ಬಿಜೆಪಿ ಸರ್ಕಾರಕ್ಕೆ ಬೆನ್ನು ಇಲ್ಲ, ಮೂಳೆನೂ ಇಲ್ಲ: ಎಚ್‌ಡಿಕೆ

By Kannadaprabha NewsFirst Published Dec 27, 2022, 6:08 AM IST
Highlights

ಬಿಜೆಪಿ ಸರ್ಕಾರಕ್ಕೆ ಬೆನ್ನೂ ಇಲ್ಲ, ಮೂಳೆನೂ ಇಲ್ಲ. ಮಾತೆತ್ತಿದ್ದರೆ ಧಮ್‌, ತಾಕತ್ತು ಎನ್ನುವ ಮುಖ್ಯಮಂತ್ರಿಗಳು ಬೆಳಗಾವಿ ವಿಷಯದಲ್ಲಿ ನಿಮ್ಮ ದಮ್ಮು, ತಾಕತ್ತನ್ನು ಪ್ರಧಾನಿ ಬಳಿ ತೋರಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ಸವಾಲೆಸೆದರು.

  ನಾಗಮಂಗಲ (ಡಿ. 27):  ಬಿಜೆಪಿ ಸರ್ಕಾರಕ್ಕೆ ಬೆನ್ನೂ ಇಲ್ಲ, ಮೂಳೆನೂ ಇಲ್ಲ. ಮಾತೆತ್ತಿದ್ದರೆ ಧಮ್‌, ತಾಕತ್ತು ಎನ್ನುವ ಮುಖ್ಯಮಂತ್ರಿಗಳು ಬೆಳಗಾವಿ ವಿಷಯದಲ್ಲಿ ನಿಮ್ಮ ದಮ್ಮು, ತಾಕತ್ತನ್ನು ಪ್ರಧಾನಿ ಬಳಿ ತೋರಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ಸವಾಲೆಸೆದರು.

ತಾಲೂಕಿನ ಬಿಂಡಿಗನವಿಲೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪುನಃ ಮಹಾರಾಷ್ಟ್ರದ ಹಲವು ಪಕ್ಷಗಳು ಮತ್ತು ಸರ್ಕಾರದ ಜೊತೆಗೆ (BJP)  (Belagavi)  ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೆ ಒತ್ತಾಯ ಇದೆ. ಇದು ದೇಶದ ಒಕ್ಕೂಟದ ವ್ಯವಸ್ಥೆಗೆ ಅಡ್ಡಿಪಡಿಸುವಂತಹ, ಅನಾಹುತ ತರುವಂತ ಬೆಳವಣಿಗೆಯಾಗಿದೆ. ಒಂದು ದೇಶ, ಒಂದು ಭಾಷೆ, ಒಂದು ದೇಶ ಒಂದು ಚುನಾವಣೆ ಎನ್ನುವ ಬಿಜೆಪಿ ನಾಯಕರಿಗೆ ಕಾಮನ್‌ಸೆನ್ಸ್‌ ಇದ್ದರೆ ಇಂತಹ ವಿಷಯಗಳನ್ನ ಪ್ರಚೋದನೆ ಮಾಡುವುದು ಸೂಕ್ತವಲ್ಲ ಎಂದರು.

ಸಿಎಂ ವಾಪಸ್‌ ಪಡೆಯಲಿ:

ಬೆಳಗಾವಿ ಕರ್ನಾಟಕದ ಸ್ವತ್ತು. ಇಲ್ಲಿ ಯಾವುದೇ ವಿವಾದ ಇಲ್ಲ. ನಮ್ಮ ಮುಖ್ಯಮಂತ್ರಿ ಬೆಳಗಾವಿ ವಿವಾದ ಅಂತ ಪದ ಬಳಸಿದ್ದಾರೆ. ತಕ್ಷಣವೇ ವಿವಾದ ಅನ್ನೋ ಪದವನ್ನು ಸಿಎಂ ವಾಪಸ್ಸು ಪಡೆಯಬೇಕು. ಇದು ವಿವಾದ ಅಲ್ಲ, ಬೆಳಗಾವಿ ವಿಷಯ. ಬೆಳಗಾವಿ ವಿಷಯವನ್ನು ಮಹಾರಾಷ್ಟ್ರ ಎತ್ತಿಕೊಂಡಿದ್ದಾರೆ. ಅವರು ವಿವಾದ ಸೃಷ್ಟಿಮಾಡಿಕೊಂಡರೆ ನಾವು ಏಕೆ ಅದನ್ನು ವಿವಾದವೆಂದು ಭಾವಿಸಬೇಕು ಎಂದು ಪ್ರಶ್ನಿಸಿದರು.

ಬೆಳಗಾವಿ ಆರ್ಥಿಕ ಶಕ್ತಿ ಮೇಲೆ ಕಣ್ಣು:

