ಸ್ಪೆಷಲ್ ಕ್ಲಾಸ್ ನೆಪದಲ್ಲಿ ಮುಖ್ಯಶಿಕ್ಷಕ ವಿದ್ಯಾರ್ಥಿನಿಯ ಮೈ, ಕೈ ಮುಟ್ಟಿ ಕಿರುಕುಳ ನೀಡಿದ ಘಟನೆ ಮೈಸೂರಿನಲ್ಲಿ ನಡೆದಿದೆ. ವಿದ್ಯಾರ್ಥಿನಿ ಜೊತೆ ಅನುಚಿತ ವರ್ತನೆ ತೋರಿದ ಕೆ.ಆರ್. ನಗರ ತಾಲೂಕು ಬಂಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ. ಸುರೇಶ ಎಂಬವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೈಸೂರು(ಜ.30): ವಿದ್ಯಾರ್ಥಿನಿ ಜೊತೆ ಅನುಚಿತ ವರ್ತನೆ ತೋರಿದ ಕೆ.ಆರ್. ನಗರ ತಾಲೂಕು ಬಂಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ. ಸುರೇಶ ಎಂಬವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದಾಗ ವಿಶೇಷ ತರಗತಿ ತೆಗೆದುಕೊಳ್ಳುವ ನೆಪದಲ್ಲಿ ಮೈ,ಕೈ ಮುಟ್ಟಿಕಿರುಕುಳ ನೀಡಿದರು. ಅಲ್ಲದೇ ನಂತರ ಬೇರೆಡೆ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದಾಗ ಅಲ್ಲಿಗೂ ಬಂದು ಊಟಕ್ಕೆ ಕರೆದುಕೊಂಡು ಹೋಗಿ, ಸೆಲ್ಪಿ ತೆಗೆದುಕೊಂಡು ಅದನ್ನು ಫೋಟೋ ಕೋಲೇಜ್ ಮಾಡಿ, ಬೇರೆಯವರಿಗೆ ಅಪ್‌ಲೋಡ್ ಮಾಡಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಆಕೆ ಜ.21 ರಂದು ಕೆ.ಆರ್. ನಗರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.
ಬಾಂಬರ್ ಆದಿತ್ಯ ಬೆಂಗಳೂರಿಗೆ, ಸೈಬರ್ ಕ್ರೈಂ ಬಗ್ಗೆ ಮತ್ತಷ್ಟು ತನಿಖೆ
ಈ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡು ಜ.26 ರಂದು ಸುರೇಶನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದಾದ ನಂತರ ಡಿಡಿಪಿಐ ಅವರ ವರದಿ ಮೇರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುರೇಶನನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ವಿದ್ಯಾರ್ಥಿನಿ, ಪೋಷಕರು, ಗ್ರಾಮಸ್ಥರು ಹಾಗೂ ಸಹೋದ್ಯೋಗಿಗಳ ಹೇಳಿಕೆ ಪಡೆದಿದ್ದಾರೆ. ಅವರ ಪ್ರಕಾರ, ಆರೋಪಿಯು ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವುದು ಮೇಲ್ನೋಟಕ್ಕೆ ಸತ್ಯವೆಂದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.