ಒಂಟಿ ಸಲಗ ಸೆರೆಗೆ ಸಕಲ ಸಿದ್ಧತೆ: ಹಾಸನದ ಕ್ಯಾಂಪ್‌ಗೆ 5 ಸಾಕಾನೆಗಳು

By Kannadaprabha NewsFirst Published Jul 28, 2019, 9:07 AM IST
Highlights

ಹಾಸನದ ಹಲವೆಡೆ ಕಾಡಾನೆ ಉಪಟಳ ಮಿತಿ ಮೀರಿದ್ದು, ಒಂಟಿ ಸಲಗವೊಂದು ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಇದೀಗ ಒಂಟಿ ಸಲಗವನ್ನು ಸೆರೆ ಹಿಡಿಯಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, 5 ಸಾಕಾನೆಗಳನ್ನು ಲಾರಿ ಮೂಲಕ ಹಾಸನದ ವೀರಾಪುರದ ಕ್ಯಾಂಪ್‌ಗೆ ಕರೆಸಿಕೊಳ್ಳಲಾಗಿದೆ.

ಹಾಸನ(ಜು.28): ಅರಣ್ಯ ಇಲಾಖೆ ವಾಚರ್‌ ಸೇರಿದಂತೆ ಹಲವು ಮಂದಿಯನ್ನು ಹತ್ಯೆಗೈದು, ಸತತವಾಗಿ ರೈತ ಬೆಳೆ, ಆಸ್ತಿಪಾಸ್ತಿ ನಷ್ಟಮಾಡುತ್ತಿರುವ ಒಂಟಿ ಸಲಗವನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ.

ಒಂಟಿ ಸಲಗವನ್ನು ಹಿಡಿಯಲು 5 ನಾಡಾನೆ:

ಒಂಟಿ ಸಲಗ ಹಿಡಿಯಲು 5 ಸಾಕಾನೆಯನ್ನು ಲಾರಿ ಮೂಲಕ ಶನಿವಾರ ಕರೆಸಿಕೊಳ್ಳಲಾಗಿದೆ. ಹಾಸನ ತಾಲೂಕಿನ ವೀರಾಪುರದ ಕ್ಯಾಂಪ್‌ ಮಾಡಿರುವ ಜಾಗಕ್ಕೆ ಮತ್ತಿಗೋಡುನಿಂದ 2 ಆನೆ, ದುಬಾರೆ ಕ್ಯಾಂಪಿನಿಂದ 3 ಆನೆಯನ್ನು ಬರಮಾಡಿಕೊಳ್ಳಲಾಯಿತು.

ಹೆಚ್ಚು ತೊಂದರೆ ಕೊಡುತ್ತಿರುವ ಒಂದು ಕಾಡಾನೆ ಹಿಡಿಯಲು ಮಾತ್ರ ಅನುಮತಿ ಕೊಡಲಾಗಿದೆ ಎಂದು ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವಾರಾಂ ತಿಳಿಸಿದ್ದಾರೆ.

ಮಹಿಳೆ ಮೇಲೆ ದಾಳಿ ಮಾಡಿದ್ದ ಆನೆ:

ಕಳೆದ ಜೂನ್‌ನಲ್ಲಿ ಒಂದು ಸಲಗ ಹಾಸನ ನಗರದ ಹುಣಸಿನಕೆರೆಗೆ ಬಂದು ಒಂದು ದಿನ ಕಾಲ ಕಳೆದು ನಂತರ ಆನೆಯನ್ನು ಅರಣ್ಯ ಇಲಾಖೆಯವರು ಕಾಡಿಗೆ ಅಟ್ಟಿದ್ದರು. ಇಲ್ಲಿಗೆ ಬರುವ ಮೊದಲೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮತ್ತು ಹಸು, ಕರುವನ್ನು ಬಲಿ ತೆಗೆದುಕೊಂಡಿತ್ತು.

ಅರಣ್ಯ ಇಲಾಖೆಯ ವಾಚರ್‌ ಲಿಂಗೇಗೌಡ ಸಾವು:

ಜುಲೈ ತಿಂಗಳಲ್ಲಿ ಒಂಟಿ ಸಲಗ ಮತ್ತೆ ನಗರ ಎಂಟ್ರಿ ಕೊಟ್ಟು ಪೆನ್ಷನ್‌ ಮೊಹಲ್ಲಾ, ಜವೇನಹಳ್ಳಿ ಮಠದ ಬಳಿ ಸುತ್ತಾಡಿದೆ. ಅರಣ್ಯ ಇಲಾಖೆಯವರು ಎಚ್ಚರಿಕೆಯಿಂದ ಕಾಡಾನೆಯನ್ನು ಕಾಡಿಗೆ ಓಡಿಸುವಲ್ಲಿ ಮತ್ತೆ ಯಶಸ್ವಿಯಾದರೂ ಕೂಡಾ ಸೀಗೆ ಗುಡ್ಡ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ವಾಚರ್‌ ಲಿಂಗೇಗೌಡ ಎಂಬುವರನ್ನು ಹತ್ಯೆ ಮಾಡಿತ್ತು. ಹಾಸನದಲ್ಲಿ ದಿನೇದಿನೇ ಕಾಡು ಪ್ರಾಣಿಗಳು ಮತ್ತು ಮಾನವನ ನಡುವಿನ ಸಂಘರ್ಷ ಹೆಚ್ಚಾಗುತ್ತಿದ್ದೆಯೇ ಹೊರತು ಕಡಿಮೆಯಾಗುತ್ತಿಲ್ಲ.

