ಗಾಳಿ ಮಳೆಗೆ ನೆಲಕಚ್ಚಿದ ರೇಷ್ಮೆ ಶೆಡ್, ಪವಾಡ ರೀತಿಯಲ್ಲಿ ಪಾರಾದ ತಾಯಿ-ಮಗ

By Suvarna NewsFirst Published May 7, 2022, 2:08 PM IST
Highlights

* ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಮಳೆ, ಗಾಳಿ
* ಗಾಳಿ ಮಳೆಗೆ ನೆಲಕ್ಕುರುಳಿದ ರೇಷ್ಮೆ ಶೆಡ್ 
* ವಾಡ ರೀತಿಯಲ್ಲಿ ಪಾರಾದ ತಾಯಿ-ಮಗ

ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ, (ಮೇ.07): ಆ ರೈತ ಲಕ್ಷಾಂತರ ರೂಪಾಯಿ ಸಾಲ ಮಾಡಿ ರೇಷ್ಮೆ ಬೆಳೆ ಬೆಳೆದಿದ್ದ. ಇನ್ನೇನು ಎರಡು ದಿನ ಕಳೆದಿದ್ದರೆ ರೇಷ್ಮೆ ನೂಲು ಬರುತ್ತಿತ್ತು. ಆದರೆ ನಿನ್ನೆ ಸಂಜೆ ಬಿಸಿದ ಗಾಳಿ ಹಾಗೂ ಭಾರೀ ಮಳೆಗೆ ಆ ರೈತನ ರೇಷ್ಮೆ ಶೆಡ್ ಸಂಪೂರ್ಣವಾಗಿ ನೆಲಕಚ್ಚಿದೆ. ಅಷ್ಟಕ್ಕೂ ಎಲ್ಲಿ ಈ ಮಳೆ ಅವಾಂತರ ನಡೆದಿರೋದು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.

ಕೊಪ್ಪಳ ಜಿಲ್ಲೆ ಅಂದರೆ ಸಾಕು ನಮಗೆ ನೆನಪಿಗೆ ಬರುವುದು ಇದೊಂದು ಬರಪೀಡಿತ ಜಿಲ್ಲೆ ಹಾಗೂ ಬಿಸಿಲ ನಾಡು ಎಂದು. ಆದರೆ ಈ ಜಿಲ್ಲೆಯಲ್ಲಿ ಆಗೋಮ್ಮೆ, ಈಗೋಮ್ಮೆ ಮಳೆ ಆದರೂ ಸಹ ಮಳೆ ಸಾಕಷ್ಟು ಹಾನಿಯನ್ನುಂಟು  ಮಾಡುತ್ತದೆ. ಅಂತಹದ್ದೆ ಒಂದು ಹಾನಿಯನ್ನು ಮಳೆರಾಯ ಮಾಡಿದ್ದಾನೆ. ನಿನ್ನೆ(ಶುಕ್ರವಾರ) ಸಂಜೆ ಭಾರೀ ಮಳೆ ಹಾಗೂ ಗಾಳಿಗೆ ಕೊಪ್ಪಳ ತಾಲೂಕಿನ ಕಾಸನಕಂಡಿ ಗ್ರಾಮದಲ್ಲಿ ರೇಷ್ಮೆ ಶೆಡ್ ಒಂದು ನೆಲಕ್ಕುರುಳಿದೆ.

Koppal: ವಿದ್ಯುತ್ ಅವಘಡಕ್ಕೆ ತಾಯಿ, ಮಕ್ಕಳು ಸೇರಿ ಮೂವರ ಬಲಿ

ಕೊಪ್ಪಳ ತಾಲೂಕಿನ‌ ಕಾಸನಕಂಡಿ ಗ್ರಾಮದ ಹನುಮಂತ ಕುಟುಗನಹಳ್ಳಿ ಎನ್ನುವ ರೈತ 4 ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ರೇಷ್ಮೆ ಬೆಳೆದಿದ್ದ. ಇನ್ನೇನು ಎರಡು ದಿನ ಕಳೆದಿದ್ದರೆ ರೇಷ್ಮೆಯನ್ನು ಮಾರಾಟ ಮಾಡಲು ಹನುಮಂತ ರಾಮನಗರಕ್ಕೆ ಹೋಗುತ್ತಿದ್ದ. ಆದರೆ ಇದೀಗ ಅದಕ್ಕಿಂತ ಪೂರ್ವದಲ್ಲಿಯೇ ಹನುಮಂತನ ರೇಷ್ಮೆ ಗೂಡು ನೆಲಕ್ಕುರುಳಿದೆ.

