ರಸ್ತೆಯುದ್ದಕ್ಕೂ ಕಂಡು ಬರುವ ರಾಶಿ ರಾಶಿ ಟೊಮ್ಯಾಟೋ, ಬೆಲೆಯಿಲ್ಲದೆ ಕಷ್ಟಪಟ್ಟು ಬೆಳೆದ ಟೊಮ್ಯಾಟೋವನ್ನು ರಸ್ತೆ ಬದಿಗೆ ತಂದು ಸುರಿದಿರುವ ರೈತರು, ಮತ್ತೊಂದೆಡೆ ಮಾರುಕಟ್ಟೆಯಲ್ಲಿ ರಪ್ತಾಗದೆ ಉಳಿದಿರುವ ರಾಶಿಗಟ್ಟಲೆ ಟೊಮ್ಯಾಟೋ, ಇಂಥಾದೊಂದು ದೃಶ್ಯಗಳು ನಮಗೆ ಕಂಡು ಬಂದಿದ್ದು ಏಷ್ಯಾದ ಎರಡನೇ ಅತಿದೊಡ್ಡ ಟೊಮೊಟೋ ಮಾರುಕಟ್ಟೆ ಕೋಲಾರದಲ್ಲಿ.
ವರದಿ : ದೀಪಕ್,ಏಷಿಯಾನೆಟ್ ಸುವರ್ಣ ನ್ಯೂಸ್,ಕೋಲಾರ.
ಕೋಲಾರ, (ಜುಲೈ.13) : ಕರ್ನಾಟಕ ಹಲವೆಡೆ ಭರ್ಜರಿ ಮಳೆಯಾಗುತ್ತಿದೆ. ಅಷ್ಟೇ ಅಲ್ಲದೆ ಉತ್ತರ ಭಾರತದಲ್ಲೂ ಕೂಡಾ ವರುಣ ಆರ್ಭಟ ಜೋರಾಗಿ ಸಾಕಷ್ಟು ಹಾನಿಯಾಗುತ್ತಿದೆ, ಇದೆಲ್ಲದರ ಪರಿಣಾಮ ಮಳೆಯಾಗದ ಬಯಲು ಸೀಮೆ ಜಿಲ್ಲೆಗಳಲ್ಲಿ ಕೇವಲ ಜಿಟಿಜಿಟಿ ಮಳೆಯಿದ್ದು ಕೇವಲ ಮೋಡಕವಿದ ವಾತಾವರಣವಿದ್ದರೂ ರೈತರು ತಾವು ಬೆಳೆದ ಬೆಳೆಯನ್ನು ತಂದು ಬೀದಿಗೆ ಸುರಿಯುವಂತಾಗಿದೆ. ಯಾಕೆ ಅಂತೀರಾ ಈ ಸ್ಟೋರಿ ನೋಡಿ..
ಕೋಲಾರದಲ್ಲಿ ರೈತರು ಅತಿಹೆಚ್ಚು ಟೊಮ್ಯಾಟೋವನ್ನು ಬೆಳೆಯುತ್ತಾರೆ,ಅಷ್ಟೇ ಅಲ್ಲ ದೇಶದ ಹಲವು ರಾಜ್ಯಗಳಿಗೆ ಹಾಗೂ ಬೇರೆ ಬೇರೆ ದೇಶಗಳಿಗೂ ಇಲ್ಲಿ ಬೆಳೆದ ಟೊಮ್ಯಾಟೋವನ್ನು ರಪ್ತು ಮಾಡುತ್ತಾರೆ.ಹೀಗಿರುವಾಗ ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕ,ಮಲೆನಾಡು ಪ್ರದೇಶ ಹಾಗೂ ಉತ್ತರ ಭಾರತದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಣಾಮ ಕೋಲಾರದಲ್ಲಿ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದಂತಾಗಿದೆ.
undefined
ಅತಿಯಾಗಿ ಟೊಮೇಟೊ ತಿನ್ನೋ ಅಭ್ಯಾಸ ಬಿಟ್ಬಿಡಿ, ಕೀಲು ನೋವು ಕಾಡುತ್ತೆ !
