಳೂ ಸೇರಿದಂತೆ ಹಳ್ಳಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಮಳೆ ಮುಂದುವರಿದಲ್ಲಿ ನದಿ ಪಾತ್ರದ ಜನರು ಭಾರೀ ಸಮಸ್ಯೆಗೆ ಸಿಲುಕಲಿದ್ದಾರೆ.
6 ಜೋಡಿಗಳಿಗೆ ಕಣಭ್ಯಾಗ, ಕೇವಲ 10 ನಿಮಿಷದಲ್ಲಿ ಮುಗಿದ ಮದ್ವೆ
ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಮೂಡಿಗೆರೆ ತಾಲ್ಲೂಕಿನ ಬಣಕಲ್, ಕೊಟ್ಟಿಗೆಹಾರ, ಬಾಳೂರು, ನಿಡುವಾಳೆ ಸೇರಿದಂತೆ ಮೂಡಿಗೆರೆ ತಾಲ್ಲೂಕಿನಾದ್ಯಂತ ಇಂದು ಧಾರಾಕಾರ ಮಳೆಯಾಗಿದ್ದು ಕೆಲವೆಡೆ ವಿದ್ಯುತ್ ನಿಲುಗಡೆಯಾಗಿ ಸಾರ್ವಜನಿಕರು ಕತ್ತಲೆಯಲ್ಲಿ ಕಳೆಯುವಂತಾಯಿತು.ಇನ್ನು ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿದ ಘಟನೆಯೂ ನಡೆದಿದೆ. ಸೇತುವೆಯ ಮೇಲ್ಭಾಗದಿಂದ ಕೆಳಕ್ಕೆ ಕಾರು ಉರುಳಿ ಬಿದ್ದಿರುವ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಹೆಬ್ರಿಗೆ ಬಳಿ ನಡೆದಿದೆ. ರಸ್ತೆ ಬದಿಯ ಸೇತುವೆಗೆ ಡಿಕ್ಕಿ ಹೊಡೆದು ಉರುಳಿ ಬಿದ್ದು ಪ್ರಾಣಾಪಾಯದಿಂದ ಚಾಲಕ ಹಾಗೂ ಕಾರಿನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ. ಮಂಗಳೂರಿನಿಂದ-ಚಿಕ್ಕಮಗಳೂರು ಕಡೆಗೆ ಬರುತ್ತಿದ್ದ ವೇಳೆಯಲ್ಲಿ ಈ ಅವಘಡ ನಡೆದಿದೆ.