ಕರ್ನಾಟಕದ ಏಕೀಕರಣದ ಸಂದರ್ಭದಲ್ಲೇ ಬೆಳಗಾವಿ ಕರ್ನಾಟಕದ ಭಾಗ ಎಂದು ತೀರ್ಮಾನವಾಗಿದೆ. ಬೆಳಗಾವಿಗೆ ಅತ್ಯಂತ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಗಾಗಿ ಕನ್ನಡಿಗರ ದುಡ್ಡನ್ನು ಬಂಡವಾಳ ರೂಪದಲ್ಲಿ ಹಾಕಿದ್ದೇವೆ. ಅಲ್ಲಿ ಸಕ್ಕರೆ ಕಾರ್ಖಾನೆ ನಡೆಯುತ್ತಿದ್ದರೆ ಕನ್ನಡಿಗರು ಕೊಟ್ಟಿರುವಂತಹ ಕೊಡುಗೆ. ಮಹಾರಾಷ್ಟ್ರದಲ್ಲಿ ಪಕ್ಷಗಳು ಬೆಳಗಾವಿಯ ಆರ್ಥಿಕ ಶಕ್ತಿ ಗಮನಿಸಿ ಲಪಟಾಯಿಸಲು ಹೊರಟಿದ್ದಾರೆ. ಠಾಕ್ರೆ ಮಾತಿನ ಜಾಗಟೆ ಸರ್ಕಾರ ಡ್ರಮ್‌ ಹೊಡೆಯಲು ಹೊರಟಿದ್ದಾರೆ. ಇದು ಬಿಜೆಪಿಯ ನಾಚಿಗೆ ಗೇಡಿನ ಕೆಲಸ ಎಂದು ಟೀಕಾಪ್ರಹಾರ ನಡೆಸಿದರು.

ಕುತಂತ್ರಕ್ಕೆ ಬಲಿಯಾಗಬೇಡಿ:

ಈ ದೇಶದಲ್ಲಿ ಒಕ್ಕೂಟದ ವ್ಯವಸ್ಥೆ, ಪ್ರಜಾಪ್ರಭುತ್ವ, ಸಂವಿಧಾನದ ಗೌರವ ಕಾಪಾಡಬೇಕಾದರೆ ಮಹಾರಾಷ್ಟ್ರ ಸರ್ಕಾರ ಜವಾಬ್ದಾರಿಯುತವಾಗಿ ನಡೆಯುವುದನ್ನು ಕಲಿಯಬೇಕು. ಅಕ್ಕ ಪಕ್ಕದ ರಾಜ್ಯದಲ್ಲಿ ದ್ವೇಷ ಉಂಟುಮಾಡಿ, ಸಂಘರ್ಷ ಮಾಡುತ್ತಾರೆ.

ಮುಖ್ಯಮಂತ್ರಿ ಈ ವಿಷಯವನ್ನ ಸುಲಭವಾಗಿ ತೆಗೆದುಕೊಳ್ಳಬಾರದು. ಗಂಭೀರವಾಗಿ ಪರಿಗಣಿಸದಿದ್ದರೆ ಮಹಾರಾಷ್ಟ್ರದವರು ಮಾಡುವ ಕುತಂತ್ರಕ್ಕೆ ಬಲಿಯಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.

25 ಜನ ಸಂಸದರು ಏನ್ಮಾಡ್ತಿದ್ದಾರೆ..!

ಡಬಲ್‌ ಇಂಜಿನ್‌ ಸರ್ಕಾರ ಕರ್ನಾಟಕದವರನ್ನು ಲೆಕ್ಕಕ್ಕೆ ಇಟ್ಟಿಲ್ಲ. 25 ಜನ ಲೋಕಸಭಾ ಸದಸ್ಯರಿದ್ದಾರೆ. ಅವರೆಲ್ಲಾ ಏನ್ಮಾಡ್ತಿದ್ದಾರೆ, ಅವರನ್ನು ಎಲ್ಲಿಟ್ಟಿದ್ದಾರೆ ಎನ್ನುವುದು ಗೊತ್ತಿದೆ. ಧಮ…, ತಾಕತ್‌ ಬಗ್ಗೆ ಸಿಎಂ ಪ್ರತಿನಿತ್ಯ ಭಾಷಣ ಮಾಡ್ತಾರೆ. ಈ ವಿಷಯದಲ್ಲಿ ಧಮ…, ತಾಕತ್‌ ಅನ್ನು ಪ್ರಧಾನಿ ಹತ್ತಿರ ತೋರಿಸಿ ಬನ್ನಿ. ಗೃಹ ಸಚಿವರನ್ನು ಭೇಟಿ ಮಾಡಿದ್ದೀರಿ. ನಿಮ್ಮ ಧಮ…, ತಾಕತ್‌ ಬಗ್ಗೆ ಹೇಳಿ ಎಂದು ಸವಾಲೆಸೆದರು.

ಬೆಳಗಾವಿ ವಿಷಯವನ್ನು ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕು. ಈ ಸರ್ಕಾರಕ್ಕೆ ಬೆನ್ನು ಇಲ್ಲ, ಮೂಳೆನೂ ಇಲ್ಲ ಇಂತಹ ಪರಿಸ್ಥಿತಿಯಲ್ಲಿ ಒಳ್ಳೆಯ ಅವಕಾಶ ಎಂದು ಮಹಾರಾಷ್ಟ್ರ ದಬ್ಬಾಳಿಕೆ ಮಾಡುತ್ತಿದೆ. ಮಗು ಚಿವುಟಿ, ಅಳಿಸುವ ಕೆಲಸವನ್ನ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಮೂದಲಿಸಿದರು.

ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಹೇಳುವ ಮೂಲಕ ಉದ್ದಟತನ ತೋರಿಸಿದ ಮಹಾರಾಷ್ಟ್ರ ಶಿವಸೇನಾ ನಾಯಕ ಉದ್ಧವ್‌ ಠಾಕ್ರೆ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಉದ್ಧವ್‌ ಠಾಕ್ರೆ ಹೇಳಿಕೆ ಗಮನಕ್ಕೆ ಬಂದ ಕೂಡಲೇ ಕಿಡಿಕಿಡಿಯಾದ ಮಾಜಿ ಮುಖ್ಯಮಂತ್ರಿಗಳು; ಸಾಮಾನ್ಯ ಪ್ರಜ್ಞೆ ಇರುವ ಯಾವೊಬ್ಬ ವ್ಯಕ್ತಿಯೂ ಹೀಗೆ ಮಾತನಾಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

click me!