ಹಾಸನ-ಮಂಗಳೂರು ರೈಲು ಇಂದಿನಿಂದ ಶುರು

By Web DeskFirst Published Aug 26, 2019, 12:34 PM IST
Highlights

ಸಿರಿಬಾಗಿಲು, ಪಡೀಲಿನಲ್ಲಿ ಗುಡ್ಡ ಹಳಿಗೆ ಕುಸಿದು ರೈಲು ಸಂಚಾರ ರದ್ದು, ಇಂದು ತೆರವು ಕಾರ್ಯಾಚರಣೆ ಪೂರ್ಣ ನಿರೀಕ್ಷೆ| ಹಾಸನ-ಮಂಗಳೂರು ರೈಲು ಇಂದಿನಿಂದ ಶುರು

ಮಂಗಳೂರು[ಆ.26]: ಹಾಸನ - ಮಂಗಳೂರು ರೈಲ್ವೆ ಮಾರ್ಗದಲ್ಲಿ ಸುಬ್ರಹ್ಮಣ್ಯ ರೋಡ್ ಹಾಗೂ ಸಕಲೇಶಪುರ ಮಧ್ಯೆ ಸಿರಿಬಾಗಿಲಲ್ಲಿ ಭೂಕುಸಿತದಿಂದ ಉಂಟಾದ ಹಳಿ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಆದರೆ ಪಡೀಲಿನಲ್ಲಿ ಉಂಟಾಗಿರುವ ಭೂಕುಸಿತದಲ್ಲಿ ಹಳಿಯಿಂದ ಮಣ್ಣು ತೆರವು ಕಾರ್ಯ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ರೈಲು ಸಂಚಾರ ಸೋಮವಾರ ರಾತ್ರಿಯಿಂದ ಪುನಾರಂಭಗೊಳ್ಳಲಿದೆ. ಈ ಮಧ್ಯೆ ಪಡೀಲು ಕಾಮಗಾರಿ ಮುಕ್ತಾಯಗೊಳ್ಳದ ಹಿನ್ನೆಲೆಯಲ್ಲಿ ಕೇರಳ-ಮಂಗಳೂರು-ಮುಂಬಯಿ ರೈಲು ಮಾರ್ಗ ಸೋಮವಾರವೂ ಸಂಚಾರಕ್ಕೆ ಮುಕ್ತಗೊಳ್ಳುವುದು ಅಸಂಭವವಾಗಿದೆ.

ಆಗಸ್ಟ್ ಪ್ರಥಮ ವಾರದಲ್ಲಿ ಸುರಿದ ಭಾರಿ ಮಳೆಗೆ ಘಾಟ್ ಪ್ರದೇಶದ ಸಿರಿಬಾಗಿಲಲ್ಲಿ ಭೂಕುಸಿತ ಉಂಟಾಗಿ ರೈಲು ಸಂಚಾರ ವ್ಯತ್ಯಯಗೊಂಡಿತ್ತು. ಅದನ್ನು ಸರಿಪಡಿಸುವ ಸಂದರ್ಭ ಮತ್ತೆ ಮೂರು ಕಡೆಗಳಲ್ಲಿ ಭಾರಿ ಮಳೆಗೆ ಗುಡ್ಡ ಜರಿದು ಹಳಿಯ ಮೇಲೆ ಬಿದ್ದಿತ್ತು.