ಕಾರಣ ಕೋಲಾರದಲ್ಲಿ ಇದು ಟೊಮ್ಯಾಟೋ ಸೀಸನ್ ಅದಕ್ಕಾಗಿ ಹೆಚ್ಚಿನ ರೈತರು ಟೊಮ್ಯಾಟೋ ಬೆಳೆದಿದ್ದಾರೆ. ಆದರೆ ದೇಶದ ಹಲವು ರಾಜ್ಯಗಳಲ್ಲಿ ಹಾಗೂ ರಾಜ್ಯದ ಹಲವೆಡೆ ಮಳೆಯಿಂದ ಸಾಕಷ್ಟು ಅನಾಹುತಗಳು ಸೃಷ್ಟಿಯಾಗಿ ಹಲವೆಡೆ ರಸ್ತೆ ಸಂಪರ್ಕ ಕಡಿದುಹೋಗಿ,ಸೇತುವೆಗಳು ಕೊಚ್ಚಿ ಹೋಗಿವೆ ಪರಿಣಾಮ ಕೋಲಾರದ ರೈತರು ಬೆಳೆದು ಮಾರುಕಟ್ಟೆಗೆ ತರುತ್ತಿರುವ ಟೊಮ್ಯಾಟೊವನ್ನು ಬೇರೆ ರಾಜ್ಯಗಳಿಗೆ ರಪ್ತು ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.ಜೊತೆಗೆ ಕೋಲಾರ ಸುತ್ತಮುತ್ತಲೂ ಕೂಡಾ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಜಿಟಿಜಿಟಿ ಮಳೆಯಾಗುತ್ತಿದ್ದು, ಮೋಡಕವಿದ ವಾತಾವರಣ ಇರುವ ಪರಿಣಾಮ ಟೊಮ್ಯಾಟೋ ಗುಣಮಟ್ಟ ಕಳೆದು ಕೊಂಡಿದ್ದು, ಟೊಮ್ಯಾಟೋಗೆ ಮಾರುಟಕ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿಲ್ಲ.
ಇನ್ನು ಕೋಲಾರದಲ್ಲಿ ಸರಿ ಸುಮಾರು 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಟೊಮ್ಯಾಟೋ ಬೆಳೆಯುತ್ತಾರೆ, ಕಾರಣ ಗುಣಮಟ್ಟದ ಟೊಮ್ಯಾಟೋ ಬೆಳೆಯಲು ಕೋಲಾರದಲ್ಲಿ ಉತ್ತಮ ವಾತಾವರಣ ಇದೆ.ಅದಕ್ಕಾಗಿ ಹೆಚ್ಚಿನ ರೈತರು ಟೊಮ್ಯಾಟೋ ಬೆಳೆದು ತಮ್ಮ ಬದುಕನ್ನು ಹಸನು ಮಾಡಿಕೊಂಡಿದ್ದಾರೆ. ಅಲ್ಲದೆ ಏಪ್ರಿಲ್ನಿಂದ ಸೆಪ್ಟಂಬರ್ ವರೆಗೆ ಕೋಲಾರದಲ್ಲಿ ಟೊಮ್ಯಾಟೋ ಸೀಸನ್ ಅದಕ್ಕಾಗಿ ಹೆಚ್ಚಿನ ಜನ ರೈತರು ಟೊಮ್ಯಾಟೋ ಬೆಳೆದಿರುತ್ತಾರೆ ಅದಕ್ಕಾಗಿನೆ ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಟೊಮ್ಯಾಟೋ ಆವಕ ಹೆಚ್ಚಾಗಿದೆ.ಆದರೆ ರಾಜ್ಯಾದ್ಯಂತ ಹೆಚ್ಚಿನ ಮಳೆಯಾಗುತ್ತಿದ್ದರೆ,ಕೋಲಾರದಲ್ಲಿ ಕಳೆದ ಹತ್ತು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು ಆಗಾಗ ಜಿಟಿ ಜಿಟಿ ಮಳೆಯಾಗುತ್ತಿದೆ.
