ಸಾರ್ವಜನಿಕ ಸ್ಥಳದಲ್ಲಿ ಕಸ ಚೆಲ್ಲಿದಿರಿ ಜೋಕೆ: ಬೀಳುತ್ತೆ 25 ಸಾವಿರ ವರೆಗೆ ದಂಡ..!

By Kannadaprabha News  |  First Published Feb 5, 2021, 3:19 PM IST

ರು. 5 ಸಾವಿರದಿಂದ ರು. 25 ಸಾವಿರ ವರೆಗೆ ದಂಡ ವಿಧಿಸುತ್ತಿರುವ ಪಾಲಿಕೆ ಅಧಿಕಾರಿಗಳು| ಹುಬ್ಬಳ್ಳಿ-ಧಾರವಾಡ ನಗರದ ಪ್ರಮುಖ ರಸ್ತೆ ಬದಿ, ವೃತ್ತಗಳಲ್ಲಿ ಕಸ ಚೆಲ್ಲುವಂತಿಲ್ಲ| ಸಿಸಿ ಟಿವಿ ಹಾಗೂ ಸ್ಥಳೀಯರ ಸಹಾಯದಿಂದ ಕಸ ಚೆಲ್ಲುವವರ ಮಾಹಿತಿ ಸಂಗ್ರಹ| ಕಸ ಸಂಗ್ರಹಿಸುವ ವಾಹನ ಸರಿಯಾಗಿ ಬಂದರೆ ಜನರೂ ಕಸ ಚೆಲ್ಲೋದಿಲ್ಲ ಎಂಬುದು ಕೆಲವರ ವಾದ| 
 


ಧಾರವಾಡ(ಫೆ.05): ಮಹಾನಗರ ಪಾಲಿಕೆಗೆ ಕಸ ನಿರ್ವಹಣೆಯೇ ತಲೆನೋವು. ಈ ಹಿನ್ನೆಲೆಯಲ್ಲಿ ಮನೆ - ಮನೆಗೆ ವಾಹನ ಕಳುಹಿಸಿ ಕಸ ಸಂಗ್ರಹಣೆ ಶುರು ಮಾಡಿದರೂ ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ರೂಢಿ ಬೆಳೆಸಿಕೊಂಡಿದ್ದಾರೆ. ಇದು ನಗರದ ಸೌಂದರ್ಯಕ್ಕೂ ಧಕ್ಕೆ ತರುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಮೂಲಕ ಜನರಿಗೆ ತಿಳುವಳಿಕೆ ಹೇಳಿ ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮನೆ ಅಥವಾ ಇನ್ನಿತರೆ ಕಸ ಚೆಲ್ಲುವವರ ಬೆನ್ನುಬಿದ್ದು ಅವರಿಗೆ ದಂಡ ಹಾಕುವ ಪ್ರಕ್ರಿಯೆ ಶುರುವಾಗಿದ್ದು, ಈ ರೀತಿ ಕಸ ಹಾಕುವವರು ಇನ್ನು ಮುಂದಾದರೂ ಎಚ್ಚರದಿಂದ ಇರಬೇಕು. ಸ್ವಚ್ಛ ನಗರ ಕನಸಿಗೆ ಮುನ್ನುಡಿ ಬರೆದಿರುವ ಹು-ಧಾ ಮಹಾನಗರ ಪಾಲಿಕೆಯು ತಮಗಿಷ್ಟ ಬಂದಲ್ಲಿ ಕಸ ಎಸೆದರೆ ದಂಡ ವಿ​ಧಿಸಲು ಮುಂದಾಗಿದೆ.

Tap to resize

Latest Videos

ಕಸ ಸಂಗ್ರಹಕ್ಕೆ ಮನೆ ಬಳಿ ಬರುವ ವಾಹನದಲ್ಲಿ ಕಸ ಹಾಕುವ ಬದಲು ರಾತ್ರಿ ಸಮಯದಲ್ಲಿ ಬೈಕು, ಕಾರುಗಳಲ್ಲಿ ಬಂದು ರಸ್ತೆಗಳ ಪಕ್ಕ ಕಸ ಹಾಕುತ್ತಿದ್ದಾರೆ. ಈ ಕಾರ್ಯಕ್ಕೆ ಇತಿಶ್ರೀ ಹಾಡಲು ಹಲವು ಬಾರಿ ಎಚ್ಚರಿಕೆ ನೀಡಿದರೂ ಕೆಲವರು ಮತ್ತದೇ ಚಾಳಿ ಮುಂದುವರೆಸಿದ ಕಾರಣ ಪಾಲಿಕೆ ಅಧಿಕಾರಿಗಳು ಅಂತಹವರಿಗೆ ತಕ್ಕ ಪಾಠ ಕಲಿಸಲು ರು. 5000 ದಿಂದ ರು. 25 ಸಾವಿರ ವರೆಗೆ ದಂಡ ವಿ​ಧಿಸುತ್ತಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎಲೆಕ್ಷನ್‌ಗೆ ಸುಪ್ರೀಂ ಬ್ರೇಕ್‌..!