ನೈಋತ್ಯ ರೈಲ್ವೆಯ ಮೈಸೂರು ವಿಭಾಗೀಯ ಅಧಿಕಾರಿಗಳು, ತಂತ್ರಜ್ಞರು ಸ್ಥಳಕ್ಕೆ ಆಗಮಿಸಿ ಅವಿರತವಾಗಿ ಹಳಿಯಿಂದ ಮಣ್ಣು ತೆರವು ಕಾರ್ಯಾಚರಣೆ ಕೈಗೊಂಡರು. ಆದರೆ ಧಾರಾಕಾರ ಮಳೆಯಿಂದಾಗಿ ನಿರೀಕ್ಷಿತ ರೀತಿಯಲ್ಲಿ ಮಣ್ಣು ತೆರವು ಕಾರ್ಯಾಚರಣೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಆ.೨೫ರ ವರೆಗೆ ರದ್ದುಪಡಿಸಲಾಗಿತ್ತು. ಇದೀಗ ಮಣ್ಣು ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ಶನಿವಾರ ಈ ಮಾರ್ಗದಲ್ಲಿ ಗೂಡ್ಸ್ ರೈಲು ನಿರಾತಂಕವಾಗಿ ಸಂಚರಿಸಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಆ.೨೬ರ ವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ರದ್ದುಪಡಿಸಲಾಗಿದ್ದು, ಅಂದು ರಾತ್ರಿಯಿಂದ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರದ್ದುಗೊಂಡ ರೈಲುಗಳು: ಭಾನುವಾರ ಸಂಚರಿಸಬೇಕಾದ ಕಣ್ಣೂರು-ಕಾರವಾರ- ಬೆಂಗಳೂರು ರಾತ್ರಿ ರೈಲನ್ನು ರದ್ದುಪಡಿಸಲಾಗಿದೆ. ಇದೇ ರೀತಿ ವಯಾ ಮೈಸೂರು ಮೂಲಕ ಸಂಚರಿಸಬೇಕಾದ ಬೆಂಗಳೂರು- ಕಣ್ಣೂರು/ಕಾರವಾರ ರಾತ್ರಿ ರೈಲನ್ನು ಕೂಡ ರದ್ದುಪಡಿಸಲಾಗಿದೆ. ಯಶವಂತಪುರ- ಕಾರವಾರ ತ್ರೈವೀಕ್ಲಿ ಎಕ್ಸ್‌ಪ್ರೆಸ್ ರೈಲು ಸೋಮವಾರ ಯಶವಂತಪುರದಿಂದ ಹೊರಡಲಿದೆ. ಆದರೆ ಈ ರೈಲು ಮಂಗಳೂರು ಜಂಕ್ಷನ್ ವರೆಗೆ ಮಾತ್ರ ಸಂಚರಿಸಲಿದ್ದು, ಕಾರವಾರಕ್ಕೆ ಸಂಚರಿಸುವುದಿಲ್ಲ. ಅದೇ ರೀತಿ ಮಂಗಳವಾರ ಕಾರವಾರ-ಯಶವಂತಪುರ ತ್ರೈವೀಕ್ಲಿ ಎಕ್ಸ್‌ಪ್ರೆಸ್ ರೈಲು ಕೂಡ ಕಾರವಾರದಿಂದ ಮಂಗಳೂರು ಜಂಕ್ಷನ್‌ಗೆ ಇರುವುದಿಲ್ಲ. ಮಂಗಳೂರು ಸೆಂಟ್ರಲ್ -ಯಶವಂತಪುರ ನಡುವಿನ ತ್ರೈವೀಕ್ಲಿ ರಾತ್ರಿ ರೈಲು ಸೋಮವಾರ ಅವಶ್ಯಕತೆಗೆ ಅನುಗುಣವಾಗಿ ಸಂಚರಿಸಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಮುಂಬಯಿಗೆ ಸುರತ್ಕಲ್‌ನಿಂದ ಸಂಚಾರ: ಗುಡ್ಡ ಕುಸಿತದಿಂದ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡ ಕೇರಳ-ಮಂಗಳೂರು- ಮುಂಬೈ ನೇರ ರೈಲು ಸಂಚಾರ ಮೂರನೇ ದಿನ ಭಾನುವಾರವೂ ಸ್ಥಗಿತಗೊಂಡಿದೆ. ಈ ಮಾರ್ಗದಲ್ಲಿ ಮುಂಬಯಿಗೆ ಸಂಚರಿಸುವ ರೈಲುಗಳು ಸುರತ್ಕಲ್‌ನಿಂದ ಹೊರಡುತ್ತಿವೆ. ಈ ಮಾರ್ಗದಲ್ಲಿ ಸೋಮವಾರ ಕೂಡ ನೇರ ರೈಲು ಸಂಚಾರ ಇರುವುದಿಲ್ಲ.

