ಹಾಸನದಲ್ಲಿ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದ ಇಬ್ಬರು ಯುವಕರು ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.
ಹಾಸನ (ಜ.01): ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಫಾರ್ಮ್ ಹೌಸ್‌ಗೆ ತೆರಳಿ ರಾತ್ರಿ ಎಣ್ಣೆ ಪಾರ್ಟಿ ಮಾಡುತ್ತಿದ್ದ ಇಬ್ಬರು ಯುವಕರು ಕೆರೆಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಕಾನನಹಳ್ಳಿ ಗ್ರಾಮದಲ್ಲಿ ಹೊಸ ವರ್ಷಾಚರಣೆ ವೇಳೆ ಅವಘಡ ಸಂಭವಿಸಿದೆ. ಕುಡಿದ ಮತ್ತಿನಲ್ಲಿ ಕೆರೆಗೆ ಬಿದ್ದು ಮುಳುಗಿ ಇಬ್ಬರು ಯುವಕರು ಧಾರುಣ ಸಾವಿಗೀಡಾಗಿದ್ದಾರೆ. ಮೃತರನ್ನು ಅಜಿತ್ (37) ಹಾಗೂ ಅಶೋಕ್ (35) ಎಂದು ಗುರುತಿಸಲಾಗಿದೆ. ಮೃತ ಅಶೋಕ್ ಆಟೋ ಚಾಲಕನಾಗಿದ್ದರೆ, ಅಜಿತ್ ಕೃಷಿಕನಾಗಿದ್ದನು. ಇವರಿಬ್ಬರೂ ಸ್ನೇಹಿತರಾಗಿದ್ದು, ಕಾನನಹಳ್ಳಿ ಗ್ರಾಮದ ಕೆರೆಯ ಬಳಿ ನ್ಯೂ ಇಯರ್ ಪಾರ್ಟಿ ಮಾಡುತ್ತಿದ್ದರು. ಬೆಳಗ್ಗೆಯಾದರೂ ಯುವಕರು ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಸಾವಿನಲ್ಲಿ ಒಂದಾದ ಅಮರ ಪ್ರೇಮಿಗಳು; ಗಂಡನಿಗೆ ಬೈಕ್ ಅಪಘಾತ ಸ ...
ಇಬ್ಬರು ಯುವಕರನ್ನು ಪೋಷಕರು ಹಾಗೂ ಗ್ರಾಮಸ್ಥರು ಇಡೀ ಊರಿನಲ್ಲಿ ಹುಡುಕಾಡಿದ್ದಾರೆ. ಎಲ್ಲೂ ಸಿಗದಿದ್ದಾಗ ಕಾನನಹಳ್ಳಿ ಗ್ರಾಮದ ಗುರುಪ್ರಸಾದ್ ಎಂಬುವವರಿಗೆ ಸೇರಿದ ಕೆರೆಯ ಬಳಿ ಚಪ್ಪಲಿ ಹಾಗೂ ಮದ್ಯದ ಬಾಟಲ್ ಬಿದ್ದಿರುವುದನ್ನು ಕೆಲವರು ನೋಡಿದ್ದಾರೆ. ಅನುಮಾನಗೊಂಡು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕೆರೆಯಲ್ಲಿ ಶವಕ್ಕಾಗಿ ಶೋಧಕಾರ್ಯ ನಡೆಸಿದ್ದಾರೆ. ಇಂದು ಸಂಜೆ ಇಬ್ಬರು ಯುವಕರ ಶವಗಳು ಕೆರೆಯಲ್ಲಿ ಪತ್ತೆಯಾಗಿವೆ. ಶವಗಳನ್ನು ಕೆರೆಯಿಂದ ಹೊರತೆಗೆದು ಬೇಲೂರು ತಾಲ್ಲೂಕು ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಇನ್ನು ಸ್ಥಳದಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.