'ಕೆ.ಎನ್.ರಾಜಣ್ಣ ಪಕ್ಷ ಬಿಟ್ಟು ಹೋಗೋದಾದ್ರೆ ಹೋಗಲಿ': ಸಚಿವ ಹೆಚ್.ಸಿ. ಬಾಲಕೃಷ್ಣ ಸಿಡಿಮಿಡಿ!

Published : Nov 03, 2026, 01:31 PM IST
HC Balakrishna KN Rajanna

ಸಾರಾಂಶ

ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಮಾಜಿ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಸಚಿವ ಹೆಚ್.ಸಿ. ಬಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಕ್ಷದಲ್ಲಿದ್ದುಕೊಂಡೇ ದ್ರೋಹ ಬಗೆಯುತ್ತಿರುವ ಅವರ ವಿರುದ್ಧ ಶೀಘ್ರದಲ್ಲೇ ಹೈಕಮಾಂಡ್‌ಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಚಿತ್ರದುರ್ಗ (ನ.03): 'ಮಾಜಿ ಸಚಿವ ಕೆ.ಎನ್.ರಾಜಣ್ಣ ಪಕ್ಷ ಬಿಟ್ಟು ಬೇರೆಡೆ ಹೋಗುವುದಾದರೆ ಹೋಗಲಿ, ಕಾಂಗ್ರೆಸ್‌ನಲ್ಲಿದ್ದುಕೊಂಡು ಎಲ್ಲವನ್ನೂ ಉಂಡು ತಿಂದು ಪಕ್ಷಕ್ಕೇ ದ್ರೋಹ ಬಗೆಯುತ್ತಿದ್ದಾರೆ' ಎಂದು ಸಚಿವ ಹೆಚ್.ಸಿ. ಬಾಲಕೃಷ್ಣ ಏಕವಚನದಲ್ಲೇ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಮತ್ತೊಮ್ಮೆ ಸ್ಪೋಟಗೊಂಡಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದಲ್ಲಿ ಮಾತನಾಡಿದ ಅವರು, ಕೆ.ಎನ್. ರಾಜಣ್ಣ ಮತ್ತು ಅವರ ಪುತ್ರನ ಚುನಾವಣಾ ಕಾರ್ಯವೈಖರಿಯನ್ನು ಪ್ರಶ್ನಿಸಿದರು.

'ಅವರು ಎದೆ ಮುಟ್ಟಿಕೊಂಡು ಹೇಳಲಿ':

ಚುನಾವಣೆಯಲ್ಲಿ ರಾಜಣ್ಣ ಅವರ ನಿಷ್ಠೆಯನ್ನು ಪ್ರಶ್ನಿಸಿದ ಬಾಲಕೃಷ್ಣ, 'ರಾಜಣ್ಣ ಮತ್ತು ಅವರ ಮಗ ಚುನಾವಣೆಯಲ್ಲಿ ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ರಾ ಅಂತ ಎದೆ ಮುಟ್ಟಿಕೊಂಡು ಹೇಳಲಿ. ಯಾರ ವಿರುದ್ಧ ಚುನಾವಣೆ ಮಾಡಿದ್ರು ಅಂತ ಜನರಿಗೆ ಗೊತ್ತಿದೆ. ಇನ್ನು ಚುನಾವಣೆ ಮುಗಿಯುವುದರೊಳಗೇ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಜೊತೆ ಹೋಗಿ ಫೋಟೋ ತೆಗೆಸಿಕೊಂಡರು. ಇವರದ್ದು ಏನಾದರೂ ಸ್ಟಿಂಗ್ ಆಪರೇಷನ್ ಆಗಿದೆಯಾ?' ಎಂದು ಲೇವಡಿ ಮಾಡಿದರು.

'ಪಕ್ಷ ಯಾರಪ್ಪನ ಆಸ್ತಿಯೂ ಅಲ್ಲ':

ಪಕ್ಷದ ಶಿಸ್ತು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು, 'ಕಾಂಗ್ರೆಸ್ ಪಕ್ಷ ಯಾರಪ್ಪನ ಆಸ್ತಿಯೂ ಅಲ್ಲ. ಪಕ್ಷದಲ್ಲಿದ್ದುಕೊಂಡು ಎಲ್ಲ ಅಧಿಕಾರ ಅನುಭವಿಸಿ, ಕೊನೆಗೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದರೆ ಕಾಂಗ್ರೆಸ್ ಹೈಕಮಾಂಡ್ ಸುಮ್ಮನಿರಬಾರದು. ನಾಯಕತ್ವ ಇಂತಹವರ ಬಗ್ಗೆ ಈಗಲೇ ಗಮನಹರಿಸದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ' ಎಂದು ಎಚ್ಚರಿಸಿದರು.

ಹೈಕಮಾಂಡ್‌ಗೆ ಶೀಘ್ರ ದೂರು:

ರಾಜಣ್ಣ ಅವರ ಪಕ್ಷ ವಿರೋಧಿ ನಡವಳಿಕೆ ಹಾಗೂ ಮುಖಂಡರ ತೇಜೋವಧೆ ಮಾಡುವ ಹೇಳಿಕೆಗಳ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು. ಅವರ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸುವಂತೆ ಶೀಘ್ರದಲ್ಲೇ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡಲಾಗುವುದು ಎಂದು ಹೆಚ್.ಸಿ. ಬಾಲಕೃಷ್ಣ ಗುಡುಗಿದ್ದಾರೆ. ಇದೀಗ ಬಾಲಕೃಷ್ಣ ಅವರ ಹೇಳಿಕೆ ಕೈ ಪಾಳೆಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

PREV
Read more Articles on
click me!

Recommended Stories

ಹಾಸನಾಂಬೆ ದೇವಿಗೆ ಮಡಿಲಕ್ಕಿ ತುಂಬಿದ ಮುಸ್ಲಿಂ ಮಹಿಳೆ ಹಸೀನಾ ಲತೀಫ್! ಆಕೆಯ ಒಂದು ಮಾತು ಎಲ್ಲರಿಗೂ ಇಷ್ಟವಾಯ್ತು!
PM Modi: ನ.13ಕ್ಕೆ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ, ಜಗತ್ತಿನ ಮೊದಲ ಅತ್ಯಾಧುನಿಕ ತಾರಾಲಯ ಉದ್ಘಾಟನೆ