ಈಗಾಗಲೇ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇಂದು ಹಲವು ಜಿಲ್ಲೆಗಳಲ್ಲಿ ಗಾಳಿ ಸಹಿತ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರು (ಆ.18): ರಾಜ್ಯದ ಏಳು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ (ಆ. 18 ರಂದು) ಅತಿ ಭಾರಿ ಮಳೆಯಾಗುವುದರಿಂದ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ಘೋಷಿಸಿದೆ.
ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಚಿಕ್ಕ ಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗಾಳಿ ಸಹಿತ ಅತೀ ಹೆಚ್ಚು ಮಳೆ ಬೀಳಲಿದೆ. ಇದೇ ರೀತಿ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ ಮತ್ತು ಕಲಬುರಗಿಯಲ್ಲಿ ಮಳೆಯಾಗುವ ಲಕ್ಷಣ ಇರುವುದರಿಂದ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಆ. 21ರ ವರೆಗೆ ಭಾರಿ ಮಳೆ ಸುರಿಯಲಿದ್ದು, ‘ಯೆಲ್ಲೋ ಅಲರ್ಟ್’ನ ಎಚ್ಚರಿಕೆ ನೀಡಲಾಗಿದೆ.
undefined
ಪಶ್ಚಿಮ ಘಟ್ಟತಪ್ಪಲಿನಲ್ಲಿ ಪ್ರವಾಹ ಆತಂಕ: ಚಾರ್ಮಾಡಿ ಘಾಟ್ ರಸ್ತೆಯಲ್ಲೇ ಬಿರುಕು
ಮಂಗಳೂರು ಹಾಗೂ ಕಾರವಾರದ ಸಮುದ್ರದಲ್ಲಿ ಸುಮಾರು 3.5 ಮೀಟರ್‌ನಷ್ಟುಎತ್ತರದ ಅಲೆಗಳು ಕಂಡು ಬರಲಿವೆ. ಗಾಳಿ ಗಂಟೆಗೆ ಸುಮಾರು 50 ಕಿ.ಮೀ. ವೇಗದಲ್ಲಿ ಬೀಸುವುದರಿಂದ ಮೀನುಗಾರರು ನೀರಿಗಿಳಿಯದಂತೆ ಸೂಚಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಾಖಲೆಯ ಮಳೆ: ಮುಂಗಾರಲ್ಲಿ ಮುಳುಗಿದ ಭಾರತ..!...
ಹೊಸನಗರದಲ್ಲಿ 23 ಸೆಂಮೀ:
ಆ.17ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸ ನಗರ 23, ಉಡುಪಿಯ ಕೊಲ್ಲೂರು 21, ಉಡುಪಿಯ ಸಿದ್ದಾಪುರ 19, ಆಗುಂಬೆ 17, ಉತ್ತರ ಕನ್ನಡದ ಭಟ್ಕಳ 15, ಬೆಳಗಾವಿ ಜಿಲ್ಲೆಯ ಲೋಂಡಾ, ಶಿರಾಲಿ 14, ಉತ್ತರ ಕನ್ನಡದ ಮಂಕಿ, ಬೆಳಗಾವಿಯ ಖಾನಾಪುರ 13, ಉಡುಪಿಯ ಕುಂದಾಪುರ, ಚಿಕ್ಕಮಗಳೂರಿನ ಕಮ್ಮರಡಿಯಲ್ಲಿ 12 ಸೆಂ.ಮೀ. ನಷ್ಟುಅತೀ ಹೆಚ್ಚು ಮಳೆ ಸುರಿದಿದೆ.
ಉತ್ತರ ಕನ್ನಡದ ಕದ್ರಾ 11, ಶಿವಮೊಗ್ಗದ ಲಿಂಗನಮಕ್ಕಿ, ಚಿಕ್ಕಮಗಳೂರಿನ ಕೊಪ್ಪ 10, ಉತ್ತರ ಕನ್ನಡದ ಯಲ್ಲಾಪುರ, ಗೋಕರ್ಣ, ಬೆಳಗಾವಿ, ಶಿವಮೊಗ್ಗದ ಹುಂಚದಕಟ್ಟೆ9, ಉಡುಪಿಯ ಕಾರ್ಕಳ, ಉತ್ತರ ಕನ್ನಡದ ಹಳಿಯಾಳ ಮತ್ತು ಅಂಕೋಲಾ, ಚಿಕ್ಕಮಗಳೂರಿನ ಕೊಟ್ಟಿಗೆಹಾರ, ದಕ್ಷಿಣ ಕನ್ನಡದ ಧರ್ಮಸ್ಥಳ, ಬೆಳಗಾವಿ ಜಿಲ್ಲೆಯ ಕಿತ್ತೂರು, ಬೆಳಗಾವಿ ವಿಮಾನ ನಿಲ್ದಾಣದಲ್ಲಿ 7 ಸೆ.ಮೀ ಮಳೆ ಬಿದ್ದಿದೆ.