ಟ್ರ್ಯಾಕ್ಟರ್‌ ಹಾಗೂ ಇತರೆ ನಾಲ್ಕು ಚಕ್ರ ವಾಹನಗಳಲ್ಲಿನ ಬೃಹತ್‌ ತ್ಯಾಜ್ಯಕ್ಕೆ ರು. 25000, ಮನೆ ಕಸಕ್ಕೆ ರು. 5000 ಹಾಗೂ ಕಸ ಸುಡುವವರಿಗೆ ರು. 5000 ದಂಡವಿದೆ. ವಲಯವಾರು ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು ಹಾಗೂ ಪೌರ ಕಾರ್ಮಿಕರು ರಾತ್ರಿ ಹೊತ್ತು ತಮ್ಮ ತಮ್ಮ ವ್ಯಾಪ್ತಿ ಪ್ರದೇಶಗಳಲ್ಲಿ ಸಂಚಾರ ಮಾಡಿ ಗಮನಿಸುತ್ತಿದ್ದಾರೆ. ಸಿಸಿ ಕ್ಯಾಮರಾ ಇದ್ದಲ್ಲಿ ಅದರ ಮೂಲಕ ಅಥವಾ ಸ್ಥಳೀಯರಿಂದ ಕಸ ಹಾಕುವವರ ಮಾಹಿತಿ ಪಡೆದು ಆಯಾ ವ್ಯಾಪ್ತಿ ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ ಬಳಿಕ ದಂಡ ವಿ​ಧಿಸಲಾಗುತ್ತದೆ. ಒಂದು ವೇಳೆ ಸ್ಥಳದಲ್ಲಿ ದಂಡ ನೀಡದಿದ್ದರೆ, ವಾಹನ ಸೀಜ್‌ ಮಾಡುವುದು, ಇಲ್ಲವೆ ದಂಡವನ್ನು ಆಸ್ತಿ ಕರದಲ್ಲಿ ಸೇರಿಸುವ ಕಾರ್ಯ ಸಹ ಅಧಿಕಾರಿಗಳು ಮಾಡುತ್ತಿದ್ದಾರೆ.

ರಸ್ತೆ ಪಕ್ಕ ಕಸ ಹಾಕದಂತೆ ಸಾಕಷ್ಟುಎಚ್ಚರಿಕೆ ನೀಡಿದರೂ ಜನರು ಮಾತ್ರ ಕೇಳುತ್ತಿಲ್ಲ. ಹೀಗಾಗಿ ದಂಡ ವಿ​ಧಿಸುವ ಕೆಲಸ ನಡೆದಿದೆ. ಪಾಲಿಕೆ ಆ್ಯಪ್‌ ಮೂಲಕ ಈಗ ದಂಡ ವಿಧಿ​ಸಲಾಗುತ್ತಿದೆ. ಸ್ಥಳದಲ್ಲಿ ದಂಡ ನೀಡದಿದ್ದರೆ ಸಂಬಂಧಿ​ಸಿದವರ ವಾಹನ ಸೀಜ್‌ ಮಾಡಲಾಗುವುದು. ಇಲ್ಲವಾದಲ್ಲಿ ಆಸ್ತಿ ತೆರಿಗೆಯಲ್ಲಿ ದಂಡದ ಮೊತ್ತ ಸೇರಿಸಲಾಗುತ್ತಿದೆ. ಈ ಮೂಲಕ ಜನರ ಆರೋಗ್ಯ, ಸ್ವಚ್ಛತೆ ಕಾಪಾಡಲು ಪಾಲಿಕೆ ಕೆಲಸ ಮಾಡುತ್ತಿದೆ ಎಂದು ಪಾಲಿಕೆಯ ಪರಿಸರ ಅಭಿಯಂತರ —ನವೀನ ಹೇಳುತ್ತಾರೆ.