ಪರಿಣಾಮ ಟೊಮ್ಯಾಟೋಗೆ ಮೆತ್ತಗಾಗಿದ್ದು,ರೋಗಕ್ಕೆ ತುತ್ತಾಗುತ್ತಿದೆ.ಎಲ್ಲದಕ್ಕಿಂತ ಮುಖ್ಯವಾಗಿ ಸದ್ಯ ಕೋಲಾರದಲ್ಲಿ ಮಾರುಕಟ್ಟೆಗೆ ಬರುತ್ತಿರುವ ಟೊಮ್ಯಾಟೋ ಗುಣಮಟ್ಟ ಕಳೆದುಕೊಂಡಿದೆ ಹಾಗಾಗಿ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಬೆಲೆ ಇಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ ಹೊರ ರಾಜ್ಯಗಳ ವ್ಯಾಪಾರಸ್ಥರು ಬಂದು ಟೊಮ್ಯಾಟೋಗಾಗಿ ಕಾಯುತ್ತಿದ್ದಾರೆ ಆದರೂ ಮಳೆಯಿಂದ ಗುಣಮಟ್ಟದ ಟೊಮ್ಯಾಟೋ ಮಾರುಕಟ್ಟೆ ಬಾರದ ಹಿನ್ನೆಲೆ ಬೆಲೆ ಕುಸಿತ ಕಂಡಿದೆ.ಹದಿನೈದು ಕೆಜಿ ಒಂದು ಬಾಕ್ಸ್ ಟೊಮ್ಯಾಟೋ ಕೇವಲ 100-200 ರೂಪಾಯಿ ಬೆಲೆ ಹಾಗಾಗಿ ಟೊಮ್ಯಾಟೋ ಬೆಳೆದ ರೈತರು ಮಳೆಯ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದಾರೆ.ತಾವೇ ತಮ್ಮ ಕೈಯಾರೆ ಕಷ್ಟು ಪಟ್ಟು ಬೆಳೆದಿದ್ದ ಟೊಮ್ಯಾಟೋವನ್ನು ಬೆಲೆ ಇಲ್ಲದೆ ಬೀದಿಗೆ ತಂದು ಸುರಿಯುವ ಸ್ಥಿತಿ ಬಂದೊದಗಿದೆ.
ಒಟ್ಟಾರೆ ತಾನು ಮಾಡದ ತಪ್ಪಿಗೆ ತನಗೆ ಶಿಕ್ಷೆ ಎನ್ನುವಂತೆ ರಾಜ್ಯದ ಹಾಗೂ ದೇಶದ ಹಲವೆಡೆ ವರುಣನ ಆರ್ಭಟಕ್ಕೆ ಕೋಲಾರದ ರೈತರು ಬೆಲೆ ತೆತ್ತಬೇಕಾದ ಸ್ಥಿತಿ ನಿರ್ಮಾಣವಾಗಿದೆ, ಟೊಮ್ಯಾಟೋ ಸೀಸನ್ ನಲ್ಲಿ ಒಳ್ಳೆಯ ಬೆಲೆ ಸಿಗುತ್ತದೆ ಎಂದು ಕಷ್ಟ ಪಟ್ಟು ಬೆಳೆದಿದ್ದ ಟೊಮ್ಯಾಟೋ ವನ್ನು ರೈತರು ತಮ್ಮ ಕೈಯಾರೆ ತಾವೇ ಬೀದಿಗೆ ಸುರಿಯುವ ಸ್ಥಿತಿಗೆ ತಂದಿಟ್ಟ ವರುಣನನ್ನು ಶಪಿಸುತ್ತಿರುವುದಂತು ಸುಳ್ಳಲ್ಲ.