‘ಹೈಕೋರ್ಟ್‌ಗೆ ಹೋಗಿದ್ದರೇ ನಾನೇ ಅಧ್ಯಕ್ಷ ’

By Web DeskFirst Published Sep 1, 2019, 3:13 PM IST
Highlights

ಕೆಎಂಎಫ್‌ ಮಾಜಿ ಅಧ್ಯಕ್ಷ ಎಚ್‌.ಡಿ. ರೇವಣ್ಣ, ಈ ಚುನಾವಣೆ ಮುಂದೂಡಿದ ಬಗ್ಗೆ ಹೈಕೋರ್ಟ್‌ ದ್ವಿಸದಸ್ಯ ಪೀಠದಲ್ಲಿ ಪ್ರಶ್ನಿಸಿದ್ದರೇ ನಾನೇ ಅಧ್ಯಕ್ಷನಾಗಬಹುದಿತ್ತು ಎಂದು ಕೂಡ ಹೇಳಿದ್ದಾರೆ. 

ಹಾಸನ [ಆ.01]:  ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನನ್ನಲ್ಲಿ ಮನವಿ ಮಾಡಿಕೊಂಡ ಕಾರಣ ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ಹಿಂತೆಗೆದುಕೊಂಡೆ ಎಂದು ಪ್ರತಿಕ್ರಿಯಿಸಿರುವ ಕೆಎಂಎಫ್‌ ಮಾಜಿ ಅಧ್ಯಕ್ಷ ಎಚ್‌.ಡಿ. ರೇವಣ್ಣ, ಈ ಚುನಾವಣೆ ಮುಂದೂಡಿದ ಬಗ್ಗೆ ಹೈಕೋರ್ಟ್‌ ದ್ವಿಸದಸ್ಯ ಪೀಠದಲ್ಲಿ ಪ್ರಶ್ನಿಸಿದ್ದರೇ ನಾನೇ ಅಧ್ಯಕ್ಷನಾಗಬಹುದಿತ್ತು ಎಂದು ಕೂಡ ಹೇಳಿದ್ದು, ಬಾಲಚಂದ್ರ ಜಾರಕಿಹೊಳಿ ನಮ್ಮ ಪಕ್ಷದಲ್ಲಿ 20 ವರ್ಷ ಇದ್ದವರು. ನಾಯಕ ಸಮಾಜದ ವ್ಯಕ್ತಿ ಅಧ್ಯಕ್ಷ ಆಗುವುದು ಸೂಕ್ತ ಎಂದು ನಾನು ನಾಮಪತ್ರ ಹಿಂತೆಗೆದುಕೊಂಡೆ ಹೊರತು ಇನ್ನಾವ ಬೇರೆ ಉದ್ದೇಶವಿಲ್ಲ ಎಂದು ಹೇಳುತ್ತಲೇ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಕಿಡಿಕಾರಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಭೀಮನಾಯ್‌್ಕ ಸೇರಿದಂತೆ 9 ಸದಸ್ಯರು ನನ್ನ ಪರ ಇದ್ದರು. ಜು.26ರಂದು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮಧ್ಯಾಹ್ನ 1ಕ್ಕೆ ಮುಗಿದಿತ್ತು. ನಾನೊಬ್ಬನೇ ನಾಮಪತ್ರ ಸಲ್ಲಿಸಿದ್ದೇ. ಆದರೆ, ಅಂದು ಸಂಜೆ 6.30ಕ್ಕೆ ಪ್ರಮಾಣವಚನ ಸ್ವೀಕರಿಸುವುದಕ್ಕೆ ಮುಂಚೆ ಸಿಎಂ ಯಡಿಯೂರಪ್ಪ ಚುನಾವಣೆ ನಡೆಯುತ್ತಿರುವ ವೇಳೆ ಎಂಡಿಗೆ ಪೋನ್‌ ಮಾಡಿ ಹೆದರಿಸಿದರು.

ಕೂಡಲೇ ಎಂಡಿ ಚುನಾವಣೆ ಪ್ರಕ್ರಿಯೆ ಮುಂದೂಡಿದರು. ನಂತರ ಹೈಕೋರ್ಟ್‌ ಆಗಸ್ಟ್‌ 31ಕ್ಕೆ ಚುನಾವಣೆ ನಡೆಸಲು ಹೇಳಿತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರೇ ನಾನು ಅಧ್ಯಕ್ಷನಾಗುವುದು ಕಷ್ಟವಾಗುತ್ತಿರಲಿಲ್ಲ. ಇಷ್ಟೊಂದು ಕಸರತ್ತು ಮಾಡಿ ಅಧ್ಯಕ್ಷ ಸ್ಥಾನ ಪಡೆಯುವ ಅಗತ್ಯ, ದರ್ದು ನನಗಿಲ್ಲ. ಆದ್ದರಿಂದ ಮಿತ್ರರೇ ಆದ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷರಾಗಲು ಸಹಕರಿಸಿದೆ ಹೊರತು ಸೋಲಿನ ಭೀತಿಯಿಂದಲ್ಲ ಎಂದು ಸಮರ್ಥಿಸಿಕೊಂಡರು.

ಕೆಎಂಎಫ್‌ನ ಕೆಲ ನಿರ್ದೇಶಕರು ನಾನು ಕಷ್ಟದಲ್ಲಿ ಇದ್ದೇವೆ ಅಂದರು. ಅದಕ್ಕೆ ನಾನೇ ಹೋಗಿ ಬೇಕಾದರೇ ಹಣ ಮಾಡಿಕೊಳ್ಳಿ ಎಂದು ಕಳುಹಿಸಿದೆ ಎಂದು ಇದೇ ವೇಳೆ ಹೇಳಿದರು.