ಪಾಲಿಕೆಯೂ ಗಮನಿಸಲಿ:

ಪಾಲಿಕೆಯ ಈ ಕಾರ್ಯ ಸ್ತುತ್ಯರ್ಹವಾದರೂ ಕೆಲವರು ವಿರೋಧಿಸುತ್ತಿದ್ದಾರೆ. ಪಾಲಿಕೆ ಮನೆಗಳಿಂದ ಕಸ ಸಂಗ್ರಹಿಸುವ ಉತ್ತಮ ಕಾರ್ಯ ಮಾಡಿದೆ. ಆದರೆ ಅದರಲ್ಲಿ ಸಾಕಷ್ಟುಲೋಪಗಳಿದ್ದರೂ ಸರಿಪಡಿಸುತ್ತಿಲ್ಲ. ಕಸ ಸಂಗ್ರಹದ ವಾಹನಗಳು ಕೆಲ ಬಡಾವಣೆಗಳಿಗೆ ಮಧ್ಯಾಹ್ನ 12 ರಿಂದ 2ರ ವರೆಗೆ ಬರುತ್ತಾರೆ. ಸಾಧನಕೇರಿ ಹುಬಳೀಕರ ಪ್ಲಾಟ್‌ನಲ್ಲಿ ಮಧ್ಯಹ್ನ 12ರ ನಂತರ ವಾಹನ ಬರುತ್ತದೆ. ಒಂದು ದಿನ ಬಿಟ್ಟು ಒಂದು ದಿನ ವಾಹನ ಬರಬೇಕು. ಆದರೆ, ಕೆಲವೊಮ್ಮೆ ಎರಡ್ಮೂರು ದಿನ ವಾಹನದ ಸದ್ದೇ ಇಲ್ಲ. ಇದರಿಂದ ನಿತ್ಯ ಬೆಳಗ್ಗೆ ಬೇಗ ಕೆಲಸಕ್ಕೆ ತೆರಳುವವರು ಸಮಸ್ಯೆ ಅನುಭವಿಸುವಂತಾಗಿದೆ. ಈ ಸಮಸ್ಯೆ ತಪ್ಪಿಸಲು ಬೆಳಗ್ಗೆ 10ರೊಳಗೆ ಕಸ ಸಂಗ್ರಹ ಪೂರ್ಣಗೊಳಿಸಿದರೆ ಯಾರೂ ಎಲ್ಲೆಂದರಲ್ಲಿ ಕಸ ಚೆಲ್ಲುವುದಿಲ್ಲ ಎನ್ನುತ್ತಾರೆ ಹುಬಳೀಕರ ಪ್ಲಾಟ್‌ ನಿವಾಸಿ ಶೈಲಾ ಚೌಕಿಮಠ.

ಬರೀ ಮನೆ ಕಸವಲ್ಲದೇ ಮಣ್ಣು-ಕಲ್ಲು, ಪ್ಲಾಸ್ಟಿಕ್‌ ಅಂತಹ ಘನರೂಪದ ಕಸವನ್ನು ಟ್ರ್ಯಾಕ್ಟರ್‌ ಮೂಲಕ ಬನಶಂಕರಿ ನಗರ ಮಾರ್ಗವಾಗಿ ಕೆಲಗೇರಿ ರಸ್ತೆ ಬದಿ ಚೆಲ್ಲಲಾಗುತ್ತಿತ್ತು. ಈ ಬಗ್ಗೆ ನಾಮಫಲಕ ಹಾಕಿದರೂ ಜಾಗೃತರಾಗದ ಹಿನ್ನೆಲೆಯಲ್ಲಿ ರಸ್ತೆ ಬದಿ ಕಸ ಹಾಕುವವರಿಗೆ ದಂಡ ವಿಧಿಸಲಾಗುತ್ತಿದೆ. ಈಗಾಗಲೇ ರು. 50 ಸಾವಿರವರೆಗೂ ದಂಡ ಹಾಕಲಾಗಿದ್ದು ಈ ಕ್ರಮ ಮುಂದುವರೆಯಲಿದೆ ಎಂದು ಪಾಲಿಕೆಯ ಆರೋಗ್ಯ ನಿರೀಕ್ಷಕ ಮಧುಕೇಶ್ವರ ರಾಯ್ಕರ ತಿಳಿಸಿದ್ದಾರೆ. 
 

click me!