ಫಾಲ್ಘಾಟ್ ವಿಭಾಗಕ್ಕೆ ಸೇರಿದ ಈ ಪ್ರದೇಶದಲ್ಲಿ ಗುರುವಾರ ಸುರಿದ ಮಳೆಗೆ ಗುಡ್ಡಕುಸಿದು ಮಣ್ಣು ಹಳಿಗೆ ಬಿದ್ದಿತ್ತು. ಇದರಿಂದಾಗಿ ಮಂಗಳೂರು ಮೂಲಕ ಕೇರಳ ಹಾಗೂ ಮುಂಬಯಿಗೆ ತೆರಳಬೇಕಾದ ನೇರ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ. ಮಂಗಳೂರು ಸೆಂಟ್ರಲ್-ಮಡ್ಗಾಂವ್ -ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಸೋಮವಾರ ರದ್ದುಪಡಿಸಲಾಗಿದೆ. ಮಡ್ಗಾಂವ್-ಮಂಗಳೂರು ಸೆಂಟ್ರಲ್ ಡೋಮಿ ರೈಲು ತೋಕೂರಿನಿಂದ ಕೊಂಕಣ ಮಾರ್ಗದಲ್ಲಿ ಸಂಚರಿಸಲಿದೆ.

ರದ್ದುಗೊಂಡ ರೈಲುಗಳು: ಕೊಂಕಣ ರೈಲ್ವೆ ನಿಗಮವು ವಯಾ ಮಂಗಳೂರು ಮೂಲಕ ಭಾನುವಾರ ಸಂಚರಿಸಬೇಕಾದ ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. ಕುಚ್ಚುವೇಲಿ-ಪೋರಬಂದರ್ ಎಕ್ಸ್‌ಪ್ರೆಸ್ ಎರ್ನಾಕುಲಂ-ಅಜ್ಮೀರ್ ಜಂಕ್ಷನ್ ಮರುಸಾಗರ್ ಎಕ್ಸ್ ಪ್ರೆಸ್, ಮಡ್ಗಾಂವ್-ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದುಗೊಳಿಸಿದೆ. ಆ.26ರಂದು ಸಂಚರಿಸಬೇಕಾದ ಎರ್ನಾಕುಲಂ ಮಡ್ಗಾಂವ್ ಎಕ್ಸ್‌ಪ್ರೆಸ್, ಮುಂಬಯಿ ಎಸ್ ಟಿಟಿ-ತಿರುವನಂತಪುರಂ ನೇತ್ರಾವತಿ ಎಕ್ಸ್‌ಪ್ರೆಸ್, ತಿರುನೇಲ್ವಿ-ಜಾಮ್ ನಗರ್ ಎಕ್ಸ್‌ಪ್ರೆಸ್, ಕುಚ್ಚುವೇಲಿ-ಮುಂಬಯಿ ಎಲ್‌ಟಿಟಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಕುಚ್ಚುವೇಲಿ-ಚಂಡೀಘರ್ ಕೇರಳ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲು ಸಂಚಾರ ಇರುವುದಿಲ್ಲ.

ಮಾರ್ಗ ಬದಲಾವಣೆ: ಈ ಕೆಳಗಿನ ರೈಲುಗಳ ಸಂಚಾರದ ಮಾರ್ಗವನ್ನು ವಯಾ ಜೋಲಾರಪೇಟೆ, ಪಾಲಕ್ಕಾಡ್, ಶೋರ್ನೂರು ಮೂಲಕ ಬದಲಾವಣೆ ಮಾಡಲಾಗಿದೆ.

ಹಝರತ್ ನಿಜಾಮುದ್ದೀನ್-ಎಕ್ನಾಕುಲಂ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್, ಎರ್ನಾಕುಲಂ-ಹಝರತ್ ನಿಜಾಮುದ್ದೀನ್ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್, ತಿರುವನಂತಪುರಂ-ಮುಂಬಯಿ ಎಲ್‌ಟಿಟಿ ನೇತ್ರಾವತಿ ಎಕ್ಸ್‌ಪ್ರೆಸ್ ರೈಲುಗಳು ಬದಲು ಮಾರ್ಗದಲ್ಲಿ ಸಂಚರಿಸಲಿವೆ.

click me!