ಬೇಲೂರು-ಆಲೂರು ರೈಲ್ವೆ ಕಾಮಗಾರಿ; ಭೂಸ್ವಾಧೀನ ಬೆಲೆ ನಿಗದಿಯಲ್ಲಿ ತಾರತಮ್ಯದ ಆರೋಪ!

Published : Oct 17, 2026, 10:04 AM IST
Belur Alur Railway Project

ಸಾರಾಂಶ

ಬೇಲೂರು-ಆಲೂರು ರೈಲ್ವೆ ಕಾಮಗಾರಿಯ ಭೂಸ್ವಾಧೀನ ಬೆಲೆ ನಿಗದಿಯಲ್ಲಿ ತಾರತಮ್ಯ ಖಂಡಿಸಿ ರೈತರು ತೋಟಗಾರಿಕಾ ಇಲಾಖೆಗೆ ಬೀಗ ಜಡಿದು ಪ್ರತಿಭಟಿಸಿದರು. ಸೂಕ್ತ ಬೆಲೆ ಕೇಳಿದ ರೈತರಿಗೆ ಅಧಿಕಾರಿಯೊಬ್ಬರು ವಿಷ ಕುಡಿಯಲು ಹೇಳಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಜಂಟಿ ನಿರ್ದೇಶಕರ ಭರವಸೆ ಮೇರೆಗೆ ಪ್ರತಿಭಟನೆ ಅಂತ್ಯಗೊಂಡಿತು.

ಹಾಸನ: ಬೇಲೂರು-ಆಲೂರು ರೈಲ್ವೆ ಸಂಪರ್ಕ ಕಾಮಗಾರಿಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಬೆಲೆ ನಿಗದಿಪಡಿಸುವಾಗ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂದು ಆರೋಪಿಸಿ, ತಾಲೂಕು ರೈತ ಸಂಘದ ನೇತೃತ್ವದಲ್ಲಿ ಆಲೂರು ತಾಲೂಕಿನ ತಾಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರು ತೋಟಗಾರಿಕಾ ಇಲಾಖೆಗೆ ಬೀಗ ಜಡಿದು ತೀವ್ರ ಪ್ರತಿಭಟನೆ ನಡೆಸಿದರು.

ಬೆಲೆ ನಿಗದಿಪಡಿಸುವಲ್ಲಿ ತೀವ್ರ ಅನ್ಯಾಯ

ಪ್ರತಿಭಟನೆಯನ್ನು ಉದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಧರ್ಮರಾಜ್ ಮಾತನಾಡಿ, ರೈಲ್ವೆ ಯೋಜನೆಗಾಗಿ ತಮ್ಮ ಜಮೀನುಗಳನ್ನು ಕಳೆದುಕೊಳ್ಳುತ್ತಿರುವ ರೈತರಿಗೆ ಬೆಲೆ ನಿಗದಿಪಡಿಸುವಲ್ಲಿ ತೀವ್ರ ಅನ್ಯಾಯ ಎಸಗಲಾಗಿದೆ. ಕೆಲವು ಗ್ರಾಮಗಳಿಗೆ ಹೆಚ್ಚಿನ ಪರಿಹಾರ ನೀಡಿ, ಇನ್ನು ಕೆಲವು ಗ್ರಾಮಗಳಿಗೆ ಕಡಿಮೆ ಹಣ ನಿಗಧಿ ನೀಡುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಯ ದಬ್ಬಾಳಿಕೆ

ಇದೇ ವೇಳೆ, ರೈತರು ತಾವು ಬೆಳೆದಿರುವ ತೋಟಗಾರಿಕಾ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಕೋರಿದ್ದಕ್ಕೆ, ತೋಟಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು "ನೀವು ವಿಷ ಕುಡಿದು ಸಾಯಿರಿ" ಎಂದು ಅತ್ಯಂತ ಬೇಜವಾಬ್ದಾರಿಯಿಂದ ಮತ್ತು ಉಡಾಫೆಯಿಂದ ಮಾತನಾಡಿದ್ದಾರೆ. ರೈತರ ಕಷ್ಟಕ್ಕೆ ಸ್ಪಂದಿಸಬೇಕಾದ ಅಧಿಕಾರಿಯೇ ದಬ್ಬಾಳಿಕೆ ನಡೆಸಿ ಈ ರೀತಿ ಮಾತನಾಡಿರುವುದು ಖಂಡನೀಯ. ಕೂಡಲೇ ಅಂತಹ ಅಧಿಕಾರಿಯ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ರೈತರ ಭೂಮಿಗೆ ಸೂಕ್ತ ಮತ್ತು ನ್ಯಾಯಯುತ ಬೆಲೆ ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ರೈತರ ಮನವಿಯನ್ನು ಸ್ವೀಕರಿಸಿದ ಜಂಟಿ ನಿರ್ದೇಶಕ ಯೋಗೇಶ್

ಪ್ರತಿಭಟನಾ ಸ್ಥಳಕ್ಕೆ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಯೋಗೇಶ್ ಆಗಮಿಸಿ, ರೈತರ ಮನವಿಯನ್ನು ಸ್ವೀಕರಿಸಿ, ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಶಾಂತಗೊಳಿಸಲಾಯಿತು.

ಪ್ರತಿಭಟನೆಯಲ್ಲಿ ತಾಳೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಷಡಕ್ಷರಿ, ಹರೀಶ್ ಜಿ.ಜಿ. ಕೊಪ್ಪಲು, ಯೋಗೇಶ್ ಕುಪ್ಪೆಹೊಸಹಳ್ಳಿ, ನಂದೀಶ್ ತಾಳೂರು, ಜಿ.ಕೆ. ವೆಂಕಟೇಶ್, ಸೋಮಶೇಖರ್‌ ಗುಡ್ಡನಹಳ್ಳಿ, ತಾಳೂರು ಭೀಮಯ್ಯ, ದ್ಯಾವಯ್ಯ ಸೇರಿದಂತೆ ಹಲವು ರೈತರು ಹಾಜರಿದ್ದರು.

PREV
Read more Articles on
click me!

Recommended Stories

2 ವರ್ಷವಾದರೂ ಸಿಗದ ಕೆಲಸ… ಬೆಂಗಳೂರಿನ ಮನೆ, ಆಸ್ತಿ ಮಾರಿ ಮಾಡಿದ್ದೇನು 40ರ ಟೆಕ್ಕಿ!
ಬೆಂಗಳೂರಿನ ₹36000 ಕೋಟಿ ಟೆಂಡರ್ ರದ್ದು ಸಾಧ್ಯತೆ; ‘ಕ್ಲೀನ್ ಚಿಟ್’ ಇದ್ರೂ ಯಾಕೆ ನಿರ್ಧಾರ?