
ರಾಣಿಬೆನ್ನೂರು (ಅ.11): ಬೆಳೆ ವಿಮೆ ಸಮೀಕ್ಷೆಗೆ ಬಂದ ಸಿಬ್ಬಂದಿಯು ಗ್ರಾಮ ಪಂಚಾಯಿತಿ ಕಾರ್ಯದರ್ಶಿಯ ಪ್ಯಾಂಟ್ ಬಿಚ್ಚಿಸಿ ಗದ್ದೆಗೆ ಇಳಿಸಿ ಪರಿಶೀಲಿಸಿದ ಘಟನೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಮಾ ಸಿಬ್ಬಂದಿ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫಕೀರಪ್ಪ ಯತ್ನಳ್ಳಿ ಚಳಗೇರಿ ಗ್ರಾಮ ಪಂಚಾಯ್ತಿಯಲ್ಲಿ ಕಾರ್ಯದರ್ಶಿಯಾಗಿದ್ದು, ಇವರನ್ನು ಕೆಸರುಮಯವಾಗಿದ್ದ ಮೆಕ್ಕೆಜೋಳ ಹೊಲಕ್ಕೆ ಇಳಿದು ಸಮೀಕ್ಷೆ ಮಾಡುವಂತೆ ವಿಮಾ ಸಿಬ್ಬಂದಿ ಸೂಚಿಸಿದ್ದರು. ಪರಿಣಾಮ ಫಕೀರಪ್ಪ ತಮ್ಮ ಪ್ಯಾಂಟ್ ಬಿಚ್ಚಿ ಗದ್ದೆಗೆ ಇಳಿದಿದ್ದಾರೆ.
ವಿಮಾ ಸಿಬ್ಬಂದಿ ಜತೆ ಗ್ರಾಪಂ ಕಾರ್ಯದರ್ಶಿ ಫಕ್ಕೀರಪ್ಪ ಬೆಳೆ ವಿಮೆ ಸಮೀಕ್ಷೆಗೆ ತೆರಳಿದ್ದರು. ಆಗ ಒಂದು ಹೊಲದಲ್ಲಿ ನೀರು ನಿಂತಿತ್ತು. ಆ ಹೊಲದಲ್ಲಿ ಈಗಾಗಲೇ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಗ್ರಾಪಂ ಕಾರ್ಯದರ್ಶಿಯು ವಿಮಾ ಸಿಬ್ಬಂದಿಗೆ ತಿಳಿಸಿದ್ದಾರೆ. ಆದರೆ ಅದನ್ನು ಒಪ್ಪದ ವಿಮಾ ಸಿಬ್ಬಂದಿ ತಮ್ಮ ಎದುರಿನಲ್ಲಿ ಮತ್ತೊಮ್ಮೆ ಸಮೀಕ್ಷೆ ಮಾಡುವಂತೆ ಸೂಚಿಸಿದ್ದಾರೆ. ಆಗ ಬೇರೆ ದಾರಿ ಕಾಣದೆ ಗ್ರಾಪಂ ಕಾರ್ಯದರ್ಶಿಯು ತನ್ನ ಪ್ಯಾಂಟ್ ಕಳಚಿ ಹೊಲದಲ್ಲಿ ಇಳಿದು ಮಾಹಿತಿ ನೀಡಿದ್ದಾರೆ. ಆದರೆ ವಿಮಾ ಸಿಬ್ಬಂದಿ ಮಾತ್ರ ಹೊಲದ ದಡದಲ್ಲಿ ನಿಂತು ಅದನ್ನು ವೀಕ್ಷಣೆ ಮಾಡಿದ್ದಾರೆ. ಕೆಲವರು ಇದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.-