ಧಾರಾಕಾರ ಮಳೆಗೆ ಬೆಂಗ್ಳೂರು ತತ್ತರ: ಜನಜೀವನ ಅಸ್ತವ್ಯಸ್ತ

By Kannadaprabha NewsFirst Published Oct 4, 2021, 7:11 AM IST
Highlights

*   ಮಿಂಚು, ಗಾಳಿ ಸಹಿತ ಭರ್ಜರಿ ಮಳೆ
*   ತ್ಯಾಜ್ಯ ಸಹಿತ ಉಕ್ಕಿ ಹರಿದ ಒಳಚರಂಡಿ
*   ಸ್ಮಾರ್ಟ್‌ ಸಿಟಿ ಕಾಮಗಾರಿ ಪ್ರದೇಶ ಜಲಾವೃತ
 

ಬೆಂಗಳೂರು(ಅ.04):  ನಗರದಲ್ಲಿ ಭಾನುವಾರ ರಾತ್ರಿ ಸುರಿದ ಭರ್ಜರಿ ಮಳೆಗೆ(Rain) ಕೆಲವೆಡೆ ಮರ ಮತ್ತು ಮರದ ಕೊಂಬೆಗಳು ಮುರಿದು ಬಿದ್ದಿವೆ. ನಗರದ ಪ್ರಮುಖ ರಸ್ತೆಗಳು, ಅಂಡರ್‌ ಪಾಸ್‌ಗಳು ಸಂಪೂರ್ಣ ಜಲಾವೃತವಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತವಾಯಿತು.

ಮಧ್ಯಾಹ್ನದ ಬಳಿಕ ಅಲ್ಲಲ್ಲಿ ತುಂತುರು ರೂಪದಲ್ಲಿ ಪ್ರಾರಂಭಗೊಂಡ ಮಳೆ ರಾತ್ರಿ ಆಗುತ್ತಿದ್ದಂತೆ ನಗರದೆಲ್ಲೆಡೆ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿದು ಆವಾಂತರ ಸೃಷ್ಟಿಸಿತು. ಮಿಂಚು ಮತ್ತು ಗಾಳಿ ಸಹಿತ ಸುರಿದ ಭಾರಿ ಮಳೆಗೆ ನಗರದ ಫ್ರೆಜರ್‌ ಟೌನ್‌, ಮಲ್ಲೇಶ್ವರಂನಲ್ಲಿ ತಲಾ ಒಂದು ಮರವೊಂದು ಬಿದ್ದಿದ್ದು, ಲಿಂಗರಾಜಪುರಂನ ಕೆಎಸ್‌ಎಫ್‌ಸಿ ಬಡಾವಣೆ ಸೇರಿದಂತೆ ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದ ಬಗ್ಗೆ ವರದಿಯಾಗಿದೆ. ಯಾವುದೇ ಅನಾಹುತ ಘಟಿಸಿಲ್ಲ. ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಸಿಬ್ಬಂದಿ ಬಿದ್ದ ಮರ ಮತ್ತು ಕೊಂಬೆಯನ್ನು ತೆರವುಗೊಳಿಸಿದರು.

ಶಿವಾನಂದ ಸರ್ಕಲ್‌, ಕೆ.ಆರ್‌. ಮಾರುಕಟ್ಟೆ, ಕೆ.ಆರ್‌. ಸರ್ಕಲ್‌, ಇನ್‌ಫೆಂಟ್ರಿ ರಸ್ತೆ, ಶಿವಾಜಿ ನಗರ, ಮೈಸೂರು ರಸ್ತೆ, ನಾಯಂಡಹಳ್ಳಿ ಜಂಕ್ಷನ್‌, ಓಕಳೀಪುರಂ ರಸ್ತೆ ಅಂಡರ್‌ಪಾಸ್‌, ಸುಜಾತ, ರಾಜಭನದ ರಸ್ತೆ, ಲಿಂಗರಾಜಪುರಂ ಅಂಡರ್‌ ಪಾಸ್‌ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದವು. ಕೆಲವು ರಸ್ತೆಗಳಲ್ಲಿ ತ್ಯಾಜ್ಯ ಸಹಿತ ಒಳಚರಂಡಿ ನೀರು ಉಕ್ಕಿ ಹರಿದಿದ್ದು ಕಂಡು ಬಂತು. ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಲ್ಲಿ ನಡೆಯುತ್ತಿದ್ದ ಕಾಮಗಾರಿ ಪ್ರದೇಶಗಳು ಜಲಾವೃತವಾದವು.

