ಕುಲಕ್ಕೆ, ಕುಲ ಗುರುವಿಗಾದ ಈ ಘೋರ ಅಪಮಾನದಿಂದ ಕುದಿಯುತ್ತಿರುವ ಒಕ್ಕಲಿಗ ಸಮಾಜವನ್ನು ಇನ್ನಷ್ಟು ಹೀನಾಯವಾಗಿ ಕಳಂಕದ ಕೂಪಕ್ಕೆ ತಳ್ಳಲು ಇದೇ ಬಿಜೆಪಿ ಸರ್ಕಾರದ ಸಚಿವರೊಬ್ಬರು ಧೂರ್ತ ಪ್ರಯತ್ನ ನಡೆಸಿದ್ದಾರೆ: ಎಚ್.ಡಿ.ಕುಮಾರಸಾಮಿ
ಬೆಂಗಳೂರು(ಮಾ.18): ತೋಟಗಾರಿಕೆ ಸಚಿವ ಮುನಿರತ್ನ ಅವರು ‘ಉರಿಗೌಡ, ನಂಜೇಗೌಡ’ ಎಂಬ ಶೀರ್ಷಿಕೆಯಲ್ಲಿ ಸಿನಿಮಾ ಮಾಡಲು ಮುಂದಾಗಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲ್ಪಿತ ಕಥೆ, ಸುಳ್ಳುಗಳಿಂದಲೇ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ಕರ್ನಾಟಕವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿರುವ ಬಿಜೆಪಿ ವಕ್ರದೃಷ್ಟಿಸದ್ಯಕ್ಕೆ ಒಕ್ಕಲಿಗರ ಮೇಲೆ ಬಿದ್ದಿದೆ. ಸ್ವಾಭಿಮಾನಿ ಒಕ್ಕಲಿಗರನ್ನು ಹೇಗಾದರೂ ಹಳ್ಳ ಹಿಡಿಸಲೇಬೇಕೆಂಬ ಹಿಡನ್ ಅಜೆಂಡಾ ಬಿಜೆಪಿಗೆ ಇರುವುದಂತೂ ಸತ್ಯ. ಕುಲಕ್ಕೆ, ಕುಲ ಗುರುವಿಗಾದ ಈ ಘೋರ ಅಪಮಾನದಿಂದ ಕುದಿಯುತ್ತಿರುವ ಒಕ್ಕಲಿಗ ಸಮಾಜವನ್ನು ಇನ್ನಷ್ಟು ಹೀನಾಯವಾಗಿ ಕಳಂಕದ ಕೂಪಕ್ಕೆ ತಳ್ಳಲು ಇದೇ ಬಿಜೆಪಿ ಸರ್ಕಾರದ ಸಚಿವರೊಬ್ಬರು ಧೂರ್ತ ಪ್ರಯತ್ನ ನಡೆಸಿದ್ದಾರೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯಗೆ ಗೆಲುವಿನ ಗ್ಯಾರಂಟಿ ಇಲ್ಲ, ಇತರರನ್ನು ಹೇಗೆ ಗೆಲ್ಲಿಸುತ್ತಾರೆ: ಎಚ್.ಡಿ.ಕುಮಾರಸ್ವಾಮಿ
ಸಚಿವ ಮುನಿರತ್ನ ಅವರು ವೃತ್ತಿಯಲ್ಲಿ ಚಿತ್ರ ನಿರ್ಮಾಪಕರಾಗಿದ್ದು, ತಮ್ಮ ವೃಷಾಭಾದ್ರಿ ಪ್ರೊಡಕ್ಷನ್ಸ್ ಮೂಲಕ ‘ಉರಿಗೌಡ, ನಂಜೇಗೌಡ’ ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಮೂಲಕ ಒಕ್ಕಲಿಗರ ಗೌರವವನ್ನು ಬೆಳ್ಳಿತೆರೆಯ ಮೇಲೆಯೂ ಮೂರಾಬಟ್ಟೆಮಾಡಲು ಸಂಚು ರೂಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತಿದೆ ಬಿಜೆಪಿ ಸ್ಥಿತಿ. ಪ್ರತಿ ಸೂಕ್ಷ್ಮ ವಿಷಯದಲ್ಲಿಯೂ ಮತ ರಾಜಕಾರಣ ಮಾಡುವ ಕಮಲ ಪಕ್ಷಕ್ಕೆ ಕರ್ನಾಟಕವೇ ಪ್ರಯೋಗ ಶಾಲೆ. ಜಾತಿ, ಧರ್ಮಗಳ ನಡುವೆ ಕಿಚ್ಚಿಟ್ಟು, ಸರ್ವಜನಾಂಗದ ತೋಟವಾದ ಕರ್ನಾಟಕಕ್ಕೆ ಬಿಜೆಪಿ ಕೋಮುಪ್ರಾಶನ ಮಾಡುತ್ತಿದೆ. ಉರಿಗೌಡ, ನಂಜೇಗೌಡ ಎಂಬ ಕಲ್ಪಿತ ಒಕ್ಕಲಿಗ ಹೆಸರುಗಳ ಸೃಷ್ಟಿ, ಸಿನಿಮಾ ಮಾಡುವ ದುರುಳ ಐಡಿಯಾ, ಒಕ್ಕಲಿಗರ ಮೇಲೆ ರಾಷ್ಟ್ರ ಬಿಜೆಪಿ, ರಾಜ್ಯ ಬಿಜೆಪಿ ಬೀರುತ್ತಿರುವ ವಕ್ರದೃಷ್ಟಿ. ಇದೆಲ್ಲವೂ ಒಕ್ಕಲಿಗರನ್ನು ರಾಜಕೀಯವಾಗಿ ಮುಗಿಸಿಬಿಡುವ ಬಿಜೆಪಿ ರಕ್ಕಸ ಹಿಡೆನ್ ಅಜೆಂಡಾ ಅಲ್ಲದೆ ಮತ್ತೇನೂ ಅಲ್ಲ ಎಂದು ಹೇಳಿದ್ದಾರೆ.