ದಾವಣಗೆರೆಯಲ್ಲಿ ಏಕಾಏಕಿ ಟ್ರಾನ್ಸ್‌ಫಾರ್ಮರ್ ಸ್ಫೋಟ, ವಾಹನಗಳು-ಅಂಗಡಿ ಭಸ್ಮ! ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ

Published : Nov 03, 2026, 01:10 PM IST
Davanagrege Fire Accident

ಸಾರಾಂಶ

ದಾವಣಗೆರೆಯ ಕೆಟಿಜೆ ನಗರದಲ್ಲಿ ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಏಕಾಏಕಿ ಸ್ಫೋಟಗೊಂಡು ಗುಜರಿ ಅಂಗಡಿ ಹಾಗೂ ವಾಹನಗಳು ಸುಟ್ಟು ಭಸ್ಮವಾಗಿವೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ 2 ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ದಾವಣಗೆರೆ (ನ.03): ಬೆಣ್ಣೆ ನಗರಿ ದಾವಣಗೆರೆಯಲ್ಲಿ ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್‌ಫಾರ್ಮರ್ (ಟಿಸಿ) ಏಕಾಏಕಿ ಭೀಕರವಾಗಿ ಸ್ಫೋಟಗೊಂಡಿದೆ. ಇದರ ಪರಿಣಾಮ ಪಕ್ಕದಲ್ಲಿದ್ದ ಗುಜರಿ ಅಂಗಡಿ, ಟಾಟಾ ಏಸ್ ವಾಹನ ಹಾಗೂ ದ್ವಿಚಕ್ರ ವಾಹನವೊಂದು ಕ್ಷಣಾರ್ಧದಲ್ಲಿ ಧಗಧಗನೆ ಹೊತ್ತಿ ಉರಿದು ಸಂಪೂರ್ಣ ಭಸ್ಮವಾಗಿವೆ. ಈ ಬೆಚ್ಚಿಬೀಳಿಸುವ ದೃಶ್ಯ ಸಮೀಪದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದಾವಣಗೆರೆ ನಗರದ ಕೆಟಿಜೆ ನಗರದ 8ನೇ ಕ್ರಾಸ್‌ನಲ್ಲಿ ಈ ಅವಘಡ ಸಂಭವಿಸಿದೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ನಡುಕ ಹುಟ್ಟಿಸುವ ದೃಶ್ಯ:

ಜನನಿಬಿಡ ರಸ್ತೆಯಲ್ಲಿ ಎಲ್ಲವೂ ಸಹಜವಾಗಿದ್ದ ಕ್ಷಣದಲ್ಲೇ, ಟ್ರಾನ್ಸ್‌ಫಾರ್ಮರ್‌ನಲ್ಲಿ ಭಾರಿ ಶಬ್ದದೊಂದಿಗೆ ಬೆಂಕಿ ಚೆಂಡಿನಂತೆ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಬೆಂಕಿಯ ಕಿಡಿಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಹರಡಿದ್ದು, ಅಲ್ಲಿದ್ದ ಸಾರ್ವಜನಿಕರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಜನರು ಜೀವ ಉಳಿಸಿಕೊಳ್ಳಲು ಚೆಲ್ಲಾಪಿಲ್ಲಿಯಾಗಿ ಓಡುವ ದೃಶ್ಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

ಕಣ್ಣೆದುರೇ ಸುಟ್ಟು ಕರಕಲಾದ ವಾಹನ – ಬೈಕ್ ಸವಾರ ಕಣ್ಣೀರು:

ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡ ರಭಸಕ್ಕೆ ಬೆಂಕಿ ಪಕ್ಕದಲ್ಲೇ ಇದ್ದ ಗುಜರಿ ಅಂಗಡಿಗೆ ವ್ಯಾಪಿಸಿದೆ. ನೋಡನೋಡುತ್ತಿದ್ದಂತೆ ಅಂಗಡಿಯ ಮುಂದೆ ನಿಲ್ಲಿಸಲಾಗಿದ್ದ ಟಾಟಾ ಏಸ್ ಗೂಡ್ಸ್ ವಾಹನ ಹಾಗೂ ಬೈಕ್ ಸುಟ್ಟು ಕರಕಲಾಗಿವೆ. ಅಂಗಡಿಗೆ ಹಳೆ ಪೇಪರ್ ಹಾಕಲು ಬಂದಿದ್ದ ಹನುಮಂತ ಎಂಬುವವರ ಬೈಕ್ ಕೂಡ ಬೆಂಕಿಗೆ ಆಹುತಿಯಾಗಿದೆ. ಕಷ್ಟಪಟ್ಟು ದುಡಿದು ಖರೀದಿಸಿದ್ದ ಬೈಕ್ ಕಣ್ಣೆದುರೇ ಸುಟ್ಟು ಬೂದಿಯಾಗಿದ್ದನ್ನು ಕಂಡು ಬೈಕ್ ಮಾಲೀಕ ಹನುಮಂತ ಸ್ಥಳದಲ್ಲೇ ಕಣ್ಣೀರಿಟ್ಟ ದೃಶ್ಯ ಎಂಥವರ ಕರುಳನ್ನೂ ಹಿಂಡುವಂತಿತ್ತು.

2 ಗಂಟೆಗಳ ಕಾಲ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ:

ಬೆಂಕಿಯ ಜ್ವಾಲೆ ಅಕ್ಕಪಕ್ಕದ ಮನೆಗಳಿಗೂ ವ್ಯಾಪಿಸಲು ಆರಂಭಿಸಿದಾಗ ಸ್ಥಳೀಯರು ಆತಂಕಗೊಂಡರು. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸತತ ಎರಡು ಗಂಟೆಗಳ ಕಾಲ ನಿರಂತರವಾಗಿ ನೀರು ಹರಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು. ಸಕಾಲದಲ್ಲಿ ಬೆಂಕಿ ನಂದಿಸಿದ್ದರಿಂದ ಅಕ್ಕಪಕ್ಕದ ಮನೆಗಳಿಗೆ ಆಗಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ. ಆದಾಗ್ಯೂ, ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ನಷ್ಟವಾಗಿದೆ.

ವಿದ್ಯುತ್ ಇಲಾಖೆ ನಿರ್ಲಕ್ಷ್ಯವೇ ಕಾರಣ? ಜನಾಕ್ರೋಶ:

ಈ ದುರಂತಕ್ಕೆ ವಿದ್ಯುತ್ ಇಲಾಖೆ (ಬೆಸ್ಕಾಂ) ಸಿಬ್ಬಂದಿಯ ನಿರ್ಲಕ್ಷ್ಯವೇ ನೇರ ಕಾರಣ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಬೆಳಗ್ಗೆಯಿಂದಲೇ ಈ ಟ್ರಾನ್ಸ್‌ಫಾರ್ಮರ್‌ನಲ್ಲಿ ಕಿಡಿಗಳು ಬರುತ್ತಿದ್ದವು. ಈ ಬಗ್ಗೆ ವಿದ್ಯುತ್ ಇಲಾಖೆಗೆ ಕರೆ ಮಾಡಿ ಎಚ್ಚರಿಸಿದ್ದರೂ ಯಾವುದೇ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಲಿಲ್ಲ. ಇಲಾಖೆಯ ಬೇಜವಾಬ್ದಾರಿಯಿಂದಲೇ ಇಂದು ಇಷ್ಟೊಂದು ದೊಡ್ಡ ಅವಘಡ ಸಂಭವಿಸಿದೆ" ಎಂದು ಸ್ಥಳೀಯರು ಆರೋಪಿಸಿದ್ದು, ನಷ್ಟ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

'ಕೆ.ಎನ್.ರಾಜಣ್ಣ ಪಕ್ಷ ಬಿಟ್ಟು ಹೋಗೋದಾದ್ರೆ ಹೋಗಲಿ': ಸಚಿವ ಹೆಚ್.ಸಿ. ಬಾಲಕೃಷ್ಣ ಸಿಡಿಮಿಡಿ!
ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿತ, ಗಾಯಾಳುಗಳ ಚಿಕಿತ್ಸೆಗೆ ಮಿಂಟೋ ಆಸ್ಪತ್ರೆ ಸಜ್ಜು!