ಶಹೀನ್ ಅಬ್ಬರ... ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಭಾರೀ ಮಳೆ ಅಲರ್ಟ್

ಮಧ್ಯಾಹ್ನದ ಬಳಿಕ ಮಳೆ ಆರಂಭಗೊಂಡು ಸಂಜೆ ನಾಲ್ಕರ ಹೊತ್ತಿಗೆ ನಗರದ ಎಲ್ಲೆಡೆ ಸಾಧಾರಣದಿಂದ ಭಾರಿ ಮಳೆಯಾಯಿತು. ಮೆಜೆಸ್ಟಿಕ್‌, ಕೆ.ಆರ್‌.ಸರ್ಕಲ್‌, ಶಿವಾಜಿ ನಗರ, ಶಿವಾನಂದ ಸರ್ಕಲ್‌, ಮಲ್ಲೇಶ್ವರಂ, ವಿಜಯ ನಗರ, ಜಾಲಹಳ್ಳಿ, ಎಂಜಿ ರೋಡ್‌, ಇಂದಿರಾ ನಗರ, ಕೋರಮಂಗಲ, ಜಯ ನಗರ, ಜಾಮರಾಜ ಪೇಟೆ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿತ್ತು.

ನಂತರ ತುಸು ಬಿಡುವು ಪಡೆದ ಮಳೆರಾಯ ರಾತ್ರಿ 9 ಗಂಟೆಯ ಬಳಿಕ ಭರ್ಜರಿ ರೂಪ ಪಡೆದು ನಗರದೆಲ್ಲೆಡೆ ಜೋರಾಗಿ ಸುರಿಯಿತು. ರಾತ್ರಿ 10.30ರ ಹೊತ್ತಿಗೆ ಬೆನ್ನಿಗಾನಹಳ್ಳಿಯಲ್ಲಿ 48 ಮಿಮೀ ಮಳೆಯಾಗಿದೆ. ಹೆರೋಹಳ್ಳಿ 39 ಮಿಮೀ, ಕೆ.ಆರ್‌.ಪುರ 35 ಮಿಮೀ, ಗರುಡಾಚಾರ್‌ ಪಾಳ್ಯ 34 ಮಿಮೀ, ಕೊಟ್ಟಿಗೆಪಾಳ್ಯ 33 ಮಿಮೀ, ರಾಮಮೂರ್ತಿ ನಗರ, ರಾಜಾಜಿ ನಗರ, ಪೀಣ್ಯ ಕೈಗಾರಿಕಾ ಪ್ರದೇಶ 32 ಮಿಮೀ, ದೊಡ್ಡಬಿದರಕಲ್ಲು, ಎಚ್‌ಎಎಲ್‌ ವಿಮಾನನಿಲ್ದಾಣ 30 ಮಿಮೀ, ನಂದಿನಿ ಬಡಾವಣೆ 28 ಮಿಮೀ,ನಾಗಪುರ, ಮಾರತ್‌ಹಳ್ಳಿ 16 ಮಿಮೀ, ಹೆಗ್ಗನಹಳ್ಳಿ 15 ಮಿಮೀ ಮಳೆ ಸುರಿದಿದೆ.

ಇಂದೂ ಕೂಡ ಮಳೆ ಸಾಧ್ಯತೆ

ಇಂದು(ಸೋಮವಾರ) ಕೂಡ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ನಗರದ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 30 ಮತ್ತು 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
 

click me!