'ಅಭಿವೃದ್ಧಿಗೆ ಕಾಂಗ್ರೆಸ್‌ ಅಡ್ಡಗಾಲು ಹಾಕುತ್ತಿದೆ'

By Kannadaprabha NewsFirst Published Jul 24, 2020, 11:15 AM IST
Highlights

ಬಿ.ಸಿ. ಪಾಟೀಲರ ಅಭಿವೃದ್ಧಿ ಚಿಂತನೆಗಳನ್ನು ಸಹಿಸದ ಕಾಂಗ್ರೆಸ್‌ ತಾಲೂಕಿನ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದೆ: ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೊಡ್ಡಗೌಡ ಪಾಟೀಲ್‌ ಆರೋಪ| ಹಿ​ರೇಕೆರೂರು ತಾಲೂಕಿನಲ್ಲಾಗಲೀ ಅಥವಾ ಹಾವೇರಿ ಜಿಲ್ಲೆಯಲ್ಲಾಗಲಿ ಯೂರಿಯಾ ರಸಗೊಬ್ಬರಕ್ಕೆ ಯಾವುದೇ ಕೊರತೆಯಾಗಿಲ್ಲ|

ಹಿರೇಕೆರೂರು(ಜು.24): ರೈತಪರ ಕಾಳಜಿ ಹೊಂದಿರುವ ಕೃಷಿ ಸಚಿವರಾದ ಬಿ.ಸಿ. ಪಾಟೀಲ್‌ ಹಿರೇಕೆರೂರು ಮತಕ್ಷೇತ್ರದ ಬಗ್ಗೆಯೂ ಸಾಕಷ್ಟು ಕಾಳಜಿ ಹೊಂದಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮುಂದಾಗುತ್ತಿದ್ದಾರೆ. ಆದರೆ , ಬಿ.ಸಿ. ಪಾಟೀಲರ ಅಭಿವೃದ್ಧಿ ಚಿಂತನೆಗಳನ್ನು ಸಹಿಸದ ಕಾಂಗ್ರೆಸ್‌ ತಾಲೂಕಿನ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದೆ ಎಂದು ಹಿರೇಕೆರೂರು ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೊಡ್ಡಗೌಡ ಪಾಟೀಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ತಾಲೂಕಿನಲ್ಲಿ ಅಭಿವೃದ್ಧಿಯನ್ನು ಸಹಿಸದ ಬ್ಲಾಕ್‌ ಕಾಂಗ್ರೆಸ್‌ ಇಲ್ಲಸಲ್ಲದ ಆರೋಪ ಮಾಡುವುದರ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದು ಖಂಡನೀಯ. ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿಯೂ ರೈತರಿಗೆ ಮತ್ತು ಕೃಷಿ ಚಟುವಟಿಕೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಲಾಕ್ಡೌನ್‌ನಿಂದ ವಿನಾಯಿತಿಯೂ ನೀಡಲಾಗಿತ್ತು. ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಯಾವುದೇ ಕೊರತೆ ಎದುರಾಗದಂತೆ ನೋಡಿಕೊಂಡಿದ್ದಾರೆ. ನೀರು ಯಾರ ಸ್ವತ್ತು ಅಲ್ಲ. ಅಭಿವೃದ್ಧಿಯ ವಿಚಾರದಲ್ಲಿಯೂ ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ. ಇಂತಹ ಕೀಳುಮಟ್ಟದ ಯೋಚನೆಯಿಂದಾಗಿ ಕಾಂಗ್ರೆಸ್‌ಗೆ ಈ ಸ್ಥಿತಿ ಬಂದಿದೆ. ಕಾಂಗ್ರೆಸ್‌ ಮುಖಂಡರಿಗೆ ನಿಜವಾಗಿಯೂ ತಾಲೂಕಿನ ಜನರ ಬಗ್ಗೆ ಕಾಳಜಿ ಇರುವುದೇ ಆಗಿದ್ದರೆ ಅವರು ಅಭಿವೃದ್ಧಿಗೆ ಕೈಜೋಡಿಸಬೇಕು. ಅದನ್ನು ಬಿಟ್ಟು ಈ ರೀತಿಯಾಗಿ ಇಲ್ಲಸಲ್ಲದ ಹೇಳಿಕೆ ನೀಡಿ ಅಭಿವೃದ್ಧಿಗೆ ಕುಂಠಿತ ಮಾಡುವುದಲ್ಲ ಎಂದು ಹೇಳಿದ್ದಾರೆ.