ರಾತ್ರಿ 7.30ರ ವರೆಗೆ ಸಿಎಂ ಕೆಲಸ ಇತಿಹಾಸ:

ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಕೂಡಲೇ ವಿಧಾನಸಭೆ ಕಚೇರಿಗೆ ಸಂಜೆ 6.30ಕ್ಕೆ ಬಂದು ಕೆಎಂಎಫ್‌ ಅಧ್ಯಕ್ಷ ಚುನಾವಣೆ ಕಡತ ನೋಡಿ, ಅಧಿಕಾರಿಗಳಿಗೆ ತಮಗೆ ಬೇಕಾದಂತೆ ಸೂಚನೆ ನೀಡಿದರು. ಕಚೇರಿ ಕೆಲಸದ ವೇಳೆ ಸಂಜೆ 5.30 ಮುಗಿಯುತ್ತದೆ. ಆದರೆ, ರಾತ್ರಿ 7.30ರ ವರೆಗೂ ಕೆಎಂಎಫ್‌ ಕಡತಗಳ ಪರಿಶೀಲನೆ ಮಾಡಿದರು. ಒಬ್ಬ ಸಿಎಂ ಹೀಗೆ ಮಾಡಿದ್ದು ಇತಿಹಾಸ ಎಂದು ಟೀಕಿಸಿದರು.

ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ ಕ್ಷಣದಿಂದಲೇ ದ್ವೇಷ ರಾಜಕಾರಣ ಆರಂಭಿಸಿದ್ದಾರೆ. ಇದೇ ಯಡಿಯೂರಪ್ಪನವರು ಹಿಂದೆ ತಮ್ಮ ಕುಟುಂಬದ ವಿರುದ್ಧ ವಿಶೇಷ ನ್ಯಾಯಾಧೀಶರಿಂದ ತನಿಖೆ ಮಾಡಿಸಿದ್ದು ಉಂಟು. ಅಧಿಕಾರಕ್ಕೆ ಬಂದವರೆಲ್ಲಾ ನಮ್ಮ ವಿರುದ್ಧ ಸಿಒಡಿ, ಸಿಬಿಐನಿಂದ ಹಿಡಿದು ಎಲ್ಲ ಬಗೆಯ ತನಿಖೆ ಮಾಡಿಸಿದ್ದಾರೆ. ಏನು ಮಾಡಲು ಆಗಿಲ್ಲ, ಜನತೆ ಮತ್ತು ದೇವರ ಆರ್ಶೀವಾದ ಇರುವವರೆಗೂ ರಾಜಕೀಯವಾಗಿ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ಟಿಎ, ಡಿಎ, ಕಾಫಿ, ಟೀ ಕುಡಿದಿಲ್ಲ

ಕೆಎಂಎಫ್‌ ಮತ್ತು ಹಾಸನ ಹಾಲು ಒಕ್ಕೂಟದ ಅಧ್ಯಕ್ಷನಾಗಿ ಟಿಎ, ಡಿಎ ಪಡೆದಿಲ್ಲ. ಯಾವುದೇ ಬಗೆಯ ವೇತನ ಮತ್ತು ಕಾರು ಪಡೆದಿಲ್ಲ. ಕೇವಲ 10 ಸಾವಿರ ಲೀಟರ್‌ ಸಾಮರ್ಥ್ಯ ಇದ್ದ ಕೆಎಂಎಫ್‌ ಇಂದು ಲಕ್ಷಾಂತರ ಲೀಟರ್‌ ಹಾಲಿನ ಸಾಮರ್ಥ್ಯ ಹೊಂದಿದೆ. ಕರ್ನಾಟಕದಲ್ಲಿ ಹೈನುಗಾರಿಕೆ ಉದ್ಯಮ ಬೆಳೆಯಲು ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದ ಡಾ.ಕುರಿಯನ್‌ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಎಂದು ವಾದಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗುಜರಾತ್‌ ಬಿಟ್ಟರೇ ಬೇರೆಲ್ಲಿಗೂ ಮೆಗಾ ಡೈರಿ ಕೊಡುವುದಿಲ್ಲ ಎಂದು ಸ್ವತಃ ಕುರಿಯನ್‌ ಅವರೇ ಹೇಳಿದ್ದರು. ಆದರೆ, ಅವರಿಗೆ ಮೆಗಾ ಡೈರಿ ಕೊಟ್ಟು ನೋಡಿ, ಕರ್ನಾಟಕದ ಹೈನುಗಾರಿಕೆಯನ್ನು ಇಡೀ ರಾಷ್ಟ್ರವೇ ಕಣ್ತೆರೆದು ನೋಡುವಂತೆ ಮಾಡುತ್ತೇನೆ ಎಂದು ಹೇಳಿದೆ. ಆಗ ಪ್ರಧಾನಿ ಆಗಿದ್ದ ದೇವೇಗೌಡರು, ಕುರಿಯನ್‌ ಅವರಿಗೆ ಹೇಳಿ ಬೆಂಗಳೂರಿಗೆ ಮೆಗಾ ಡೈರಿ ಮುಂಜೂರು ಮಾಡಿಸಿದರು ಎಂದರು.

click me!