ಇನ್ನು ಹನುಮಂತ ಕುಟುಗನಹಳ್ಳಿ ಎನ್ನುವರಿಗೆ ಸೇರಿದ ರೇಷ್ಮೆ ಶೆಡ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಇದರಿಂದಾಗಿ ಶೆಡ್ ನಲ್ಲಿದ್ದ ರೇಷ್ಮೆ ಹುಳುಗಳು ಸಾವನ್ನಪ್ಪಿದ್ದು, ಅಂದಾಜು 5 ಲಕ್ಷಕ್ಕೂ ಹಾನಿಯಾಗಿದೆ ಎನ್ನಲಾಗಿ. ಇನ್ನು ರೈತ ಹನುಮಂತ 4 ಲಕ್ಷ ಖರ್ಚು ಮಾಡಿ ಶೆಡ್ ನಿರ್ಮಾಣ ಮಾಡಿದ್ದ. ಜೊತೆಗೆ ಒಂದೂವರೆ ಲಕ್ಷ ಮೌಲ್ಯದ ರೇಷ್ಮೆ ಹುಳುಗಳು ಸಾವನ್ನಪ್ಪಿದ್ದು ರೈತ ಹನುಮಂತ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಪವಾಡ ರೀತಿಯಲ್ಲಿ ಪಾರಾದ ಪತ್ನಿ, ಮಗ
ಇನ್ನು ಶುಕ್ರವಾರ ಸಂಜೆ ವೇಳೆಯಲ್ಲಿ ಹನುಮಂತನ  ಕುಟುಂಬಸ್ಥರು ಶೆಡ್ ಒಳಗೆ ರೇಷ್ಮೆ ಹುಳುಗಳಿಗೆ ಆಹಾರ ಹಾಕುತ್ತಿದ್ದರು. ಈ ವೇಳೆ ಗಾಳಿ,ಮಳೆಗೆ ಶೆಡ್ ಬಿದ್ದಿತು. ಈ ವೇಳೆ ಶೆಡ್ ಒಳಗೆ ಹನುಮಂತ ಅವರ ಪತ್ನಿ ಹಾಗೂ ಮಗ ಒಳಗಡೆ ಸಿಲುಕಿ ಹಾಕಿಕೊಂಡಿದ್ದಾರೆ. ಬಳಿಕ ಇವರಿಬ್ಬರು ಹೇಗೋ  ಪಾರಾಗಿ ಹೊರಗಡೆ ಬಂದಿದ್ದಾರೆ. ಆದರೂ ಸಹ ಹನುಮಂತ ನ ಪತ್ನಿಗೆ ಕೈ ಗೆ ಹಾಗೂ ಮಗ ನಿಗೆ ಮುಖಕ್ಕೆ ಗಾಯಗಳಾಗಿವೆ. ಹಾಗೊಂದು ವೇಳೆ ಸ್ವಲ್ಪ ತಡವಾಗಿದ್ದರೂ ಹನುಮಂತ ನ ಪತ್ನಿ ಹಾಗೂ ಮಗನ ಜೀವ ಹಾನಿಯಾಗುತ್ತಿತ್ತು.

ಸೂಕ್ತ ಪರಿಹಾರಕ್ಕೆ ರೈತ ಹನುಮಂತ ಒತ್ತಾಯ
ಇನ್ನು ಶೆಡ್ ಬಿದ್ದಿರುವುದರಿಂದ ಇದೀಗ ರೇಷ್ಮೆ ಹುಳಗಳು ಸಾವನ್ನಪ್ಪಿವೆ. ಇನ್ನೆರಡು ದಿನ ಕಳೆದಿದ್ದರೆ 2 ಲಕ್ಷ ರೂಪಾಯಿ ಲಾಭವನ್ನು ರೈತ ಹನುಮಂತ ಪಡೆಯುತ್ತಿದ್ದ. ಆದರೆ ಇದೀಗ ಶೆಡ್ ಬಿದ್ದಿರುವುದರಿಂದ ಎಲ್ಲ ಹುಳುಗಳು ಸಾವನ್ನಪ್ಪಿದ್ದು, ನನಗೆ  ಕೈಗೆ ಬಂದ ತುತ್ತು ಬಾಯಿಗೆ ಬರಲಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ರೇಷ್ಮೆ ಬೆಳೆಗಾರ ಹನುಮಂತ  ತನ್ನ ಕಷ್ಟ ಹೇಳಿಕೊಳ್ಳುತ್ತಿದ್ದಾನೆ.
ಈಗಲಾದರೂ ಸರಕಾರ ನನಗೆ ಪರಿಹಾರ ನೀಡುವ ಮೂಲಕ ನನ್ನ ನೆರವಿಗೆ ಧಾವಿಸಬೇಕಿದೆ ಎಂದು ರೈತ ಹನುಮಂತ ಮನವಿ ಮಾಡಿದ್ದಾನೆ.

ಒಟ್ಟಿನಲ್ಲಿ ನಿನ್ನೆ ಸಂಜೆಯ ಗಾಳಿ,ಮಳೆ ಕೊಪ್ಪಳ‌ ಜಿಲ್ಲೆಯಲ್ಲಿ ಸಾಕಷ್ಟು ರೈತರಿಗೆ ತೊಂದರೆಗೆ ಹಾನಿಯನ್ನುಂಟು ಮಾಡಿದೆ. ಅದರ ಭಾಗವಾಗಿ ಇದೀಗ ಹನುಮಂತನಿಗೂ ಸಹ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.ಈ ಹಿನ್ನಲೆಯಲ್ಲಿ ಸರಕಾರ ಕೂಡಲೇ ರೈತ ಹನುಮಂತ ನಿಗೆ ಪರಿಹಾರ ನೋಡುವ ಕೆಲಸ ಮಾಡಬೇಕಿದೆ.

click me!