ಸಕಲೇಶಪುರ ತಾಲೂಕಿನಲ್ಲೂ ಮುಂದುವರಿದ ಕಾಡಾನೆ ದಾಳಿ:

ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು ಸತ್ತಿಗಾಲ್‌, ಜಾನೆಕೆರೆ ಸುತ್ತಮುತ್ತ ಅಪಾರ ಪ್ರಮಾಣದ ಬೆಳೆಯನ್ನು ನಾಶ ಮಾಡಿವೆ. ತಾಲೂಕಿನ ಕುದರಂಗಿ, ಸುಳ್ಳಕ್ಕಿ, ಇಬ್ಬಡಿ, ಸತ್ತಿಗಾಲ…, ಜಾನೆಕೆರೆ ಗ್ರಾಮಗಳ ಬಳಿ ಬೀಡುಬಿಟ್ಟಿರುವ ಕಾಡಾನೆ ಹಿಂಡು ಆಹಾರ ಸಿಗದೇ ರೈತರು ನಾಟಿ ಮಾಡಿದ್ದ ಭತ್ತದ ಸಸಿ ಹಾಗೂ ಬತ್ತದ ಮಡಿಗಳನ್ನು ನಾಶ ಮಾಡಿದೆ.

ಹಾಸನ: ಕಾಡಾನೆ ದಾಳಿಗೆ ಬೆಳೆ ನಾಶ, ಗ್ರಾಮಸ್ಥರಿಂದ ಧರಣಿ ಎಚ್ಚರಿಕೆ

ಲೋಕೇಶ್‌, ರಮೇಶ್‌, ಈರಯ್ಯ, ಮಂಜುನಾಥ್‌, ಹರೀಶ್‌, ವಿಜಯ್‌ ಕುಮಾರ್‌ ಸೇರಿದಂತೆ ಇನ್ನಿತರರ ಜಮೀನುಗಳಲ್ಲಿ ಕಾಡಾನೆಗಳ ಹಿಂಡು ವ್ಯಾಪಕ ಪ್ರಮಾಣದಲ್ಲಿ ಬೆಳೆಗಳನ್ನು ನಷ್ಟಪಡಿಸಿವೆ.

ಕಾಫಿತೋಟದಲ್ಲಿ ಬೀಡು ಬಿಟ್ಟವೆ 20ಕ್ಕೂ ಹೆಚ್ಚು ಆನೆಗಳು:

ಇಬ್ಬಡಿ ಗ್ರಾಮದ ಕಾಫಿ ತೋಟದಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದು, ಕಾಡಾನೆಗಳ ಹಾವಾಳಿಯಿಂದ ರೈತರು ಕಂಗಲಾಗಿದ್ದಾರೆ. ಪ್ರತಿನಿತ್ಯ ಕಾಡಂಚಿನ ಗ್ರಾಮಗಳ ಗ್ರಾಮಸ್ಥರು ಜೀವ ಭಯದಲ್ಲಿ ಜೀವನ ನಡೆಸಬೇಕಾಗಿದೆ. ಕಾಡಾನೆ ನಿಯಂತ್ರಿಸಲು ಅರಣ್ಯ ಇಲಾಖೆ ಹರಸಾಹಸ ಮಾಡುತ್ತಿದ್ದರೂ, ಎಲ್ಲೆಂದರಲ್ಲಿ ರಾಜಾರೋಷವಾಗಿ ಓಡಾಡುತ್ತಿರುವ ಆನೆ ಹಿಂಡು ಗ್ರಾಮಗಳತ್ತ ನುಗ್ಗುತ್ತಿರುವುದರಿಂದ ಜನರಲ್ಲಿ ಮತ್ತಷ್ಟುಆತಂಕ ಹುಟ್ಟಿಸಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಲವು ಬಾರಿ ಸಾರ್ವಜನಿಕರು, ಸಂಘಟನೆಗಳು ಹೋರಾಟ ನಡೆಸಿದ್ದರೂ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತೀವ್ರ ಪುಂಡಾಟ ನೆಡೆಸುತ್ತಿರುವ ಆನೆಗಳನ್ನಾದರು ಸೆರೆ ಹಿಡಿಯಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಮುಂದುವರಿದ ಕಾಡಾನೆ ದಾಳಿ:

ಶನಿವಾರ ಹಳೇಬೀಡು ಹೋಬಳಿಯ ಅಡಗೂರಿನಲ್ಲಿ ಪುಂಡಾನೆ ಕಾಣಿಸಿಕೊಂಡು ಗ್ರಾಮಸ್ಥರನ್ನು ಭಯಭೀತಿಗೊಳಿಸಿದೆ. ಶನಿವಾರ ತೋಟದ ಕೆಲಸಕ್ಕೆಂದು ಹೋದ ಕೆಲವು ಯುವಕರನ್ನು ಪುಂಡಾನೆಯೊಂದು ಅಟ್ಟಾಡಿಸಿಕೊಂಡು ಬರುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಅದನ್ನ ಯುವಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಬಯಲುಸೀಮೆಗೂ ಲಗ್ಗೆ ಇಟ್ಟಿವೆ ಆನೆಗಳು:

ಇಷ್ಟುದಿನ ಮಲೆನಾಡು ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಈಗ ಬಯಲು ಸೀಮೆ ಆಗಿರುವ ಹಳೇಬೀಡು ಮತ್ತು ಅರಸೀಕೆರೆ ಸಮೀಪದ ಭಾಗದಲ್ಲಿ ಕಾಣಿಸಿಕೊಳ್ಳುತ್ತಿರುವುದು ನೋಡುತ್ತಿದ್ದರೆ ಕಾಡಿನಿಂದ ನಾಡಿಗೆ ಆಹಾರವನ್ನು ಹುಡುಕಿ ನಾಡಿನತ್ತ ಬರುತ್ತಿವೆ .

click me!