ಬ್ಯಾಡಗಿ: ವನ್ಯಜೀವಿ ಛಾಯಾಗ್ರಾಹಕ ಶಶಿಧರಸ್ವಾಮಿಗೆ ಬಾಂಗ್ಲಾದೇಶದ ಗೌರವ ಪ್ರಶಸ್ತಿ

ಚಟ್ಟನಹಳ್ಳಿಯಿಂದ ಶಿಕಾರಿಪುರಕ್ಕೆ ಕೈಗೊಂಡಿರುವ ನೀರಾವರಿ ಯೋಜನೆ ಅವೈಜ್ಞಾನಿಕ ಎಂಬುದು ಬ್ಲಾಕ್‌ ಕಾಂಗ್ರೆಸ್‌ನ ನಿರಾಧಾರ ಆರೋಪವಾಗಿದೆ. ಈ ಯೋಜನೆಯಿಂದ ಶಿಕಾರಿಪುರ ತಾಲೂಕಿಗಷ್ಟೇ ಅಲ್ಲದೇ ಹಿರೇಕೆರೂರಿಗೂ ಅನುಕೂಲವಾಗಲಿದೆ. ನಾವು ಬೇರೆ ಕಡೆಯಿಂದ ನೀರು ಪಡೆಯುತ್ತೇವೆ ಎಂದಮೇಲೆ ನಾವೂ ಇನ್ನೊಬ್ಬರಿಗೆ ನೀರು ಕೊಡಬೇಕು. ಇದು ಪ್ರಕೃತಿ ನಿಯಮವೂ ಹೌದು. ಈಗಾಗಲೇ ಪಕ್ಕದ ರಾಣಿಬೆನ್ನೂರಿನಿಂದ ಅಸುಂಡಿ ಏತನೀರಾವರಿ ಯೋಜನೆಯಿಂದ ಕೋಡ ಭಾಗದ 15 ಹಳ್ಳಿಗಳಿಗೆ ನೀರು, ಮಡ್ಲೂರು ಏತನೀರಾವರಿ ತಿಳವಳ್ಳಿ ವರದಾನದಿಯಿಂದ ಹಿರೇಕೆರೂರಿನ ತಾಲೂಕಿನಲ್ಲಿನ 65 ಕೆರೆಗಳಿಗೆ, ರಾಣಿಬೆನ್ನೂರಿನ ತುಮ್ಮಿನಕಟ್ಟಿಯಿಂದ ಹಿ​ರೇಕೆರೂರು ಪಟ್ಟಣಕ್ಕೆ ಕುಡಿಯುವ ನೀರು ಗುಡ್ಡದಮಾದಾಪುರ ಯೋಜನೆಯಿಂದ 25 ಹಳ್ಳಿಗಳಿಗೆ ನೀರಾವರಿ ಯೋಜನೆಯಿದೆ. ದುರ್ಗಾದೇವಿ ಏತ ನೀರಾವರಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ನೀರಾವರಿ ಯೋಜನೆ ಮಾಡುತ್ತಿರುವುದು ತಾಲೂಕಿನ ಜನತೆಯ ಹಿತದೃಷ್ಟಿಯಿಂದ. ಇಂತಹ ಅಭಿವೃದ್ಧಿಯನ್ನು ಸಹಿಸದ ಕಾಂಗ್ರೆಸ್‌ ಈಗ ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಮೂಲಕ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ದೊಡ್ಡಗೌಡರು ಆರೋಪಿಸಿದರು.

