ಕೊಡಗಿನಲ್ಲಿ ಮತ್ತೆ ಬಿರುಸಿನ ಮಳೆ: ಸ್ಥಳದಲ್ಲೇ ಬೀಡು ಬಿಟ್ಟ ಅಧಿಕಾರಿಗಳು

By Web DeskFirst Published Jul 23, 2019, 4:07 PM IST
Highlights

ಮಡಿಕೇರಿ ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕುಸಿದಿರುವ ಗುಡ್ಡದ ಮಣ್ಣು ರಸ್ತೆಗೆ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಮಣ್ಣು ತೆರವುಗೊಳಿಸಿದ್ದು, ರಸ್ತೆ ಸಂಚಾರ ಯೋಗ್ಯವಾಗಿದೆ. ರಾಷ್ಟ್ರೀಐ ವಿಪತ್ತು ನಿರ್ವಹಣಾ ಪಡೆಯೂ ಸ್ಥಳದಲ್ಲಿ ಸರ್ವ ಸನ್ನದ್ಧವಾಗಿದ್ದು, ಪರಿಶೀಲನೆ ನಡೆಸಿದೆ.

ಮಡಿಕೇರಿ(ಜು.23): ಕೊಡಗು-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕುಸಿದಿರುವ ಗುಡ್ಡದ ಮಣ್ಣು ರಸ್ತೆಗೆ ಬಿದ್ದಿದೆ. ಕಳೆದ ಬಾರಿ ಈ ಪ್ರದೇಶದಲ್ಲಿ ಗುಡ್ಡ ಕುಸಿದು, ಇದೀಗ ಮಳೆಗೆ ಮಣ್ಣು ರಸ್ತೆಗೆ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಮಣ್ಣು ತೆರವುಗೊಳಿಸಿದ್ದು, ರಸ್ತೆ ಸಂಚಾರ ಯೋಗ್ಯವಾಗಿದೆ.

ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆದ್ದಾರಿಗೆ ಕುಸಿದ ಗುಡ್ಡದ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದ್ದು, ಮಡಿಕೇರಿ ಮಂಗಳೂರು ಹೆದ್ದಾರಿ ಸುಗಮವಾಗಿದೆ.

ಜೆಸಿಬಿ ಮೂಲಕ ಮಣ್ಣು ತೆರವು:

ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ ಪೂರ್ಣಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಹೆದ್ದಾರಿಯಲ್ಲಿ ಬಿದ್ದ ಮಣ್ಣನ್ನು ತೆರವುಗೊಳಿಸಲಾಗಿದ್ದು ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ. ವಾಹನ ಸವಾರರು ಆತಂಕ ಪಡಬೇಕಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಹಾಗೂ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಲಕ್ಷಕ್ಕೂ ಅಧಿಕ ಸ್ಯಾಂಡ್ ಬ್ಯಾಗ್:

ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಮಣ್ಣು ಕುಸಿದಿದೆ. ಒಂದು ವೇಳೆ ಹೆದ್ದಾರಿ ಕುಸಿದರೆ ತುರ್ತು ಕಾಮಗಾರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎನ್‌ಎಚ್‌ 275 ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿದ ಅಧಿಕಾರಿಗಳು ತುರ್ತು ಕಾಮಗಾರಿಗೆ ಲಕ್ಷಕ್ಕೂ ಅಧಿಕ ಸ್ಯಾಂಡ್ ಬ್ಯಾಗ್‌ಗಳನ್ನೂ ಸಿದ್ದಪಡಿಸಿದ್ದಾರೆ. ಮಡಿಕೇರಿಯಲ್ಲಿ ಸ್ಯಾಂಡ್ ಬ್ಯಾಗ್ ತುಂಬುವ ಕಾರ್ಯ ಮುಂದುವರಿದಿದೆ.