ಹಿ​ರೇಕೆರೂರು ತಾಲೂಕಿನಲ್ಲಾಗಲೀ ಅಥವಾ ಹಾವೇರಿ ಜಿಲ್ಲೆಯಲ್ಲಾಗಲಿ ಯೂರಿಯಾ ರಸಗೊಬ್ಬರಕ್ಕೆ ಯಾವುದೇ ಕೊರತೆಯಾಗಿಲ್ಲ. ಜಿಲ್ಲೆಯಲ್ಲಿ 2019-20 ನೇ ಸಾಲಿನ ಎಪ್ರಿಲ್‌ 1ರಿಂದ ಜುಲೈ 22ರ ವರೆಗೆ 4,138 ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರ ವಿತರಿಸಲಾಗಿದೆ. ಅಂತೆಯೇ ಈ ಬಾರಿ 2020-21ನೇ ಸಾಲಿನಲ್ಲಿ ಹಾವೇರಿ ಜಿಲ್ಲೆಗೆ 35,402ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರ ಸರಬರಾಜಾಗಿದೆ. ಇದರಲ್ಲಿ ಹಿರೇಕೆರೂರು ತಾಲೂಕಿಗೆ ಎಪ್ರಿಲ್‌ 1ರಿಂದ ಜುಲೈ 22ರ ವರೆಗೆ 6,205 ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರ ಪೂರೈಕೆಯಾಗಿದ್ದು, 553 ಮೆಟ್ರಿಕ್‌ ಟನ್‌ ಇನ್ನೂ ದಾಸ್ತಾನು ಇದೆ. ಶೇ. 80ರಷ್ಟು ಯೂರಿಯಾ ಮೇಲು ಗೊಬ್ಬರ ಹಾಕುವ ಕಾರ್ಯ ಮುಗಿದಿದ್ದು, ಶೇ. 20ರಷ್ಟುಕಾರ್ಯ ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳಲಿದೆ. ಇದುವರೆಗಾಗಲೀ ಅಥವಾ ಮುಂದಿನ ದಿನಗಳಲ್ಲಾಗಲೀ ಯೂರಿಯಾ ರಸಗೊಬ್ಬರಕ್ಕೆ ಯಾವುದೇ ಕೊರತೆಯಾಗುವುದಿಲ್ಲ

ಎಂಎಫ್‌ಎಲ್‌ ರಸಗೊಬ್ಬರ ಕಂಪನಿ ವತಿಯಿಂದ ಜುಲೈ 24ರಂದು ಹಾವೇರಿ ಜಿಲ್ಲೆಗೆ 1,400 ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರವನ್ನು ಪೂರೈಸುವ ವ್ಯವಸ್ಥೆಯನ್ನು ಇಲಾಖೆ ಕಲ್ಪಿಸಿದೆ. ಇದರೊಂದಿಗೆ 2,200 ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರವನ್ನು ಹೆಚ್ಚುವರಿಯಾಗಿ ಕರ್ನಾಟಕ ರಾಜ್ಯ ಮಾರಾಟ ಮಂಡಳಿ ವತಿಯಿಂದ ವ್ಯವಸ್ಥೆ ಮಾಡಲಾಗಿದೆ. ಮುಂದಿನ ನಾಲ್ಕೈದು ದಿನಗಳೊಳಗೆ 4,000 ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರ ವಿತರಿಸಲಾಗುವುದು. ರೈತರ ಬೇಡಿಕೆ ಪೂರೈಸಲು ಕೃಷಿ ಸಚಿವರು ಹಾಗೂ ಕೃಷಿ ಇಲಾಖೆ ಬದ್ಧವಾಗಿದೆ ಎಂದು ದೊಡ್ಡಗೌಡರು ಸ್ಪಷ್ಟಪಡಿಸಿದ್ದಾರೆ.
 

click me!