27ರವರೆಗೆ ರಾಜ್ಯದಲ್ಲಿ ಭಾರೀ ಮಳೆ: ಎಚ್ಚರಿಕೆ

ಬೆಟ್ಟದ ನಡುವೆ ಹಾದು ಹೋಗುವ ಹೈವೇ:

ಎನ್‌ಎಚ್‌ 275 ಪ್ರಪಾತ, ಬೆಟ್ಟದ ನಡುವೆ ಹಾದು ಹೋಗಿದ್ದು, ವಾಹನ ದಟ್ಟಣೆ ಹೆಚ್ಚಿರುವ ಕಾರಣ ರಸ್ತೆ ಕುಸಿಯುವ  ಭೀತಿಯಲ್ಲಿದೆ. ರಸ್ತೆ ಕುಸಿದರೆ ಸ್ಯಾಂಡ್ ಬ್ಯಾಗ್ ಜೋಡಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ಸಿದ್ಧತೆ ಮಾಡಲಾಗಿದೆ. ಕಳೆದ ಬಾರಿ ತುರ್ತು ಕಾಮಗಾರಿಗೆ ಸ್ಯಾಂಡ್ ಬ್ಯಾಗ್ ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಈ ಹಿನ್ನಲೆ ಈ ಬಾರಿ ಮುಂಜಾಗ್ರತೆಯಾಗಿ ಸ್ಯಾಂಡ್ ಬ್ಯಾಗ್ ಸಿದ್ಧತೆ ಮಾಡಲಾಗಿದೆ.

ಲಾರಿಗಳಲ್ಲಿ ಸ್ಯಾಂಡ್ ಬ್ಯಾಗ್‌ ಶಿಫ್ಟ್:

ಕುಸಿಯುವ ಸೂಚನೆ ಇರೋ ಸ್ಥಳಗಳಿಗೆ ಲಾರಿಗಳ ಮೂಲಕ ಸ್ಯಾಂಡ್ ಬ್ಯಾಗ್ ರವಾನೆ ಮಾಡಲಾಗಿದೆ. ಜೆಸಿಬಿ, ಟಿಪ್ಪರ್ ಕೂಡ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಇನ್ನೂ ಎರಡು ದಿನ ರೆಡ್ ಅಲರ್ಟ್ ಇರುವ ಹಿನ್ನಲೆ ಎಲ್ಲಾ ಮುಂಜಾಗೃತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರ್ವ ಸನ್ನದ್ಧ ಸ್ಥಿತಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ

ಕೊಡಗಿನಲ್ಲಿ ಎನ್‌ಡಿಆರ್‌ಎಫ್ ಪಡೆ ರೌಂಡ್ಸ್ ನಡೆಸಿದ್ದು, ವಿಪತ್ತು ಎದುರಿಸಲು ಸನ್ನದ್ಧವಾಗಿದೆ. ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಭಾರೀ ಮಳೆಯಾಗಿದೆ. ಗುಡ್ಡದ ಮಣ್ಣು ಕುಸಿತ ಹಿನ್ನಲೆ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಭೇಟಿ ನೀಡಿದೆ. ಮಡಿಕೇರಿ ನಗರ, ಹಳೆ ಖಾಸಗಿ ಬಸ್ ನಿಲ್ದಾಣ, ಸುಬ್ರಹ್ಮಣ್ಯ ನಗರಕ್ಕೆ ಭೇಟಿ ನೀಡಿದ್ದಾರೆ. ಕಳೆದ ಬಾರಿಯ ಬರೆ ಕುಸಿತ ಪ್ರದೇಶಗಳನ್ನು ವೀಕ್ಷಿಸಿದ್ದಾರೆ. ಎನ್‌ಡಿಆರ್‌ಎಫ್‌ ತಂಡಕ್ಕೆ ಜಿಲ್ಲಾಡಳಿತ ಅಧಿಕಾರಿಗಳು ಸಾಥ್‌ ನೀಡಿದ್ದಾರೆ.

click me!